ಒಂದು ದೇಶದ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಪೆಟ್ರೋಲ್ ಮಾರಿ ಒಂದು ದೇಶ ಶ್ರೀಮಂತವಾದರೆ ಇನ್ನೊಂದು ತಂತ್ರಜ್ಞಾನ ಅಭಿವೃದ್ಧಿಯಿಂದ ಹಣ ಗಳಿಸಬಹುದು. ಆದರೆ ಯಾವ ದೇಶ ಲಿಂಗತಾರತಮ್ಯಗಳನ್ನು ’ಕಡಿಮೆ ಮಾಡಿ’ ಸಮಾನ, ಸಾಮಾಜಿಕ, ಆರ್ಥಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸಿದೆಯೋ ಅದು ಶ್ರೀಮಂತಿಕೆಯ ಜೊತೆ ಪ್ರಗತಿಯನ್ನೂ ಹೊಂದಿದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿ ’ಕಡಿಮೆ ಮಾಡಿ’ ಎಂಬ ಪದ ಬಳಸಿದೆ, ಏಕೆಂದರೆ ಎಷ್ಟೇ ಪ್ರಬಲ ಅಥವಾ ಪ್ರಗತಿ ಹೊಂದಿದ ದೇಶವಿದ್ದರೂ ಸ್ತ್ರೀಯರ ವಿಷಯದಲ್ಲಿ ಸಂಪೂರ್ಣ ಸಮಾನತೆ ಸಾಧಿಸಿಲ್ಲ ಎನ್ನುವುದು ವಾಸ್ತವ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಎರಡು ಬಗೆಯ ಸಮಾನತೆ ಇದೆ. ಒಂದು ’ಸಂವಿಧಾನಾತ್ಮಕ’ ಸಮಾನತೆ – ಇದು ಸ್ತ್ರೀ ಪುರುಷರ ಮಧ್ಯೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಇನ್ನೊಂದು ’ಸಂವೇದನಾತ್ಮಕ’ ಸಮಾನತೆ – ಇದು ಮಹಿಳೆಯರ ನೋವುಗಳಿಗೆ ಸ್ಪಂದಿಸುವಲ್ಲಿಯೂ ಸಹ ಆ ಮಹಿಳೆಯ ಜಾತಿ, ಸ್ಥಾನಮಾನ, ಬಣ್ಣ ಮುಂತಾದ ಹಿನ್ನೆಲೆಯಲ್ಲಿ ತಾರತಮ್ಯ ಹೊಂದಿರುವಂಥದ್ದು. ವಿಪರ್ಯಾಸವೆಂದರೆ ಎರಡನೆಯದು ಮೊದಲಿನದ್ದಕ್ಕಿಂತ ಹೆಚ್ಚು ಶಕ್ತಿಶಾಲಿ.

ಇದೇ ವಾರ ಛತ್ತೀಸಗಡ ರಾಜ್ಯದ ಹೈಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಸಂಬಂಧದಲ್ಲಿ ಗಂಡನಾದವನು ಬಲವಂತದಿಂದ ಲೈಂಗಿಕ ಸಂಭೋಗ ಮಾಡಿದರೂ ಅದು ಅತ್ಯಾಚಾರವಲ್ಲ ಎಂದು ಹೇಳಿದೆ. ಆದರೆ ಇದೇ ತೀರ್ಪಿನಲ್ಲಿ ಮುಂದುವರೆದು “ಗಂಡಹೆಂಡತಿಯ ಜೊತೆ ಅನೈಸರ್ಗಿಕ ಸಂಭೋಗ ಮಾಡಿದ್ದು ಭಾರತೀಯ ದಂಡಸಂಹಿತೆಯ 377ನೇ ವಿಧಿ ಪ್ರಕಾರ ಅಪರಾಧ” ಎಂದಿದೆ. ಇಲ್ಲಿ ಒಂದು ಪ್ರಶ್ನೆ: ಒಂದೇ ಕೃತ್ಯದ ಒಂದು ಭಾಗ ಅಪರಾಧ, ಇನ್ನೊಂದು ಅಲ್ಲ, ಅದು ಹೇಗೆ? ಇಂಥ ಒಂದು ತೀರ್ಮಾನ ಕೊಡುವಾಗ ನ್ಯಾಯಾಧೀಶರು ಕೇವಲ ಕಾನೂನು ಪಾಲಿಸುವ ಯಂತ್ರಗಳಾಗಿರದೆ ಕಾನೂನನ್ನು ಪರಿಭಾಷಿಸುವ ಕಾಳಜಿ ಹೊಂದಿದ್ದರೆ ಇಂತಹ ಪ್ರತಿಗಾಮಿ ತೀರ್ಪು ಬರುತ್ತಿರಲಿಲ್ಲ. ಕಾಲಕಾಲಕ್ಕೆ ಬರುವ ವಿಶಾಲವಾದ ಪರಿಭಾಷೆಗಳಿಂದಲೇ ಅಲ್ಲವೆ ಸಾಮಾಜಿಕ ಮತ್ತು ವೈಚಾರಿಕ ಪ್ರಗತಿ ಆಗುವುದು!

ಭಾರತೀಯ ದಂಡಸಂಹಿತೆಯ 375ನೇ ವಿಧಿ ಪ್ರಕಾರ ಅತ್ಯಾಚಾರ ಎಂದರೆ ’ಯಾವುದೇ ಗಂಡಸು ಒಬ್ಬ ಹೆಂಗಸಿನ ಇಚ್ಛೆಗೆ ವಿರುದ್ಧವಾಗಿ, ಅವಳ ಒಪ್ಪಿಗೆ ಇಲ್ಲದೆ ಬಲವಂತದಿಂದ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಭೋಗ’. ಇದರಲ್ಲಿ ಮುಂದುವರೆದು ’ಒಬ್ಬ ಗಂಡ ತನ್ನದೇ ಹೆಂಡತಿ ಇದ್ದರೂ ಹದಿನೈದು ವರ್ಷಕ್ಕಿಂತ ಚಿಕ್ಕವಳಿದ್ದರೆ ಅವಳ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಅಪರಾಧ’ ಎಂದಿದೆ. ಎಷ್ಟೋ ದಶಕಗಳಿಂದ ಈ ಕೊನೆಯ ಅಂಶ ವಿವಿಧ ಕಾರಣಗಳಿಂದ ಪ್ರಶ್ನೆಗೆ ಒಳಗಾಗುತ್ತಲೇ ಇದ್ದರೂ ಅದರಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆಗಳು ಆಗಿಲ್ಲ.

18 ವರ್ಷಕ್ಕಿಂತ ಕಿರಿಯರನ್ನು ಮಕ್ಕಳು ಎಂದು ಕಾನೂನೇ ಪರಿಗಣಿಸುವಾಗ ಆ ಮಕ್ಕಳು ಕೊಡುವ ಸಮ್ಮತಿಯನ್ನು ಪರಿಗಣಿಸಬಹುದೇ?

ಹಾಗದರೆ 15 ರಿಂದ 18ರ ಒಳಗಿನ ಮದುವೆ ಆದ ಮಕ್ಕಳ ಮೇಲೆ ಅವಳ ಗಂಡ ಮಾಡುವ ಲೈಂಗಿಕ ಶೋಷಣೆಯನ್ನು ಯಾವ ರೀತಿ ಅರ್ಥೈಸಬೇಕು ಮುಂತಾದ ಅನೇಕ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ಸಿಕ್ಕಿದ್ದು ಇತ್ತೀಚೆಗೆ 2017ರಲ್ಲಿ ಜಸ್ಟೀಸ್ ಮದನ್ ಲೋಕೂರ್ ಮತ್ತು ಜಸ್ಟೀಸ್ ದೀಪಕ್ ಗುಪ್ತಾ ಅವರ ತೀರ್ಪು. ಅವರು 15 ವರ್ಷದ ಮಿತಿಯನ್ನು 18ಕ್ಕೆ ಏರಿಸಿದರು, ಆದರೆ ವೈವಾಹಿಕ ಅತ್ಯಾಚಾರ ಅಪರಾಧ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ಮುಟ್ಟಲಿಲ್ಲ.

ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ಖಾಸಗಿತನವನ್ನು ವ್ಯಾಖ್ಯಾನಿಸಿ ಎಷ್ಟೋ ತೀರ್ಪುಗಳು ಬಂದರೂ ಹೆಂಡತಿಯ ವೈಯಕ್ತಿಕತೆ ಮತ್ತು ಖಾಸಗಿತನದ ಪ್ರಶ್ನೆಗಳು ಹಾಗೇ ಇವೆ. ಈ ಪುರುಷಾಧಿಪತ್ಯ ಮತ್ತು ಪ್ರಗತಿಗಾಮಿ ಧೋರಣೆಗಳು ನ್ಯಾಯಾಂಗದಲ್ಲೂ ಸಹ ಆಳವಾಗಿ ಬೇರೂರಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಹಿಳಾ ಸಮಾನ ಅವಕಾಶಗಳ ಕೆಲ ತೀರ್ಪುಗಳು ’ಸೇನೆಯಲ್ಲಿ ಮಹಿಳೆಯ ಸೇರ್ಪಡೆ’, ’ಶಬರಿಮಲೈ ದೇವಸ್ಥಾನ ಪ್ರವೇಶ’ದ ರೂಪದಲ್ಲಿ ಬಂದರೂ ವೈವಾಹಿಕ ಸಂಬಂಧದ ಒಳಗೆ ಇಣುಕುವ ಧೈರ್ಯ ಇನ್ನೂ ನ್ಯಾಯಾಂಗಕ್ಕೆ ಬಂದಂತಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ’ವೈವಾಹಿಕ ಅತ್ಯಾಚಾರವನ್ನು ಅಪರಾಧ’ ಎಂದು ಪರಿಗಣಿಸಲು ಕೋರಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ತಿಳಿಸಿ, “ಇಂತಹ ನಡೆ ವಿವಾಹ ಎಂಬ ವ್ಯವಸ್ಥೆ ಕುಸಿಯಲು ದಾರಿ ಮಾಡಿಕೊಡುತ್ತದೆ” ಎಂದು ಹೇಳಿದೆ.

ಅಂದರೆ ಈ ವ್ಯವಸ್ಥೆ ಜೀವವಿಲ್ಲದ ಅಸ್ತಿಪಂಜರವಾಗಿದ್ದರೂ ಚಿಂತೆಯಿಲ್ಲ, ಅದನ್ನು ಬಲವಂತದಿಂದ ಉಳಿಸಬೇಕು ಎಂಬುದು ಸರ್ಕಾರದ ನಿಲುವು ಮಹಿಳೆಯರ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ. ವಿವಾಹ ಎಂಬ ವ್ಯವಸ್ಥೆ ಸದೃಢವಾಗಿ ನಿಲ್ಲಬೇಕಾದರೆ ಅದರ ನೆಲೆಯನ್ನು ಗಟ್ಟಿಗೊಳಿಸಿ, ಸಂಬಂಧಗಳನ್ನು ಸದೃಢಗೊಳಿಸುವ ಪ್ರಯತ್ನಗಳಾಗಬೇಕು. ಇದೇ ಸಂದರ್ಭದಲ್ಲಿ ಒಂದು ಆಶಾಕಿರಣದಂತೆ ಕೇರಳ ಹೈಕೋರ್ಟ್ ’ವೈವಾಹಿಕ ಅತ್ಯಾಚಾರವೂ ಅಪರಾಧವಾಗಿದೆ’ ಎಂದು ಹೇಳಿದೆ. ಈ ಎಲ್ಲ ತೀರ್ಪುಗಳೂ ಬೇರೆ ಬೇರೆ ಹಿನ್ನೆಲೆಯಲ್ಲಿ ಬಂದಿದ್ದರೂ ಕೂಡ ಈ ಒಂದು ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ಕೊಡುವ ತುರ್ತು ಅಗತ್ಯ ಇದೆ.

ಅನುಪಮಾ ಎಂಬ ಲೇಖಕಿ ತನ್ನ ‘Gendered Citizenship’ ಎಂಬ ಪುಸ್ತಕದಲ್ಲಿ ಈ ಜಗತ್ತು ಸಾರ್ವಜನಿಕ ಮತ್ತು ಖಾಸಗಿ ಎಂಬ ವಲಯದಲ್ಲಿ ವಿಭಜನೆ ಆಗಿದೆ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಸಮಾಜದಲ್ಲಿ ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಸಾರ್ವಜನಿಕ ವಲಯ ಗಂಡಸರಿಗೆ, ಕೌಟುಂಬಿಕ ಅಥವಾ ಖಾಸಗಿ ವಲಯ ಹೆಂಗಸರಿಗೆ ಎಂದು ಸಾರಾಸಗಟಾಗಿ ನಿರ್ಧರಿಸಿದ ಮೇಲೆ, ತನ್ನ ಖಾಸಗಿ ವಲಯದಿಂದ ಹೊರಬರಲು ಪ್ರಯತ್ನಿಸುವ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ. ಮೈಸೂರಿನಲ್ಲಿ ಮೊನ್ನೆ ನಡೆದ ಕಾಲೇಜು ವಿದ್ಯಾರ್ಥಿನಿಯ ರೇಪ್ ಕೇಸಿನಲ್ಲಿ ಆ ವಿದ್ಯಾರ್ಥಿನಿಯನ್ನೆ ದೂಷಿಸಿದವರು ಎಷ್ಟೋ ಜನ. ಈ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸಿನಲ್ಲಿ ಕೂಡ ಇಂತಹದೇ ಮಾತುಗಳು ಕೇಳಿಬಂದಿದ್ದವು.

ಬಿಜೆಪಿ ನಾಯಕರೊಬ್ಬರು ಸಂತ್ರಸ್ತೆ, ’ಅಣ್ಣಾ ನನ್ನನ್ನು ಬಿಟ್ಟುಬಿಡು’ ಎಂದು ಕೇಳಿಕೊಳ್ಳಬೇಕಾಗಿತ್ತು ಎಂದರೆ, ಇನ್ನೊಬ್ಬರು ’ಹನುಮಾನ್ ಚಾಲೀಸಾ’ ಹೇಳಬೇಕಾಗಿತ್ತು ಎಂದರು. ಈ ಮನೋರೋಗಕ್ಕೆ ಚಿಕಿತ್ಸೆ ಇದೆಯೇ? ಹೆಣ್ಣು ತಿರುಗಾಡುವ ಸಮಯ, ಉಟ್ಟುಕೊಳ್ಳುವ ಬಟ್ಟೆ, ಯಾರ ಜೊತೆ ತಿರುಗಾಡುತ್ತಾಳೆ, ಎಂತಹ ಸ್ಥಳಕ್ಕೆ ಹೋಗುತ್ತಾಳೆ, ಕೆಲವೊಮ್ಮೆಯಂತೂ ಏನು ತಿನ್ನುತ್ತಾಳೆ ಎಂಬುದು ಕೂಡ ಸಾರ್ವಜನಿಕ ಚರ್ಚೆಯ ವಸ್ತುವಾಗುತ್ತದೆ. ಹಿಂದಿ ಭಾಷೆಯ ’ಪಿಂಕ್ ಎಂಬ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌ರ ಒಂದು ಮಾತಿದೆ – “ಈ ದೇಶದಲ್ಲಿ ಸ್ಥಳ ಹೆಣ್ಣುಮಕ್ಕಳ ನಡತೆಯನ್ನು ನಿರ್ಧರಿಸುತ್ತದೆ; ದೇವಸ್ಥಾನ ಅಥವಾ ಲೈಬ್ರರಿಯಲ್ಲಿ ಪರಿಚಯವಾದರೆ ಒಳ್ಳೆ ಹುಡುಗಿ, ಪಬ್ ಅಥವಾ ಡಿಸ್ಕೊದಲ್ಲಿ ಸಿಕ್ಕರೆ ಪ್ರಶ್ನಾರ್ಹ ನಡತೆ ಹೊಂದಿದವಳು” ಎಂದು. ಮೈಸೂರು ಘಟನೆ ನಂತರ ರಾಜ್ಯದ ಗೃಹಮಂತ್ರಿ, ಸಂತ್ರಸ್ತೆ ಏಳು ಗಂಟೆ ನಂತರ ಅಂತಹ ಸ್ಥಳಕ್ಕೆ ಹೋಗಿದ್ದು ತಪ್ಪು ಎಂದಾಗ ಈ ಮೇಲಿನ ಮಾತು ನೆನಪಾಯ್ತು.

ಇದೇ ದಂಡಸಂಹಿತೆಯ 497 ವಿಧಿಯಾದ “ವ್ಯಭಿಚಾರ ಒಂದು ದಂಡನಾರ್ಹ ಅಪರಾಧ” ಎಂಬುದನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದಾಗ ಆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ಕೊಡುವ ಪ್ರಯತ್ನಗಳಾಗಲಿಲ್ಲ. ಹೇಗೆ ಈ ಕಾನೂನು ಹೆಣ್ಣನ್ನು ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿನಂತೆ ಪರಿಗಣಿಸುತ್ತದೆ ಎಂಬುದು ಇಂದಿಗೂ ಗೊಂದಲವಾಗಿ ಉಳಿದಿದೆ.

ಇಂದೂ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸದ 36 ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದಕ್ಕೆ ಒಂದು ಮುಖ್ಯಕಾರಣ “ಮದುವೆ ಎಂಬುದು ಲೈಂಗಿಕ ಸಂಪರ್ಕಕ್ಕೆ ಅಪರೋಕ್ಷ ಸಮ್ಮತಿ” ಎಂಬ ಕಲ್ಪನೆ. ಜೊತೆಗೆ ಮದುವೆ ಎಂಬ ವ್ಯವಸ್ಥೆ, ಸಾಮಾಜಿಕ ಚಲನೆಯಲ್ಲಿ ಮನುಷ್ಯ ಕಂಡುಕೊಂಡ ಒಂದು ವ್ಯವಸ್ಥೆ ಎಂದು ತಿಳಿಯದೆ ಧಾರ್ಮಿಕ ಸಂಸ್ಕಾರಗಳ ಭಾಗವಾಗಿಸಿದ್ದು ಕೂಡ ಕಾರಣ. ಸುಳ್ಳು ಕೇಸುಗಳು ದಾಖಲಾಗಬಹುದು, ಹೆಂಗಸರು ಇದರ ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ಕಾನೂನು ತರದೇ ಇರಲು ಸಮರ್ಥನೆ
ಅಲ್ಲ. ಬದಲಾವಣೆ ಕಾಲದ ನಿಯಮ, ಅದು ಆರೋಗ್ಯಪೂರ್ಣವಾಗಿದ್ದರೆ ಸಮಾಜ ಸ್ವಸ್ಥವಾಗಿರುತ್ತದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

ಇದನ್ನೂ ಓದಿ: ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜಲಕ್ಷ್ಮಿ ಅಂಕಲಗಿ
+ posts

LEAVE A REPLY

Please enter your comment!
Please enter your name here