Homeಮುಖಪುಟ200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

- Advertisement -
- Advertisement -

ಭಾರತದ ವಿವಿಧ ಭಾಷೆಗಳ ಸಿನಿಮಾರಂಗಗಳಿಗೆ ಹಲವು ದಶಕಗಳ ಚರಿತ್ರೆಯಿದ್ದರೂ, ಅವು ಇಲ್ಲಿನ ವಿವಿಧ ಸಮುದಾಯಗಳ ಕಥೆಗಳನ್ನು ಪ್ರತಿನಿಧಿಸಿದೆಯೇ ಎಂಬ ಪ್ರಶ್ನೆಗೆ ನೀರಸ ಉತ್ತರ ಸಿಕ್ಕೀತು. ಇನ್ನು ಭಾರತೀಯ ಚಿತ್ರರಂಗಕ್ಕೆ ಈ ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಕಟ್ಟಕಡೆಗೆ ನೂಕಲ್ಪಟ್ಟು, ಶತಮಾನಗಳ ಶೋಷಣೆಯನ್ನು ಅನುಭವಿಸಿರುವ ದಲಿತ ಸಮುದಾಯದ ಕಥೆಗಳನ್ನು ಸಶಕ್ತವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತಿರುವುದು ಹತ್ತಿರ ಹತ್ತಿರ ನೂರು ವರ್ಷ ತುಂಬಿದ ಮೇಲೆಯೇ! ಅದೂ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. ದಕ್ಷಿಣದಲ್ಲಿ ಪರಂಜಿತ, ವೆಟ್ರಿಮಾರನ್, ಮಾರಿ ಸೆಲ್ವರಾಜ್, ಗಿರಿರಾಜ್ ಹೀಗೆ ಹತ್ತಾರು ಮಂದಿ ಹೆಸರುಗಳನ್ನು ಹೇಳಬಹುದಾದರೂ, ಉತ್ತರದ ಭಾಷೆಗಳ ಚಿತ್ರರಂಗದಲ್ಲಿ ಅಂತಹವರನ್ನು ಗುರುತಿಸುವುದು ಇನ್ನೂ ಕಷ್ಟ. ಮರಾಠಿ ಸಿನಿಮಾರಂಗದ ಭರವಸೆಯ ನಿರ್ದೇಶಕ ನಾಗರಾಜ ಮಂಜುಳೆ ಹೆಸರೊಂದು ತಟ್ಟನೆ ಹೊಳೆಯತ್ತೆ. ಈ ಎಲ್ಲ ಹಿನ್ನೆಲೆಯಲ್ಲಿ, ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಾರ್ಥಕ್ ದಾಸ್‌ಗುಪ್ತ ನಿರ್ದೇಶಿಸಿರುವ ದಲಿತರ ಮೇಲಿನ ದೌರ್ಜನ್ಯದ ಕಥಾಹಂದರದ ಸಿನಿಮಾ ’200 ಹಲ್ಲಾ ಹೋ’ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾಗಿದೆ.

ಸತತ ಶೋಷಣೆ-ಹತಾಶೆಗೆ ವಿರುದ್ಧವಾಗಿ ನಡೆದ ಗುಂಪುಹತ್ಯೆಯ ಸುತ್ತ ಎಷ್ಟೆಲ್ಲಾ ಆಯಾಮಗಳಿರಬಹುದು ಎಂಬುದನ್ನು ಚರ್ಚಿಸಿರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದೇ ಈ ಸಿನಿಮಾದ ಹೆಚ್ಚುಗಾರಿಕೆ. ಸಿನಿಮಾದ ಬಗ್ಗೆ ಚರ್ಚೆ ಮಾಡುವುದಕ್ಕೂ ಮುಂಚೆ ಕೆಲವು ಅಂಕಿ-ಅಂಶಗಳ ಬಗ್ಗೆ ಪ್ರಸ್ತಾಪಿಸುವುದು ಮುಖ್ಯವೆನಿಸುತ್ತದೆ.

ಪತ್ರಕರ್ತೆ ಉರ್ಮಿ ಭಟ್ಟಾಚೆರ್ಯ ಅವರ ಒಂದು ಪುಸ್ತಕ ’ಆಫ್ಟರ್ ಐ ವಾಸ್ ರೇಪ್ಡ್’ ಇತ್ತೀಚೆಗೆ ಬಿಡುಗಡೆಯಾಗಿದೆ. ಐವರು ಅತ್ಯಾಚಾರ ಸಂತ್ರಸ್ತೆಯರ ಬಗ್ಗೆ, ಅವರು ಒಳಗಾದ ದೌರ್ಜನ್ಯದ ಬಗ್ಗೆ, ಅವರ ಬದುಕುಗಳ ಬಗ್ಗೆ ಬರೆದ ಪುಸ್ತಕದ ಒಂದು ಅಧ್ಯಾಯ ’ಕ್ಯಾಸ್ಟ್ ಅಂಡ್ ಸೆಕ್ಷುಯಲ್ ಅಸಾಲ್ಟ್’ (ಜಾತಿ ಮತ್ತು ಲೈಂಗಿಕ ದೌರ್ಜನ್ಯ). ಆ ಅಧ್ಯಾಯದಲ್ಲಿ ಅವರು ದಾಖಲು ಮಾಡುವಂತೆ ಭಾರತದಲ್ಲಿ 2007ರಿಂದ 2017ರ ನಡುವೆ ದಲಿತರ ವಿರುದ್ಧ ನಡೆದ ದೌರ್ಜನ್ಯ ಅಪರಾಧಗಳು ಶೇ.66 ಏರಿಕೆ ಕಂಡಿವೆ. 2015ರ ಎನ್‌ಸಿಆರ್‌ಬಿ
ಅಂಕಿಅಂಶಗಳ ಪ್ರಕಾರ ದಲಿತ ಮಹಿಳೆಯ ವಿರುದ್ಧ ನಡೆದ ರೇಪ್ ಪ್ರಕರಣಗಳು (ದಾಖಲಾಗಿರುವವು) 2009ರಲ್ಲಿದ್ದ 1346ರಿಂದ 2014ಕ್ಕೆ 2333 ಪ್ರಕರಣಗಳಿಗೆ ಹೆಚ್ಚಳಗೊಂಡಿವೆ. 2020ರ ಅದೇ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಅದರ ಹಿಂದಿನ ವರ್ಷ ದಿನಕ್ಕೆ ಸರಾಸರರಿಯಂತೆ 10 ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಇಂತಹ ಅಂಕಿಅಂಶಗಳು ಎಷ್ಟೇ ಮೂಡಿಬಂದರು ಇದು ಅತ್ಯಾಚಾರವನ್ನೂ ಒಳಗೊಂಡಂತೆ ದಲಿತರ ವಿರುದ್ಧದ ಅಪರಾಧಗಳ ಸಂಖ್ಯೆಯನ್ನು ತಗ್ಗಿಸುವುದಕ್ಕಾಗಲೀ, ಇಂತಹ ಅಪರಾಧಗಳ ಬಗ್ಗೆ ಆಡಳಿತ ವ್ಯವಸ್ಥೆ ಹೆಚ್ಚು ದಕ್ಷತೆಯಿಂದ ಮತ್ತು ಸೂಕ್ಷ್ಮದಲ್ಲಿ ಕೆಲಸ ಮಾಡುವಂತೆ ಬದಲಾವಣೆಗೆ ಕಾರಣವಾಗಿಲ್ಲವೆಂಬುದು ದುರಂತ.

ಅತ್ಯಾಚಾರದ ಅಪರಾಧಗಳಲ್ಲಿ ಜಾತಿ ಏಕೆ ಮುಖ್ಯವಾಗುತ್ತದೆ ಎಂಬುದು ಕೂಡ ಬಹಳಷ್ಟು ಬಾರಿ ಚರ್ಚೆಯಾಗಿದೆ. ಪುರುಷಾಧಿಪತ್ಯ, ಅಧಿಕಾರ ಅತ್ಯಾಚಾರಕ್ಕೆ ಮುಖ್ಯ ಕಾರಣಗಳಾದರೂ, ದಲಿತ ಮಹಿಳೆಯರ ವಿಷಯದಲ್ಲಿ ಅವರು ದಲಿತರಾಗಿರುವ ಕಾರಣಕ್ಕಾಗಿಯೇ ಶೋಷಕ ಮೇಲ್ಜಾತಿಯ ಪುರುಷರಿಂದ ಅತ್ಯಾಚಾರಕ್ಕೆ ಒಳಗಾಗುವುದಿದೆ. ರೇಪ್‌ಅನ್ನು ಶೋಷಣೆಯ ಅಸ್ತ್ರವಾಗಿ ಈ ಶೋಷಕ ಜಾತಿಗಳು ಉಪಯೋಗಿಸುತ್ತಿರುವ ಬಗ್ಗೆ ಹಲವು ವರದಿಗಳಿವೆ. ಇದರ ಬಗ್ಗೆ ಹಲವು ಸತ್ಯಶೋಧಕ ಅಧ್ಯಯನಗಳು ಮೂಡಿಬಂದಿವೆ. ಅಲ್ಲದೆ ದಲಿತ ಸಂತ್ರಸ್ತರಿಗೆ ತಮಗಾದ ದೌರ್ಜನ್ಯಗಳನ್ನು, ಅನ್ಯಾಯಗಳನ್ನು ಕಾನೂನು ರಕ್ಷಣೆಯ ಸಂಸ್ಥೆಗಳಿಗೆ ರಿಪೋರ್ಟ್ ಮಾಡುವುದಕ್ಕೆ ಕೂಡ, ತಮ್ಮ ಜಾತಿ ಕಾರಣದಿಂದ ಅವರಿಗೆ ಅನೇಕ ಸಮಸ್ಯೆಗಳಿವೆ. ಪೊಲೀಸರು, ಇತರ ಕಾನೂನು ಸಂಸ್ಥೆಗಳು ದಲಿತ ಸಂತ್ರಸ್ತರ ವಿರುದ್ಧ ಹೆಚ್ಚು ಪೂರ್ವಾಗ್ರಹಗಳನ್ನು ಹೊಂದಿರುವುದು, ಸಮಾಜದಲ್ಲಿ ಅವರು ಕಳಂಕಿತರು ಎಂಬ ದರಿದ್ರ ಮನಸ್ಥಿ, ’ದಲಿತರು ಅಪರಾಧಿಗಳು, ಲೈಂಗಿಕ ಕ್ರಿಯೆಗೆ ಸದಾ ಸಿದ್ಧವಾಗಿರುವವರು’ ಎಂಬಂತಹ ಜಡ ಮತ್ತು ನೀಚ ತಾರತಮ್ಯ ಅಂತರ್ಗತವಾಗಿರುವುದು – ಇವೆಲ್ಲ ಕಾರಣಕ್ಕೆ ದಲಿತ ಸಮುದಾಯದ ಸಂತ್ರಸ್ತರಿಗೆ ನ್ಯಾಯ ಸಿಗುವುದಕ್ಕೆ ಅಡ್ಡಿಮಾಡಿವೆ.

’ಕಮಿಂಗ್ ಔಟ್ ಆಸ್ ದಲಿತ್’ ಪುಸ್ತಕಕ್ಕೆ ಯುವ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಪತ್ರಕರ್ತೆ ಯಾಶಿಕಾ ದತ್ ಅವರು ’ದಲಿತ್ ವುಮೆನ್ಸ್ ಮೂಮೆಂಟ್ಸ್’ ಅಧ್ಯಾಯದಲ್ಲಿ ಇಂತಹ ಹಲವು ಸಂಗತಿಗಳನ್ನು ಚರ್ಚಿಸಿದ್ದಾರೆ. ಅವರು ದಾಖಲಿಸುವಂತೆ “ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಮಾಹಿತಿ ಸೂಚಿಸುವಂತೆ, 2001ರಲ್ಲಿ 15ರಿಂದ 49 ವರ್ಷದ ಒಳಗಿನ ಎಸ್/ಎಸ್‌ಟಿ ಮಹಿಳೆಯರಲ್ಲಿ ಶೇ.11 ಜನ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದರೆ, ಎಸ್/ಎಸ್‌ಟಿಯೇತರ ಮಹಿಳೆಯರ ಸಂಖ್ಯೆ ಶೇ.7.6. ಆದುದರಿಂದ, ಪ್ರತಿ ಸಮಯ ದಲಿತ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ, ಹಿಂಸೆ, ರೇಪ್ ಮತ್ತು ಕೊಲೆ ನಡೆದಾಗ, ಅವರ ಜಾತಿ ಮುಖ್ಯವಾಗುತ್ತದೆ” ಎನ್ನುತ್ತಾರೆ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ’200 ಹಲ್ಲಾ ಹೋ’ ಸಿನಿಮಾ ಎತ್ತುವ ಪ್ರಶ್ನೆಗಳು ಗಮನಾರ್ಹವಾಗಿವೆ. ನಾಗಪುರದ ಕೋರ್ಟ್ ಒಂದರ ಒಳಗೆ ಹಾಡುಹಗಲಿನಲ್ಲಿ ಮೇಲ್ಜಾತಿಗೆ ಸೇರಿದ ಒಬ್ಬ ಹೀನಾತಿಹೀನ ಅಪರಾಧಿ ಬಲ್ಲಿ ಚೌಧರಿಯ ಗುಂಪುಕೊಲೆಯಾಗಿದೆ. ರಾಹಿನಗರ ಎಂಬ, ಹೆಚ್ಚು ದಲಿತ ಸಮುದಾಯದವರೇ ವಾಸವಾಗಿರುವ ಪ್ರದೇಶದ ಮಹಿಳೆಯರು ಅಂದು ಕೋರ್ಟ್‌ನಲ್ಲಿ ಸುಮಾರು 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿದ್ದಿದ್ದರಿಂದ, ಅವರನ್ನು ಸಂದೇಹಿಸಲಾಗುತ್ತದೆ. ಪೊಲೀಸರು ರ್‍ಯಾಂಡಮ್‌ಆಗಿ ಐವರು ಮಹಿಳೆಯರನ್ನು ಬಂಧಿಸಿ ಕಿರುಕುಳ ನೀಡಿ ಅವರ ಮೇಲೆ ಆರೋಪ ಹೊರಿಸುತ್ತಾರೆ. ಈ ಘಟನೆಯ ಬಗ್ಗೆ ತನಿಖೆ ಮಾಡಿ ವರದಿ ನೀಡಲು, ಮಹಿಳಾ ಹಕ್ಕುಗಳ ಆಯೋಗ ನಿವೃತ್ತ ನ್ಯಾಯಾಧೀಶ ವಿಠಲ್ ಧಾಂಗ್ಲೆ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸುತ್ತದೆ.

ಈ ಸಮಿತಿ ಸತ್ಯಶೋಧನಾ ವರದಿಯನ್ನು ಬರೆಯುವುದಕ್ಕೆ ಮುಂಚೆಯೇ, ಪೊಲೀಸರು ಆತುರಾತುರವಾಗಿ ಸಾಕ್ಷ್ಯಗಳನ್ನು ಸೃಷ್ಟಿಸಿ ಕೆಳಹಂತದ ಕೋರ್ಟ್‌ನಲ್ಲಿ ಅಪರಾಧವನ್ನು ಸಾಬೀತುಪಡಿಸುವುದರಿಂದ ಆ ಐವರೂ ಮಹಿಳೆಯರಿಗೆ ಜೀವಾವಧಿ ಶಿಕ್ಷೆ ಆಗುತ್ತದೆ. ಹಾಗಾದರೆ ಯಾರು ತಪ್ಪಿತಸ್ಥರು? ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ನಂಬಿಕೆ ಕಳೆದುಕೊಂಡ ಮಹಿಳೆಯರು ಮಾಡಿದ ’ಪ್ರತೀಕಾರದ ನ್ಯಾಯ’ಕ್ಕೆ ಯಾರು ಕಾರಣ? ತಮ್ಮ ದಲಿತ ಹಿನ್ನೆಲೆಯನ್ನು ಮರೆತು ಯಶಸ್ವಿ ನ್ಯಾಯಾಧೀಶರಾಗಿರುವ ವಿಠಲ್ ಧಾಂಗ್ಲೆಯವರ ಪಾತ್ರವೇನು ಇಲ್ಲಿ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಎತ್ತಲು ಸಿನಿಮಾ ಪ್ರಯತ್ನಿಸಿದೆ.

ನ್ಯಾಯಾಧೀಶ ವಿಠಲ್ ಧಾಂಗ್ಲೆಯವರನ್ನು (ಅಮೋಲ್ ಪಾಲೇಕರ್) ಮುಖ್ಯಕೇಂದ್ರದಲ್ಲಿರಿಸಿ ಬಹುತೇಕ ಸಿನಿಮಾವನ್ನು ನಿರೂಪಿಸಲಾಗಿದೆ. ತಮ್ಮ ವೃತ್ತಿಯ ಸವಲತ್ತಿನ ಕಾರಣದಿಂದ ಬದಲಾಗಿರುವ, ತಮ್ಮ ದಲಿತ ಹಿನ್ನೆಲೆಯನ್ನು ಕೆದಕುವುದರ ಬಗ್ಗೆ ಸದಾ ಬೇಸರಿಸಿಕೊಳ್ಳುವ, ಸಂವಿಧಾನದ ಪ್ರತಿ ಪದವೂ ತನ್ನ ನೆನಪಿನಲ್ಲಿದೆ ಎನ್ನುವ ಆದರೆ ಅದರ ಅನುಷ್ಠಾನದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿಕೊಳ್ಳದೆ, ಆಡಳಿತ ವ್ಯವಸ್ಥೆ ಮಂಡಿಸುವ ಸಾಕ್ಷ್ಯಗಳ ಬಗ್ಗೆ ಕಾನೂನಾತ್ಮಕವಾಗಿ ಮಾತ್ರ ಯೋಚಿಸುವ ವ್ಯಕ್ತಿಯೊಬ್ಬ, ಅಂತಹ ಸವಲತ್ತುಗಳು ಇಲ್ಲದೆ ಈಗಲೂ ತಾರತಮ್ಯ ಮತ್ತು ದೌರ್ಜನ್ಯಗಳನ್ನು ಅನುಭವಿಸುತ್ತಿರುವ ತನ್ನ ಸಮುದಾಯದ ಪರವಾಗಿ ಚಿಂತಿಸುವಂತೆ ಮಾರ್ಪಡಿಸುವ ಘಟನೆಗಳನ್ನು ಸಿನಿಮಾ ಚಿತ್ರಿಸಿದೆ. ಈ ಮಾರ್ಪಡುವಿಕೆಯ ಪಯಣದಲ್ಲಿ, ಮೇಲ್ಜಾತಿಗೆ ಸೇರಿದ ಬಲ್ಲಿ ಚೌಧರಿ ದಲಿತರ ಮೇಲೆ ನಡೆಸುವ ಅತ್ಯಾಚಾರ, ಹಿಂಸೆ ಮತ್ತು ದೌರ್ಜನ್ಯ, ಅದರ ವಿರುದ್ಧ ರಕ್ಷಣೆ ಪಡೆಯುವಲ್ಲಿ ಸೋಲುವ ದಮನಿತ ಸಮುದಾಯ ಅದಕ್ಕಿರುವ ಅಡೆತಡೆಗಳು ಇವೆಲ್ಲಾ ಫ್ಲಾಶ್‌ಬ್ಯಾಕ್ ಕಥೆಗಳಾಗಿ ಮೂಡುತ್ತವೆ.

ಹಲವು ವರ್ಷಗಳ ಕಾಲ ತಮ್ಮ ಮೇಲಾಗುತ್ತಿರುವ ಅತ್ಯಾಚಾರವನ್ನು ವಿರೋಧಿಸಿ ದೂರು ದಾಖಲಿಸಲು ಕೂಡ ಸಾಧ್ಯವಾಗದ ಮಹಿಳೆಯರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬಲು ಪಟ್ಟಣದಲ್ಲಿ ಕಲಿತ ಆಶಾ ಸುರ್ವೆ (ರಿಂಕು ರಾಜಗುರು) ವಾಪಸ್ಸು ಬರಬೇಕಾಗಿರುತ್ತದೆ. ದೂರು ದಾಖಲಿಸಿ ಬಲ್ಲಿ ಬಂಧಿತನಾಗಿದ್ದರೂ ಆತನಿಗೆ ಶಿಕ್ಷೆಯಾಗುವ ಯಾವ ಭರವಸೆಯೂ ಈ ದಮನಿತ ಸಮುದಾಯಕ್ಕೆ ಇರುವುದಿಲ್ಲ. ಆತ ಹಿಂದಿರುಗಿದ ಮೇಲೆ ಮತ್ತೆ ದೌರ್ಜನ್ಯ ಹಾಗೂ ಅತ್ಯಾಚಾರಗಳು ಅವ್ಯಾಹತವಾಗಿ ಮುಂದುವರೆಯುವ ಭೀತಿಯಲ್ಲೇ ಬದುಕುತ್ತಿರುವ ಸಮುದಾಯದ ಮಹಿಳೆಯರು ’ಪ್ರತೀಕಾರದ ನ್ಯಾಯ’ಕ್ಕೆ ಮುಂದಾಗುವ ಅನಿವಾರ್ಯತೆಗೆ ಬೀಳುತ್ತಾರೆ. ಆಗ ವ್ಯವಸ್ಥೆ ಈ ಸಮುದಾಯದ ಮೇಲೆ ಇನ್ನಷ್ಟು ಕ್ರೂರವಾಗುತ್ತದೆ. ಪೊಲೀಸ್ ವ್ಯವಸ್ಥೆ ಈ ಮಹಿಳೆಯರ ವಿರುದ್ಧ ತಿರುಗಿ ಬಿದ್ದಾಗ ಅಲ್ಲೂ ನಿಯಮಗಳನ್ನು ಪಾಲಿಸಿಲ್ಲ. ಇಲ್ಲಿ ಯಾವುದು ನ್ಯಾಯ-ಅನ್ಯಾಯ ಎಂಬ ಜಿಜ್ಞಾಸೆಗೆ ಸಿನಿಮಾ ಬೀಳುತ್ತದೆ.

ಈ ಸಿನಿಮಾಗೆ 2004ರಲ್ಲಿ ನಾಗಪುರದಲ್ಲಿ ನಡೆದ ನಿಜ ಘಟನೆ ಪ್ರೇರಣೆಯಾಗಿದೆ. ಅತ್ಯಾಚಾರಿ ಮತ್ತು ದರೋಡೆಕಾರ ಅಕ್ಕು ಯಾದವ್ ಎಂಬ ಮೇಲ್ಜಾತಿಯ ವ್ಯಕ್ತಿ ಕಸ್ತೂರಬಾ ನಗರ ಎಂಬ ಪ್ರದೇಶದ ಮಹಿಳೆಯರ ಮೇಲೆ ಸುಮಾರು 2 ದಶಕಗಳ ಕಾಲ ನಡೆಸುತ್ತಿದ್ದ ದೌರ್ಜನ್ಯ, ಅತ್ಯಾಚಾರ ಮತ್ತು ಹಿಂಸೆಗೆ ಯಾವುದೇ ಅಡ್ಡಿಯಿರಲಿಲ್ಲ. ಈ ಸಂತ್ರಸ್ತ ಮಹಿಳೆಯರನ್ನು ಸಂಘಟಿಸಿ, ಪೊಲೀಸರಿಗೆ ದೂರು ಕೊಡುವಂತೆ ಮಾಡಿದರೂ, ಅಕ್ಕು ಯಾದವ್‌ಗೆ ಪೊಲೀಸರು ರಕ್ಷಣೆ ನಿಡುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತದೆ. ಈ ಹತಾಶೆ ಪ್ರತೀಕಾರಕ್ಕೆ ತಿರುಗಿ ಕೋರ್ಟ್‌ನಲ್ಲಿ ಆತನ ಗುಂಪು ಹತ್ಯೆಯಿಂದ ಕೊನೆಯಾಗುತ್ತದೆ. ವಿಚಾರಣೆಯ ಸಮಯದಲ್ಲಿ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಈ ಅಪರಾಧಕ್ಕೆ ತಾವೇ ಹೊಣೆ ಎಂದು ಹೇಳಿಕೊಂಡರೂ, ಸಾಕ್ಷ್ಯಾಧಾರದ ಕೊರತೆಯಿಂದಾಗಿ ಬಂಧಿತ ಮಹಿಳೆಯರೆಲ್ಲರೂ ಬಿಡುಗಡೆಯಾಗುತ್ತಾರೆ.

ಶ್ರೇಣೀಕೃತ ಸಮಾಜದಲ್ಲಿ ದಲಿತ ಸಮುದಾಯದವರು ಅತಿ ಶೋಷಿತರು ಎಂಬುದು ನಿಜವಾದರೆ, ಅದರಲ್ಲಿ ದಲಿತ ಮಹಿಳೆಯರು ಇನ್ನೂ ಹೆಚ್ಚು ಶೋಷಣೆಗೆ ಒಳಗಾಗುವವರು ಎಂಬುದು ಕೂಡ ವಾಸ್ತವ. ಸಿನಿಮಾದಲ್ಲಿ ಸತ್ಯಶೋಧಕ ಸಮಿತಿಯ ಭಾಗವಾಗಿರುವ ಪೂರ್ವ ಸಹನಿ ಎಂಬ ಪತ್ರಕರ್ತೆ ಇದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನ ಪಟ್ಟರೂ ಉಳಿದ ಮೂರು ಪುರುಷರು ಇದರಿಂದ ಕನ್ವಿನ್ಸ್ ಆಗುವುದಿಲ್ಲ. ಸಮಾಜದ ಪೂರ್ವಾಗ್ರಹಗಳನ್ನು ಹಿಡಿದಿಡುವುದರಲ್ಲಿ ಸಿನಿಮಾ ಒಂದು ಮಟ್ಟಕ್ಕೆ ಗೆದ್ದಿದೆ. ನನಗೆ ಯಾವುದೇ ಧರ್ಮ ಇಲ್ಲ, ಸಂವಿಧಾನದ ಪ್ರತಿ ಪದವೂ ನೆನಪಿದೆ, ಸಂವಿಧಾನವೇ ನನ್ನ ಧರ್ಮ, ಜಾತಿ ತೊರೆದಿದ್ದೇನೆ ಎಂದು ಹೇಳಿಕೊಳ್ಳುವ ನಿವೃತ್ತ ನ್ಯಾಯಾಧೀಶ ವಿಠಲ್ ಧಾಂಗ್ಲೆಗೆ, ಸಂವಿಧಾನ ಅನುಷ್ಠಾನ ಆಗಿದೆಯೇ ಎಂಬುದನ್ನು ನೋಡಿಕೊಳ್ಳುವುದು ಮುಖ್ಯ ಎಂದು ಆಶಾ ಸುರ್ವೆ ಪ್ರಶ್ನೆಯೆಸೆಯುತ್ತಾರೆ. ಇಂತಹ ಹಲವು ಸಂವಾದಗಳ ಕಾರಣಗಳಿಂದ ’ದಲಿತನಿಂದ ಯಶಸ್ವಿ ನ್ಯಾಯಾಧೀಶನಾಗುವ ಪ್ರಕ್ರಿಯೆಯಲ್ಲಿ ನಾನು ಹಲವು ಸಂಗತಿಗಳನ್ನು ಮರೆತು ಹಿಂದಕ್ಕೆ ಬಿಟ್ಟುಬಿಟ್ಟಿದ್ದೇನೆ. ನನಗೆ ಯಾವುದೇ ತಾಯ್ನಾಡಿಲ್ಲ ಎಂದು ಗಾಂಧಿಯವರಿಗೆ ಅಂಬೇಡ್ಕರ್ ಅವರು ಹೇಳಿದ ಮಾತನ್ನು ಮರೆತಿದ್ದೇನೆ’ ಎಂದು ಸ್ವಗತದಲ್ಲಿ ಹೇಳಿಕೊಳ್ಳುವ ದೃಶ್ಯ ಸಿನಿಮಾದ ಆಶಯವನ್ನು ಹಿಡಿದಿಡುತ್ತದೆ. ಪ್ರಿವಿಲೆಜ್ ಇಂದ ಮೈಮರೆತು ಬದುಕುತ್ತಿರುವ ಜನರು ಇಂದು ಬದಲಾಗಬೇಕಿರುವ ಅಗತ್ಯವನ್ನು ಈ ಪಾತ್ರದಲ್ಲಾಗುವ ಬದಲಾವಣೆ ಹಿಡಿದಿಟ್ಟಿದೆ.

ಉಳಿವ ಪ್ರಶ್ನೆಗಳು

ಈ ಮೇಲಿನ ನಿಜ ಘಟನೆಯಲ್ಲಿ ಅಥವಾ ಅದರಿಂದ ಪ್ರೇರಣೆಗೊಂಡು ಸಿನಿಮಾದಲ್ಲಿ ಚಿತ್ರಿತವಾದ ಘಟನೆಯಲ್ಲಿ ’ಪ್ರತೀಕಾರದ ನ್ಯಾಯ’ವನ್ನು ಸಮರ್ಥಿಸಿಕೊಳ್ಳಲು ಅವಕಾಶ ಇದೆಯಾದರೂ ಪ್ರಜಾಪ್ರಭುತ್ವದಲ್ಲಿ ಎಸ್ಟಾಬ್ಲಿಷ್ ಆಗಿರುವ ನ್ಯಾಯಿಕ ವ್ಯವಸ್ಥೆಯಲ್ಲಿ ಇದರ ಸ್ಥಾನ ಯಾವುದು? ಎಷ್ಟೋ ಬಾರಿ ರೇಪ್ ಅಥವಾ ಇನ್ಯಾವುದೇ ಅಪರಾಧ (ಭಯೋತ್ಪಾದನೆ ಇತ್ಯಾದಿ) ಸಾಬೀತು ಆಗುವುದಕ್ಕೆ ಮುಂಚೆಯೇ ಪೊಲೀಸರು ಎನ್‌ಕೌಂಟರ್ ಮಾಡಿರುವ ಹಲವು ಪ್ರಕರಣಗಳು ಇವೆ. ಅವುಗಳಲ್ಲಿ ಎಷ್ಟೋ ಪ್ರಕರಣಗಳು ಸುಳ್ಳಿನವು. ಇಂತಹ ಅಪಾಯ ಇರುವ ದೇಶದಲ್ಲಿ ಪ್ರತೀಕಾರ ನ್ಯಾಯಕ್ಕೆ ಯಾವ ಸ್ಥಾನವಿರುತ್ತದೆ? ಅದರಲ್ಲೂ ಅಲ್ಪಸಂಖ್ಯಾತ ಧರ್ಮೀಯರ ವಿರುದ್ಧ ಇಂತಹ ಗುಂಪು ಹತ್ಯೆಯ ಪ್ರಕರಣಗಳು ಎಷ್ಟೋ ಬಾರಿ ಸುಳ್ಳು ಮತ್ತು ದ್ವೇಷದ ಕಾರಣಕ್ಕೆ ಆಗುತ್ತವೆ ಎಂಬ ಸಂಗತಿ ಕೂಡ ನಮ್ಮ ಮುಂದಿದೆ. ಇಂತಹ ಸೂಕ್ಷ್ಮಗಳನ್ನು ಸಿನಿಮಾ ಚರ್ಚಿಸಲು ಮುಂದಾಗಿಲ್ಲ.

ನ್ಯಾಯಾಧೀಶನ ಪಾತ್ರದ ಮೂಲಕವೇ ಕಥೆ ನಿರೂಪಣೆ ಮೇಲುಗೈ ಪಡೆದಿರುವುದರಿಂದ, ಸಂತ್ರಸ್ತರ ಬದುಕಿನ ಚಿತ್ರಣ ಸಿನಿಮಾದಲ್ಲಿ ಕಾಣೆಯಾಗಿದೆ ಅಥವಾ ಮುಕ್ಕಾಗಿದೆ. ಅವರಿಗೆ ಪ್ರಸ್ತುತ ನ್ಯಾಯಿಕ ವ್ಯವಸ್ಥೆಯಲ್ಲಿ ರಕ್ಷಣೆ-ನ್ಯಾಯ ಪಡೆಯುವುದಕ್ಕೆ ಇರುವ ಸವಾಲುಗಳು ನಡುನಡುವೆ ಸಂಭಾಷಣೆಯಲ್ಲಿ ಬರುತ್ತವಾದರೂ, ಅವುಗಳನ್ನು ದೃಶ್ಯರೂದಲ್ಲಿ ಸಶಕ್ತವಾಗಿ ಕಟ್ಟಿಕೊಡಲು ನಿರ್ದೇಶಕರಿಗೆ ಆಗಿಲ್ಲ.

ಈ ಕೊರತೆಗಳಿದ್ದರೂ, ಪ್ರಸ್ತುತ ಸಮಾಜದ ದಮನಿತ ಸಮುದಾಯದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು ಎನ್ನುವ ಆಶಯ ಹೊತ್ತಿರುವ ’200 ಹಲ್ಲಾ ಹೋ’ ಸಿನಿಮಾ ಮುಂದೆ ಇಂತಹ ವಿಷಯಗಳನ್ನು ನಿಭಾಯಿಸುವವರಿಗೆ ಉದಾಹರಣೆಯಾಗಿ ನಿಲ್ಲಬಹುದು. ಆ ನಿಟ್ಟಿನಲ್ಲಿ ಚಿತ್ರತಂಡ ಅಭಿನಂದನೀಯ.


ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು: ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಧ್ವಜ ಹಾರಿಸದ ಮನೆಗಳ ಫೋಟೋ ತೆಗೆದುಕೊಳ್ಳಿ: ಉತ್ತರಾಖಾಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

0
“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್...