ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತವಾಗಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA), 2003 ಕ್ಕೆ ವ್ಯಾಪಕ ತಿದ್ದುಪಡಿಯನ್ನು ಅಧಿಸೂಚನೆ ಹೊರಡಿಸಿದ್ದು, ರಾಜ್ಯಾದ್ಯಂತ ತಂಬಾಕು ಬಳಕೆಯನ್ನು ತಡೆಯುವ ಗುರಿಯನ್ನು ಹೊಂದಿರುವ ಕಠಿಣ ಕ್ರಮಗಳನ್ನು ಇದು ಹೊಂದಿದೆ. COTPA (ಕರ್ನಾಟಕ ತಿದ್ದುಪಡಿ) ಕಾಯ್ದೆ, 2024, ಮೇ 23 ರಂದು ರಾಷ್ಟ್ರಪತಿ ಅಂಕಿತ ಹಾಕಿದ್ದು, ಮೇ 30 ರಂದು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ತಂಬಾಕು ಉತ್ಪನ್ನ ಖರೀದಿ
ಇದರೊಂದಿಗೆ ಕರ್ನಾಟಕದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಯಾವುದೇ ಶಿಕ್ಷಣ ಸಂಸ್ಥೆಯಿಂದ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಮತ್ತು ಸಡಿಲ ಸಿಗರೇಟ್ ಅಥವಾ ಒಂಟಿ ಕಡ್ಡಿಗಳ ಮಾರಾಟವನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ.
ಪರ್ಯಾಯ ತಂಬಾಕು ಸೇವನೆಯನ್ನು ನಿರುತ್ಸಾಹಗೊಳಿಸುವ ಮಹತ್ವದ ಕ್ರಮವನ್ನು ಕೂಡಾ ರಾಜ್ಯ ಸರ್ಕಾರ ಕೈಗೊಂಡಿದ್ದು, ತಿದ್ದುಪಡಿಯು ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ಸಹ ನಿಷೇಧಿಸುತ್ತದೆ. ಕಾಯಿದೆಯಡಿಯಲ್ಲಿ ಪರಿಚಯಿಸಲಾದ ಹೊಸ ಸೆಕ್ಷನ್ 4A ರೆಸ್ಟೋರೆಂಟ್‌ಗಳು, ಪಬ್‌ಗಳು ಅಥವಾ ಕೆಫೆಗಳು ಸೇರಿದಂತೆ ಯಾವುದೇ ಆವರಣದಲ್ಲಿ ಹುಕ್ಕಾ ಬಾರ್‌ಗಳ ಕಾರ್ಯಾಚರಣೆಯನ್ನು ನಿಷೇಧಿಸುತ್ತದೆ.
ಹುಕ್ಕಾ ಬಾರ್‌ಗಳನ್ನು ನಿರ್ವಹಿಸುವ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸದಾಗಿ ಸೇರಿಸಲಾದ ಸೆಕ್ಷನ್ 21A ಅಡಿಯಲ್ಲಿ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿನ “ಬಳಕೆ”ಯ ವ್ಯಾಖ್ಯಾನವನ್ನು ಧೂಮಪಾನ ಮತ್ತು ಉಗುಳುವುದು ಎರಡನ್ನೂ ಸೇರಿಸಲು ವಿಸ್ತರಿಸಲಾಗಿದೆ. 30 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್‌ಗಳು, 30 ಕ್ಕೂ ಹೆಚ್ಚು ಜನರಿಗೆ ಆಸನಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳಿಗೆ ನಿರಂತರ ಅನುಮತಿ ಇದೆ.
ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡವನ್ನೂ ಹೆಚ್ಚಿಸಲಾಗಿದೆ. ಕಾಯ್ದೆಯ ಸೆಕ್ಷನ್ 21, 24 ಮತ್ತು 28 ರ ಅಡಿಯಲ್ಲಿ ದಂಡವನ್ನು 200 ರೂ.ಗಳಿಂದ 1,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ವಾಸ್ತವವಾಗಿ, 2024 ರಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಸರ್ಕಾರಿ ಆದೇಶದ ಹೊರತಾಗಿಯೂ, ಬೆಂಗಳೂರಿನ ಉಪನಗರ ಪ್ರದೇಶಗಳಲ್ಲಿ ಅನೇಕ ಹುಕ್ಕಾ ಕೆಫೆಗಳು ಇನ್ನೂ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಅಂದಿನಿಂದ ಕೇಂದ್ರ ಅಪರಾಧ ವಿಭಾಗವು ಅಂತಹ 20 ಸಂಸ್ಥೆಗಳನ್ನು ಗುರುತಿಸಿ ದಾಳಿ ನಡೆಸಿದ್ದು, 12 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಹುಕ್ಕಾ ಮಡಿಕೆಗಳು ಮತ್ತು ಫ್ಲೇವರ್‌ಗಳನ್ನು ವಶಪಡಿಸಿಕೊಂಡಿದೆ.
ಇದನ್ನು ವಿರೋಧಿಸಿ ರೆಸ್ಟೋರೆಂಟ್ ಮಾಲಿಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಪ್ರಿಲ್ 2024 ರ ತೀರ್ಪು ಪ್ರಕಟಿಸಿ ಅರ್ಜಿಗಳನ್ನು ತಳ್ಳಿಹಾಕಿತ್ತು. ಸಂವಿಧಾನದ 47 ನೇ ವಿಧಿಯ ಅಡಿಯಲ್ಲಿ ನಿಷೇಧದ ಕಾನೂನುಬದ್ಧತೆಯನ್ನು ದೃಢಪಡಿಸಿತ್ತು. ಸಂವಿಧಾನದ 47 ನೇ ವಿಧಿಯು ರಾಜ್ಯಗಳು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದನ್ನು ಕಡ್ಡಾಯಗೊಳಿಸುತ್ತದೆ.
ಹುಕ್ಕಾ ಬಾರ್‌ಗಳು, ‘ಹರ್ಬಲ್ ಹುಕ್ಕಾ’ ನೀಡುವವುಗಳು ಸಹ ನಿಕೋಟಿನ್ ಮತ್ತು ಮೊಲಾಸಸ್‌ನಂತಹ ಹಾನಿಕಾರಕ ಪದಾರ್ಥಗಳ ಉಪಸ್ಥಿತಿಯಿಂದಾಗಿ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ನ್ಯಾಯಾಲಯವು ಈ ವೇಳೆ ಹೇಳಿತ್ತು. ತಂಬಾಕು ಉತ್ಪನ್ನ ಖರೀದಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ; ಮೂರು ದಶಕಗಳ ನಂತರ 32 ಜನರಿಗೆ ಶಿಕ್ಷೆ ಪ್ರಕಟ
ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ; ಮೂರು ದಶಕಗಳ ನಂತರ 32 ಜನರಿಗೆ ಶಿಕ್ಷೆ ಪ್ರಕಟ

