ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕೆಎಸ್ಆರ್‌ಟಿಸಿ ನೌಕರರ ಮುಷ್ಕರವು ರಾಜ್ಯ ಸರ್ಕಾರಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಆದರೂ ಕೂಡಾ ತನ್ನ ಪಟ್ಟನ್ನು ಸಡಿಲಿಸದ ಸರ್ಕಾರ ಖಾಸಗಿ ಬಸ್ಸುಗಳನ್ನು ಓಡಿಸುತ್ತಿದೆ. ಈ ಹಿನ್ನಲೆಯಲ್ಲಿ ಗುರುವಾರದಂದು ಬೆಳಗಾವಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಗರಂ ಆಗಿದ್ದಾರೆ.
ತಮಗೆ ಆರನೇ ಆಯೋಗದ ವೇತವನ್ನು ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರು ಸರ್ಕಾರದ ಯಾವುದೆ ಬೆದರಿಕೆಗೆ ಜಗ್ಗುತ್ತಿಲ್ಲ.
ಕಳೆದ ಎರಡು ದಿನಗಳಿಂದ ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ, ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವ ಮುನ್ನ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು, ವಿಮೆ ಹಾಗೂ ಪರ್ಮಿಟ್ ಇಲ್ಲದ ಅಸುರಕ್ಷಿತ ಖಾಸಗಿ ವಾಹನಗಳನ್ನು ಕೂಡ ಓಡಿಸಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿಟ್ಟಾಗಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಬೆದರಿದ ಬಿಎಸ್‌ವೈ ಸರ್ಕಾರ; ಎಸ್ಮಾ ಜಾರಿ ಎಚ್ಚರಿಕೆ
ಪ್ರಶ್ನೆಗೆ ಸಿಟ್ಟಿನಿಂದಲೇ ಉತ್ತರಿಸಿದ ಮುಖ್ಯಮಂತ್ರಿ, “ಸರ್ಕಾರ ನಡೆಸುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೊಡಿಸಿಕೊಳ್ಳುವುದು ಬೇಡ. ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ಜನ ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ” ಎಂದಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಎಪ್ರಿಲ್ 7 ರಿಂದ ಮುಷ್ಕರ ನಡೆಸುತ್ತಿದ್ದು, ಎರಡನೇ ದಿನವಾದ ಇಂದು ಕೂಡಾ ಮುಷ್ಕರ ಮುಂದುವರೆದಿದೆ. ಮುಖ್ಯವಾಗಿ ಆರನೇ ವೇತನ ಆಯೋಗದ ಪ್ರಕಾರ ವೇತನ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಜೆಡಿಎಸ್‌ಗೆ ಮತ್ತೊಂದು ಆಘಾತ: ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆ


