ಬುಧವಾರ (ಏಪ್ರಿಲ್ 07) ಸಾರಿಗೆ ನೌಕರರು ಮುಷ್ಕರ ಹೂಡಲು ಸಜ್ಜಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಸಂಘರ್ಷಕ್ಕೆ ಮುಂದಾಗಿದ್ದಾರೆ. ಆದರೆ ಸರ್ಕಾರ ಮಾತ್ರ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರ ಹೊರತಾಗಿಯೂ ನೌಕರರು ಮುಷ್ಕರ ನಡೆಸಿದರೆ ಸರ್ಕಾರ ‘ಎಸ್ಮಾ’ ಜಾರಿಗೆ ಮುಂದಾಗಿದೆ ಎಂದು ಹೇಳಲಾಗಿದೆ.
ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರು ಪ್ರಮುಖವಾಗಿ, ‘ಆರನೇ ವೇತನ ಆಯೋಗದ ವರದಿ’ ಜಾರಿಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರವು ಆರನೇ ವೇತನ ಜಾರಿ ಬದಲು ಸಾರಿಗೆ ನೌಕರರಿಗೆ 8% ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ ಇದನ್ನು ನೌಕರರು ನಿರಾಕರಿಸಿದ್ದು, “ತಮಗೆ ವೇತನ ಹೆಚ್ಚಳ ಬೇಕಾಗಿಲ್ಲ. ಆರನೇ ವೇತನ ಆಯೋಗ ಜಾರಿಯೇ ಆಗಬೇಕು. ಅದಕ್ಕಾಗಿ ಬುಧವಾರ ಮುಷ್ಕರ ನಡೆಸಿಯೇ ತೀರುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಎಂದ ಭೈರತಿ ಬಸವರಾಜ್, ಎಸ್‌ಐಟಿ ವಿಚಾರಣೆಗೆ ಗೈರು ಸಾಧ್ಯತೆ
ನೌಕರರ ಮುಷ್ಕರ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಇದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಸಾರಿಗೆ ಇಲಾಖೆ ಎಸಿಎಸ್ ಅಂಜುಮ್ ಪರ್ವೇಜ್, KSRTC ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ ಸೇರಿ ಹಲವರು ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ನೌಕರರು ಮುಷ್ಕರ ಹೂಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ವೇತನ ಹೆಚ್ಚಳದ ಭರವಸೆಗಳನ್ನು ನೀಡಿದರೂ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಭೆಯಲ್ಲಿ ಸೂಚಿಸಿದರೆಂಬ ಮಾಹಿತಿಯಿದೆ.
ಇದಾಗಿಯೂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಸಾರಿಗೆ ನೌಕರರ ಜೊತೆ ಸಂಧಾನ ಸಾಧ್ಯತೆ ಇಲ್ಲವೇ ಇಲ್ಲ. ಎಸ್ಮಾ ಜಾರಿ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾರಿಗೆ ನೌಕರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದ ಸಂತ್ರಸ್ತೆ
“ಸಾರಿಗೆ ನೌಕರರ ಬೇಡಿಕೆ ನಮಗೆ ಗೊತ್ತಿದೆ. ಕೊರೊನಾ ಕಾರಣದಿಂದ ಸಾರಿಗೆ ಇಲಾಖೆ ಸಂಕಷ್ಟದಲ್ಲಿದೆ. ಆದರೂ ಕೂಡ ಸಿಬ್ಬಂದಿಯ ವೇತನ ಕಡಿತ ಮಾಡದೇ ಪೂರ್ಣ ಸಂಬಳ ನೀಡಿ ಜವಾಬ್ದಾರಿ ಮೆರೆದಿದ್ದೇವೆ. ಡಿಸಿಎಂ ಲಕ್ಷ್ಮಣ ಸವದಿ ಮೇ 2ರ ನಂತರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. 6ನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ಹೆಚ್ಚಳ ಸಾಧ್ಯವಿಲ್ಲ. ಆದರೆ, 8% ದಷ್ಟು ಸಂಬಳ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದೆ. ಚುನಾವಣಾ ಆಯೋಗ ಅನುಮತಿ ನೀಡಿದರೆ ಈ ಆದೇಶ ಹೊರಡಿಸುತ್ತೇವೆ” ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
‘ಎಸ್ಮಾ’ ಎಂದರೆ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ. ಇದು ಜಾರಿಯಾದರೆ, ಜನರಿಗೆ ಅತ್ಯಗತ್ಯ ಎನಿಸುವ ಸೇವೆಗಳನ್ನ ಒದಗಿಸುವವರು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಗೈರಾದಾಗ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಒಂದು ವೇಳೆ ಎಸ್ಮಾ ಜಾರಿಯಾಗಿ, ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರನ್ನ ಸೇವೆಯಿಂದಲೇ ಅಮಾನತುಗೊಳಿಸುವ ಅವಕಾಶವನ್ನು ಈ ಕಾಯ್ದೆ ನೀಡುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, “ಸರ್ಕಾರವೇನು ಸರ್ವಾಧಿಕಾರಿಗಳಲ್ಲ, ಎಸ್ಮಾ ಜಾರಿ ಮಾಡುವುದಾದರೆ ಮಾಡಲಿ. ನಾವು ಅದಕ್ಕೆ ಸಿದ್ದರಿದ್ದೇವೆ” ಎಂದು ಕಿಡಿ ಕಾರಿದ್ದಾರೆ. ಅಲ್ಲದೆ ಹೋರಾಟದ ಬಗ್ಗೆ ಅವರು ಭಾನುವಾರದಂದು ಸ್ಪಷ್ಟವಾಗಿ ತಿಳಿಸಿದ್ದು, ಅವರ ಹೇಳಿಕೆಯನ್ನು ಕೆಳಗೆ ನೋಡಬಹುದಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಹಿಂದೂಗಳ ಬೆಂಬಲದಿಂದ BJP 10ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ: ನಳಿನ್ ಕುಮಾರ್ ಕಟೀಲ್
