Homeಕರ್ನಾಟಕಸಿಡಿ ಪ್ರಕರಣ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದ ಸಂತ್ರಸ್ತೆ

ಸಿಡಿ ಪ್ರಕರಣ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದ ಸಂತ್ರಸ್ತೆ

’ಮಾನ್ಯ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಹೇಳಿರುವುದು ನನಗೆ ತೀವ್ರ ಆತಂಕ ಉಂಟು ಮಾಡಿದೆ’

- Advertisement -
- Advertisement -

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ, ಸಿಡಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವ ಬೀರುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸ್ವತಃ ಸಂತ್ರಸ್ತ ಯುವತಿಯೇ  ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದಿದ್ದಾರೆ.

’ನಾನು ದೂರು ನೀಡಿರುವ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವ ಸಲುವಾಗಿ, ನನ್ನ ವಿರುದ್ಧ ಷಡ್ಯಂತ್ರ ಮಾಡಿ, ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಣಾವ ಬೀರುತ್ತಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಅತ್ಯಾಚಾರ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ನನಗೆ ಪ್ರತಿಬಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುತ್ತಿದೆ. ಆರೋಪಿ ಸ್ಥಾನದಲ್ಲಿ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ವಿಚಾರಣೆ ಮಾಡುತ್ತಿಲ್ಲ. ಅವರನ್ನು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಟ್ಟಿದ್ದಾರೆ. ಒಟ್ಟಾರೆ ಪ್ರಕ್ರಿಯೆಗಳನ್ನು ನೋಡುತ್ತಿದ್ದರೇ, ಈ ಪ್ರಕರಣದಲ್ಲಿ ನಾನು ಸಂತ್ರಸ್ತೆಯೋ ಆರೋಪಿಯೋ ಎಂಬ ಅನುಮಾನ ಮೂಡಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್‌ಐಟಿ!

ಸಂತ್ರಸ್ತ ಯುವತಿ ಬರೆದಿರುವ ಪತ್ರದ ಯಥಾವತ್ತು ಇಲ್ಲಿದೆ.

ವಿಷಯ: ನಾನು ನೀಡಿದ ಅತ್ಯಾಚಾರ ಪ್ರಕರಣದ ದೂರಿನ ವಿಚಾರಣೆಯಲ್ಲಿ ಆರೋಪಿ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 16-03-2021ರಂದು ನನ್ನ ವಕೀಲರಾದ ಶ್ರೀ ಜಗದೀಶ್ ಕೆ ಎನ್ ಅವರ ಮುಖಾಂತರ ತಮಗೆ ಮಾಜಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಮಾಡಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಸಂಬಂಧ ದೂರನ್ನು ಸಲ್ಲಿಸಿರುತ್ತೇನೆ.

ಈ ದೂರನ್ನು ತಾವೇ ಸ್ವೀಕರಿಸಿ ನನಗೆ ನ್ಯಾಯ ಕೊಡಿಸುವ ಸಲುವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿ ಮೊಕದ್ದಮೆ ಸಂಖ್ಯೆ 30/2021ರಲ್ಲಿ ಐಪಿಸಿ 354(A), 506, 504, 376(C), 417 ಹಾಗೂ IT Act 67(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ನಂತರ ಪೊಲೀಸರು ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮತ್ತು ಭದ್ರತೆ ಕಲ್ಪಿಸುವಂತೆ ಮಾಹಿತಿ ಒದಗಿಸುವಂತೆ ಪೊಲೀಸ್ ನೋಟಿಸ್ ನೀಡಲಾಗಿರುತ್ತದೆ.

ನಂತರ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಾಗಿ ನನ್ನ 164 ಹೇಳಿಕೆ ದಾಖಲಿಸಲು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯದಲ್ಲಿ ಅವಕಾಶ ಮಾಡಿಕೊಟ್ಟ ಕಾರಣ 30-03-2021ರಂದು ನಾನು ನನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದೆನು. ಹಾಜರಾದ ದಿನ ಎಸ್ಐಟಿ ಮುಖ್ಯಸ್ಥರಾದ ಶ್ರೀ ಸೌಮೇಂದು ಮುಖರ್ಜಿ ಅವರು ನನ್ನನ್ನು ವಿಚಾರಣೆಗಾಗಿ ಆಡುಗೋಡಿ ಟೆಕ್ನಿಕಲ್ ವಿಭಾಗಕ್ಕೆ ಭದ್ರತೆಯೊಂದಿಗೆ ಕರೆದೊಯ್ದರು.

ಅಲ್ಲಿ ಅವರೊಂದಿಗೆ ಎಸ್ಐಟಿ ತಂಡದ ತನಿಖಾಧಿಕಾರಿಗಳಾದ ಶ್ರೀ ಸಂದೀಪ್ ಪಾಟೀಲ್(ಐಪಿಎಸ್), ಹಾಗೂ ಶ್ರೀಮತಿ ಕವಿತಾ (ಎಸಿಪಿ) ಇವರು ನನಗೆ ಪ್ರಕರಣ ಸಂಬಂಧವಾಗಿ ಪ್ರಶ್ನೆಗಳನ್ನು ಕೇಳಿದರು. ನಾನು ಸಂಪೂರ್ಣವಾಗಿ ಎಲ್ಲ ವಿಚಾರಗಳನ್ನು ಅವರಿಗೆ ವಿವರಿಸಿದೆನು. ನಂತರ ದಿನಾಂಕ 31-03-2021ರಂದು ನನಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಲ್ಲಿಂದ ಆಡುಗೋಡಿ ಟೆಕ್ನಿಕಲ್ ವಿಭಾಗಕ್ಕೆ ಕರೆದೊಯ್ದು 161 ಹೇಳಿಕೆ ಪಡೆದಿರುವ ಪ್ರಕ್ರಿಯೆ ಪ್ರಾರಂಭಿಸಿದರು.

ನಂತರ ಸಮಯವಾದ ಕಾರಣ 01-04-2021ರಂದು ಬೆಳಗ್ಗೆ ಸ್ಥಲ ಹಾಗೂ ಪಂಚನಾಮೆ ಪ್ರಕ್ರಿಯೆಗೆ ನನ್ನ ಆರ್‌ಟಿ ನಗರ ಪಿಜಿ ಹಾಗೂ ಕೃತ್ಯ ನಡೆದ ರಮೇಶ್ ಜಾರಕಿಹೊಳಿ ಅವರ ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್‌ಗೆ ಕರೆದೊಯ್ಯಲಾಯಿತು.

ಇದೆಲ್ಲಾ ಆದ ನಂತರ 02-04-2021 ರಂದು ನನ್ನ 161 ಹೇಳಿಕೆಯ ಮುಂದುವರಿದ ವಿಚಾರಗಳನ್ನು ದಾಖಲಿಸಿಕೊಳ್ಳಲಾಯಿತು.

ನನಗೆ ಒಟ್ಟಾರೆ ಪ್ರಕ್ರಿಯೆಗಳನ್ನು ನೋಡುತ್ತಿದ್ದರೆ ನಾನು ಸಂತ್ರಸ್ತೆಯೋ ಇಲ್ಲವೋ ಪ್ರಕರಣದ ಆರೋಪಿಯೋ ಎಂದು ಅನುಮಾನ ಮೂಡಿದೆ. ಪ್ರಕರಣದ ಆರೋಪಿಗೆ ಕೇವಲ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ವಕೀಲರೊಂದಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು ಅವರನ್ನು ಮುಕ್ತವಾಗಿ ಓಡಾಡಿಕೊಂಡು ಇರಲು ಎಸ್ಐಟಿ ತಂಡ ಅವಕಾಶ ಮಾಡಿಕೊಟ್ಟು ನನ್ನನ್ನು ನಿರಂತರವಾಗಿ ಒಂದು ದಿನವೂ ಬಿಡುವು ನೀಡದಂತೆ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ನನ್ನ ಹೆಸರು ರಮೇಶ್ ಜಾರಕಿಹೊಳಿ ಅವರು ನೀಡಿದ ದೂರಿನಲ್ಲಿ ಉಲ್ಲೇಖವಾಗದಿದ್ದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಮಣಿದಿರುತ್ತಾರೆ.

ಈ ಕ್ಷಣದವರೆಗೂ ನನ್ನ ತೇಜೋವಧೆ ಮಾಡುವಂತಾ ಅಸಂಬದ್ಧ ಕಪೋಲ ಕಲ್ಪಿತ ವಿಚಾರಗಳನ್ನು ಮಾಧ್ಯಮಗಳಲ್ಲಿ ವರದಿಯಾಗುವಂತೆ ಮಾಡುವ ಮೂಲಕ ಆರೋಪಿಯ ರಕ್ಷಣೆಗೆ ಮುಂದಾಗಿರುವುದು ಎದ್ದು ಕಾಣುತ್ತಿದೆ.

ನಾನು ಪ್ರಕರಣದ ದೂರುದಾರಳಾಗಿದ್ದು ನನ್ನನ್ನು ಚಾರಿತ್ರ್ಯ ವಧೆ ಮಾಡುವಂತಹ ಷಡ್ಯಂತ್ರವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದು, ಎಸ್ಐಟಿ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡವನ್ನು ಸರ್ಕಾರದಿಂದ ಹಾಕಿಸುತ್ತಿದ್ದಾರೆ. ಪ್ರತಿನಿತ್ಯ ಮಾಧ್ಯಮಗಳಲ್ಲಿ ನಾನು ಅತ್ಯಾಚಾರದ ಸಂತ್ರಸ್ತೆ ಎಂಬುದನ್ನು ಮರೆಮಾಡಲು ಅನೇಕ ಸೃಷ್ಟಿತ ಸುದ್ದಿಗಳನ್ನು ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗುತ್ತಿದೆ.

ಈ ಕ್ಷಣದವರೆಗೂ ನನಗೆ ನಾನು ನೀಡಿದ ದೂರಿನ ವಿಚಾರವಾಗಿ ಆರೋಪಿ ವಿರುದ್ಧ ಯಾವುದೇ ಗಂಭೀರ ವಿಚಾರಣೆ ನಡೆಸುತ್ತಿರುವ ಬಗ್ಗೆ ನನಗೆ ವಿಶ್ವಾಸ ಬಂದಿಲ್ಲ. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಹೇಳಿರುವುದು ನನಗೆ ತೀವ್ರ ಆತಂಕ ಉಂಟು ಮಾಡಿದೆ.

ನನ್ನ ಸಹಮತ ಪಡೆಯದೇ ಈ ಪ್ರಕರಣಕ್ಕೆ ಗೃಹ ಇಲಾಖೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿರುವುದಕ್ಕೆ ನನ್ನ ಆಕ್ಷೇಪವಿದೆ. ಇಡೀ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಬಗ್ಗೆ ನನಗೆ ನಂಬಿಕೆ ವಿಶ್ವಾಸ ಇಲ್ಲದಂತಾಗಿದೆ. ದಯಮಾಡಿ ತಾವು ನನ್ನ ದೂರನ್ನು ಒಬ್ಬ ಸಂತ್ರಸ್ತ, ಅಸಹಾಯಕ, ಯುವತಿಯ ದೃಷ್ಟಿಯಿಂದ ನೋಡುವ ಮೂಲಕ ಸರ್ಕಾರದ ಒತ್ತಡಗಳಿಗೆ ಮಣಿಯದೇ ಆರೋಪಿಗೆ ಯಾವುದೇ ರಿಯಾಯತಿ ನೀಡದೇ ನ್ಯಾಯ ಸಮ್ಮತವಾಗಿ ವಿಚಾರಣೆ ನಡೆಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.


ಇದನ್ನೂ ಓದಿ: ಸಿಡಿ ಪ್ರಕರಣ: ರಕ್ಷಣೆ ಕೊಡಿ ಎಂದು ಹೈಕೋರ್ಟ್ ಸಿಜೆಐಗೆ ಪತ್ರ ಬರೆದ ಸಂತ್ರಸ್ತ ಯುವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...