ಕಾಂಗ್ರೆಸ್-ಬಿಜೆಪಿ ಪಾಲಿಗೆ ಅಸ್ಸಾಮಿನ Tea Tribe ನಡೆದಾಡುವ ಮತಗಳೇ ವಿನಾ ಮನುಷ್ಯರಲ್ಲ

ದಮನಿತರು ಶೋಷಿತರು ಅವಮಾನಿತರ ನೋವುಗಳಿಗೆ ದನಿಯಾಗಿದ್ದ ಇಂಗ್ಲಿಷ್ ಕಾದಂಬರಿಕಾರ ದಿವಂಗತ ಮುಲ್ಕರಾಜ್ ಆನಂದ್ ಅವರು ಚಹಾ ತೋಟಗಳಲ್ಲಿ ಕಾರ್ಮಿಕರು ಅನುಭವಿಸುವ ರೌರವ ನರಕವನ್ನು ಸೆರೆಹಿಡಿದು ಜಗತ್ತಿಗೆ ತೋರಿದ ಮೊದಲಿಗರು. ಈ ಕಾದಂಬರಿಯ ಹೆಸರು Two Leaves and a Bud (ಎರಡೆಲೆ ಮತ್ತು ಒಂದು ಮುಗುಳು). 1937ರಲ್ಲಿ ಬರೆದಿದ್ದ ಕೃತಿಯದು.

ಒಮ್ಮೆ ಹೊಕ್ಕರೆ ಮತ್ತೆಂದೂ ಹೊರಬೀಳದಂತೆ ಬಂಧಿಸಿ ಹಗಲಿರುಳು ರಕ್ತ ಬೆವರು ಒಂದು ಮಾಡಿಸಿ ದುಡಿಸಿಕೊಳ್ಳುವ ಚಹಾ ತೋಟಗಳ ನರಕದಿಂದ ಮುಕ್ತಿ ನೀಡುವ ಶಕ್ತಿಯಿರುವುದು ಸಾವಿಗೆ ಮಾತ್ರವೇ ಎಂಬ ಕ್ರೂರ ಸತ್ಯ ಈ ಕಾದಂಬರಿಯಲ್ಲಿ ಅನಾವರಣವಾಗುತ್ತ ಹೋಗುತ್ತದೆ. ಅಮಾಯಕರ ಶ್ರಮವನ್ನು ದರೋಡೆ ಮಾಡುವ ಒಡೆಯರ ಪಾಲಿಗೆ ಕೂಲಿಗಳು ದುಡಿವ ಯಂತ್ರಗಳೇ ವಿನಾ ಮನುಷ್ಯರಲ್ಲ. ದಿನಕ್ಕೆ ಬೆಳಗಿನಂತ ರಾತ್ರಿಯತನಕ ಬಿಡುವಿಲ್ಲದೆ ದುಡಿದರೆ ಕೈಗೆ ಬೀಳುವ ಕೂಲಿ ಮೂರು ಆಣೆಗಳು. ದಿನಸಿ ತರಲು ಸಂತೆಗೆ ಹೋದರೆ ಯಾತಕ್ಕೂ ಸಾಲದು. ಮೈಮುರಿಯುವಂತೆ ಹೊಡೆತಗಳನ್ನು ತಿನ್ನಬೇಕಲ್ಲದೆ ಪತ್ನಿ ಪುತ್ರಿಯರನ್ನು ಒಡೆಯರ ಲೈಂಗಿಕ ವಾಂಛೆಗೆ ಒಪ್ಪಿಸಲೇಬೇಕು. ಕೂಲಿಗಳ ಮುರುಕು ವಸತಿಗಳು ಕೊಳಕಿನ ಕೂಪಗಳು. ಕೊಕ್ಕೆಹುಳುಗಳ ಆಗರ. ಹೊಂಚು ಹಾಕುವ ಕಾಲರಾ. ಬಂಡವಾಳ ಹಾಕಿದ ಒಡೆಯರ ಪಾಲಿಗೆ ಕೂಲಿಗಳು ಸುಳ್ಳರು, ಕಳ್ಳರು ಹಾಗೂ ಸೋಮಾರಿಗಳು. ನೈರ್ಮಲ್ಯವೇ ಇಲ್ಲದ ಕೂಪದಲ್ಲಿ ಕೂಲಿ ಗಂಗುವಿನ ಪತ್ನಿ ಸಜನಿ ಕಾಲರಾಕ್ಕೆ ತುತ್ತಾಗಿ ಸಾಯುತ್ತಾಳೆ. ಅಂತ್ಯಕ್ರಿಯೆಗೆ ಗಂಗುವಿನ ಬಳಿ ಹಣವಿಲ್ಲ. ಕೇಳಲು ಹೋದರೆ ಗದರಿ ಅಟ್ಟುತ್ತಾನೆ ಒಡೆಯ. ತೋಟದ ಮ್ಯಾನೇಜರ್ ಕಣ್ಣು ಗಂಗುವಿನ ಮಗಳ ಮೇಲೆ ಬೀಳುತ್ತದೆ. ತಡೆಯಲು ಅಡ್ಡ ಬಂದ ಗಂಗು ಗುಂಡೇಟಿಗೆ ಹೆಣವಾಗಿ ಉರುಳುತ್ತಾನೆ.

ಸಿನೆಮಾಗಳಲ್ಲಿ ಕಾಣುವ ಬೆಟ್ಟಗುಡ್ಡ, ಝರಿ ತೊರೆ, ಕಲಕಲ ನದಿಯ ಸೀಮೆಯ ನಡುವೆ ನಳನಳಿಸುವ ಮನಮೋಹಕ ಹಸಿರು ಚಹಾ ತೋಟಗಳ ಹಿತ್ತಲುಗಳಲ್ಲಿ ಅಸಹನೀಯ ಮೌನ, ಹಸಿವಿನ ಯಾತನೆ, ನಿಟ್ಟುಸಿರು, ರಕ್ತಹೀನತೆ, ರೋಗರುಜಿನಗಳು, ಅಮಾನವೀಯ ಶೋಷಣೆ, ಸಾವಿನ ನೆರಳು ಮೈಚಾಚಿ ಮಲಗಿದೆ. ಬದುಕಿನ ಸಂಗೀತ ಮರೆಯಾಗಿದೆ.

ಕಂಗೆಟ್ಟಿರುವ ಲಕ್ಷ ಲಕ್ಷ ಕಾರ್ಮಿಕರನ್ನು ಮೈದಡವಿ ಮಾತಾಡಿಸುವ ಸರ್ಕಾರಗಳಿಲ್ಲ. ತಮ್ಮ ನೆಲದಲ್ಲೇ ಅನಾಥರಾಗಿರುವ ಅಸಂಖ್ಯಾತರ ಸಾಲಿಗೆ ಸೇರಿ ಹೋಗಿದ್ದಾರೆ ಈ ಶ್ರಮಜೀವಿಗಳು.

ಚೀನಾದಿಂದ ಚಹಾ ಸಸ್ಯಗಳನ್ನು ಕದಿಯುವ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ದಟ್ಟ ಕಾಡುಗಳನ್ನು ಬೋಳಿಸಿ ಬೆಳೆಸುತ್ತದೆ. ಬ್ರಿಟಿಷ್ ಪ್ಲಾಂಟರುಗಳು 150 ವರ್ಷಗಳ ಹಿಂದೆ ಕಾಡು ಕಡಿದು ಚಹಾ ತೋಟಗಳನ್ನು ಎಬ್ಬಿಸಲು ಮಧ್ಯಭಾರತದ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಸ್ಸಾಮ್ ಮತ್ತು ಬಂಗಾಳಕ್ಕೆ ಪಶುಗಳಂತೆ ಸಾಗಿಸುತ್ತಾರೆ. ಮುಂಡಾ, ಸಂತಾಲ್, ಓರಾನ್, ಗೊಂಡರು, ಖಾರಿಯಾ ಹಾಗೂ ಸಾವೊರಾ ಪಂಗಡಗಳ ಈ ಆದಿವಾಸಿ ಕಾರ್ಮಿಕರನ್ನು ಈಗಲೂ Tea Tribes ಎಂದೇ ಕರೆಯಲಾಗುತ್ತದೆ. ಅಸ್ಸಾಮ್ ಒಂದರಲ್ಲೇ ಈ ಆದಿವಾಸಿ ಕಾರ್ಮಿಕರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಅಸ್ಸಾಮಿನ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.18ರಷ್ಟು ಎನ್ನಲಾಗಿದೆ.

ಅಂದಿನ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಬ್ರಿಟಿಷ್ ಪ್ಲಾಂಟರುಗಳಿಗೆ ಸಂಪನ್ಮೂಲಗಳು ಮತ್ತು ಕೂಲಿ ಕಾರ್ಮಿಕರ ಮೇಲೆ ಎಣೆಯಿಲ್ಲದ ಪ್ರಶ್ನಾತೀತ ಅಧಿಕಾರವನ್ನ ಅಧಿಪತ್ಯ ನೀಡಿತ್ತು. ಬಲವಂತದ ನೇಮಕ, ಅತಿ ಕಡಿಮೆ ಕೂಲಿ, ಅಮಾನವೀಯ ವಸತಿ ಮತ್ತು ಕೆಲಸದ ಪರಿಸ್ಥಿತಿಗಳು ಅಂದಿನ ಬ್ರಿಟಿಷ್ ಮಾಲೀಕರ ಲಾಭವನ್ನು ನೂರ್ಮಡಿಗೊಳಿಸುತ್ತಿದ್ದವು. ಸ್ವತಂತ್ರ ಭಾರತದ ಚಹಾ ತೋಟಗಳ ಕಾರ್ಮಿಕರ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ತಮ್ಮ ರಾಜ್ಯಗಳಲ್ಲೇ ಬದುಕಿದ್ದರೆ ಇವರಿಗೆ ಸ್ವಾಭಾವಿಕವಾಗಿ ಹಕ್ಕಿನ ಪ್ರಕಾರವೇ ದಕ್ಕಿರುವ ಪರಿಶಿಷ್ಟ ಪಂಗಡಗಳ ಸ್ಥಾನಮಾನ ಸಿಗುತ್ತಿತ್ತು. ಆದರೆ ಅಸ್ಸಾಮ್ ಸರ್ಕಾರ ಇವರಿಗೆ ಆದಿವಾಸಿಗಳ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ತಯಾರಿಲ್ಲ. ಈ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿರುವ ಆದಿವಾಸಿಗಳು ಅಸ್ಸಾಮಿನ ಉಗ್ರರ ಕೆಂಗಣ್ಣಿಗೆ ಗುರಿಯಾಗಿ ಸಾವಿರ ಸಂಖ್ಯೆಯಲ್ಲಿ ಹತ್ಯೆಯಾಗಿ ಹೋಗಿದ್ದಾರೆ. ಚಹಾ ತೋಟಗಳ ಮಾಲೀಕರ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಡಪಾಯಿಗಳ ವಿರುದ್ಧ ಹತ್ತು ಹಲವು ರೂಪಗಳಲ್ಲಿ ಯುದ್ಧ ಸಾರಿವೆ.

ಅಸ್ಸಾಮ್ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಮೇಲೆ ಸೋಲು ಗೆಲುವಿನ ಮೇಲೆ ಪ್ರಭಾವ ಬೀರಬಲ್ಲವರು ಇವರು. ಸುಮಾರು 40 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಇವರ ಮತಗಳು ತೀರ್ಮಾನಿಸಬಲ್ಲವು. ರಾಜಕೀಯ ಪಕ್ಷಗಳ ಪಾಲಿಗೆ ಈ ಜನರು ನಡೆದಾಡುವ ಉಸಿರಾಡುವ ವೋಟುಗಳು ಅಷ್ಟೇ. ಐದು ವರ್ಷಗಳಿಗೊಮ್ಮೆ ಇವರ ಕಣ್ಣಲ್ಲಿ ಮಣ್ಣು ಹಾಕಿದರೆ ಸಾಕು. ಮುಂದಿನ ಐದು ವರ್ಷಗಳ ಕಾಲ ನಿಶ್ಚಿಂತೆ. ಅಸ್ಸಾಮಿನ ಚುನಾವಣೆಗಳು ಜರುಗಿವೆ. ಹೀಗಾಗಿ ಬಿಜೆಪಿ- ಕಾಂಗ್ರೆಸ್ಸು ಎರಡೂ ಪಕ್ಷಗಳು ಈ ಉಸಿರಾಡುವ ವೋಟುಗಳನ್ನು ರಮಿಸಲು ತೊಡಗಿವೆ.

ನೀರು, ನೆರಳು, ಅನ್ನ ಯಾವ ಸೌಲಭ್ಯವೂ ಸಮರ್ಪಕವಿಲ್ಲ. ಅತಿ ಕಡಿಮೆ ದಿನಗೂಲಿ, ಜೊತೆಗೆ ಲೈಂಗಿಕ ಕಿರುಕುಳ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯೊಂದು ಅಸ್ಸಾಮಿನ ಚಹಾ ತೋಟಗಳ ಕಾರ್ಮಿಕರ ಬವಣೆಯನ್ನು ಬಣ್ಣಿಸುತ್ತದೆ. ಶೇ.89ರಷ್ಟು ಚಹಾ ತೋಟಗಳಲ್ಲಿ ನೈರ್ಮಲ್ಯದ ಸೌಲಭ್ಯಗಳಿಲ್ಲ. ಹೆಣ್ಣುಮಕ್ಕಳು ಮಾಸಿಕ ಚಕ್ರದ ದಿನಗಳಲ್ಲೂ ದುಡಿಯಬೇಕಿದೆ. ಶಿಶುವಿಹಾರ ವ್ಯವಸ್ಥೆಯಿಲ್ಲ ಎಂದು 2017ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ವಿಕಾಸ ಮಂತ್ರಾಲಯಕ್ಕೆ ಸಲ್ಲಿಸಲಾದ ವರದಿ ಹೇಳಿದೆ

ಚಹಾ ಎಲೆ ಕೀಳುವ ಕೂಲಿಯಾಳುಗಳು ಬಹುತೇಕ ಮಹಿಳೆಯರು. ಕೆಲಸದ ನಡುವೆ ಅವರು ಕುಡಿಯುವ ಚಹಾ ಕಷಾಯಕ್ಕೆ ಸಕ್ಕರೆಯ ಬದಲಿಗೆ ಉಪ್ಪು ಬೆರೆಸಿಕೊಳ್ಳುತ್ತಾರೆ. ಅಧಿಕ ರಕ್ತದೊತ್ತಡ ಅವರ ಬೆನ್ನು ಹತ್ತಿದೆ. ಉಪ್ಪಿನ ಬದಲು ಉಚಿತ ಸಕ್ಕರೆ ಸರಬರಾಜು ಮಾಡುವುದಾಗಿ 2019ರಲ್ಲಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಅದೂ ಆಶ್ವಾಸನೆಯಾಗೇ ಉಳಿದಿದೆ.

ನರೇಂದ್ರ ಮೋದಿಯವರು ತಮ್ಮನ್ನು ’ಚಾಯ್ ವಾಲಾ’ ಎಂದು ಕರೆದುಕೊಂಡರು. ಚಹಾ ಮಾರಿದೆನೆಂದು ಹೇಳಿಕೊಂಡು ಅದನ್ನು ಚುನಾವಣೆಯಲ್ಲಿ ರಾಜಕೀಯ ಬಂಡವಾಳವನ್ನಾಗಿಯೂ ಮಾಡಿಕೊಂಡರು. ಆದರೆ ದೇಶದ ಚಹಾ ಮಾರುವವರ ಬದುಕುಗಳನ್ನು ಅರಳಿಸುವಂತಹದೇನನ್ನೂ ಅವರು ಮಾಡಲಿಲ್ಲ. 2014ರ ಲೋಕಸಭಾ ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ದಿನಗೂಲಿಯನ್ನು 350 ರುಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದುಂಟು. ಬಿಜೆಪಿ 2016ರಲ್ಲಿ ಅಸ್ಸಾಮ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಅಚ್ಚು ಮಾಡಿತು. ಇದೀಗ ಮತ್ತೊಂದು ಚುನಾವಣೆ ಬಂದಿದೆ. ಆದರೆ ಆಶ್ವಾಸನೆ ಚುನಾವಣೆ ಪ್ರಣಾಳಿಕೆಯ ಪುಟಗಳಲ್ಲೇ ಹೂತು ಹೋಗಿದೆ.


ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಿ. ಉಮಾಪತಿ
+ posts

LEAVE A REPLY

Please enter your comment!
Please enter your name here