Homeಅಂಕಣಗಳುಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

- Advertisement -
- Advertisement -

ಭಯೋತ್ಪಾದಕರೆಂದೂ, ದೇಶದ್ರೋಹಿಗಳೆಂದೂ ಮುಸಲ್ಮಾನರನ್ನು, ತೀವ್ರ ಎಡಪಂಥೀಯರೆಂದು ಆದಿವಾಸಿಗಳನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸಿ ಜೈಲಿಗೆ ಅಟ್ಟುವ ಇಲ್ಲವೇ ಹುಸಿ ಎನ್‌ಕೌಂಟರುಗಳಲ್ಲಿ ಹೊಡೆದು ಹಾಕುವ ಅಕ್ರಮ ಮತ್ತು ಅಮಾನುಷ ಪ್ರವೃತ್ತಿಗೆ ಅಂಕೆಯೇ ಇಲ್ಲವಾಗಿದೆ. ಇಸ್ಲಾಮಿಕ್ ಭಯೋತ್ಪಾದನೆ ಮತ್ತು ತೀವ್ರ ಮಾವೋವಾದದ ಹೆಸರಿನಲ್ಲಿ ಅಮಾಯಕರು ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಯುವಂತಾಗಿದೆ. ಸಾಮಾಜಿಕ ಕಳಂಕವನ್ನು ಹೊತ್ತು ತಿರುಗಬೇಕಿದೆ.

’ಸಿಮಿ’ ಭಯೋತ್ಪಾದಕರೆಂದು ಬಂಧಿಸಲಾಗಿದ್ದ 127 ಮುಸಲ್ಮಾನರನ್ನು ಸೂರತ್ ನ್ಯಾಯಾಲಯವೊಂದು 19 ವರ್ಷಗಳ ವಿಚಾರಣೆಯ ನಂತರ ಇತ್ತೀಚೆಗೆ ನಿರಪರಾಧಿಗಳೆಂದು ಸಾರಿತು. ಹತ್ತಾರು ವರ್ಷಗಳ ಕಾಲ ಜೈಲುಗಳಲ್ಲಿ ಕಳೆದುಹೋಗುವ ಇವರ ಬದುಕುಗಳನ್ನು, ಸಾಮಾಜಿಕವಾಗಿ ಹೊರಬೇಕಿರುವ ಅಪನಿಂದೆ ಮತ್ತು ಬಹಿಷ್ಕಾರಗಳಿಂದ ಅನುಭವಿಸುವ ಮಾನಸಿಕ ಕ್ಲೇಶಕ್ಕೆ ಪರಿಹಾರವೇ ಇಲ್ಲವಾಗಿದೆ.

2002ರ ಅಕ್ಷರಧಾಮ್ ದಾಳಿ ಪ್ರಕರಣದಲ್ಲಿ ದಸ್ತಗಿರಿಯಾಗಿ ಹತ್ತು ವರ್ಷಗಳಿಗೂ ಹೆಚ್ಚುಕಾಲ ಜೈಲಿನಲ್ಲಿ ಕಳೆದ ನಂತರ ನಿರಪರಾಧಿಗಳೆಂದು ಸಾಬೀತಾಗಿ ಹೊರಬಿದ್ದವರು ಆರು ಮಂದಿ ಮುಸ್ಲಿಮ್ ಯುವಕರು. ನಿರಪರಾಧಿಗಳಾಗಿಯೂ ಹತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಕ್ಕೆ ಮತ್ತು ಸಮಾಜದಲ್ಲಿ ಕಳಂಕ ಹೊತ್ತದ್ದಕ್ಕೆ ಪರಿಹಾರ ನೀಡಬೇಕೆಂದು ಅವರು ಹೂಡಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟು 2016ರಲ್ಲಿ ತಳ್ಳಿ ಹಾಕಿತು. ಮಾನವ ಹಕ್ಕುಗಳ ಆಂದೋಲನಕ್ಕೆ ಉಂಟಾದ ತೀವ್ರ ಹಿನ್ನಡೆಯಿದು.

ಪರಿಹಾರ ನೀಡುವಿಕೆಯು ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ ಎಂಬ ಕಾರಣ ಮುಂದೆ ಮಾಡಿತ್ತು ಸುಪ್ರೀಮ್ ಕೋರ್ಟು. ಹಾಗಿದ್ದರೆ ಅಮಾಯಕರ ಬದುಕುಗಳು ಜೈಲುಗಳ ಅಂಧಕಾರದಲ್ಲಿ ಸೋರಿ ಹೋಗುವ ದುರಂತದ ಹೊಣೆ ಹೊರುವವರು ಯಾರು? ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ಜವಾಬುದೇಹಿ ಅಲ್ಲವೇ?

ಮುಸಲ್ಮಾನರನ್ನು ನಿರಂತರವಾಗಿ ಹೊರಗಿನವರೆಂದೂ ಇತರರೆಂದೂ ಕಾಣಲಾಗುತ್ತಿದೆ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಸಂದೇಶಗಳನ್ನು ಕಳೆದ ಐದಾರು ವರ್ಷಗಳಲ್ಲಿ ಬಗೆಬಗೆಯಾಗಿ ಅವರಿಗೆ ರವಾನಿಸುತ್ತ ಬರಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡುಹಗಲೇ ದಾರಿ ಹೆದ್ದಾರಿಗಳಲ್ಲಿ ಅವರನ್ನು ಜಜ್ಜಿ ಕೊಂದವರನ್ನು ಕೊಂಡಾಡಲಾಯಿತು. 370ನೆಯ ಕಲಮಿನ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು, ಉಸಿರುಕಟ್ಟಿಸುವ ಹಲವು ನಿರ್ಬಂಧಗಳ ವಿಧಿಸಿ ಮುಕ್ಕಾಲು ಕೋಟಿ ಜನರು ಬದುಕುವ ಕಾಶ್ಮೀರ ಕಣಿವೆಗೆ ತಿಂಗಳುಗಟ್ಟಲೆ ಬೀಗ ಜಡಿಯಲಾಯಿತು. ಅವರು ಈ ದೇಶದ ನಾಗರಿಕರೇ ಅಲ್ಲ ಎಂಬ ತಳಮಳಕ್ಕೆ ತಳ್ಳಲಾಯಿತು. ಅವರ ಕುರಿತು ಸಾಮಾನ್ಯ ಜನಮಾನಸದಲ್ಲಿ ಪೂರ್ವಗ್ರಹ ಮತ್ತು ದ್ವೇಷವನ್ನು ಬಡಿದೆಬ್ಬಿಸಲಾಯಿತು. ಇತ್ತೀಚಿನ ದೆಹಲಿ ಕೋಮುಗಲಭೆಯಲ್ಲಿ ಅವರನ್ನು ಬೇಟೆಯಾಡಿದ ಪರಿ 2002ರ ಗುಜರಾತ್ ಭೀಭತ್ಸವನ್ನು ನೆನಪಿಸಿತ್ತು. ಮುಸಲ್ಮಾನರೊಂದಿಗೆ ಕೈ ಕಲೆಸಿ ಕೆಲಸ ಮಾಡುವ ಸ್ವಯಂಸೇವಾಸಂಸ್ಥೆಗಳನ್ನು ಮಟ್ಟಹಾಕುವ ಕೃತ್ಯ ಲಾಗಾಯ್ತಿನಿಂದ ಚಾಲೂ ಇದ್ದೇ ಇದೆ. ಅವರ ಕುರಿತು ಸಹಾನುಭೂತಿ ತೋರುವ ಉದಾರವಾದಿಗಳು- ವಿಚಾರವಂತರನ್ನು ದೇಶದ್ರೋಹಿಗಳೆಂದೂ ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದೂ ಕೇಂದ್ರ ಮಂತ್ರಿಗಳು ಇದ್ದ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಲಾಯಿತು. ದೇಶದ ಮುಸ್ಲಿಂ ಸಮುದಾಯ ಇಂದು ಭಯ ಮತ್ತು ಅನಿಶ್ಚಿತತೆಯಲ್ಲಿ ತೊಳಲಾಡಿದೆ.

ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂ ರಾಷ್ಟ್ರದ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿ ಸಮಾನತೆಯನ್ನು ನಿರಾಕರಿಸುವುದು ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್‌ಆರ್‌ಸಿಯ ಮೂಲ ಉದ್ದೇಶವಾಗಿತ್ತು. ಈ ಕಾಯಿದೆಗಳ ಕತ್ತಿ ಇನ್ನೂ ಮುಸಲ್ಮಾನರ ತಲೆ ಮೇಲೆ ತೂಗಿದೆ.

’ಹಿಂದೂ ಜನಾಂಗ ಮತ್ತು ಹಿಂದೂ ರಾಷ್ಟ್ರವನ್ನು ತಮ್ಮ ಹೃದಯಕ್ಕೆ ಹತ್ತಿರ ಇರಿಸಿಕೊಂಡು ವೈಭವೀಕರಿಸಿ ಆ ಧ್ಯೇಯದೆಡೆಗೆ ಸಾಗುವ ಆಶೋತ್ತರ ಉಳ್ಳವರು ಮಾತ್ರವೇ ರಾಷ್ಟ್ರವಾದೀ ದೇಶಭಕ್ತರು. ಉಳಿದವರೆಲ್ಲ ದೇಶದ್ರೋಹಿಗಳು ಮತ್ತು ರಾಷ್ಟ್ರೀಯತೆಯ ವೈರಿಗಳು’ ಎಂದು ಮೂರು ದಶಕಗಳ ಕಾಲ ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಹೇಳಿದ್ದರು. We or Our Nationhood Defined (1939) ಕೃತಿಯಲ್ಲಿ ರಾಷ್ಟ್ರೀಯತೆ ಕುರಿತ ಅವರ ವಿಚಾರದ ಸವಿವರ ಪ್ರಸ್ತಾಪವಿದೆ.

“ಹಿಂದುಸ್ತಾನದ ಪರಕೀಯ ಜನಾಂಗಗಳು ಹಿಂದು ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದು ಧರ್ಮವನ್ನು ಭಕ್ತಿ ಗೌರವದಿಂದ ಕಾಣಬೇಕು, ಹಿಂದೂ ಜನಾಂಗ ಮತ್ತು ಸಂಸ್ಕೃತಿಯನ್ನು ವೈಭವೀಕರಿಸುವುದರ ವಿನಾ ಬೇರೆ ಯಾವ ವಿಚಾರವನ್ನೂ ನೆಚ್ಚಕೂಡದು. ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟುಕೊಟ್ಟು ಹಿಂದು ಜನಾಂಗದೊಳಕ್ಕೆ ವಿಲೀನಗೊಳ್ಳಬೇಕು, ಇಲ್ಲವಾದರೆ ಹಿಂದು ರಾಷ್ಟ್ರಕ್ಕೆ ಸಂಪೂರ್ಣ ಅಧೀನವಾಗಿ ನಾಗರಿಕ ಹಕ್ಕುಗಳನ್ನು ಕೂಡ ಕೇಳದಂತೆ ಈ ದೇಶದಲ್ಲಿ ಜೀವಿಸಬೇಕು. ನಮ್ಮದು ಪ್ರಾಚೀನ ರಾಷ್ಟ್ರ. ತಮ್ಮ ದೇಶದಲ್ಲಿ ನೆಲೆಸಲು ಬಂದ ಪರಕೀಯ ಜನಾಂಗಗಳನ್ನು ಪ್ರಾಚೀನ ದೇಶಗಳು ಹೇಗೆ ನಡೆಸಿಕೊಳ್ಳುತ್ತವೆಯೋ ಅದೇ ರೀತಿ ನಡೆಸಿಕೊಳ್ಳೋಣ” ಎಂಬುದು ಗೋಲ್ವಾಲ್ಕರ್ ಅವರ ಪ್ರತಿಪಾದನೆಯಾಗಿತ್ತು.

ಆದರೆ ಸಂವಿಧಾನ ರಚನಾ ಸಭೆಯು ಗೋಲ್ವಾಲ್ಕರ್ ಅವರ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿತು. ಪೌರತ್ವದ ತಳಹದಿ ಧರ್ಮ ಅಲ್ಲ ಎಂದು ಸಾರಿತು. ಭಾರತವನ್ನು ಹಿಂದೂ ಬಹುಸಂಖ್ಯಾತ ದೇಶ ಎಂದು ಘೋಷಿಸದೆ ಜಾತ್ಯತೀತ ಮೌಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

ಮುಸ್ಲಿಮ್ ಅಸ್ಮಿತೆಯು ಇಂದು ಎದುರಿಸಿರುವಂತಹ ತೀವ್ರ ಬಹಿರಂಗ ದಾಳಿಯನ್ನು ಹಿಂದೆಂದೂ ಕಂಡಿರಲಿಲ್ಲ ಎನ್ನುತ್ತಾರೆ ಮಾಜಿ ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ.

ಹಿತಾಸಕ್ತಿಗಳಿಂದ ಹಲವು ಬಗೆಯ ಮಿಥ್ಯಾಪ್ರಚಾರಕ್ಕೆ ಬಲಿಯಾಗಿರುವ ಸಮುದಾಯವಿದು. 2011ರ ಜನಗಣತಿಯ ಪ್ರಕಾರ ಭಾರತದಲ್ಲಿನ ಮುಸಲ್ಮಾನರ ಜನಸಂಖ್ಯೆ 17.22 ಕೋಟಿ. ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ.14.23. ಆದರೆ ಅವರ ಹಾಲಿ ಪ್ರಮಾಣ ಶೇ.30 ಎಂದೂ, 2041ರ ಹೊತ್ತಿಗೆ ಶೇ.84ರಷ್ಟಾಗಿ ಭಾರತ ಮುಸಲ್ಮಾನ ದೇಶವಾಗುವುದೆಂದೂ ವ್ಯಾಪಕ ಮಿಥ್ಯಾಪ್ರಚಾರ ನಡೆದಿದೆ. 1951ರಲ್ಲಿ ಶೇ.9.8ರಷ್ಟಿದ್ದ ಮುಸಲ್ಮಾನ ಜನಸಂಖ್ಯೆ 2011ರ ಹೊತ್ತಿಗೆ 60 ವರ್ಷಗಳ ಅವಧಿಯಲ್ಲಿ ಶೇ.14.2ರಷ್ಟಾಗಿದೆ. ಅಮೆರಿಕೆಯ ಪ್ಯೂ ರಿಸರ್ಚ್ ಸೆಂಟರ್ ವರದಿಯ ಪ್ರಕಾರ 2050ರ ವೇಳೆಗೆ ಭಾರತದಲ್ಲಿ ಮುಸಲ್ಮಾನರ ಶೇಕಡಾವಾರು ಪ್ರಮಾಣ ಶೇ.18.4ರಷ್ಟಾಗಲಿದೆ. ಅಂದರೆ ಇನ್ನೂ 30 ವರ್ಷಗಳ ನಂತರ. ಅದೇ ವರದಿಯ ಪ್ರಕಾರ 2050ರ ವೇಳೆಗೆ ಭಾರತದಲ್ಲಿ ಹಿಂದೂಗಳ ಪ್ರಮಾಣ ಶೇ.76.7ಕ್ಕೆ ಏರಲಿದೆ.

ವಿಶೇಷವಾಗಿ ಕಳೆದ ಆರೇಳು ವರ್ಷಗಳ ರಾಜಕಾರಣದಲ್ಲಿ ಮುಸಲ್ಮಾನರನ್ನು ವ್ಯವಸ್ಥಿತವಾಗಿ ಮರೆಯಾಗಿಸಲಾಗುತ್ತಿದೆ. ದೇಶದ ಒಟ್ಟು ಮುಸಲ್ಮಾನರ ಸಂಖ್ಯೆಯಲ್ಲಿ ಶೇ.80ರಷ್ಟು ಹತ್ತು ರಾಜ್ಯಗಳಲ್ಲಿದ್ದಾರೆ. ಆ ಹತ್ತು ರಾಜ್ಯ ಸರ್ಕಾರಗಳ ಮಂತ್ರಿಮಂಡಲಗಳ ಮಂತ್ರಿಗಳ ಸಂಖ್ಯೆ 281. ಈ ಪೈಕಿ ಮುಸಲ್ಮಾನ ಮಂತ್ರಿಗಳ ಸಂಖ್ಯೆ 16. ಪ್ರಮಾಣದಲ್ಲಿ ಹೇಳುವುದಾದರೆ ಶೇ.5.7. ಅವರ ಜನಸಂಖ್ಯೆಯ ಮೂರನೆಯ ಒಂದು ಭಾಗ ಮಾತ್ರ. ಇದೊಂದು ಸಣ್ಣ ಉದಾಹರಣೆ ಮಾತ್ರ.

ಜಾಮಿಯಾ ಮಿಲಿಯಾ ಉಪಕುಲಪತಿ ಮತ್ತು ದೆಹಲಿಯ ಉಪರಾಜ್ಯಪಾಲರಾಗಿದ್ದ ನಜೀಬ್ ಜಂಗ್ ತಮ್ಮ ಸಮುದಾಯದ ಕುರಿತು ಆಡಿರುವ ಕೆಲವು ಮಾತುಗಳನ್ನೂ ಇಲ್ಲಿ ಪ್ರಸ್ತಾಪಿಸಬೇಕಿದೆ.

“ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ಮುಸಲ್ಮಾನ ಮಕ್ಕಳ ಸಂಖ್ಯೆ ಈಗಲೂ ಕಡಿಮೆಯೇ. ಮದರಸಾಗಳಲ್ಲಿ ಕಲಿಯುವವರದ್ದೇ ದೊಡ್ಡ ಸಂಖ್ಯೆ. ಇಂಗ್ಲಿಷ್, ವಿಜ್ಞಾನ ಮತ್ತು ಗಣಿತವನ್ನು ಕೆಲವು ಮದರಸಾಗಳಲ್ಲಿ ಕಲಿಸಲಾಗುತ್ತಿದೆ. ಆದರೆ ಅಂತಹವುಗಳ ಸಂಖ್ಯೆ ಬಹಳ ಕಡಿಮೆ. ಖುರಾನ್ ಬಾಯಿಪಾಠವೊಂದೇ ಮುಖ್ಯ ಕಲಿಕೆಯಾಗಿ ಉಳಿದಿದೆ. ಹತ್ತು ಹನ್ನೆರಡು ವರ್ಷಗಳ ಮಗ ’ಹಾಫೀಜ್’ ಆಗಿಬಿಟ್ಟರೆ ಸಾಧಾರಣ ಮುಸ್ಲಿಮ್ ಕುಟುಂಬಕ್ಕೆ ಅದೇ ಹೆಮ್ಮೆಯ ಸಂಗತಿ.”

“ಮೌಲ್ವಿಗಳು ಮೌಲಾನಾಗಳು ಮುಸ್ಲಿಮ್ ಸಮುದಾಯದ ದೊಡ್ಡ ಸಮಸ್ಯೆ. ಮಸೀದಿಗಳು, ದಾರುಲ್ ಉಲೂಮ್‌ಗಳಲ್ಲಿ ಕುಳಿತು ಫತ್ವಾಗಳನ್ನು ಹೊರಡಿಸುವ ಇವರ ಹಿಡಿತದಲ್ಲಿದೆ ಸಮುದಾಯ. ಮುಸಲ್ಮಾನರ ಪರ ದನಿ ಎತ್ತುವ ಮತ್ತು ಕಟ್ಟರ್ ಹಿಂದೂ ಬಲಪಂಥೀಯರು ಮತ್ತು ಬೇಲಿಯ ಮೇಲೆ ಕುಳಿತವರ ವಿರುದ್ಧ ಹೋರಾಡುತ್ತ ಬಂದಿರುವ ಮುಸ್ಲಿಮೇತರ ಉದಾರವಾದಿಗಳಿದ್ದಾರೆ. ಅದರೆ ಮುಸ್ಲಿಮ್ ಸಂಪ್ರದಾಯವಾದ ಮತ್ತು ಗೊಡ್ಡು ನಂಬಿಕೆಗಳ ವಿಷಯ ಬಂದಾಗ ಅವರು ಬಲಪಂಥೀಯರ ಮುಂದೆ ಅಸಹಾಯಕರಾಗುತ್ತಿರುವುದನ್ನು ಕಾಣುತ್ತಿದ್ದೇನೆ.”

“ಇಂದಿನ ಬಹುತೇಕ ಮುಸಲ್ಮಾನರು ಬೌದ್ಧಿಕ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ. ಈ ಹಿಂದಿನ ಪೀಳಿಗೆಗಳ ಮುಸ್ಲಿಮ್ ವಿದ್ವಾಂಸರು ಇಬ್ನ್ ಅರಬಿ, ಫಖ್ರುದ್ದೀನ್ ರಾಝಿ, ಐನ್ಸ್ಟೀನ್, ಬರ್ಗ್ಸನ್, ರಸೆಲ್ ಹಾಗೂ ಫ್ರಾಯ್ಡ್‌ನನ್ನು ಅಧ್ಯಯನ ಮಾಡಿಕೊಂಡಿರುತ್ತಿದ್ದರು. ಅಲ್ಲಾಮಾ ಇಕ್ಬಾಲ್ ಹೇಳಿರುವಂತೆ ಗೌರವಾದರ ಮತ್ತು ಸ್ವತಂತ್ರ ಮನೋವೃತ್ತಿಯಿಂದ ಆಧುನಿಕ ಜ್ಞಾನಸಂಪತ್ತಿನ ಬಳಿ ಸಾಗಬೇಕಿದೆ. ಇಸ್ಲಾಮ್ ಬೋಧನೆಗಳನ್ನು ಇದೇ ಜ್ಞಾನದ ಬೆಳಕಿನಲ್ಲಿ ನೋಡಬೇಕಿದೆ. ಯಾವುದೇ ಸಮಾಜ ಅಥವಾ ಯಾವುದೇ ಧರ್ಮ ತನ್ನ ಗತವನ್ನು ಸಾರಾಸಗಟಾಗಿ ಮರೆತುಬಿಡುವುದು ಇಲ್ಲವೇ ತಿರಸ್ಕರಿಸುವುದು ಎಂದಿಗೂ ಸಾಧ್ಯವಿಲ್ಲ. ಪ್ರವಾದಿಯವರು ಗತಿಸಿದ ನಂತರದ ವರ್ಷಗಳಲ್ಲಿ ಇಸ್ಲಾಮ್ ಮತ್ತು ಇಸ್ಲಾಮಿಕ್ ಇತಿಹಾಸ ಉಜ್ವಲ ಶಕೆಯನ್ನು ಕಂಡಿತ್ತು. ಭಾರತದ ಮುಸಲ್ಮಾನರು ಮೌಲಾನಾಗಳ ಮಧ್ಯಯುಗೀನ ಫ್ಯಾಂಟಸಿಯಿಂದ ಹೊರಬಂದು ಹೆಚ್ಚು ಹೆಚ್ಚು ಸಮಕಾಲೀನ ಪ್ರವೃತ್ತಿಗಳನ್ನು ಆಲಂಗಿಸಿಕೊಳ್ಳಬೇಕು. ಊಹಾತ್ಮಕ ತತ್ವಜ್ಞಾನಗಳು ಮತ್ತು ಪೂರ್ವಾಚಾರ ಪದ್ಥತಿಗಳ ವಿರುದ್ಧದ ಬಂಡಾಯ ಮತ್ತು ಪ್ರತಿಪಾದಿಸಿದ ಸ್ಥಾಪಕ ತರ್ಕಗಳಿಗಾಗಿ ಪವಿತ್ರ ಖುರಾನನ್ನು ಓದಿ ಅರಿಯಲೇಬೇಕು.”

“ವೈಜ್ಞಾನಿಕ ಅರಿವು ಮತ್ತು ಜಿಜ್ಞಾಸೆಯ ಹುಡುಕಾಟವನ್ನು ಪ್ರವಾದಿಯವರ ಕಾಲದಿಂದಲೂ ಪ್ರೋತ್ಸಾಹಿಸಲಾಗಿದೆ. ಜ್ಞಾನ ಸಂಪಾದನೆಗೆ ಚೀನಾ ತನಕವೂ ಪ್ರವಾಸ ಮಾಡಿರೆಂದು ಖುದ್ದು ಪ್ರವಾದಿ ತಮ್ಮ ಅನುಯಾಯಿಗಳನ್ನು ಆಗ್ರಹಿಸಿದ್ದರಂತೆ. ’ಮಂಜಿಲ್ ಸೇ ಆಗೇ ಬಢಕರ್ ಮಂಜಿಲ್ ತಲಾಶ್ ಕರ್, ಮಿಲ್ ಜಾಯೇ ತುಝೇ ದರಿಯಾ, ಸಮಂದರ್ ತಲಾಶ್ ಕರ್’ ಎಂಬ ಅಲ್ಲಾಮಾ ಇಕ್ಬಾಲ್ ಕವಿವಾಣಿ ಹೇಳುವುದೂ ಅದನ್ನೇ”.


ಇದನ್ನೂ ಓದಿ: ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...