ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅಂಗೀಕಾರಗೊಂಡ ನಂತರ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯನ್ನು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದ್ದ ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಮುಂದುವರಿಸಲು ಕೇರಳ ಹೈಕೋರ್ಟ್ ಶುಕ್ರವಾರ (ಏ.10) ಅನುಮತಿ ನೀಡಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ.
ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅನ್ನು ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂಬ ನಿರ್ಣಯ ತಿರಸ್ಕೃತಗೊಂಡ ಬಳಿಕ, ಮಾರ್ಚ್ 25 ರಂದು ಸಂಸತ್ತು ಅಂಗೀಕರಿಸಿದೆ. ಈ ಶಾಸನವು 2019ರ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆಯಲ್ಲಿ ಹೇಳಲಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಯಾಗಿ ಯಾರು ಅರ್ಹತೆ ಪಡೆಯುತ್ತಾರೆ ಎಂಬುದನ್ನು ಮರು ವ್ಯಾಖ್ಯಾನಿಸುವ ತಿದ್ದುಪಡಿ ತಂದಿದೆ.
ಹೊಸ ಕಾನೂನು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಮ್ಮದೇ ಆದ ಲಿಂಗ ಗುರುತನ್ನು (self-perceived gender identity) ಹೊಂದುವ ಹಕ್ಕನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಈ ಕಾನೂನಿನ ವ್ಯಾಪ್ತಿಯನ್ನು ಕೇವಲ ಕೆಲವು ನಿರ್ದಿಷ್ಟ ಜೈವಿಕ ಅಥವಾ ದೈಹಿಕ ಗುಣಲಕ್ಷಣಗಳು, ಇಂಟರ್ ಸೆಕ್ಸ್ ವೈವಿಧ್ಯಗಳು ಅಥವಾ ಕಿನ್ನರ್, ಹಿಜ್ರಾ, ಅರವಣಿ ಮತ್ತು ಜೋಗ್ತಿಯಂತಹ ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಗುರುತು ಹೊಂದಿರುವವರಿಗೆ ಮಾತ್ರ ಸೀಮಿತಗೊಳಿಸುತ್ತದೆ.
ತಿದ್ದುಪಡಿ ಕಾಯ್ದೆಯ ವಿರುದ್ದ ಸಲ್ಲಿಸಲಾದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಕೇರಳ ಹೈಕೋರ್ಟ್ ಪೀಠ ಶುಕ್ರವಾರ ವಿಚಾರಣೆ ನಡೆಸಿದೆ. ವಾದಗಳನ್ನು ಆಲಿಸಿದ ನಂತರ, ನ್ಯಾಯಮೂರ್ತಿ ಅರ್ಜಿಗಳ ಕುರಿತು ನೋಟಿಸ್ ಜಾರಿ ಮಾಡಿದ್ದಾರೆ ಎಂದು livelaw.in ವರದಿ ಮಾಡಿದೆ.
ಹೊಸ ಶಾಸನದ ಹಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಎರಡು ಅರ್ಜಿಗಳು, ಇದು 2014ರ ‘ನ್ಯಾಷನಲ್ ಲೀಗಲ್ ಸರ್ವಿಸಸ್ ಅಥಾರಿಟಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ (ಎನ್‌ಎಎಲ್‌ಎಸ್‌ಎ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿವೆ. ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ತೆಗೆದುಹಾಕಿರುವುದು ಮತ್ತು ಕಡ್ಡಾಯ ವೈದ್ಯಕೀಯ ಪ್ರಮಾಣೀಕರಣವನ್ನು ಸೇರಿಸಿರುವುದು ಈ ವಿರೋಧಕ್ಕೆ ಪ್ರಮುಖ ಕಾರಣಗಳೆಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.
2014ರ ತೀರ್ಪು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗಾಗಿ ಔಪಚಾರಿಕವಾಗಿ ಮೂರನೇ ಲಿಂಗ (third gender) ಎಂಬ ವರ್ಗವನ್ನು ಸೃಷ್ಟಿಸಿತ್ತು ಮತ್ತು ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗವೆಂದು ಗುರುತಿಸಿತ್ತು.
ತಿದ್ದುಪಡಿ ಅಧಿಸೂಚನೆ ಹೊರಬಂದ ನಂತರ, ತಾವು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವುದನ್ನು ನಿಲ್ಲಿಸಿವೆ ಎಂದು ಇಬ್ಬರೂ ಅರ್ಜಿದಾರರು ಹೈಕೋರ್ಟ್‌ಗೆ ತಿಳಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು, ಇಂತಹ ಚಿಕಿತ್ಸೆಯನ್ನು ವ್ಯಕ್ತಿಯೊಬ್ಬರಿಗೆ ದಿಢೀರನೆ ನಿಲ್ಲಿಸಿದರೆ, ಅದು ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಈ ವಿಷಯದ ಬಗ್ಗೆ ಶಾಸನದಲ್ಲೇ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ. ಶ್ರೀಕುಮಾರ್ ಅವರು, ಸ್ವಯಂ-ಗುರುತಿಸುವಿಕೆಯ ವಿಷಯವು ಹಲವಾರು ದೇಶಗಳಲ್ಲಿ ದೊಡ್ಡ ವಿವಾದವಾಗಿದೆ ಎಂದು ಹೇಳಿದ್ದಾರೆ. ಅಮೆರಿಕಾದಲ್ಲಿ ಅನೇಕರು ತಮ್ಮ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ತಮ್ಮನ್ನು ತಾವು ಘೋಷಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ಉತ್ತರಿಸಿ ನ್ಯಾಯಮೂರ್ತಿ ಥಾಮಸ್ ಅವರು, “ಪಾಶ್ಚಾತ್ಯ ದೇಶಗಳನ್ನು ಅಂಧವಾಗಿ ಅನುಕರಿಸುವುದನ್ನು ತಡೆಯುವುದು ಶಾಸಕಾಂಗದ ಉದ್ದೇಶವಿರಬಹುದು. ಅಲ್ಲಿ ಮಕ್ಕಳು ತಾವು ಬೆಕ್ಕು ಎಂದು ಹೇಳಿಕೊಳ್ಳಬಹುದು ಮತ್ತು ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇಂತಹ ಪರಿಸ್ಥಿತಿಯನ್ನು ತಡೆಯುವುದೇ ಶಾಸಕಾಂಗದ ಉದ್ದೇಶವಾಗಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ವಿಚಾರಣೆಯಲ್ಲಿ, ಈ ಹೊಸ ಕಾಯ್ದೆಯ ಜಾರಿಯಿಂದಾಗಿ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಮತ್ತು ಇತರ ಲಿಂಗ ದೃಢೀಕರಣ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿವೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ಶ್ರೀಕುಮಾರ್ ಅವರಿಗೆ ಸೂಚಿಸಿತ್ತು.
ಶುಕ್ರವಾರದಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, ವೈದ್ಯಕೀಯ ತುರ್ತುಸ್ಥಿತಿಗಳಿಗೆ ಸಂಬಂಧಿಸಿದ ಇಂತಹ ಕುಂದುಕೊರತೆಗಳು ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಕೀಲರಾದ ಅರುಂಧತಿ ಕಾಟ್ಜು ಅವರು, ಎನ್‌ಎಎಲ್‌ಎಸ್‌ಎ ಪ್ರಕರಣ ಮತ್ತು ಹಿಂದಿನ ಶಾಸನವು ಒಬ್ಬರ ಗ್ರಹಿಸಿದ ಲಿಂಗ ಗುರುತಿನ ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ಗುರುತಿಸಿದೆ ಎಂದು ಗಮನ ಸೆಳೆದಿದ್ದಾರೆ ಎಂದು ಬಾರ್ ಅಂಡ್ & ವರದಿ ಮಾಡಿದೆ.
ಅಲ್ಲದೆ, ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಹಸ್ತಕ್ಷೇಪಗಳ ಬಗ್ಗೆ ವೈದ್ಯಕೀಯ ಸಂಸ್ಥೆಗಳು ವರದಿ ಸಲ್ಲಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ, “ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಗಳನ್ನು ನೀಡುತ್ತಿದ್ದ ವೈದ್ಯರ ಮೇಲೆ ಇದು ಭಯದ ವಾತಾವರಣವನ್ನು ನಿರ್ಮಿಸಿದೆ” ಎಂದು ಕಾಟ್ಜು ಹೇಳಿರುವುದನ್ನು livelaw.in ವರದಿ ಮಾಡಿದೆ.
ಈ ತಿದ್ದುಪಡಿಯು ಕೇವಲ ಸ್ವಯಂ ಘೋಷಣೆಯನ್ನು ಮಾತ್ರ ಹೊರಗಿಡುತ್ತದೆ ಎಂದು ಶ್ರೀಕುಮಾರ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು ಶಾಸನಕ್ಕೆ ತಡೆಯಾಜ್ಞೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರೂ, ಅರ್ಜಿದಾರರಿಗೆ ಮಧ್ಯಂತರ ಪರಿಹಾರವನ್ನು ನೀಡಿರುವುದಾಗಿ ಎಂದು ಬಾರ್ & ಬೆಂಚ್ ವರದಿ ಹೇಳಿದೆ.


