ಈ ಶತಮಾನದ ರಾಜಕೀಯ ದ್ರೋಹ ಯಾವುದೆಂದರೆ ಸಭ್ಯ ರಾಜಕಾರಣಿಗಳು ಕೊಡುವ ಉತ್ತರ ಎಸ್ಸೆಂ ಕೃಷ್ಣರ ಪಕ್ಷಾಂತರವಂತಲ್ಲಾ. ಹಾಗಾದರೆ ಕೃಷ್ಣ ಅಂತಹ ದ್ರೋಹ ಮಾಡಿದ್ದಾರೆ ಎಂದರೆ ಅನಿವಾರ್ಯವಾಗಿ ಹೌದು ಎನ್ನಬೇಕಾಗುತ್ತದೆ. ಏಕೆಂದರೆ ಅವರ ರಾಜಕೀಯ ಜೀವನದ ಆರು ದಶಕದಲ್ಲಿ ಪ್ರಧಾನಿ ಸ್ಥಾನ ಬಿಟ್ಟು ಇನ್ನೆಲ್ಲವನ್ನು ಅನುಭವಿಸಿದ್ದು ಕಾಂಗ್ರೆಸ್ಸಿನಲ್ಲಿ. ಆದರೆ ಆ ಪಾರ್ಟಿಯ ಕಷ್ಟಕಾಲದಲ್ಲಿ ತಮ್ಮ ಕಡೆಗಾಲದಲ್ಲಿ, ಭಾರತದ ಸರ್ವನಾಶಕ್ಕೆ ಪಣತೊಟ್ಟಂತಿರುವ ಬಿಜೆಪಿಗೆ ಹೋಗಿ ಕುಳಿತು ಕಾಲ ಹಾಕುತ್ತಿರುವುದು ಅಕ್ಷಮ್ಯ ಅಪರಾಧ. ಅಷ್ಟಕ್ಕೂ ಬಿಜೆಪಿಗೆ ಹೋಗಿ ಕಾಲಹಾಕುವಂತಹ ಕೇಡುಗಾಲ ಕೃಷ್ಣರಿಗೇಕೆ ಬಂತು ಎಂಬುದು ನಿಗೂಢವಾಗುಳಿದಿದೆ. ಮಂಡ್ಯ ಹೈದರ ಪ್ರಕಾರ ಗಳಿಸಿದ್ದನ್ನು ದಕ್ಕಿಸಿಕೊಂಡು ಅಳಿಯನನ್ನು ಉಳಿಸಿಕೊಳ್ಳಲು ಬಿಜೆಪಿಗೆ ಹೋದರಂತೆ. ಆ ಬಿಜೆಪಿಯವರೊ ವೃದ್ಧರಿಗೆ ಗೌರವ ಕೊಡುವುದಿಲ್ಲವಂತೆ. ಆದರೂ ಕೃಷ್ಣ ಆಗಾಗ್ಗೆ ಸದ್ದು ಮಾಡುತ್ತ ಏನೇನೂ ಹೇಳುತ್ತ ಕಡೆಗೆ ತಾನೇನು ಮಹಾ ಪಕ್ಷಾಂತರ ಮಾಡಿಲ್ಲ, ಅಂತಹ ದೇವೇಗೌಡರೇ 80ರ ದಶಕದಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಸೇರಲು ಬಂದಿದ್ದರು ಎಂದು ದಾಖಲಿಸಿದ್ದಾರಲ್ಲಾ ಥೂತ್ತೇರಿ.
ಹಲವು ಸಂಪುಟಗಳಲ್ಲಿ ತಮ್ಮ ರಾಜಕೀಯ ಜೀವನವನ್ನು ದಾಖಲಿಸಿರುವ ಕೃಷ್ಣ ಯಾರ ಮನಸ್ಸನ್ನು ನೋಯಿಸದ ವ್ಯಕ್ತಿಯಂತಲ್ಲಾ. ಆದ್ದರಿಂದ ರಾಜಕಾರಣದಲ್ಲಿನ ಕೆಲ ಗುಟ್ಟುಗಳನ್ನು ದಾಖಲಿಸುವುದರಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂಬುದು ದೇವೇಗೌಡರ ವಿಷಯದಲ್ಲಿ ಸಾಬೀತಾಗಿದೆ. ಮಾನ್ಯ ದೇವೇಗೌಡರು ಜನತಾದಳ ಬಿಟ್ಟು ಕಾಂಗ್ರೆಸ್ ಸೇರಲು ಬಂದಿದ್ದು ಎಂಬತ್ತರಲ್ಲಲ್ಲ. 1977ರಂದು ದೇಶದ ಮೇಲೆ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ಯಾಕೋ ಜನತಾ ಪಕ್ಷ ನಿರ್ನಾಮವಾಗುತ್ತದೆಂದು ಭಾವಿಸಿ ಕಾಂಗ್ರೆಸ್ ಸೇರಿಬಿಡಲು ತೀರ್ಮಾನಿಸಿದ್ದರು. ವಿರೋಧ ಪಕ್ಷದ ತಮ್ಮ ಸ್ಥಾನವನ್ನು ಹೆಚ್.ಟಿ.ಕೃಷ್ಣಪ್ಪನವರಿಗೆ ವಹಿಸಿ ಜೈಲಿಂದ ಬಂದಕೂಡಲೇ ಕಾಂಗ್ರೆಸ್ ಸೇರೋಣ ಎಂದು ಇಬ್ರಾಹಿಂ ಸಮ್ಮುಖದಲ್ಲಿ ಹೇಳಿದ್ದವರು. ಜೈಲಿನಿಂದ ಬಂದನಂತರ ಮನಸ್ಸು ಬದಲಿಸಿದ್ದರು. ಆಗ ಪ್ರಾಮಾಣಿಕ ರಾಜಕಾರಣದ ದೆಸೆಯಿಂದ ಕಷ್ಟದಲ್ಲಿದ್ದ ಗೌಡರು ಗುಂಡೂರಾಯನ ಓಲೈಕೆಯಿಂದ ಚೇತರಿಸಿಕೊಂಡಿದ್ದರು. ಕಾಂಗೈ ಸೇರಲು ಹಾತೊರೆದ ಗೌಡರನ್ನ ಕಾಂಗ್ರೆಸ್ಸೇ ಪ್ರಧಾನಿ ಮಾಡಿತ್ತು. ಈಚೆಗೆ ಅವರ ಮಗನನ್ನ ಮುಖ್ಯಮಂತ್ರಿ ಮಾಡಿತ್ತಲ್ಲಾ ಥೂತ್ತೇರಿ.
ಕಾಂಗೈ ಸಪೋರ್ಟ್‍ನಿಂದ ಮಗ ಮುಖ್ಯಮಂತ್ರಿಯಾದ ಸಂದರ್ಭ ನೋಡಬೇಕಿತ್ತು. ಮಂಡ್ಯದ ಗೌಡರು ಸಾಲಸೂಲ ಮಾಡಿ ಮಗನ ಮದುವೆ ಮಾಡಿದಂತಿತ್ತು. ಅವರಿವರ ಸಹಾಯದಲ್ಲಿ ನಡೆಯುವ ಗೌಡರು, ಆ ದಿನ ಯಾರ ಸಹಾಯವೂ ಇಲ್ಲದೆ ಮದುವೆ ಮಂಟಪದಲ್ಲಿ ತುಟಿಬಿರಿದು ಅಡ್ಡಾಡುತ್ತಿದ್ದರು. ಅವರ ಮಗನ ಜೊತೆ ಹಸೆ ಏರಲು ಬಂದ ಕಾಂಗೈ ಹೆಣ್ಣು ಬಲಾಢ್ಯಳಾಗಿದ್ದಳು. ಸಾಕಷ್ಟು ಶ್ರೀಮಂತಿಕೆಯಿಂದಿದ್ದ ಆಕೆ ಕುಮಾರಣ್ಣನೊಡನೆ ದಾಂಪತ್ಯದಲ್ಲಿ ಇನ್ನಷ್ಟು ಬಲಾಢ್ಯಳಾಗುವ ಹವಣಿಕೆಯಲ್ಲಿದ್ದಳು. ಅವಳಪ್ಪ ಯಾಕೋ ಡಲ್ಲಾಗಿ ಎಲ್ಲೂ ಕಾಣಿಸಿಕೊಳ್ಳದೆ ಮೂಲೆಯಲ್ಲಿದ್ದ ಇತ್ತ ಭಾರತ ಕಂಡ ಅಪರೂಪದ ಈ ಮದುವೆಗೆ ಸೋನಿಯಾ, ರಾಹುಲ್, ಮಾಯಾವತಿ, ಮಮತಾ ಬ್ಯಾನರ್ಜಿ…., ಯಾದವ ಕುಲತಿಲಕರೆಲ್ಲಾ ನೆರೆದಿದ್ದರು. ಅದ್ದೂರಿ ಮದುವೆ ಜರುಗಿಹೋಯ್ತು. ಆದರೇನು ಕಾಂಗೈ ಕನ್ಯೆಯನ್ನ ನಿಭಾಯಿಸುವ ಶಕ್ತಿ ಗೌಡರ ಮಗನಿಗಿರಲಿಲ್ಲ. ಹಾಗೆ ನೋಡಿದರೆ ಅದು ಸರಿಯಾದ ಜೋಡಿಯಲ್ಲವೆಂದು ಜನರೇ ಹೇಳುತ್ತಿದ್ದರು. ನಿರೀಕ್ಷೆಯಂತೆ ಹದಿನಾಲ್ಕು ತಿಂಗಳಲ್ಲೇ ಡೈವೋರ್ಸು ನಡೆದುಹೋಯ್ತು. ಇದಕ್ಕೆ ಕಾರಣ ಮೋದಿ ಶಾ ಎಂಬ ಮನೆ ಮುರುಕರು. ಕಾಂಗೈ ಕನ್ಯೆಗೆ ಹೇಳಿದ್ದ ಚಾಡಿ ಮಾತುಗಳು ತಾವೇ ಮೇಲೆ ಬಿದ್ದು ಬಂದು ತಾವೇ ಡೈವೋರ್ಸ್ ಕೊಟ್ಟ ಕಾಂಗೈಯನ್ನ ಅಪ್ಪಮಕ್ಕಳು ಆಜನ್ಮವೈರಿಯಾಗಿ ಪರಿಗಣಿಸಿದ್ದಾರಂತಲ್ಲಾ ಥೂತ್ತೇರಿ.
ಬೆಂಗಳೂರಲ್ಲೊಂದು ಚಿತ್ರಕಲಾ ಸಂತೆ ಮೂಲೆಮೂಲೆಯಲ್ಲಿದ್ದ ಕುಂಚದ ಕಲಾವಿದರು. ತಾವು ರಚಿಸಿತಂದ ಕಲಾಕೃತಿಗಳನ್ನು ಗಾಂಧಿಭವನದ ಪಕ್ಕ ಹರಡಿಕೊಂಡು ನಿಂತಿದ್ದರು. ಸುಮಾರು ನಾಲ್ಕು ಲಕ್ಷ ಜನರು ವೀಕ್ಷಿಸಿದರು. ಈ ಚಿತ್ರಕಲಾ ಸಂತೆಯನ್ನು ಎಡೂರಪ್ಪ ರೈತರಿಗೆ ಅರ್ಪಿಸಿದರು. ಅಸಂಬದ್ಧ ಮತ್ತು ಅಧಿವೇಶನ ತೀರ್ಮಾನವೆಂದರೆ ಇದೆ. ಹಾಗೆ ನೋಡಿದರೆ ಬಿಜೆಪಿಗಳೇ ಅಸಂಬದ್ಧ ಚಿತ್ರಕಲೆಗೂ ರೈತರ ಬವಣೆಗೂ ಏನು ಸಂಬಂಧ ಕಳೆದ ಸರಕಾರ ರೈತರಿಗೆ ಕೊರೆಸಿಕೊಟ್ಟ ಬೋರ್‍ವೆಲ್‍ಗಳಿಗೆ ಪೈಪ್ ಕೊಡಲು ದುಡ್ಡಿಲ್ಲ ಎನ್ನುವ ಎಡೂರಪ್ಪ ಚಿತ್ರಕಲಾ ಸಂತೆಯನ್ನ ರೈತರಿಗೆ ಅರ್ಪಿಸಿದ್ದಾರೆ. ಈ ಅರ್ಪಣೆಯ ಹಿಂದೆ ಯಾವ ಘನ ಉದ್ದೇಶವೂ ಇಲ್ಲ. ರೈತರ ಕಣ್ಣಿಗೆ ಮಣ್ಣೆರಚಿ ಮುಂದೆ ಹೋಗುವುದಷ್ಟೇ ಕೆಲಸ. ಈ ಚಿತ್ರ ಸಂತೆಯಲ್ಲಿ ಯಾವನೋ ಚೆಡ್ಡಿಯೂ ಕಲಾವಿದನಾಗಿ ಮೋದಿ, ನಿರ್ಮಲಾ ಸೀತಾರಾಂ ಮತ್ತು ತೇಜಸ್ವಿ ಸೂರ್ಯನ ಚಿತ್ರಗಳನ್ನ ತಂದು ಮಡಗಿತ್ತು. ಚಿತ್ರಕಲೆಗೂ ಚೆಡ್ಡಿಗಳು ನುಗ್ಗಿದರೆ ಮುಂದೇನಾಗಬಹುದು ಎಂಬುದರ ಸೂಚನೆಯಿದು. ಜನ ಮಾತ್ರ ಚಿತ್ರಗಳ ತಂಟೆಗೆ ಹೋಗದೆ ಆಲೂಗಡ್ಡೆ ಚಿಪ್ಸು, ಪಾನಿ ಪೂರಿ, ಗೋಬಿ ಮಂಚೂರಿ, ಚುರುಮುರಿ ಕೊಂಡು ಹೇಗೆ ತಿನ್ನುತ್ತಿದ್ದರೆಂದರೆ ಅವನ್ನ ಕಂಡೇ ಇಲ್ಲವೇನೊ ಎನ್ನುವಂತೆ ಮುಕ್ಕುತ್ತಿದ್ದರಲ್ಲಾ ಥೂತ್ತೇರಿ.
ಜಗತ್ತಿನ ಸಮಸ್ಯೆಯಂತೆ ಒಡಮೂಡಿರುವ ಟ್ರಂಪ್ ಎಂಬ ಅಮೆರಿಕದ ಅಧ್ಯಕ್ಷ ಕಡೆಗೂ ಒಂದು ಅನಾಹುತವನ್ನು ಮಾಡೇಬಿಟ್ಟನಲ್ಲಾ. ಆತನೇನೂ ಇರಾನ್ ಸಾಬರ ಮೇಲೆ ಬಿದ್ದಿದ್ದಾನೆ. ಆದರೆ ಭಾರತದ ಟ್ರಂಪು ಭಾರತೀಯರ ಮೇಲೆ ಬಿದ್ದುಬಿಟ್ಟಿದ್ದಾನಲ್ಲಾ ಇದಕ್ಕೇನು ಹೇಳುವುದು. ಹಾಗೆ ನೋಡಿದರೆ ಬುದ್ಧಿಮಾಂದ್ಯ ಮೂರ್ಖರು ಏನಾದರೂ ಅನಾಹುತ ಮಾಡಿಯೇ ಮಾಡುತ್ತಾರೆ. ಎಂಬುದಕ್ಕೆ ಈ ಟ್ರಂಪ್‍ದ್ವಯರು ಭಯಂಕರ ಉದಾಹರಣೆ ಇರಾನ್‍ನ ಖಾಸಿಂ ಸುಲೇಮಾನ್ ಮೇಲೆ ದಾಳಿಮಾಡಿ ಸಾಯಿಸಿದ ಟ್ರಂಪ್ ಈ ಕೃತ್ಯಕ್ಕೆ ಭಾರತವನ್ನ ಎಳೆಯಲು ಆತ ಡೆಲ್ಲಿ ಉಡಾಯಿಸಲು ಸ್ಕೆಚ್ ಹಾಕಿದ್ದ. ಬ್ಲೂ ಪ್ರಿಂಟ್ ನನ್ನ ಬಳಿ ಇದೆ ಎಂದಿದ್ದಾನೆ. ಇತ್ತ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಮಾಡುತ್ತಿರುವುದು ಇಂತ ಅನಾಹುತಗಳನ್ನೆ. ಗುಜರಾತ್ ಚುನಾವಣೆಯಲ್ಲಿ ನಮ್ಮನ್ನ ಸೋಲಿಸಲು ಪಾಕಿಸ್ತಾನದಲ್ಲಿ ಸಂಚು ನಡೆದಿದೆ ಎನ್ನುತ್ತಾನೆ. ಅದಷ್ಟೇ ಅಲ್ಲ, ಸಂಸತ್ತಿನಲ್ಲಾಡುವ ಮಾತನ್ನ ಬೀದಿಯಲ್ಲಾಡುತ್ತಾನೆ. ಬೀದಿ ಮಾತನ್ನ ಸಂಸತ್ತಿನಲ್ಲಾಡುತ್ತಾನೆ. ಕರ್ನಾಟಕದಲ್ಲಾಡುವ ಮಾತನ್ನ ಜಾರ್ಖಂಡ್‍ನಲ್ಲಿ, ಡೆಲ್ಲಿಯಲ್ಲಾಡುವ ಮಾತನ್ನ ನ್ಯೂಯಾರ್ಕಿನಲ್ಲಿ ಹೀಗೆ ಎಲ್ಲೆಂದರಲ್ಲಿ ಬಾಯಿಗೆ ಬಂದದ್ದು ವದರುವ ಮೋದಿ, ಸಿದ್ದಗಂಗೆಯ ಎಳೆ ಮಕ್ಕಳ ಎದುರು ಪಾಕಿಸ್ತಾನದ ವಿಷಯ ಹೇಳಿ ಮುಗ್ಧ ಮಕ್ಕಳೇ ದಂಗಾಗುವಂತೆ ಮಾಡಿದ್ದಾನಲ್ಲಾ ಥೂತ್ತೇರಿ.


