ಅಮೆರಿಕ-ಉಕ್ರೇನ್ ನಡುವಿನ ಖನಿಜ ಒಪ್ಪಂದ ಕುರಿತಾದ ಮಾತುಕತೆಯ ವೇಳೆ ಶುಕ್ರವಾರ (ಫೆ.28) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ತೀವ್ರ ವಾಗ್ವಾದ ನಡೆದಿದೆ.
ಖನಿಜ ಒಪ್ಪಂದದ ವಿಚಾರವಾಗಿ ಅಮೆರಿಕದ ಶ್ವೇತ ಭವನದ ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಷ್ಯಾ, ಉಕ್ರೇನ್ ನಡುವಿನ ಯುದ್ಧ ವಿಚಾರ ಚರ್ಚೆಗೆ ಬಂದಿದೆ. ಈ ವೇಳೆ ಉಭಯ ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಖನಿಜ ಒಪ್ಪಂದಕ್ಕೆ ಸಹಿ ಹಾಕದೆ ಝೆಲೆನ್‌ಸ್ಕಿ ಕೂಡಲೇ ಸಭೆಯಿಂದ ಹೊರ ನಡೆದಿದ್ದಾರೆ.
ಶ್ವೇತ ಭವನದಿಂದ ನಿರ್ಗಮಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಝೆಲೆನ್‌ಸ್ಕಿ, ‘ಅಮೆರಿಕ, ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಜನತೆಗೆ ಉಕ್ರೇನ್‌ಗೆ ಬೆಂಬಲ ನೀಡಿದಕ್ಕಾಗಿ ಧನ್ಯವಾದಗಳು. ಉಕ್ರೇನ್‌ಗೆ ಶಾಶ್ವತವಾದ ಶಾಂತಿ ಬೇಕಾಗಿದೆ. ಅದಕ್ಕಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
Thank you America, thank you for your support, thank you for this visit. Thank you @POTUS, Congress, and the American people.
Ukraine needs just and lasting peace, and we are working exactly for that.— Volodymyr Zelenskyy / Володимир Зеленський (@ZelenskyyUa) February 28, 2025
ಟ್ರಂಪ್-ಝೆಲೆನ್‌ಸ್ಕಿ ನಡುವೆ ಜಟಾಪಟಿ
ಖನಿಜ ಒಪ್ಪಂದ ಸಭೆ ಬಳಿಕ ಟ್ರಂಪ್, ವ್ಯಾನ್ಸ್ ಮತ್ತು ಝೆಲೆನ್‌ಸ್ಕಿ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿದ್ದರು. ಈ ವೇಳೆ ಒಂದು ರೀತಿಯಲ್ಲಿ ರಷ್ಯಾ ಮುಂದೆ ಉಕ್ರೇನ್ ಶರಣಾಗುವಂತೆ ಮತ್ತು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಟ್ರಂಪ್ ಮಾತನಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದರೂ, ಉಕ್ರೇನ್ ತಪ್ಪು ಮಾಡಿದಂತೆ ರಷ್ಯಾ ಪರ ವಹಿಸಿ ಟ್ರಂಪ್ ಮತ್ತು ವ್ಯಾನ್ಸ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ “ಝೆಲೆನ್‌ಸ್ಕಿ ಪ್ರೊಪಗೊಂಡ ಟೂರ್ ಮಾಡುತ್ತಿದ್ದಾರೆ” ಎಂದಿದ್ದಾರೆ. ಯುದ್ದ ಕೊನೆಗೊಳಿಸಲು ನೀವು ಕದನ ವಿರಾಮಕ್ಕೆ ಸಹಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಝೆಲೆನ್‌ಸ್ಕಿ “ರಷ್ಯಾ ನಮ್ಮ ಭೂಭಾಗವನ್ನು ಆಕ್ರಮಿಸಿದೆ. ಆದರೆ, ನೀವು ರಷ್ಯಾ ಪರ ವಹಿಸಿ ಮಾತನಾಡುತ್ತಿದ್ದೀರಿ. ನಿಮ್ಮದು ಯಾವ ರೀತಿಯ ರಾಜತಾಂತ್ರಿಕತೆ?” ಎಂದು ಪ್ರಶ್ನಿಸಿದ್ದಾರೆ.
I recommend watching the full conversation between Trump and Zelensky before forming strong opinions
(This is true for any situation)
— Shaun Maguire (@shaunmmaguire) February 28, 2025
ಇದಕ್ಕೆ ಕೆಂಡಾಮಂಡಲರಾದ ವ್ಯಾನ್ಸ್ “ನಿಮಗೆ ಅಮೆರಿಕ ಸಾಕಷ್ಟು ಬೆಂಬಲ ನೀಡಿದೆ. ಅದಕ್ಕೆ ನೀವು ಕೃತಜ್ಞರಾಗಿಬೇಕು, ನೀವು ಓವಲ್ ಕಚೇರಿಯಲ್ಲಿ ಅಮೆರಿಕಕ್ಕೆ ಅಗೌರ ತೋರುತ್ತಿದ್ದೀರಿ” ಎಂದಿದ್ದಾರೆ.
“ರಷ್ಯಾ- ಉಕ್ರೇನ್ ಯುದ್ಧದಲ್ಲಿ ಝೆಲೆನ್‌ಸ್ಕಿ ಚೆಲ್ಲಾಟ ಆಡುತ್ತಿದ್ದಾರೆ. ಉಕ್ರೇನ್ ಜನರ ಜೀವದ ಜೊತೆ ಆಟವಾಡುತ್ತಿದ್ದೀರಿ…3ನೇ ಮಹಾಯುದ್ಧದ ಜೊತೆಯೂ ಆಟವಾಡುತ್ತಿದ್ದೀರಿ” ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಕಿಡಿಕಾರಿದ್ದಾರೆ.
“ಇಷ್ಟು ವರ್ಷಗಳ ಕಾಲ ನಿಮ್ಮ (ಉಕ್ರೇನ್) ಜೊತೆಗೆ ಅಮೆರಿಕ ಬೆಂಬಲವಾಗಿ ನಿಂತಿದೆ. ಯಾರು ಏನೇ ಹೇಳಿದರೂ ನಿಮಗೆ ಅಮೆರಿಕ ಸಹಾಯ ಮಾಡಿದೆ. ಆದರೆ, ನೀವು ಅಮೆರಿಕ ಜನರಿಗೆ ಅವಮಾನ ಮಾಡುವ ಕೆಲಸ ಮಾಡ್ತಿದ್ದೀರಿ. ನಾವು ಯುದ್ಧವನ್ನು ನಿಲ್ಲಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನೀವು ಕದನ ವಿರಾಮಕ್ಕೆ ಒಪ್ಪದೆ ವಿತಂಡವಾದ ಮಾಡಿದ್ದೀರಿ. ನಾವು ಸಾವು ತಡೆಗೆ ಯತ್ನಿಸಿದರೆ, ನೀವು ಹೆಣ ನೋಡಲು ಹೋಗುತ್ತೀರಿ” ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಬೇಸರ ಹೊರಹಾಕಿದ್ದಾರೆ.
ಟ್ರಂಪ್ ಹೇಳಿಕೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೂಡ ಕೆಂಡಾಮಂಡಲರಾಗಿದ್ದಾರೆ. “ನಾವು ಯಾವುದೇ ದೇಶದ ವ್ಯಾಪ್ತಿಗೆ ಒಳಪಟ್ಟಿಲ್ಲ. ನಾವು ಯಾರ ಮೇಲೂ ದಾಳಿ ಮಾಡಲಿಲ್ಲ. ರಷ್ಯಾದವರೇ ನಮ್ಮ ಮೇಲೆ ದಾಳಿ ಮಾಡಿದ್ದು” ಎಂದು ಗುಡುಗಿದ್ದಾರೆ.
ಸಭೆಯ ಬಳಿಕ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ‘ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದು, “ಝೆಲೆನ್‌ಸ್ಕಿ ಅವರು ನಿಯಮಗಳನ್ನು ಪಾಲಿಸದೆ ಓವಲ್ ಕಚೇರಿಯಲ್ಲಿ ಅಮೆರಿಕವನ್ನು ಅಗೌರವಿಸಿದ್ದಾರೆ. ಅವರು ಶಾಂತಿ ಪಾಲನೆಗಾಗಿ ಸಿದ್ಧರಿದ್ದರೆ ಮತ್ತೆ ಚರ್ಚೆಗೆ ಹಿಂತಿರುಗಬಹುದು” ಎಂದು ಹೇಳಿದ್ದಾರೆ.
ರಷ್ಯಾ ಪರ ಟ್ರಂಪ್ ವಕಾಲತ್ತು
ಎರಡನೇ ವಿಶ್ವ ಮಹಾಯುದ್ಧದ ಬಳಿಕ ರಷ್ಯಾ ಮತ್ತು ಅಮೆರಿಕ ಬದ್ದ ವೈರಿಗಳು ಎಂದು ಎಲ್ಲರಿಗೂ ಗೊತ್ತು. ಆದರೆ, ಈ ಬಾರಿ ಅಮೆರಿಕದ ಚುಕ್ಕಾಣಿ ಹಿಡಿದ ಬಳಿಕ, ಟ್ರಂಪ್ ರಷ್ಯಾ ಪರ ವಕಾಲತ್ತು ವಹಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ದೊಡ್ಡ ರಾಷ್ಟ್ರಗಳು ಸಣ್ಣ ರಾಷ್ಟ್ರಗಳನ್ನು ಹೆದರಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವ ಕುತಂತ್ರದಂತೆ ಕಾಣುತ್ತಿದೆ.
ಇತ್ತೀಚೆಗೆ ವಿಶ್ವ ಸಂಸ್ಥೆಯಲ್ಲಿ ರಷ್ಯಾ-ಉಕ್ರೇನ್ ನಡುವಿನ ಯುದ್ದ ಸಂಬಂಧಿತ ನಿರ್ಣಯದ ಸಂದರ್ಭದಲ್ಲೂ ಯುದ್ದಪರಾಧಕ್ಕಾಗಿ ರಷ್ಯಾವನ್ನು ದೂಷಿಸಲು ಅಮೆರಿಕ ಹಿಂಜರಿದಿತ್ತು. ಈ ಕಾರಣಕ್ಕೆ ಗೊಂದಲ ಉಂಟಾಗಿ ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ನಿರ್ಣಯದ ಮೇಲಿನ ಮತದಾನದಿಂದ ದೂರು ಉಳಿದಿತ್ತು.
ಬಾಂಗ್ಲಾದೇಶ | ಹಸೀನಾ ಸರ್ಕಾರ ಉರುಳಿಸಿದ್ದ ವಿದ್ಯಾರ್ಥಿಗಳಿಂದ ಹೊಸ ಪಕ್ಷ!


