ಅಮೆರಿಕದ ಅತಿ ದೊಡ್ಡ ನಗರ ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿರುವ ಝೊಹ್ರಾನ್ ಮಮ್ದಾನಿ ತನ್ನ ವಿಷಯ ಭಾಷಣದಲ್ಲಿ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಐತಿಹಾಸಿಕ ಭಾಷಣದ ಸಾಲುಗಳನ್ನು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.
ಚುನಾವಣಾ ಗೆಲುವಿನ ಬಳಿಕ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ವಿಜಯ ಭಾಷಣ ಮಾಡಿದ ಮಮ್ದಾನಿ, ಆಗಸ್ಟ್ 14, 1947ರ ಮಧ್ಯಾರಾತ್ರಿ 12 ಗಂಟೆಗೆ ಭಾರತ ಬ್ರಿಟಿಷರ ದಾಸ್ಯದಿಂದ ಸ್ವತಂತ್ರಗೊಂಡಾಗ ನೆಹರು ಮಾಡಿದ ‘ಟ್ರೈಸ್ಟ್ ವಿತ್ ಡೆಸ್ಟಿನಿ’ ಭಾಷಣದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ನ್ಯೂಯಾರ್ಕ್ ಚುನಾವಣಾ ಗೆಲುವನ್ನು ಭಾರತದ ಸ್ವಾತಂತ್ರ್ಯಕ್ಕೆ ಹೋಲಿಕೆ ಮಾಡಿದ್ದಾರೆ.
“A moment comes, but rarely in history, when we step out from the old to the new, when an age ends, and when the soul of a nation, long suppressed, finds utterance”
“ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಒಂದು ಕ್ಷಣ ಬರುತ್ತದೆ. ಹಳೆಯದನ್ನು ಬಿಟ್ಟು ಹೊಸದರೆಡೆಗೆ ಹೆಜ್ಜೆ ಇಡುವಾಗ, ಒಂದು ಯುಗ ಮುಗಿಯುವಾಗ, ದೀರ್ಘಕಾಲ ದಬ್ಬಾಲಿಕೆಗೊಳಗಾದ ರಾಷ್ಟ್ರದ ಆತ್ಮ ಧ್ವನಿಯಾಗಿ ಮೂಡುವಾಗ” ಎಂಬ ನೆಹರು ಅವರ ಭಾಷಣದ ಸಾಲುಗಳನ್ನು ಮಮ್ದಾನಿ ಉಲ್ಲೇಖಿಸಿದ್ದಾರೆ.
“ಇಂದು ರಾತ್ರಿ, ನ್ಯೂಯಾರ್ಕ್ ಹಳೆಯದನ್ನು ಬಿಟ್ಟು ಹೊಸದರೆಡೆಗೆ ಹೆಜ್ಜೆ ಇಟ್ಟಿದೆ. ಅಸಮಾನತೆ, ದುಬಾರಿ ಜೀವನ, ರಾಜಕೀಯ ಕುಟುಂಬಗಳ ಯುಗ ಇಲ್ಲಿಗೆ ಕೊನೆಯಾಗಲಿದೆ. ಹೊಸ ಯುಗ ಆರಂಭಗೊಂಡಿದೆ” ಎಂದು ಹೇಳಿದ್ದಾರೆ.
#MustWatch 🚨#ZohranMamdani quote the Greatest Prime minister of India Pandit Jawahrlal Nehru Ji on Victory Speech ❤️👏 pic.twitter.com/JMSl0ZAw8h
— Ashish Singh (@AshishSinghKiJi) November 5, 2025
ಈ ಗೆಲುವು ನ್ಯೂಯಾರ್ಕ್‌ಗೆ ಹೊಸ ಯುಗದ ಸಂಕೇತವಾಗಿದೆ. ನಾನು ಧೈರ್ಯದಿಂದ ನಾಯಕತ್ವ ವಹಿಸುವುದಾಗಿ ನಿಮಗೆ ಭರವಸೆ ನೀಡುತ್ತೇನೆ. ನಾವು ಧೈರ್ಯದಿಂದ ಏನು ಸಾಧಿಸುತ್ತೇವೆ ಎಂದು ನ್ಯೂಯಾರ್ಕ್ ಜನರು ನಿರೀಕ್ಷೆ ಮಾಡುತ್ತಿದ್ದಾರೆ. ನಮಗೆ ಪ್ರಯತ್ನಿಸಲು ಧೈರ್ಯವಿಲ್ಲದಿದ್ದರೆ ಏನೂ ಮಾಡಲಾಗದು ಎಂದಿದ್ದಾರೆ.
ಜನರ ಜೀವನ ವೆಚ್ಚದ ಬಿಕ್ಕಟ್ಟನ್ನು ಪರಿಹರಿಸುವುದು ತನ್ನ ಮೊದಲ ಮತ್ತು ಪ್ರಮುಖ ಆದ್ಯತೆ. ಆ ನಿಟ್ಟಿನಲ್ಲಿ ನಮ್ಮ ಆಡಳಿತ ಕೆಲಸ ಮಾಡಲಿದೆ ಎಂದು ಮಮ್ದಾನಿ ಜನರಿಗೆ ಭರವಸೆ ನೀಡಿದ್ದಾರೆ.
ಮಂಗಳವಾರ (ನವೆಂಬರ್ 4, 2025) ನಡೆದ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಒಟ್ಟು 20 ಲಕ್ಷ ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಅತಿ ಹೆಚ್ಚು, ಅಂದರೆ ಶೇಕಡ 50ರಷ್ಟು ಅಥವಾ 10 ಲಕ್ಷ ಮತಗಳನ್ನು ಪಡೆಯುವ ಮೂಲಕ ಮಮ್ದಾನಿ ಗೆಲುವು ಸಾಧಿಸಿದ್ದಾರೆ.
ಇತಿಹಾಸ ಸೃಷ್ಟಿಸಿದ ಝೊಹ್ರಾನ್ ಮಮ್ದಾನಿ : ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆ


