ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ತುಮಕೂರಿನ ಫುಡ್ ಪಾರ್ಕ್ ನಲ್ಲೀಗ ಖಾಯಂ ಕಾರ್ಮಿಕರಿಗೆ ಕುತ್ತು ಬಂದಿದೆ. ಕೊರೊನಾ ಲಾಕ್ ಡೌನ್ ಪರಿಣಾಮ ಅರ್ಧಕ್ಕಿಂತ ಹೆಚ್ಚು ಕಾರ್ಮಿಕರಿಂದ ರಾಜಿನಾಮೆ ಪಡೆದುಕೊಳ್ಳಲಾಗುತ್ತಿದೆ. ಇದರಿಂದ ಖಾಯಂ ಕಾರ್ಮಿಕರು ಅಕ್ಷರಶಃ ಬೀದಿಗೆ ಬೀಳುತ್ತಿದ್ದಾರೆ.
ಫುಡ್‌ಪಾರ್ಕ್ ಆಡಳಿತ ಮಂಡಳಿ ಗ್ರಾಮಗಳಿಗೆ ತೆರಳಿರುವ ಖಾಯಂ ಕಾರ್ಮಿಕರಿಗೆ ಮತ್ತೆ ಕೆಲಸಕ್ಕೆ ಬರಬೇಡಿ ಎಂದು ಕಟ್ಟುನಿಟ್ಟಾಗಿ ಹೇಳಿದೆ. ಅಷ್ಟೇ ಊರುಗಳಿಂದಲೇ ಕಾರ್ಮಿಕರಿಂದ ಇ-ಮೇಲ್ ಮೂಲಕ ರಾಜಿನಾಮೆ ಪಡೆಯಲಾಗಿದೆ. ಆಡಳಿತ ಮಂಡಳಿಯ ಒತ್ತಡಕ್ಕೆ ಸಿಲುಕಿರುವ ಖಾಯಂ ಕಾರ್ಮಿಕರು ಅನಿವಾರ್ಯವಾಗಿ ರಾಜಿನಾಮೆ ನೀಡಿದ್ದಾರೆ.
ಫುಡ್ ಪಾರ್ಕ್ ಅಸ್ತಿತ್ವಕ್ಕೆ ಬಂದು ಆರು ವರ್ಷ ಕಳೆದಿದೆ. ಸಾವಿರಾರು ಕಟುಂಬಗಳಿಗೆ ಮಾರ್ಗವಾಗಲಿದೆ ಎಂಬ ಭರವಸೆ ಕೇವಲ ಮಾತುಗಳಲ್ಲೇ ಉಳಿದಿದೆ. ಈಗ ಇರುವ ಖಾಯಂ ಕಾರ್ಮಿಕರ ಕೆಲಸಕ್ಕೂ ಸಂಕಷ್ಟ ಎದುರಾಗಿದೆ. ಸ್ಥಳೀಯ ಮತ್ತು ಉತ್ತರ ಭಾರತ ನೂರು ಕಾರ್ಮಿಕರು ಖಾಯಂ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅದರಲ್ಲಿ ಶೇಕಡ 60ಕ್ಕಿಂತ ಹೆಚ್ಚು ಮಂದಿ ಕಾರ್ಮಿಕರು ಮನೆಗೆ ಹೋಗಬೇಕಾಗಿದೆ.
ಇದನ್ನೂ ಓದಿ: ತುಮಕೂರು: ಫುಡ್ ಪಾರ್ಕ್ ನಲ್ಲಿ ಉದ್ಯೋಗವೂ ಇಲ್ಲ – ಎಚ್ಎಎಲ್ ಹೆಲಿಕಾಪ್ಟರ್ ಹಾರಲೇ ಇಲ್ಲ
ನಾನುಗೌರಿ.ಕಾಂ ಜೊತೆ ಪರಿಸ್ಥಿತಿಯನ್ನು ಹಂಚಿಕೊಂಡ ಕಾರ್ಮಿಕರು, ಫುಡ್ ಪಾರ್ಕ್ ಆಡಳಿತ ಮಂಡಳಿ ರಾಜಿನಾಮೆ ನೀಡುವಂತೆ ಒತ್ತಡ ಹೇರುತ್ತಿದೆ. ಕಿರುಕುಳ ನೀಡುತ್ತಿದೆ. ಈಗಾಗಲೇ ಕೆಲವರು ರಾಜಿನಾಮೆ ನೀಡಿದ್ದಾರೆ. ನಮಗೆಲ್ಲ 2 ವರ್ಷದ ಹಿಂದ ಖಾಯಂ ಆಗಿತ್ತು. ಸ್ಥಳೀಯರು ಮತ್ತು ಹೊರಗಿನಿಂದ ಬಂದಿರುವ ಕಾರ್ಮಿಕರಿಂದ ರಾಜಿನಾಮೆ ಪಡೆದುಕೊಳ್ಳಲಾಗುತ್ತಿದೆ. ಕೆಲಸಕ್ಕೆ ಬರಬೇಡಿ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಫುಡ್‌ಪಾರ್ಕ್‌ನಲ್ಲಿ ಮೇಂಟೇನೆನ್ಸ್ ಮತ್ತು ಪ್ರೊಡಕ್ಷನ್ ಎಂಬ ಎರಡು ವಿಭಾಗಗಳಿವೆ. ಇವೆರಡಿರಿಂದ ಸೇರಿ ನೂರು ಮಂದಿ ಖಾಯಂ ಕಾರ್ಮಿಕರಿದ್ದಾರೆ. ಇವರಲ್ಲಿ ಸುಮಾರು 60ರಷ್ಟು ಮಂದಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗುತ್ತದೆ. ಏಕಾಏಕಿ ಕೆಲಸಕ್ಕೆ ಬರಬೇಡಿ ಎಂದರೆ ನಾವು ಏನು ಮಾಡಬೇಕು. ನಮ್ಮ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಮೂರು ತಿಂಗಳಿಂದಲೂ ವೇತನ ನೀಡಿಲ್ಲ. ಸೆಟ್ಲಮೆಂಟ್ ಮಾಡಿ ಅಂದ್ರೆ ನೋಡೋಣ ಎನ್ನುತ್ತಿದ್ದಾರೆ. ಹೀಗಾಗಿ ಕಷ್ಟವಾಗಿದೆ ಎಂದು ಕಾರ್ಮಿಕರು ನೋವು ತೋಡಿಕೊಂಡರು.
ಆಡಳಿತ ಮಂಡಲಳಿಯ ಕ್ರಮದಿಂದ ಖಾಯಂ ಕಾರ್ಮಿಕರು ಕಂಗಾಲಾಗಿದ್ದಾರೆ. ಭವಿಷ್ಯ ಕತ್ತಲಿಗೆ ಬೀಳಲಿದೆ ಎಂಬ ಚಿಂತೆ ಅವರನ್ನು ಕಾಡತೊಡಗಿದೆ. ನೀವು ಬೇರೆ ಕೆಲಸ ನೋಡಿಕೊಳ್ಳಿ ಎಂದು ಬಾಯಿಮಾತಿನ ಸಂದೇಶ ರವಾನಿಸಿರುವುದು ಅವರಿಗೆ ದಿಕ್ಕು ತೋಚದಂತೆ ಮಾಡಿದೆ. ಮುಂದಿನ 15-20 ದಿನಗಳಲ್ಲಿ ಮತ್ತಷ್ಟು ಕಾರ್ಮಿಕರ ರಾಜಿನಾಮೆ ಪಡೆದುಕೊಳ್ಳುವುದು ಖಚಿತ ಎಂಬ ಆತಂಕ ಖಾಯಂ ಕಾರ್ಮಿಕರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಖಾಯಂ ಕಾರ್ಮಿಕರಿಂದಲೇ ರಾಜಿನಾಮೆ ಪಡೆದುಕೊಳ್ಳುತ್ತಿದ್ದಾರೆ ಎಂದರೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾಡು ಮತ್ತಷ್ಟು ಹೇಳತೀರದು. ಹಲವು ಸಮಸ್ಯೆಗಳಿಂದಲೇ ಗಮನ ಸೆಳೆದಿರುವ ಫುಡ್ ಪಾರ್ಕ್ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದಿದೆ. ಖಾಯಂ ಮತ್ತು ಗುತ್ತಿಗೆ ಕಾರ್ಮಿಕರು ಈಗ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.
ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪನೆಯಾದ ಫುಡ್‌ಪಾರ್ಕ್ ಮುಚ್ಚುವಂತಹ ಸ್ಥಿತಿಗೆ ಬಂದಿದೆ. ಯಾವುದೇ ಕಂಪನಿಗಳು ಲಾಕ್‌ಡೌನ್ ಕಾರಣಕ್ಕಾಗಿ ನೌಕರರು ಮತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು ಎಂದು ಕೇಂದ್ರ ಸರ್ಕಾರವೇ ಆದೇಶ ಹೊರಡಿಸಿದೆ. ಮೋದಿಯವರು ಮನವಿ ಮಾಡಿದ್ದಾರೆ. ಆದರೆ ಮೋದಿಯವರೇ ಉದ್ಘಾಟಿಸಿದ, ಕೇಂದ್ರ ಸರ್ಕಾರದ ಸಹಭಾಗಿತ್ವ ಇರುವ ಫುಡ್ ಪಾರ್ಕ್ ನಲ್ಲೇ ಆ ಆದೇಶ ಉಲ್ಲಂಘನೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಇದನ್ನೂ ಓದಿ: ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಮೋದಿ ಕನಸಿನ ‘ಏಷ್ಯಾದ ಅತಿದೊಡ್ಡ ಫುಡ್ ಪಾರ್ಕ್’


