ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಸ್ವಕ್ಷೇತ್ರ ತುಮಕೂರಿನ ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಲಿತ ಬಾಲಕನಿಂದ ಶೌಚಗುಂಡಿ ಸ್ವಚ್ಚಗೊಳಿಸಿದ ಅಮಾನವೀಯ ಘಟನೆ ನಡೆದಿದೆ.
ಮಲ ಹೊರುವ ಪದ್ದತಿ ನಿಷೇಧ ಮಾಡಿದ್ದರೂ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬರಿಗೈಯಲ್ಲಿ ಬಾಲಕನಿಂದ ಮಲ ತೆಗೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೊರಟಗೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಗುಂಡಿಯಿಂದ ತುಂಬಿ ಹರಿಯುತ್ತಿದ್ದ ಮಲವನ್ನು ದಲಿತರಿಂದ ಸ್ವಚ್ಛಗೊಳಿಸಿದ್ದಾರೆ. ದಲಿತ ಸಮುದಾಯದ 10 ವರ್ಷದ ಬಾಲಕ ಹಾಗೂ ಓರ್ವ ವ್ಯಕ್ತಿ ಮಲವನ್ನು ಸ್ವಚ್ಛಗೊಳಿಸಿದ ದೃಶ್ಯ ಕಂಡು ಬಂದಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಾಲಕ, “ಶೌಚಾಲಯ ನಿರ್ವಹಣೆ ಮಾಡುತ್ತಿರುವ ಕುಮಾರಣ್ಣ ಎಂಬವರು ನಮಗೆ ಕೆಲಸ ಮಾಡುವಂತೆ ಹೇಳಿದ್ದಾರೆ. ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದು, ತನಗೆ 10 ವರ್ಷ ಎಂದು ಹೇಳಿಕೊಂಡಿದ್ದಾಗಿ” ವರದಿ ವಿವರಿಸಿದೆ.
ಮಾಧ್ಯಮದವರ ಜೊತೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಗದರಿಸಿದ್ದಾರೆ. ಕೂಡಲೇ ಬಾಲಕ ಸೇರಿದಂತೆ ಇಬ್ಬರೂ ಕೆಲಸ ಬಿಟ್ಟು ಅಲ್ಲಿಂದ ಶೌಚಾಲಯದ ಕಡೆ ತೆರಳುವ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ರೈತನ ಆತ್ಮಹತ್ಯೆಗೆ ವಕ್ಫ್ ಕಥೆ ಕಟ್ಟಿದ ಮಾಧ್ಯಮಗಳು : ಸುಳ್ಳು ಸುದ್ದಿ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ


