ತುಮಕೂರು ಜಿಲ್ಲಾಸ್ಪತ್ರೆಯ ಕೋವಿಡ್-19 ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದಿರುವುದಕ್ಕೆ ಕೊರೊನ ಸೋಂಕಿತರೇ ಬಿಡುಗಡೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ.
ವಾರ್ಡ್ ನಲ್ಲಿ ಸುಮಾರು 16 ಹಾಸಿಗೆಗಳಿರುವ ಅಂದಾಜಿದ್ದು ಅವರೆಲ್ಲರೂ ಬಹುತೇಕ ಯುವಕರೇ ಆಗಿದ್ದಾರೆ. ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಕುಡಿಯಲು ಬಿಸಿನೀರು ಕೊಡುತ್ತಿಲ್ಲ. ಕಸವನ್ನೂ ಹೊಡೆಯುತ್ತಿಲ್ಲ. ಯಾವುದೇ ಮಾತ್ರಗಳನ್ನೂ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಮೂರ್ನಾಲ್ಕು ದಿನಗಳಿಂದಲೂ ಸ್ನಾವನ್ನೇ ಮಾಡಿಲ್ಲ. ನಮಗೆ ಕೊರೋನ ಸೋಂಕಿನ ಲಕ್ಷಣಗಳೇ ಇಲ್ಲ. ನಮಗೆ ಕೋವಿಡ್-19 ಜಿಲ್ಲಾಸ್ಪತ್ರೆಗೆ ಕರೆತರುವಾಗ ಕಾಡಿನ ಪ್ರಾಣಿಗಳನ್ನು ಕರೆತಂದಂತೆ ತಂದರು.
ಗ್ರಾಮಗಳಲ್ಲಿ ಸೀಲ್ ಡೌನ್ ಮಾಡಿದರು. ಸ್ಯಾನಿಟೈಜ್ ಮಾಡಿದರು. ಆದರೆ ಈ ಆಸ್ಪತ್ರೆಯಲ್ಲಿ ನಮ್ಮನ್ನು ಪ್ರಾಣಿ ಗಳಿಗಿಂತಲೂ ಕಡೆಯಾಗಿ ನೋಡಿಕೊಳ್ಳುತ್ತಾರೆ. ಬಹಿರ್ದೆಸೆಗೆ ಹೋಗಲು ನೀರಿನ ಸಮಸ್ಯೆ ಇದೆ. ನಮ್ಮನ್ನು ಕುರಿಗಳಂತೆ ಕೂಡಿ ಹಾಕಿದ್ದಾರೆ ಎಂದು ನೋವು ತೋಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಅವರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಕಾರಣಕ್ಕೆ ಸಂಸದ ಬಸವರಾಜು ವರ್ಗಾವಣೆಯನ್ನು ರದ್ದುಪಡಿಸಿಕೊಂಡು ಬಂದರು. ಆದರೆ ಅದೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ನಗರಪಾಲಿಕೆಯ ಆಯುಕ್ತ ಭೂಬಾಲನ್ ವರ್ಗಾವಣೆಯಾದಾಗ ಬಾಯಿಬಿಡಲಿಲ್ಲ ಸಂಸದರು ಜಾತಿ ಕಾರಣಕ್ಕೆ ಶಸ್ತ್ರಚಿಕಿತ್ಸಕರನ್ನು ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲಾಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಆದರೆ ಶುಚಿತ್ವ ಕಾಪಾಡಿಕೊಂಡಿಲ್ಲ. ಉಸ್ತುವಾರಿ ನೋಡಿಕೊಳ್ಳಬೇಕಾದ ಜಿಲ್ಲಾ ಶಸ್ತ್ರಚಿಕಿತ್ಸಕರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ.
ಓದಿ: ಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ


