“ಜೋಯಿಸ್ನಾ ಮೇರಿ ಜೋಸೆಫ್ ಅವರು ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ” ಎಂದು ಕೇರಳ ಹೈಕೋರ್ಟ್ ಹೇಳಿದೆ. ಜೋಯಿಸ್ನಾ ತಂದೆ ಜೋಸೆಫ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಮಹತ್ವದ ಸೂಚನೆಗಳನ್ನು ನೀಡಿದೆ.
ಕೇರಳದ ಕ್ರಿಶ್ಚಿಯನ್ ಮಹಿಳೆ ಜೋಯಿಸ್ನಾ ಅವರು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ನಾಯಕ ಶೆಜಿನ್ ಅವರನ್ನು ಹೂಮಾಲೆ ವಿನಿಮಯ ಮಾಡಿಕೊಳ್ಳುವ ಮೂಲಕ ವಿವಾಹವಾದರು. ಇದನ್ನು ವಿರೋಧಿಸಿದ ಜೋಯಿಸ್ನಾ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದರು. (ಹೇಬಿಯಸ್ ಕಾರ್ಪಸ್ ಎನ್ನುವುದು ನ್ಯಾಯಾಲಯದ ಮುಂದೆ ನಿರ್ದಿಷ್ಟ ವ್ಯಕ್ತಿಯ ಹಾಜರಾತಿಗೆ ಸೂಚನೆ ನೀಡುವ ಅರ್ಜಿಯಾಗಿದೆ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಗಳವಾರ, ಏಪ್ರಿಲ್ 19 ರಂದು ಜೋಯಿಸ್ನಾ ಅವರ ಪ್ರತಿಕ್ರಿಯೆಯನ್ನು ಆಲಿಸಿದ ಕೇರಳ ಹೈಕೋರ್ಟ್, ಜೋಯಿಸ್ನಾ ಮತ್ತು ಶೆಜಿನ್ ಒಟ್ಟಿಗೆ ಇರಲು ಅನುಮತಿ ನೀಡಿತು. ಶನಿವಾರ ನ್ಯಾಯಾಲಯದಿಂದ ಸಮನ್ಸ್ ಪಡೆದ ಜೋಯಿಸ್ನಾ ಅವರು ನ್ಯಾಯಮೂರ್ತಿಗಳಾದ ವಿಜಿ ಅರುಣ್, ಸಿಎಸ್ ಸುಧಾ ಅವರ ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದರು. ಪೀಠವು ನೇರವಾಗಿ ಜೋಯಿಸ್ನಾ ಅವರೊಂದಿಗೆ ಮಾತನಾಡಿತು. ತನ್ನ ಸ್ವಂತ ಇಚ್ಛೆಯಿಂದಲೇ ಮದುವೆಯಾಗಿದ್ದೇನೆ. ತನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ನ್ಯಾಯಾಲಯಕ್ಕೆ ಜೋಯಿಸ್ನಾ ಸ್ಪಷ್ಟಪಡಿಸಿದರು.
“ಆಕೆಯನ್ನು ಅಪಹರಿಸಲಾಗಿದೆ. ಶೆಜಿನ್ ಮತ್ತು ಜೋಯಿಸ್ನಾ ದೇಶವನ್ನು ತೊರೆಯುವ ಸಾಧ್ಯತೆಯಿದೆ” ಎಂದು ಜೋಯಿಸ್ನಾ ತಂದೆ ಜೋಸೆಫ್ ನ್ಯಾಯಾಲಯಕ್ಕೆ ತಿಳಿಸಿದ್ದರು.
“ಅವರು ವಿದೇಶಕ್ಕೆ ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಆಕೆಗೆ ಬಿಟ್ಟದ್ದು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಬ್ಬರು ವ್ಯಕ್ತಿಗಳು ಮದುವೆಯಾಗಲು ನಿರ್ಧರಿಸಿದಾಗ ಅದರ ಮಧ್ಯಸ್ಥಿಕೆ ವಹಿಸಲು ನ್ಯಾಯಾಲಯಕ್ಕೆ ಮಿತಿಗಳಿವೆ. ಜೋಯಿಸ್ನಾರನ್ನು ಬಲವಂತಪಡಿಸಲಾಗಿದೆ ಎಂದು ಹೇಳಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.
“ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾದ ದಂಪತಿಗಳು ಮುಂದೆ ಏನು ಮಾಡಬೇಕೆಂದು ನಿರ್ಧರಿಸಲಿ. ಜೋಯಿಸ್ನಾ ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಮಹಿಳೆ. ಆಕೆಗೆ 26 ವರ್ಷ ವಯಸ್ಸು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದರೆ, ನ್ಯಾಯಾಲಯವು ಅದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿರಿ: ಕೊಡಗು: ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಶಿಕ್ಷಕ ಅಮಾನತು
ಶೆಜಿನ್ ಮತ್ತು ಜೋಯಿಸ್ನಾ ಏಪ್ರಿಲ್ 12ರಂದು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಮದುವೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದರು. ಜೋಯಿಸ್ನಾರನ್ನು ಆಕೆಯ ತಾಯಿಯ ಮನೆಗೆ ಕರೆತರುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಆಕೆಯ ತಂದೆ ಜೋಸೆಫ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ರಾಜ್ಯದಲ್ಲಿ ‘ಲವ್ ಜಿಹಾದ್’ ನಡೆಯುತ್ತಿದೆ ಎಂದು ಹೇಳಿದ ಸಿಪಿಐ(ಎಂ) ನಾಯಕರೊಬ್ಬರು ಜೋಯಿಸ್ನಾ ವಿವಾಹವನ್ನು ಉಲ್ಲೇಖಿಸಿದ ನಂತರ ಪ್ರಕರಣವು ಮಾಧ್ಯಮಗಳ ಗಮನ ಸೆಳೆಯಿತು.
‘ಲವ್-ಜಿಹಾದ್’ ಎಂಬುದು ಬಲಪಂಥೀಯರು ಹರಡಿರುವ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಯುವಕರು ಉದ್ದೇಶಪೂರ್ವಕವಾಗಿ ಹಿಂದೂ ಯುವತಿಯರನ್ನು ವಿವಾಹವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಾರೆಂದು ಹಬ್ಬಿಸಲಾಗಿದೆ. ಜೋಯಿಸ್ನಾ ವಿಚಾರದಲ್ಲಿಯೂ ಹೀಗೆಯೇ ಆಗಿದ್ದು, ಆದರೆ ಜೋಯಿಸ್ನಾ ತನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗಿರುವುದು ಸ್ಪಷ್ಟವಾಗಿದೆ.
ಜೋಯಿಸ್ನಾ ಅವರೊಂದಿಗೆ ಓಡಿಹೋಗುವ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ನಡುವಿನ “ಕೋಮು ಸೌಹಾರ್ದತೆಯನ್ನು ಕದಡುವ” ಶೆಜಿನ್ ವಿರುದ್ಧ ಪಕ್ಷವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಪಿಐ (ಎಂ) ಕೋಯಿಕೋಡ್ ಜಿಲ್ಲಾ ಕಾರ್ಯದರ್ಶಿ ಜಾರ್ಜ್ ಎಂ ಥಾಮಸ್ ಹೇಳಿದಾಗ ವಿಷಯ ವಿವಾದದ ಸ್ವರೂಪ ಪಡೆಯಿತು.
“ಇಬ್ಬರು ಪ್ರೀತಿಸುತ್ತಿದ್ದರೆ, ಶೆಜಿನ್ ಪಕ್ಷಕ್ಕೆ ತಿಳಿಸಬೇಕಾಗಿತ್ತು, ಆದರೆ ಆತ ಹಾಗೆ ಮಾಡದೆ ಜೋಯಿಸ್ನಾ ಜೊತೆ ಓಡಿಹೋದನು. ಇದು ಕೋಮು ಸೌಹಾರ್ದತೆಗೆ ಭಂಗ ತರಬಹುದು” ಎಂದಿದ್ದ ಜಾರ್ಜ್, “ಲವ್ ಜಿಹಾದ್ ನಡೆಯುತ್ತಿದೆ” ಎಂದೂ ಪ್ರತಿಪಾದಿಸಿದ್ದರು. ನಂತರ ಮೀಡಿಯಾ ಒನ್ ಜೊತೆ ಮಾತನಾಡಿದ ಅವರು, “ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದು ದೂರಿದ್ದರು.
ವರದಿ ಕೃಪೆ: ನ್ಯೂಸ್ ಮಿನಿಟ್


