ಪ್ರಾಧ್ಯಾಪಕ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಆನಂದ್ ತೇಲ್ತುಂಬ್ಡೆ ಅವರ ಬಂಧನವನ್ನು ವಿರೋಧಿಸಿ “ಕರ್ನಾಟಕ ಜನಶಕ್ತಿ” ಸಂಘಟನೆಯು ಇಂದು ಮಧ್ಯಾಹ್ನ 3 ಗಂಟೆಯಿಂದ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿತ್ತು. 2018 ರಲ್ಲಿ ಭೀಮಾಕೊರೆಗಾವ್‌ನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ, 200 ವರ್ಷಗಳ ಹಿಂದೆ ಪೇಶ್ವಾಗಳ ವಿರುದ್ದದ ಯುದ್ದದಲ್ಲಿ ಜಯಗಳಿಸಿದ ಮಹರ್ ಜನಾಂಗದ 200ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಆನಂದ್ ತೆಲ್ತುಂಬ್ಡೆಯವರ ಮೇಲೆಯೂ ಸಹ ಪ್ರಕರಣ ದಾಖಲಾಗಿದ್ದು, ಇದು ಪ್ರಭುತ್ವ ಪ್ರಾಯೋಜಿತ ಪಿತೂರಿ ಎಂದು ಆನಂದ್ ತೆಲ್ತುಂಬ್ಡೆಯವರು ಆರೋಪಿಸಿದ್ದಾರೆ.
“ತೇಲ್ತುಂಬ್ಡೆ ಅವರೊಂದಿಗೆ ನಾವಿದ್ದೇವೆ, ಅವರ ಬಂಧನವೂ ಸಂವಿಧಾನ ತತ್ವಗಳ ಮೇಲಿನ ದಾಳಿಯಾಗಿದೆ. ಅವರ ಬಂಧನವೂ ಸರ್ಕಾರದ ಸರ್ವಾಧಿಕಾರವನ್ನು ತೋರಿಸುತ್ತದೆ” ಎಂದು ಕರ್ನಾಟಕ ಜನಶಕ್ತಿ ಹೇಳಿದೆ.
ಅವರ ಬಂಧನವನ್ನು ವಿರೋಧಿಸಿ ಟ್ವಿಟ್ಟರಿನಲ್ಲಿ ಇಂದು ಸಂಜೆಗೆ #DoNotArrestAnand ಎಂಬ ಹ್ಯಾಶ್‌ಟ್ಯಾಗಲ್ಲಿ ಕರ್ನಾಟಕ ಜನಶಕ್ತಿ ಟ್ವಿಟ್ಟರ್ ಅಭಿಯಾನ ನಡೆಸಲಿದೆ.
ಹಿರಿಯ ಪ್ರಾದ್ಯಾಪಕರಾಗಿರುವ ಆನಂದ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಜಾತಿ-ವರ್ಗ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂದಿಸಿದಂತೆ ಅತ್ಯಂತ ಮಹತ್ವದ ಚಿಂತಕರಾದ ಆನಂದ ತೇಲ್ತುಂಬ್ಡೆ ಅವರು ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಹಕ್ಕುಗಳ ಪರವಾದ ಹೋರಾಟಗಾರರಾಗಿದ್ದಾರೆ.


