ಬಿಜೆಪಿ ಸಂಸದ ಖಗೇನ್ ಮುರ್ಮು ಮತ್ತು ಶಾಸಕ ಶಂಕರ್ ಘೋಷ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ನಾಗರಕಟದಲ್ಲಿ ಸೋಮವಾರ ನಡೆದಿದೆ. ಹಲ್ಲೆ ನಂತರ ಉದ್ವಿಗ್ನತೆ ಉಂಟಾಗಿದ್ದು, ಇಬ್ಬರೂ ನಾಯಕರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಘಟನೆಯ ವೀಡಿಯೊಗಳಲ್ಲಿ ಬಿಜೆಪಿ ನಾಯಕರ ಕಾರಿನ ಗಾಜು ಒಡೆದು ಹೋಗಿದ್ದು, ಸಂಸದ ಖಗೇನ್ ಮುರ್ಮು ಮೂಗಿನಿಂದ ರಕ್ತ ಹರಿಯುತ್ತಿರುವುದನ್ನು ಕಾಣಬಹುದು. ಶಾಸಕ ಶಂಕರ್ ಘೋಷ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಬಟ್ಟೆಗಳು ಹರಿದು ಹೋಗಿವೆ.
ಈ ದಾಳಿ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು, ಬಿಜೆಪಿ ನಾಯಕರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರಿಹಾರ ಕಾರ್ಯಕ್ಕೆ ಅಡ್ಡಿಪಡಿಸಲು ಹಿಂಸಾಚಾರವನ್ನು ಸಂಘಟಿಸುತ್ತಿದೆ ಎಂದು ಆರೋಪಿಸಿದರು.
ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು, ಉತ್ತರ ಬಂಗಾಳದಲ್ಲಿ ಪ್ರವಾಹ ಮತ್ತು ಭೂಕುಸಿತದ ನಬಳಿಕ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಕೋಪಗೊಂಡಿದ್ದು, ಮಮತಾ ಬ್ಯಾನರ್ಜಿ ಭಯಭೀತರಾಗಿದ್ದಾರೆ ಎಂದು ಹೇಳಿದರು.
“ಉತ್ತರ ಬಂಗಾಳ ಪ್ರವಾಹದಲ್ಲಿ ತತ್ತರಿಸುತ್ತಿರುವಾಗ, ಪಶ್ಚಿಮ ಬಂಗಾಳದ ಜನರು ಸೆಲೆಬ್ರಿಟಿಗಳೊಂದಿಗೆ ಕಾರ್ನೀವಲ್‌ನಲ್ಲಿ ನೃತ್ಯ ಮಾಡಿದ ಅಮಾನವೀಯ ಕೃತ್ಯವನ್ನು ಮಮತಾ ಬ್ಯಾನರ್ಜಿ ಸಾಕಷ್ಟು ತಡವಾಗಿ ಅರಿತುಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಶಾಸಕರು ಮತ್ತು ಸಂಸದರು ಸಂತ್ರಸ್ತ ಜನರಿಗೆ ಸಹಾಯ ಮಾಡಲು ಸ್ಥಳದಲ್ಲಿದ್ದರು. ಆದ್ದರಿಂದ, ಅವರು ಈಗ ಪ್ಯಾನಿಕ್ ಬಟನ್ ಒತ್ತಿ ‘ವಿಶೇಷ ಸಮುದಾಯ’ಕ್ಕೆ ಸೇರಿದ ತಮ್ಮ ಗೂಂಡಾಗಳನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸಂಸದರು ಮತ್ತು ಶಾಸಕರು ಪರಿಹಾರ ಕಾರ್ಯಗಳಲ್ಲಿ ತೊಡಗುವುದನ್ನು ತಡೆಯಲು ಅವರ ಮೇಲೆ ದಾಳಿ ಮಾಡಲು ಅವರನ್ನು ಪ್ರಚೋದಿಸಿದ್ದಾರೆ” ಎಂದು ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಇನ್ನೂ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಪಶ್ಚಿಮ ಬಂಗಾಳದ ಕೆಲವೆಡೆ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್ಪೈಗುರಿ, ಅಲಿಪುರ್ದೂರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಡಾರ್ಜಿಲಿಂಗ್‌ನ ಡೂರ್ಸ್‌ನ ನಾಗರಕಟ, ಮಿರಿಕ್‌ನಲ್ಲಿ ಭೂಕುಸಿತದಿಂದ ಮನೆಗಳು ಕೊಚ್ಚಿಹೋಗಿವೆ. ಈ ವಿನಾಶವು ಇಲ್ಲಿಯವರೆಗೆ 24 ಜನರನ್ನು ಬಲಿ ತೆಗೆದುಕೊಂಡಿದೆ.
ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನ! ‘ಸನಾತನ ಧರ್ಮದ ಅವಮಾನ ಸಹಿಸುವುದಿಲ್ಲ’ ಎಂದು ಕಿರುಚಾಡಿದ ವಕೀಲ


