ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಜನವರಿ 5ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬುಧವಾರಕ್ಕೆ (ಏ.15) ನಿಗದಿಯಾಗಿದೆ ಎಂದು livelaw.in ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಉಮರ್ ಖಾಲಿದ್ ಮತ್ತು ಮತ್ತೊಬ್ಬ ಸಹ-ಆರೋಪಿ ಶಾರ್ಜೀಲ್ ಇಮಾಮ್ ಅವರ ವಿರುದ್ಧದ ಪುರಾವೆಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967ರ ಅಡಿಯಲ್ಲಿ ಮೇಲ್ನೋಟಕ್ಕೆ ಅವರ ವಿರುದ್ಧ ಪ್ರಕರಣವನ್ನು ದೃಢಪಡಿಸುತ್ತವೆ ಎಂದು ಹೇಳಿ ಜಾಮೀನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಾಸಿಕ್ಯೂಷನ್ ಸಲ್ಲಿಸಿದ ದಾಖಲೆಗಳು ಮೇಲ್ನೋಟಕ್ಕೆ ಅವರು “ಕೇವಲ ಬಿಡಿಬಿಡಿಯಾದ ಅಥವಾ ಸ್ಥಳೀಯ ಘಟನೆಗಳಿಗಿಂತ ಹೆಚ್ಚಾಗಿ, ಯೋಜನೆಯ ಹಂತದಿಂದ ಹಿಡಿದು ಸಜ್ಜುಗೊಳಿಸುವಿಕೆ ಮತ್ತು ಕಾರ್ಯತಂತ್ರ ರೂಪಿಸುವವರೆಗೆ ಕೇಂದ್ರಬಿಂದುವಾಗಿ ಪ್ರಮುಖ ಪಾತ್ರ” ವಹಿಸಿರುವುದನ್ನು ಸೂಚಿಸುತ್ತವೆ ಎಂದು ಪೀಠವು ಹೇಳಿತ್ತು.
ಅದೇ ಸಮಯದಲ್ಲಿ, ನ್ಯಾಯಾಲಯವು ಇದೇ ಪ್ರಕರಣದ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ನ್ಯಾಯಾಲಯವು ಖಾಲಿದ್ ಮತ್ತು ಇಮಾಮ್ ಅವರ ಮೇಲೆ ನಿರ್ಬಂಧವನ್ನೂ ವಿಧಿಸಿದ್ದು, ಸಂರಕ್ಷಿತ ಸಾಕ್ಷಿಗಳ ವಿಚಾರಣೆಯ ನಂತರ ಅಥವಾ ಜನವರಿ 5ರಿಂದ ಒಂದು ವರ್ಷದ ನಂತರವಷ್ಟೇ ಅವರು ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದಿತ್ತು.
ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಉಮರ್ ಖಾಲಿದ್ ಪರವಾಗಿ ಮರು ಪರಿಶೀಲನಾ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದರು. ಈ ಪ್ರಕರಣವು ಈಗಾಗಲೇ ಬುಧವಾರದಂದು ವಿಚಾರಣೆಗೆ ಪಟ್ಟಿ ಮಾಡಲ್ಪಟ್ಟಿದೆ ಎಂದು ತಿಳಿಸಿದ ಅವರು, ಇದನ್ನು “ಮುಕ್ತ ನ್ಯಾಯಾಲಯದಲ್ಲಿ” ವಿಚಾರಣೆ ನಡೆಸಬೇಕೆಂದು ವಿನಂತಿಸಿದರು. ಸಾಮಾನ್ಯವಾಗಿ ಇಂತಹ ಅರ್ಜಿಗಳನ್ನು ನ್ಯಾಯಾಧೀಶರು ತಮ್ಮ ಚೇಂಬರ್‌ಗಳಲ್ಲಿ ಪರಿಶೀಲಿಸುತ್ತಾರೆ, ಆದರೆ ಈ ಪ್ರಕರಣದ ಮಹತ್ವದ ಹಿನ್ನೆಲೆಯಲ್ಲಿ ಮುಕ್ತವಾಗಿ ವಾದಗಳನ್ನು ಆಲಿಸಬೇಕು ಎಂಬುದು ಖಾಲಿದ್ ಅವರ ಪರ ವಕೀಲರ ಆಗ್ರಹವಾಗಿದೆ ಎಂದು livelaw.in ವರದಿ ವಿವರಿಸಿದೆ.


