ಲಾಕ್‌ಡೌನ್ ವಿಸ್ತರಣೆಯಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪತ್ರ ಬರೆದಿಟ್ಟು, ಪೂರ್ವ ಉತ್ತರ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಭಾನು ಪ್ರಕಾಶ್ ಗುಪ್ತಾ ಎಂಬುವವರ ಮೃತದೇಹವು ಲಖಿಂಪುರ ಖೇರಿ ಜಿಲ್ಲೆಯ ರೈಲು ಹಳಿಗಳಲ್ಲಿ ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಆತ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರ ಸಹ ಪತ್ತೆಯಾಗಿದೆ. ಭಾನು ಪ್ರಕಾಶ್ ಗುಪ್ತಾ ಈ ಮೊದಲು ಹತ್ತಿರದ ಶಹಜಹಾನ್ಪುರ ಜಿಲ್ಲೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಹೆಂಡತಿ, ನಾಲ್ಕು ಮಕ್ಕಳು ಮತ್ತು ಅನಾರೋಗ್ಯಪೀಡಿತ ತಾಯಿ ಇದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 24ರ ಲಾಕ್‌ಡೌನ್ ಹೇರಲ್ಪಟ್ಟಿದ್ದರಿಂದ ಈ ವ್ಯಕ್ತಿ ನಿರುದ್ಯೋಗಿಯಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಆತನ ಬಳಿಯಿದ್ದ ನಗದು ಖಾಲಿಯಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು ಎಂದು ವರದಿಯಾಗಿದೆ.
ಆತ ಬರೆದ ಆತ್ಮಹತ್ಯೆ ಪತ್ರದಲ್ಲಿ, ತನ್ನ ಮನೆಗೆ ಗೋಧಿ ಮತ್ತು ಅಕ್ಕಿ ಕೊಟ್ಟಿದ್ದಕ್ಕೆ ಸರ್ಕಾರಿ ಪಡಿತರ ಅಂಗಡಿಗೆ ಧನ್ಯವಾದಗಳು. ಆದರೆ ಅದು ಸಾಕಾಗುವುದಿಲ್ಲ, ಸಕ್ಕರೆ, ಉಪ್ಪು ಮತ್ತು ಹಾಲಿನಂತಹ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ತನ್ನ ಬಳಿ ಹಣವಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ತನ್ನ ವಯಸ್ಸಾದ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಣವಿಲ್ಲದೆ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಮತ್ತು ಜಿಲ್ಲಾಡಳಿತವು ಅವರಿಗೆ ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ.
ಆತಮ ಆತ್ಮಹತ್ಯೆಯ ವಿಷಯ ತಿಳಿದ ನಂತರ ಕುಟುಂಬಕ್ಕೆ ನೆರವು ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಭರವಸೆ ನೀಡಿದೆ.
“ನಾವು ಪ್ರಾಥಮಿಕ ವಿಚಾರಣೆ ನಡೆಸಿದ್ದೇವೆ. ಅವನಿಗೆ ಪಡಿತರ ಚೀಟಿ ಇದೆ ಮತ್ತು ಅವನ ಕೋಟಾದ ಪ್ರಕಾರ ಈ ತಿಂಗಳು ಧಾನ್ಯವನ್ನು ವಿತರಿಸಲಾಗಿದೆ. ಹಾಗಾಗಿ ಅವನಿಗೆ ಧಾನ್ಯದ ಕೊರತೆಯಿಲ್ಲ. ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳನ್ನು ನಾವು ತನಿಖೆ ಮಾಡುತ್ತೇವೆ” ಎಂದು ಲಖಿಂಪುರ ಖೇರಿಯ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಯೇ ಸರ್ಕಾರವು ಇಂದು ತಮ್ಮ ಎರಡನೇ ಅವಧಿಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶದ ಆಡಳಿತ ಪಕ್ಷ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
“ದುರದೃಷ್ಟಕರ ಘಟನೆಯೊಂದರಲ್ಲಿ ಯುಪಿಯ ಭಾನು ಗುಪ್ತಾ ರೈಲಿನ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕೆಲಸ ಹೋಯಿತು. ಅವರು ತಮ್ಮ ತಾಯಿಗೆ ಚಿಕಿತ್ಸೆ ನೀಡಬೇಕಾಗಿತ್ತು. ಅವರಿಗೆ ಸರ್ಕಾರದಿಂದ ಕೇವಲ ಪಡಿತರ ದೊರಕಿತು. ಆದರೆ ಜೀವನ ನಿರ್ವಹಣೆಗೆ ಬೇಕಾದ ಉಳಿದ ವಸ್ತುಗಳು ಸಿಗಲಿಲ್ಲ. ಆದರೆ ಇದರ ಗೊಡವೆ ಇಲ್ಲದೇ ಒಂದು ವರ್ಷ ಆಚರಿಸುತ್ತಿರುವ ನಿಮಗೆ ಈ ಪತ್ರವು ತಲುಪದಿರಬಹುದು. ದಯವಿಟ್ಟು ಇದನ್ನು ಓದಿ” ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕರಿದ್ದ ಮನೆಯ ಮೇಲ್ಛಾವಣಿ ಕುಸಿತ : ಗಂಟೆಗಟ್ಟಲೇ ಮಳೆಯಲ್ಲಿ ನೆನೆದ ಕಾರ್ಮಿಕರು..


