ಇಂದು ರಾಜ್ಯಸಭೆಯಲ್ಲಿ ಮಾತನಾಡಲು ‘ಜಯಾ ಬಚ್ಚನ್’ ಅವರನ್ನು ಆಹ್ವಾನಿಸುವ ವೇಳೆ ಸಭಾಪತಿ ಜಗದೀಪ್ ಧನಕರ್ ‘ಜಯಾ ಅಮಿತಾಬ್ ಬಚ್ಚನ್’ ಎಂದು ಕರೆದಿದ್ದಕ್ಕೆ ಜಯಾ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದರು.
ಸಭಾಪತಿಗಳ ಹೆಸರು ಸಂಭೋದನೆಗೆ ತೀವ್ರ ಸಿಡಿಮಿಡಿಗೊಂಡ ಜಯಾ ಬಚ್ಚನ್, “ನನ್ನ ಜೊತೆ ನೀವು ಮಾತನಾಡುವ ಟೋನ್ ಸರಿಯಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.
“ನಾನೊಬ್ಬಳು ಕಲಾವಿದೆ. ದೇಹ ಭಾಷೆ ಮತ್ತು ಅಭಿವ್ಯಕ್ತಿ ನನಗೆ ಅರ್ಥವಾಗುತ್ತದೆ. ನೀವು ಮಾತನಾಡುವ ಟೋನ್ ಸರಿಯಿಲ್ಲ. ನಾವು ಸಹೊದ್ಯೋಗಿಗಳು. ಆದರೆ, ನಿಮ್ಮ ಟೋನ್ ಒಪ್ಪುವಂತದಲ್ಲ” ಎಂದು ಜಯಾ ಬಚ್ಚನ್ ಕಿಡಿಕಾರಿದರು. ಸಭಾಪತಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಜಗದೀಪ್ ಧನಕರ್, “ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ, ಸದನದ ಗೌರವವನ್ನು ಅರ್ಥೈಸಿಕೊಳ್ಳಬೇಕು” ಎಂದರು. ಜಯಾ ಬಚ್ಚನ್ ಪರ ನಿಂತು ಕ್ಷಮೆಯಾಚನೆಗೆ ಒತ್ತಾಯಿಸುತ್ತಿದ್ದ ಪ್ರತಿಪಕ್ಷ ಸದಸ್ಯರ ವಿರುದ್ದ ಸಿಡಿಮಿಡಿಗೊಂಡರು.
“ಜಯಾ ಜೀ ನೀವು ಬಹಳ ಗೌರವವನ್ನು ಸಂಪಾದಿಸಿದ್ದೀರಿ. ನೀವು ನಟಿಯಾದರೆ ಅದು ನಿರ್ದೇಶಕರಿಗೆ ಸಂಬಂಧಿಸಿದ ವಿಷಯ. ಪ್ರತಿದಿನ ನಾನು ಅದನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ನಿಮ್ಮಿಂದ ಕಲಿಯಬೇಕಾದ ಅಗತ್ಯವೂ ಇಲ್ಲ. ನೀವು ನನ್ನ ಟೋನ್ ಬಗ್ಗೆ ಮಾತನಾಡುತ್ತಿದ್ದೀರಾ? ಸಾಕು ನಿಲ್ಲಿಸಿ, ನೀವು ಏನೇ ಆಗಿರಬಹುದು. ಸದನದ ಗಾಂಭೀರ್ಯವನ್ನು ಕಾಪಾಡಿಕೊಂಡು ನಡೆದುಕೊಳ್ಳುವುದನ್ನು ಕಲಿಯಿರಿ” ಎಂದು ಸಭಾಪತಿ ಧನಕರ್ ಹೇಳಿದರು.
ಬಳಿಕ ಸಭಾಪತಿ ಧನಕರ್ ಗುರಿಯಾಗಿಸಿ ಹೇಳಿಕೆ ನೀಡಿದ್ದಕ್ಕೆ ಜಯಾ ಬಚ್ಚನ್ ವಿರುದ್ದ ರಾಜ್ಯಸಭೆಯ ಸಭಾನಾಯಕ ಜೆಪಿ ನಡ್ಡಾ ಖಂಡನಾ ನಿರ್ಣಯ ಮಂಡಿಸಿದರು.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಾ ಬಚ್ಚನ್ “ಸಭಾಪತಿಗಳ ಮಾತಿನ ಟೋನ್ ಸರಿ ಇರಲಿಲ್ಲ, ನಾನು ವಿರೋಧಿಸಿದೆ. ನಾವು ಶಾಲಾ ಮಕ್ಕಳಲ್ಲ, ನಮ್ಮಲ್ಲಿ ಕೆಲವರು ಹಿರಿಯ ನಾಗರಿಕರೂ ಇದ್ದಾರೆ. ಸಭಾಪತಿಗಳ ಟೋನ್ ನನಗೆ ಬೇಸರ ತರಿಸಿದೆ. ಮುಖ್ಯವಾಗಿ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಮೈಕ್ ಆಫ್ ಮಾಡಲಾಗಿದೆ. ಇದು ಸಂಪ್ರದಾಯಕ್ಕೆ ವಿರುದ್ದ. ನೀವು ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು” ಎಂದು ಹೇಳಿದರು.
#WATCH | On her exchange of words with Rajya Sabha Chairman Jagdeep Dhankhar, Samajwadi Party MP Jaya Bachchan says, "…I objected to the tone used by the Chair. We are not school children. Some of us are senior citizens. I was upset with the tone and especially when the Leader… pic.twitter.com/rh8F35pHsM
— ANI (@ANI) August 9, 2024
ಮುಂದಿನ ನಡೆಯೇನು? ಎಂದು ಪತ್ರಕರ್ತರು ಕೇಳಿದ್ದಕ್ಕೆ “ಸಭಾಪತಿಗಳು ನಮ್ಮ ಕ್ಷಮೆ ಕೇಳಬೇಕು. ಅವರು ನಮ್ಮನ್ನು ಕೇರ್ ಮಾಡುವುದಿಲ್ಲ ಎಂದಿದ್ದಾರೆ. ಅವರು ಕೇರ್ ಮಾಡಲೇಬೇಕು, ಏಕೆಂದರೆ ನಾವು ಸಂಸತ್ತಿನ ಸದಸ್ಯರು” ಎಂದರು.
ಇದನ್ನೂ ಓದಿ : ಮುಂಬೈ | ಖಾಸಗಿ ಕಾಲೇಜು ಹೇರಿದ್ದ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ


