“ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.
“ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ. ಜೆಡಿಎಸ್‌ನ ದೇವೇಗೌಡರು ಮತ್ತು ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಂಡವರಲ್ಲ. ಧರಂ ಸಿಂಗ್ ಜೊತೆ ಸರ್ಕಾರ ರಚಿಸಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು ಎಂದು ದೇವೇಗೌಡರು ಹೇಳಿದ್ದರು. ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ” ಎಂದು ಹರಿಹಾಯ್ದರು.
“ನಾನು ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ, ಹಣ ಮಾಡುವ ಆಸೆ ಬಂದಿಲ್ಲ. ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಎರಡು ಬಾರಿ ಸಿಎಂ ಆದರೂ, ಪ್ರಮಾಣ ವಚನಕ್ಕೂ ಬರಲಿಲ್ಲ. ನಾವು ಭ್ರಷ್ಟಾಚಾರ ಮಾಡಲು, ನಿಮ್ಮ ನಂಬಿಕೆಗೆ ದ್ರೋಹವೆಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ” ಎಂದರು.
“ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದ್ದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದ್ದರು. ನನ್ನ ಒಂಬತ್ತು ಚುನಾವಣೆ ಗೆಲುವಲ್ಲೂ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ” ಎಂದು ಹೇಳಿದರು.
ನಾನು ಜಗ್ಗಲ್ಲ, ಬಗ್ಗಲ್ಲ : ಸಿದ್ದರಾಮಯ್ಯ
“ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ಮಾಡಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಹಿಂದುಳಿದ ವರ್ಗಗಳಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ್ದು ನಾನು ಮಾತ್ರ. ಇದನ್ನು ಬಿಜೆಪಿ, ಜೆಡಿಎಸ್ ಸಹಿಸುತ್ತಿಲ್ಲ. ಆದರೆ, ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಳುಗಾಡಿಸಲು ಸಾಧ್ಯವಿಲ್ಲ” ಎಂದರು.
“ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ. ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂದ ತಕ್ಷಣ ನಾವು ಎಸ್‌ಐಟಿ ರಚಿಸಿದೆವು. ತನಿಖೆ ನಡೆದು ಹಣ ವಾಪಾಸ್ ವಸೂಲಾಗಿದೆ. 50 ಕೋಟಿ ರೂಪಾಯಿಯನ್ನು ರಿಕವರಿ ಮಾಡಿ ಆಗಿದೆ. 46 ಕೋಟಿ ಹಣ ಖಾಸಗಿ ಬ್ಯಾಂಕ್ ನಲ್ಲಿದ್ದು ಫ್ರೀಝ್ ಮಾಡಿದ್ದಾರೆ. ಹೀಗಾಗಿ ಹಗರಣವೇ ಅಲ್ಲದ ಮುಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ನಾಚಿಕೆ ಆಗಲ್ವಾ?
“ಯಡಿಯೂರಪ್ಪ ಅವರು ಈ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕೇಸಲ್ಲಿ ಇದ್ದಾರೆ. ನಾಚಿಕೆ ಆಗಲ್ವಾ? ಬಿಜೆಪಿ, ಜೆಡಿಎಸ್ ಅಧಿಕಾರಿದಲ್ಲಿ ಇದ್ದಾಗ ನಡೆಸಿದ್ದು ಒಂದಾ, ಎರಡಾ ಹಗರಣಗಳು. ಸುಪ್ರೀಕೋರ್ಟ್‌ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ” ಎಂದು ಪ್ರಶ್ನಿಸಿದರು.
“ಯಡಿಯೂರಪ್ಪ ಅವರು ಚೆಕ್‌ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ” ಎಂದು ಕಿಡಿಕಾರಿದರು.
ಇದನ್ನೂ ಓದಿ : “ಈ ಬಂಡೆ ಸಿದ್ದರಾಮಯ್ಯ ಜೊತೆ ಇದೆ”: ಬಿಜೆಪಿ-ಜೆಡಿಎಸ್ ವಿರುದ್ಧ ಗುಡುಗಿದ ಡಿಕೆಶಿ