Homeಕರ್ನಾಟಕಜಸ್ಟೀಸ್ ನಾಗಮೋಹನ್ ದಾಸ್ ವರದಿ ಅಂಗೀಕರಿಸುವಂತೆ ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರʼ ಸಭೆಯಲ್ಲಿ ಏಕ ನಿರ್ಣಯ

ಜಸ್ಟೀಸ್ ನಾಗಮೋಹನ್ ದಾಸ್ ವರದಿ ಅಂಗೀಕರಿಸುವಂತೆ ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರʼ ಸಭೆಯಲ್ಲಿ ಏಕ ನಿರ್ಣಯ

- Advertisement -
- Advertisement -

ಬೆಂಗಳೂರು: ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್ ಅವರು ಸರ್ಕಾರಕ್ಕೆ ನೀಡಿರುವ ವರದಿಯನ್ನು ಆಗಸ್ಟ್ 16ರ ಸಭೆಯಲ್ಲಿ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರುʼ ಸಭೆಯಲ್ಲಿ ಏಕ ನಿರ್ಣಯ ಕೈಗೊಳ್ಳಲಾಯಿತು.

ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಹಿರಿಯ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು, ದಲಿತ ಚಳವಳಿಯ ಮುಖಂಡರು, ಪ್ರಾಧ್ಯಾಪಕರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಂಘಟನೆಗಳ ನಾಯಕರು ಹಾಗೂ ಒಳಮೀಸಲಾತಿ ಪರ ಹೋರಾಟಗಾರರು ಭಾಗವಹಿಸಿದ್ದರು.

ನಾಗಮೋಹನ್ ದಾಸ್ ವರದಿಯಲ್ಲಿ ತಾಂತ್ರಿಕವಾಗಿ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ: ಕೋಟಿಗಾನಹಳ್ಳಿ ರಾಮಯ್ಯ

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಸಮಿತಿ ನೀಡಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲಾತಿ ವರದಿಯಲ್ಲಿ ತಾಂತ್ರಿಕವಾಗಿ ಏನೇ ಸಮಸ್ಯೆ ಇದ್ದರೂ, ಅದು ತಾತ್ವಿಕವಾಗಿ ಸರಿ ಇದೆ ಎಂದು ಹಿರಿಯ ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಒಳಮೀಸಲಾತಿ ಜಾರಿ ಕುರಿತು ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇಂತಹದ್ದೊಂದು ಚಾರಿತ್ರಿಕ ಸಂದರ್ಭದಲ್ಲಿ ನಾಗರಿಕ ಸಮಾಜಕ್ಕೆ ಪ್ರತಿಕ್ರಿಯಿಸಬೇಕಾದ ಹೊಣೆಗಾರಿಕೆ ಇದೆ. ಈ ಬಗ್ಗೆ ಪರ-ವಿರೋಧ ಇದೆ ಎನ್ನುವ ಬಗ್ಗೆ ನನಗೆ ಒಮ್ಮತ. ಒಳಮೀಸಲಾತಿ ಕುರಿತು ನಮಗೆ ಖಚಿತವಾದ ನಿಲುವು ಇರಬೇಕು. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು. “ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸುಟ್ಟು ಪ್ರತಿಭಟನೆ ಮಾಡುವುದನ್ನು ನೋಡುತ್ತಿದ್ದರೆ ದುರಾದೃಷ್ಟ ಎನಿಸುತ್ತದೆ. ನಮ್ಮ ಸಂವಿಧಾನದ ಆಶಯವೇ ಭ್ರಾತೃತ್ವ; ಅದಕ್ಕೂ ನಮಗೂ ಸಂಬಂಧ ಇಲ್ಲವೇನೋ ಎಂಬ ಮನಸ್ಥಿತಿಯನ್ನು ನಾನು ಕಾಣುತ್ತಿದ್ದೇನೆ. ಎಲ್ಲ ಪಕ್ಷಗಳ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ನಾಟಕ ಆಡುತ್ತಿದ್ದಾರೆ. ವರದಿ ಜಾರಿಗೆ ವಿಳಂಬಕ್ಕಾಗಿಯೂ ಕೆಲಸ ನಡೆಯುತ್ತಿದೆ” ಎಂದರು.

“ಒಳಮೀಸಲಾತಿ ಆಶಯದಲ್ಲಿ ತಪ್ಪಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಸವಲತ್ತು ತೆಗೆದುಕೊಳ್ಳಬೇಕು ಎಂಬ ವಾದ ಸರಿ ಇದೆ. ಆದರೆ, ಅದು ಸಜಾತೀಯವಾಗಿಲ್ಲ. ನಾವು ಸಂಖ್ಯೆಯನ್ನೇ ನೋಡುವುದಾದರೆ, ಇದರಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರೂ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಜಸ್ಟೀಸ್ ನಾಗಮೋಹನ್ ದಾಸ್ ಕೂಡ, ʼನಾವು ಊಟ ಮಾಡುವಾಗ, ಉಣ್ಣದೇ ಇರುವವರ ತಟ್ಟೆಗೂ ತುತ್ತು ಹೋಗಬೇಕುʼ ಎಂದು ಹೇಳಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ಯಾವ ಕಾನೂನು ಬೇಕಾಗಿಲ್ಲ. ನಮ್ಮ ಸಮುದಾಯಗಳನ್ನು ದತ್ತಾಂಶಕ್ಕೆ ಇಳಿಸಿರುವುದು ಸರಿಯಾದ ಕ್ರಮವಲ್ಲ. ವೈಯಕ್ತಿಕವಾಗಿ ನನ್ನ ಅಭಿಪ್ರಾಯದಲ್ಲಿ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇದರಲ್ಲಿ ತಾಂತ್ರಿಕವಾಗಿ ಏನೇ ತಪ್ಪುಗಳಿದ್ದರೂ, ತಾತ್ವಿಕವಾಗಿ ಸರಿ ಇದೆ” ಎಂದು ಅವರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿದ್ದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಡಾ. ರವಿಕುಮಾರ್ ಬಾಗಿ, “ಒಳಮೀಸಲಾತಿ ಸಂಬಂಧ ಈವರೆಗೆ ಆಗಿರುವ ಜಸ್ಟೀಸ್ ಸದಾಶಿವ ಹಾಗೂ ಮಾಧುಸ್ವಾಮಿ ವರದಿಗೆ ಹೋಲಿಸಿದರೆ, ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿ ಬಹುತೇಕರಿಗೆ ಒಪ್ಪಿತವಾಗಿದೆ. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಆ ಮೂಲಕ ತಳ ಸಮುದಾಯಗಳಿಗೆ ಹಾಗೂ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದು ಹೇಳಿದರು.

“ಅಲಕ್ಷಿತ ಸಮುದಾಯಗಳ ನೋವು ಏನು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ನಮ್ಮ ನೋವು ಅವರಿಗೆ ಗೊತ್ತಿರುವುದರಿಂದ ಸಮುದಾಯದ ಮುಖಂಡರ ಸಭೆ ಕರೆದು ಒಮ್ಮತದಿಂದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಲು ಸಮಾನಮನಸ್ಕರ ಸಭೆ ಕರೆದಿದ್ದೇವೆ. ಯಾರಿಗೆ ಹೆಚ್ಚಿನ ಅನ್ಯಾಯ ಆಗಿದೆಯೋ ಅವರಿಗೆ ಸ್ವಲ್ಪ ಹೆಚ್ಚಿನ ಪಾಲು ಸಿಗಲಿ, ಇದೇ ಸಾಮಾಜಿಕ ನ್ಯಾಯ. ಇದನ್ನು ಪ್ರತಿಪಾದಿಸುವುದೇ ನಿಜವಾದ ಅಂಬೇಡ್ಕರ್ ವಾದ. ಈ ನಡೆಯುತ್ತಿರುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

“ಒಳಮೀಸಲಾತಿ ಜಾರಿಗೆ ಯಾವ ರೀತಿಯ ಒತ್ತಡ ಹೇರಬಹುದೋ ಅದರ ದಾರಿಗಳನ್ನು ನಾವು ಹುಡುಕಬೇಕು. ಆ ಕೆಲಸವನ್ನು ಈಗಾಗಲೇ ಹಲವರು ಮಾಡುತ್ತಿದ್ದಾರೆ. ಆದರೆ, ಒಳಮೀಸಲಾತಿ ಜಾರಿ ಆಗಲೇಬೇಕು ಎಂಬ ಕಾರಣಕ್ಕೆ ನಾವು ಕೆಲಸ ಮಾಡಬೇಕು. ನಾವೆಲ್ಲರೂ ಹಂಚಿ ಉಣ್ಣುವುದಕ್ಕೆ ತಯಾರಿದ್ದ ಮೇಲೆ ಸ್ವಲ್ಪ ವ್ಯತ್ಯಾಸಗಳಾಗಬಹುದು. ವರದಿಯಲ್ಲಿ ಸಮಸ್ಯೆಗಳನ್ನು ಮುಂದೆ ಸರಿಪಡಿಸಿಕೊಳ್ಳೋಣ, ಸರ್ಕಾರ ಕೂಡಲೇ ವರದಿಯನ್ನು ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

ಚಿಂತಕರಾದ ಪ್ರೊ. ಸಿ.ಜಿ. ಲಕ್ಷ್ಮಿಪತಿ ಮಾತನಾಡಿ, “ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಾಕಷ್ಟು ದತ್ತಾಂಶ ಸಂಗ್ರಹಿಸಿ ವರದಿ ತಯಾರಿಸಿದ್ದಾರೆ. ಯಾವುದೇ ಸಮೀಕ್ಷೆಗಳು ಶೇಕಡ ನೂರರಷ್ಟು ಸರಿ ಇರುವುದಿಲ್ಲ. ವರದಿ ವಿರೋಧಿಸುತ್ತಿರುವವರು ಊಹಾತ್ಮಕ ವಿಚಾರಗಳನ್ನು ಕೈಬಿಡಬೇಕು, ವರದಿಯಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ” ಎಂದರು.

“ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳೂ ಒಗ್ಗಟ್ಟಿನಿಂದ ಒಳಮೀಸಲಾತಿ ಜಾರಿಗೆ ಒತ್ತಾಯಿಸಬೇಕು. ಏಕೆಂದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಕೋಮುವಾದಿ ಶಕ್ತಿಗಳು ದಲಿತ ಹಾಗೂ ತಳ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಪ್ರಚಾರ ನಡೆಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಕೂಡ ಒಂದಷ್ಟು ಕೆಲಸ ಮಾಡಬೇಕು. ಒಳಮೀಸಲಾತಿ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ಟ್ರೆಂಡ್ ಸೃಷ್ಟಿಸಬೇಕು. ನಮ್ಮ ತಂತ್ರ ಮೇಲುಗೈ ಸಾಧಿಸಿದರೆ ವರದಿ ಜಾರಿಗೆ ವಿರೋಧಿಸುತ್ತಿರುವವರನ್ನು ನಿಯಂತ್ರಣಕ್ಕೆ ತರಬಹುದು” ಎಂದು ಸಲಹೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಹುಲಿಕುಂಟೆ ಮೂರ್ತಿ, “ಈ ಸಭೆಯಲ್ಲಿ ಹೊಲೆಯರು, ಮಾದಿಗರು, ಒಕ್ಕಲಿಗರು, ಲಂಬಾಣಿ ಮತ್ತು ಭೋವಿ ಸೇರಿದಂತೆ ಎಲ್ಲ ಸಮುದಾಯದವರೂ ಇದ್ದಾರೆ. ನಾವೆಲ್ಲರೂ ದಲಿತ ಚಳವಳಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದೇವೆ. ಒಳಮೀಸಲಾತಿ ವಿವಾದವನ್ನು ಮುಂದಿಟ್ಟುಕೊಂಡು ಸಮುದಾಯಗಳನ್ನು ಒಡೆಯುವುದಕ್ಕೆ ಕೋಮುವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕಾಗಿ ನಮ್ಮಲ್ಲೇ ಕೆಲವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಭುತ್ವ ಯಾವಾಗ ಬದಲಾಗುತ್ತದೆ ಎಂಬುದನ್ನು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಒತ್ತಡದ ಗುಂಪಾಗಿ ನಾವು ಇಲ್ಲಿ ಸೇರಿದ್ದೇವೆ. 16ರಂದು ಸರ್ಕಾರ ಸಭೆ ನಡೆಸಲಿದೆ, ಅದಕ್ಕೆ ನಾವು ಸಾಕಷ್ಟು ಒತ್ತಡ ಹೇರಬೇಕಾಗಿದೆ” ಎಂದರು.

ಶಿಕ್ಷಣ ತಜ್ಞರಾದ ಬಿ. ಶ್ರೀಪಾದ್ ಭಟ್ ಮಾತನಾಡಿ, “ಕುಂಬಾರರ ಅನುಸೂಯಮ್ಮ ಅವರಿಗೆ ಆದ ಅನ್ಯಾಯದ ವಿರುದ್ಧ ದಲಿತ ಸಮುದಾಯ ಜಾತಿ ನೋಡದೆ ಹೋರಾಟ ಮಾಡಿತ್ತು. ಆದರೆ, ಸಮುದಾಯದೊಳಗಿನ ಅಪನಂಬಿಕೆ ಸರಿಯಲ್ಲ. ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ ಜಾರಿ ಆಗಿಯೇ ಆಗುತ್ತದೆ. ಆದರೆ, ಮೊದಲು ಸಮುದಾಯಗಳ ಒಳಗಿನ ಅಪನಂಬಿಕೆಯನ್ನು ದೂರ ಮಾಡುವ ಕೆಲಸವನ್ನು ನಾವು ಮಾಡಲೇಬೇಕು. ಅದರ ನೇತೃತ್ವವನ್ನು ಸಮುದಾಯದ ಹಿರಿಯರು ವಹಿಸಿಕೊಳ್ಳಬೇಕು; ಒಂದು ಸಮಿತಿ ರಚನೆ ಆಗಬೇಕು” ಎಂದು ಸಲಹೆ ನೀಡಿದರು.

“ಪರಿಶಿಷ್ಟ ಜಾತಿಯೊಳಗಿನ ಅತಿ ಹಿಂದುಳಿದ ವರ್ಗದವರಿಗೂ ಪಾಲು ಸಿಗಬೇಕು. ವರದಿಯ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಎಸ್‌ಸಿ- ಎಸ್‌ಟಿ ಆಯೋಗ ಇದೆ. ಆದರೆ, ಅದಕ್ಕೆ ಈವರೆಗೆ ಅಧ್ಯಕ್ಷರ ನೇಮಕ ಆಗಿಲ್ಲ. ನೋಡಲ್ ಏಜೆನ್ಸಿಯಾಗಿ ಅದಕ್ಕೆ ಎಲ್ಲ ಸಾಂವಿಧಾನಿಕ ಅಧಿಕಾರವಿದೆ. ಬಹಿರಂಗವಾಗಿ ವರದಿಯನ್ನು ಸುಟ್ಟು ಟೀಕೆ ಮಾಡುವುದರಿಂದ ಮತ್ತಷ್ಟು ಅಪನಂಬಿಕೆ ಹುಟ್ಟುತ್ತದೆ. ಇದಕ್ಕಾಗಿ ನಾವೆಲ್ಲರೂ ರಾಜ್ಯದಾದ್ಯಂತ ಹೋರಾಡಿ ಕೆಲಸ ಮಾಡಬೇಕಿದೆ” ಎಂದು ಶ್ರೀಪಾದ್ ಭಟ್ ಹೇಳಿದರು.

ಹಿರಿಯ ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ ಮಾತನಾಡಿ, “ಒಳಮೀಸಲಾತಿ ಮಾತ್ರವೇ ಸಮುದಾಯಗಳ ನಡುವೆ ಒಗ್ಗಟ್ಟು ತರುವುದಕ್ಕೆ ಸಾಧ್ಯ ಎಂದು ನಾವೆಲ್ಲರೂ ಹಿಂದಿನಿಂದಲೂ ಪ್ರತಿಪಾದಿಸಿದ್ದೇವೆ. ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯೇ ಅಂತಿಮವಲ್ಲ. ಅದರಲ್ಲಿ ಸುಧಾರಿಸಬೇಕಾದ ಸಾಕಷ್ಟು ಅಂಶಗಳೂ ಇವೆ. ಆದರೆ, ಈವರೆಗೆ ಆಗಿರುವ ವರದಿಗಳಲ್ಲಿ ನಾಗಮೋಹನ್ ದಾಸ್ ವರದಿ ಬಹಳಷ್ಟು ಉತ್ತಮವಾಗಿದೆ. ಆದ್ದರಿಂದ, ಈ ವರದಿಯನ್ನು ನಾವು ಒಪ್ಪಿಕೊಳ್ಳಬಹುದು. ಸದಾಶಿವ ಹಾಗೂ ಮಾಧುಸ್ವಾಮಿ ವರದಿಗಳು ಸಾಕಷ್ಟು ಅವೈಜ್ಞಾನಿಕವಾಗಿ ಇದ್ದವು. ಆ ಸಾಲಿನಲ್ಲಿ ಇದನ್ನು ತೆಗೆದುಹಾಕುವಂತಹ ವರದಿ ಖಂಡಿತ ಅಲ್ಲ” ಎಂದರು. “ವರದಿಯಲ್ಲಿರುವ ಕೊರತೆಗಳನ್ನು ಸಾಕಷ್ಟು ಪಟ್ಟಿ ಮಾಡಬಹುದು, ಅದನ್ನು ಸರ್ಕಾರದ ಗಮನಕ್ಕೆ ತಂದು ಶಿಫಾರಸುಗಳನ್ನು ನೀಡೋಣ. ಸದಾಶಿವ ಆಯೋಗದ ವರದಿ ಬೇಡವೇ ಬೇಡ ಎಂಬ ಕೂಗು ಬಂದಿತ್ತು. ಆದರೆ, ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಸುಧಾರಣೆ ಬೇಕಿದ್ದರೆ ಕಾಲಮಿತಿಯೊಳಗೆ ಮಾಡಿಕೊಳ್ಳಬಹುದು. ಆದರೆ, ವರದಿ ಮಾತ್ರ ತಕ್ಷಣದಿಂದಲೇ ಜಾರಿ ಆಗಲೇಬೇಕು. ಜಾರಿ ಮುಂದೂಡಿದರೆ ಇಡೀ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ” ಎಂದರು.

ಪತ್ರಕರ್ತರಾದ ಡಾ. ವಾಸು ಮಾತನಾಡಿ, “ಒಳಮೀಸಲಾತಿ ಜಾರಿ ವಿಳಂಬ ಆಗಿರುವುದರಿಂದ ಇದೀಗ ಭಾವನಾತ್ಮಕ ವಿಷಯವಾಗಿದೆ; ಸಮುದಾಯದೊಳಗೆ ಅಪನಂಬಿಕೆ ಉಂಟಾಗಿದೆ. ಇನ್ನೂ ತಡವಾದರೆ ಅಪನಂಬಿಕೆ ಮತ್ತಷ್ಟು ಸ್ಫೋಟ ಆಗಲಿದೆ. ನಾನು ವರದಿಯನ್ನು ಸಂಪೂರ್ಣ ಓದಿದ್ದು, ಬಹುತೇಕ ನ್ಯಾಯಬದ್ಧವಾಗಿದೆ. ಸಮುದಾಯದೊಳಗಿನ ಆತಂಕ ಹಾಗೂ ಆಕ್ರೋಶವನ್ನು ನಾವು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದರು. “ಶನಿವಾರದ ಒಳಗೆ ಸರ್ಕಾರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಂದಿರಾ ಸಾಹನಿ ವರದಿ ಬಳಿಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಾತ್ರ ಶಿಫಾರಸು ಮಾಡುವ ಅವಕಾಶ ಇದೆ. ಅದನ್ನು ಬದಲಾವಣೆ ಮಾಡುವ ಅವಕಾಶ ಯಾವಾಗಲೂ ಇದೆ. ಮುಂದೆ ನಮ್ಮ ಬೇಡಿಕೆ ಇದೇ ಆಗಿರಬೇಕು. ಶೋಷಿತ ಸಮುದಾಯಗಳ ನಡುವಿನ ಬಿರುಕು ಶಮನಕ್ಕೆ ಇದು ಸಕಾಲ. ಇಲ್ಲಿತನಕ ದಲಿತ ಸಮುದಾಯಗಳು ಬಹಳ ವಿವೇಕದಿಂದ ನಡೆದುಕೊಂಡಿವೆ. ಬಲಾಢ್ಯ ಜಾತಿಗಳಂತೆ ನಡೆದುಕೊಳ್ಳುವಂತೆ ವರ್ತಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ಇರಬಹುದು ಅಷ್ಟೇ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ನಾವು ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಬೇಕಿದೆ” ಎಂದರು.

ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ನಾಗಮೋಹನ್ ದಾಸ್ ಆಯೋಗದ ವರದಿ ಸರ್ಕಾರದ ಕೈಗೆ ಹೋಗಿರುವುದೇ ಚಾರಿತ್ರಿಕವಾದುದು, ಅದನ್ನು ನಾವೆಲ್ಲರೂ ಒಪ್ಪಿಕೊಂಡು ಪೋಷಿಸಬೇಕು; ಸಾಯಿಸಬಾರದು. ಪೋಷಣೆ ಮಾಡುತ್ತಲೇ ಅದರಲ್ಲಿರುವ ಸಣ್ಣಪುಟ್ಟ ಲೋಪದೋಷಗಳ ನಿವಾರಣೆ ಮಾಡಬೇಕು. ಸಮಸ್ಯೆಗಳಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಆಯೋಗ ರಚಿಸುವ ಮೂಲಕ ಪರಿಹರಿಸಬಹುದು” ಎಂದು ಕಿವಿಮಾತು ಹೇಳಿದರು. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಮಾತನಾಡಿ, “ನಾಗಮೋಹನ್ ದಾಸ್ ಆಯೋಗ ನೀಡಿರುವ ಪ್ರವರ್ಗ ʼಎʼ- ʼಬಿʼ ಹಾಗೆಯೇ ಉಳಿಸಿಕೊಳ್ಳಬೇಕು. ʼಇʼ ಅಲ್ಲಿರುವ ಎಕೆ- ಎಡಿ ಅನ್ನು ʼಸಿʼ ಗೆ ವರ್ಗಾವಣೆ ಮಾಡಿದರೆ ಅಸಮಾಧಾನ ಶಮನ ಆಗುತ್ತದೆ. ಉಳಿದಂತೆ, ನಾವು ಏನೇ ಮಾತನಾಡಿದರೂ ಅದು ಕೇವಲ ಮಾತುಗಳಾಗಿ ಮಾತ್ರ ಉಳಿಯುತ್ತದೆ” ಎಂದರು.

ಪ್ರೊ. ಎಸ್. ಗೋವಿಂದಯ್ಯ ಮಾತನಾಡಿ, “ಎಪ್ಪತ್ತರ ದಶಕದ ದಲಿತ ಚಳವಳಿಯಲ್ಲೇ ನಾವೆಲ್ಲರೂ ಸಾಂಸ್ಕೃತಿಕ ದಿಕ್ಕಲ್ಲಿ ನಡೆಯುತ್ತಿದ್ದೆವು. ಅಲ್ಲಿಂದಾಚೆಗೆ ಸಾಂಸ್ಕೃತಿಕ ವಿಚಾರ ನಮ್ಮದಲ್ಲ ಎನ್ನುವಂತೆ ದಲಿತ ನಾಯಕರು ಅಂದುಕೊಂಡ ಬಳಿಕವೇ ಸಾಕಷ್ಟು ಬಿರುಕು ಮೂಡಿದೆ. 90ರ ದಶಕದ ಬಳಿಕ ಪ್ರಜ್ಞಾಪೂರ್ವಕವಾಗಿ ನಾವು ಸಾಂಸ್ಕೃತಿಕತೆಯನ್ನು ಜೀವಂತವಾಗಿ ಇಟ್ಟಿದ್ದರೆ ಇಂದು ಒಳಮೀಸಲಾತಿ ಸಮಸ್ಯೆಯೇ ಬರುತ್ತಿರಲಿಲ್ಲ. 70ರ ದಶಕದಲ್ಲಿ ದಲಿತ ಮತ್ತು ದಲಿತೇತರ ಎಂಬುದೇ ಇರಲಿಲ್ಲ. ಕುಂಬಾರರ ಪರವಾಗಿ ದಲಿತ ಸಮುದಾಯ ಪಾದಯಾತ್ರೆ ಮಾಡಿ ಸರ್ಕಾರದ ವಿರುದ್ಧ ಚಳವಳಿ ಮಾಡಿತ್ತು. ಆ ಬದ್ಧತೆಯನ್ನು ನಮ್ಮ ಹೋರಾಟಗಾರರು ಎನಿಸಿಕೊಂಡವರು ಪಾಲಿಸಿದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದರು.

“ಇದೊಂದು ಐತಿಹಾಸಿಕ ಸಭೆಯಾಗಿದೆ, ಏಕೆಂದರೆ, ಕರ್ನಾಟಕದ ಜಾತ್ಯತೀತ ನೆಲೆ, ವಚನ ಚಳವಳಿಯ ಮುಂದುವರಿದ ಭಾಗವೇ ದಲಿತ ಚಳವಳಿ. ಈ ಪರಿಜ್ಞಾನ ಉಳಿಸಿಕೊಂಡಿದ್ದರೆ ಈಗಿನ ಸಮಸ್ಯೆ ಬರುತ್ತಿರಲಿಲ್ಲ. ಇಂದು ಹೊಲೆಯರು- ಮಾದಿಗರು ಬೀದಿ ಜಗಳಕ್ಕೆ ನಿಂತಿದ್ದಾರೆ. ಅವರಿಗೆ ಬುದ್ಧಿ ಹೇಳುವ ದಲಿತೇತರ ಪ್ರಜ್ಞಾವಂತರು ಮುಂದೆ ಬರುತ್ತಿಲ್ಲ. ನಮಗೆ ಇರುವುದು ಇನ್ನು ಕೇವಲ ಮೂರು ದಿನ, 16ಕ್ಕೆ ಅಂತಿಮ ತೀರ್ಮಾನ ಆಗುತ್ತದೆ. ಒಂದು ವೇಳೆ ಸಂಪುಟ ಉಪ ಸಮಿತಿಗೆ ಕಳುಹಿಸಿದರೆ ಸಾಮಾಜಿಕ ನ್ಯಾಯಕ್ಕೆ ಎಸಗುವ ದೊಡ್ಡ ದ್ರೋಹವಾಗುತ್ತದೆ” ಎಂದರು.

ಸಭೆಯಲ್ಲಿ ಮಾವಳ್ಳಿ ಶಂಕರ್, ಕೆ. ರಾಮಯ್ಯ, ಪ್ರೊ ಎಸ್. ಗೋವಿಂದಯ್ಯ, ಪ್ರೊ ದೊರೆರಾಜು, ಡಾ. ರವಿಕುಮಾರ್ ನೀಹ, ರೂಮಿ ಹರೀಶ್, ಶಿವಸುಂದರ್, ಅಗ್ರಹಾರ ಕೃಷ್ಣಮೂರ್ತಿ, ಡಿ. ಉಮಾಪತಿ, ಪ್ರೊ ಬಿ. ಸಿ. ಬಸವರಾಜ್, ಶ್ರೀಪಾದ್ ಭಟ್, ಲೇಖಾ ಅಡವಿ, ಹನುಮಂತೇಗೌಡ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ಸಿ. ಜಿ ಲಕ್ಷ್ಮಿಪತಿ, ವಿ. ಎಲ್ ನರಸಿಂಹಮೂರ್ತಿ, ಜನಾರ್ಧನ ಕೆಸರಗದ್ದೆ, ರವಿಕುಮಾರ್ ಬಾಗಿ, ಚಂದ್ರು ತರಹುಣಿಸೆ, ರುದ್ರುಪುನೀತ್, ಡಾಮಿನಿಕ್, ಭೀಮಾಶಂಕರ್, ಸರೋವರ್ ಬೆಂಕಿಕೆರೆ, ನರಸಿಂಹಪ್ಪ ವಿಜಯ್ ಕುಮಾರ್, ಸಿದ್ದಪ್ಪ ಮೂಲ್ಗೆ ಮುಂತಾದವರು ಉಪಸ್ಥಿತರಿದ್ದರು.

ಗೋಮಾಂಸ ವ್ಯಾಪಾರಿಗಳ ಮುಷ್ಕರ: ಗೋ ರಕ್ಷಕರಿಂದ ಅತಂತ್ರಗೊಂಡ ಮಹಾರಾಷ್ಟ್ರದ ಜಾನುವಾರು ವ್ಯಾಪಾರ, ಕ್ರಮಕ್ಕೆ ಮುಂದಾದ ಸರಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...