Homeಕರ್ನಾಟಕದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌'ಗಳ ದುಸ್ಥಿತಿ

ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

- Advertisement -
- Advertisement -

ಪ್ರೊಎಂ.ಡಿ.ನಂಜುಂಡಸ್ವಾಮಿ ಯವರಿರುವ ತನಕ (ಮತ್ತು ಬಹುಶಃ ಈಗಲೂ) ರೈತಸಂಘದ ದೊಡ್ಡ ಹೋರಾಟಗಳ ಪೋಸ್ಟರ್‌ನಲ್ಲಿ ಗಾಂಧಿಯವರ ಚಿತ್ರ ಕಡ್ಡಾಯವಾಗಿ ಇರುತ್ತಿತ್ತು. ಒಂದು ವೇಳೆ ಆ ಹೋರಾಟವು ಯಾವುದೋ ಸರ್ಕಾರಿ ನಿಯಮದ ವಿರುದ್ಧವಿದ್ದರೆ, ಪೋಸ್ಟರ್‌ನಲ್ಲಿನ ಗಾಂಧಿ ಆ ನಿಯಮದ ಪ್ರತಿಯನ್ನು ಹರಿದು ಹಾಕುತ್ತಿರುವ ಚಿತ್ರ ಬರೆಸಲಾಗುತ್ತಿತ್ತು. ಒಮ್ಮೊಮ್ಮೆ ಗಾಂಧಿ ಕೋಲು ತೆಗೆದುಕೊಂಡು ಅಟ್ಟಿಸಿಕೊಂಡೂ ಹೋಗುತ್ತಿದ್ದರು. ಅದೇನೇ ಇದ್ದರೂ, ರೈತಸಂಘ ಅನುಸರಿಸುವುದು ಗಾಂಧಿಯವರ ಅಹಿಂಸಾ ಮಾರ್ಗದ ಹೋರಾಟ ಎಂದೇ ಹೇಳುತ್ತಿತ್ತು.

ಅಧಿಕಾರಿಗಳನ್ನು ಕೂಡಿ ಹಾಕುವುದು, ಊರೊಳಗೆ ಬಿಡದಂತೆ ತಡೆಯುವುದು ಇತ್ಯಾದಿಗಳು ರೈತಸಂಘದ ಹೋರಾಟದ ಭಾಗವಾಗಿತ್ತು. ಅಷ್ಟೇಕೆ ಕೆಂಟುಕಿ ಚಿಕನ್ ಅಂಗಡಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಮೊನ್ಸಾಂಟೊ ಬೀಜ ಬಿತ್ತಿದ್ದ ಹೊಲಕ್ಕೆ ನುಗ್ಗಿ ನಾಶ ಮಾಡಿದ್ದು ಇತ್ಯಾದಿ ಸಾಂಕೇತಿಕ ಕ್ರಮಗಳನ್ನೂ ರೈತಸಂಘ ಕೈಗೊಂಡಿತ್ತು. ಆದರೆ, ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಮನುಷ್ಯರಿಗೆ ದೈಹಿಕ ಹಿಂಸೆ ಕೊಡುವ ಕೆಲಸವನ್ನು ರೈತಸಂಘ ಮಾಡುತ್ತಿರಲಿಲ್ಲ. ಆದರೆ ಆಸ್ತಿನಾಶ ಅಥವಾ ಕಾನೂನುಭಂಗವನ್ನು ಹಿಂಸೆಯೆಂದು ಬಗೆದಿರಲಿಲ್ಲ. ಹಾಗೆ ನೋಡಿದರೆ ಕಾಯ್ದೆ ಭಂಗವನ್ನು ಸ್ವತಃ ಗಾಂಧಿಯವರು ಹೋರಾಟದ ಒಂದು ವಿಧಾನವಾಗಿಯೂ ಬಳಸಿದ್ದರು.

ಗಾಂಧಿಯವರ ಹಿಂಸೆ ಅಥವಾ ಅಹಿಂಸೆಯ ಮಾನದಂಡಗಳೇ ಸರಿಯೆಂದೋ, ಅವನ್ನೇ ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ಅವುಗಳನ್ನು ಮಾನದಂಡಗಳನ್ನಾಗಿಟ್ಟುಕೊಳ್ಳಬೇಕೆಂದೋ ಅಲ್ಲ. ಆದರೆ ಹಿಂಸೆ ಅಥವಾ ಅಹಿಂಸೆಯ ಚರ್ಚೆ ಬಂದಾಗ ಈ ದೇಶದಲ್ಲಿ ಗಾಂಧಿಯವರ ಮಾರ್ಗವನ್ನು ಒಂದು ಮಾನದಂಡವಾಗಿ ಬಳಸಿರುವುದರಿಂದ ಇವನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾಗಿ ಗಾಂಧಿಯವರ ಹಿಂಸೆ-ಅಹಿಂಸೆ ಚರ್ಚೆಯಲ್ಲಿ ಹಿಂಸೆಯ ವ್ಯಾಖ್ಯಾನವನ್ನು ಸೀಮಿತಗೊಳಿಸುವುದನ್ನು ಕೆಲವರು ವಿರೋಧಿಸುತ್ತಾರೆ. ಶ್ರೀಮಂತಿಕೆ-ಅಧಿಕಾರದ ಅಡಿಯಲ್ಲಿ ನಲುಗುವ ದುಡಿಯುವ ಸಮುದಾಯ, ಜಾತಿ ಶೋಷಣೆಯಿಂದ ನಲುಗುವ ಶೋಷಿತ ಜಾತಿಗಳು, ಗಂಡಾಳ್ವಿಕೆಯಲ್ಲಿ ಹಿಂಡಲ್ಪಡುವ ಮಹಿಳೆ ಇವರೆಲ್ಲರೂ ಸ್ಟ್ರಕ್ಚರಲ್ ಹಿಂಸೆಯಿಂದಲೇ ನೋವುಣ್ಣುವುದಿಲ್ಲವೇ? ಕೆಲವೊಮ್ಮೆ ಇಂತಹವರಿಗೆ ತಕ್ಷಣದಲ್ಲೇ ತಿರುಗೇಟು ನೀಡಬೇಕಾಗಿ ಬರುವ ಅನಿವಾರ್ಯತೆ ಇರುವುದಿಲ್ಲವೇ? ಅಂತಹ ಹೊತ್ತಿನಲ್ಲಿ ನೀವು ಅವರಿಗೆ ಅಹಿಂಸೆಯನ್ನು ಬೋಧಿಸುವುದೇ ಹಿಂಸೆಯಾಗುತ್ತದೆ ಎಂಬುದು ಹಿಂಸೆ-ಅಹಿಂಸೆಯ ಕುರಿತು ಗಾಂಧಿ ವಿಚಾರಧಾರೆಗಿರುವ ಪ್ರಮುಖ ತಕರಾರು.

ವಾಸ್ತವದಲ್ಲಿ ಅಂತಹ ಯಾವ ಹಿಂಸೆಯನ್ನೂ ಮಾಡದೇ 60 ದಿನಗಳಿಂದ ಅತ್ಯಂತ ಶುದ್ಧ ಗಾಂಧಿ ಮಾರ್ಗದಲ್ಲಿ ದೆಹಲಿಯ ಹೊರಗೆ ಸತ್ಯಾಗ್ರಹವನ್ನು ನಡೆಸಿದ ಧೀಮಂತ ರೈತ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದು ಮಾಡಲಾಯಿತು. ಲಕ್ಷಾಂತರ ಜನರು ನಾವು ಊಹಿಸಿಕೊಳ್ಳಲಾಗದ ಚಳಿಯಲ್ಲಿ, ಮನೆಯಿಂದ ದೂರ ಉಳಿದು, ಸಂಪಾದನೆಯಿಂದ ದೂರ ಉಳಿದು ಎರಡು ತಿಂಗಳು ಬೀದಿಯಲ್ಲಿ ಕಳೆದಿದ್ದು ಸತ್ಯಾಗ್ರಹದ ಭಾಗವಾಗಿ. ’ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಹೀಗೆ ಮಾಡಬೇಕಾಗಿ ಬಂದಿದ್ದು ಪ್ರಭುತ್ವದ ಕ್ರೌರ್ಯದಿಂದಲ್ಲದೇ ಮತ್ತೇನು? ಇದರ ಬಗ್ಗೆ ದನಿಯೆತ್ತಿದ ಮಾತ್ರಕ್ಕೆ ರಾಜ್‌ದೀಪ್ ಸರದೇಸಾಯಿ, ಬರ್ಖಾದತ್‌ಗಳಿಗೆ ’ಆಕ್ರೋಶ ಭರಿತ’ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು ದೆಹಲಿಯ ಕಡೆಗೆ ಹೊರಟಿದ್ದು ಅಂತಹ ದೊಡ್ಡ ಸಮಸ್ಯೆಯಾಗಿ ಏಕೆ ಕಂಡಿತು? ತಮ್ಮ ತಮ್ಮ ಸುಖಾಸೀನ ಬದುಕಿನಿಂದ ಇದರ ಕುರಿತು ಸಲೀಸು ಕಾಮೆಂಟ್ ಮಾಡುವ ಧಾರ್ಷ್ಟ್ಯ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

PC : India Today

ಅರ್ನಾಬ್ ಗೋಸ್ವಾಮಿಯಂತಹ ಮನುಷ್ಯರೇ ಅಲ್ಲದ ಪತ್ರಕರ್ತ ವೇಷಧಾರಿಗಳು ಒಂದು ವೇಳೆ ಈ ವಿಚಾರದಲ್ಲಿ ಕೂಗಾಡಬಹುದು ಎಂಬ ಭಯ ಇರುವುದೇ ಆದಲ್ಲಿ, ಅದಕ್ಕೆ ಪ್ರತಿಯಾಗಿ ಆಡಬಹುದಾದ ಮಾತುಗಳು ಮೇಲೆ ಹೆಸರಿಸಿದ ಪತ್ರಕರ್ತರಲ್ಲಿ ಇರುವುದಿಲ್ಲ. ಏಕೆಂದರೆ ರೈತ ಕಾರ್ಮಿಕರೇ ಮೊದಲಾದ ಶೋಷಿತರು ದೀನರಾಗಿ ಪ್ರಭುತ್ವದ ಗುಂಡಿಗೆ ಎದೆಯೊಡ್ಡಿ ಮನಕರಗಿಸಬೇಕೇ ಹೊರತು, ಹಕ್ಕನ್ನು ಕೇಳುವುದು ಇವರಿಗೂ ಸಹನೆಯ ಸಂಗತಿಯಲ್ಲ.

ಹಾಗೆಯೇ ಶಶಿತರೂರ್‌ನಂತಹ ಒಬ್ಬ ’ಲಿಬರಲ್ ವ್ಯಕ್ತಿಗೆ, ಕೆಂಪು ಕೋಟೆಯ ಮುಂದಿನ ಧ್ವಜಸ್ತಂಭವೊಂದರಲ್ಲಿ ಬೇರೊಂದು ಧ್ವಜ ಹಾರಿದಾಕ್ಷಣ (ಅದನ್ನು ಹಾರಿಸಲು ಕಾರಣರಾದವರು ರೈತ ಚಳವಳಿಯ ಶೇ.99ರಷ್ಟು ಜನರನ್ನು ಪ್ರತಿನಿಧಿಸುವುದಿಲ್ಲ; ಅವರು ಸಂಚುಕೋರರೂ ಆಗಿರಬಹುದೆಂಬ ಅನುಮಾನಗಳು ಎದ್ದಿವೆ) ಕೂಡಲೇ ಖಂಡಿಸಬೇಕೆನಿಸುತ್ತದೆ. ದೆಹಲಿಯ ಸುತ್ತಮುತ್ತ ಎಂದೂ ಹಾರದಷ್ಟು ಸಂಖ್ಯೆಯ ಭಾರತದ ತ್ರಿವರ್ಣಧ್ವಜಗಳನ್ನು ಈ ರೈತರು ಕಟ್ಟಿಕೊಂಡು ಪರೇಡ್ ಹೊರಟಿದ್ದರು. ಇದನ್ನು ಬಿಟ್ಟರೆ ಆ ರೀತಿ ರಾಷ್ಟ್ರಧ್ವಜಗಳು ಕಂಡಿದ್ದು ಸಿಎಎ/ಎನ್‌ಆರ್‌ಸಿ ವಿರುದ್ಧದ ಆಂದೋಲನದಲ್ಲಿ! ಹೀಗಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಧ್ವಜದ ಕುರಿತು ರೈತರಿಗೆ ತಿಳಿಸಿಕೊಡಲು ಹೋಗುವ ಆತುರ ಅವರದ್ದು. ಇಷ್ಟಕ್ಕೂ ದೇಶದ ಮರ್ಯಾದೆಯು ಬಾವುಟದಲ್ಲಿ ಇಲ್ಲ ಎಂಬುದು ಅರ್ಥವಾಗದಷ್ಟು ಮತಿಹೀನರೇ ಇವರು?

ಚಳವಳಿಯೊಂದನ್ನು ಕಟ್ಟುವುದು, ಸರ್ಕಾರದ ವಿರುದ್ಧ ನಿಲ್ಲುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಬಿಜೆಪಿಯಂತಹ ಪಕ್ಷದ ನೇತೃತ್ವದ, ಮೋದಿ-ಶಾರಂತಹ ಸರ್ವಾಧಿಕಾರಿಗಳ ನಾಯಕತ್ವದ ಎದುರು ಹೋರಾಟ ಕಟ್ಟುವುದು ಇನ್ನೂ ಕಷ್ಟ. ಮಾಧ್ಯಮಗಳು ಜನರ ದನಿಯಾಗದೇ ಆಳುವವರ ಬೇಟೆ ನಾಯಿಗಳಾದಾಗಂತೂ ಅಸಾಧ್ಯ. ಒಂದು ವೇಳೆ ಏನೋ ಒಂದು ದಿನದ ಹೋರಾಟ ಹೇಗೋ ಕಷ್ಟಪಟ್ಟು ಮಾಡಿ ಹೋಗಿಯೂ ಬಿಡಬಹುದು. ಆದರೆ ಲಕ್ಷಾಂತರ ಜನರನ್ನು ತಿಂಗಳುಗಟ್ಟಲೆ ಒಂದು ಕಡೆ ಇಟ್ಟುಕೊಂಡು ಚಳವಳಿ ಕಟ್ಟುವುದರ ಹಿಂದಿನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಕೇವಲ ವಿಶ್ಲೇಷಣೆಯ ಮುಖಾಂತರ ಅರಿತುಕೊಳ್ಳುವುದು ಅಸಾಧ್ಯ. ಅದು ಪ್ರತಿನಿತ್ಯ ಹೊಂದಿಸಬೇಕಾದ ರೊಟ್ಟಿ ಮತ್ತು ಇತರ ವ್ಯವಸ್ಥೆಗಳ ವಿಚಾರವಷ್ಟೇ ಅಲ್ಲ; ನೂರೆಂಟು ಬಗೆಯ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ನಿಭಾಯಿಸಬೇಕಾದ ಸವಾಲು. ಅದರಲ್ಲೂ ಇಲ್ಲಿ ಒಂದೇ ಸಂಘಟನೆಯಿಲ್ಲ; ಇರುವ ಇಡೀ ಜನಸಮೂಹವು ರೆಜಿಮೆಂಟೇಷನ್‌ಗೆ ಒಳಪಟ್ಟ ಸೈನಿಕರಲ್ಲ. ಅದರ ನೈತಿಕ ಶಕ್ತಿ ಕುಗ್ಗದಂತೆ, ವಿವಿಧ ಬಣ ಹಾಗೂ ಬಣ್ಣಗಳ ನಾಯಕರನ್ನೂ ಸಂಭಾಳಿಸಿಕೊಂಡು ಹೋಗುವುದು ಏನೋ ಒಂದು ಮಟ್ಟಿಗೆ ಸಾಧ್ಯವಾದರೆ ಅದೊಂದು ಪವಾಡ.

ಅಂತಹ ಪವಾಡವನ್ನು ಸಂಯುಕ್ತ ಕಿಸಾನ್ ಮೋರ್ಚಾದವರು ಮಾಡಿದ್ದಾರೆ. ಅದರ ಪ್ರಮುಖ ನೇತಾರರೊಬ್ಬರು ಹೇಳಿದಂತೆ, ’ವಿಚಾರಗಳ ಕುರಿತು ದಿನವಿಡೀ ಕಿತ್ತಾಡುತ್ತೇವೆ, ಅಂತಿಮವಾಗಿ ಸರ್ವಸಮ್ಮತ ತೀರ್ಮಾನಕ್ಕೆ ಬರುತ್ತೇವೆ’. ಇಂತಹ ಪವಾಡವನ್ನು ಸಾಧ್ಯವಾಗಿಸಿದ್ದು ನಾಯಕರು ಮಾತ್ರವಲ್ಲಾ, ಲಕ್ಷ ಲಕ್ಷ ಸಂಖ್ಯೆಯ ಸಾಮಾನ್ಯ ಜನರೂ ಸಹಾ. ಇಂತಹದೊಂದು ಅಪೂರ್ವ, ಧೀಮಂತ ಚಳವಳಿಯ ಕುರಿತು ’ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು’ ಎಂಬ ತೀರ್ಪುಗಳನ್ನು ವಿವಿಧ ಬಣ್ಣ, ಶ್ರೇಣಿಯ ಜನರು ನೀಡುವುದು ರೇಜಿಗೆ ಹುಟ್ಟಿಸುತ್ತದೆ. ಮಲದಲ್ಲೇ ಮುಳುಗೇಳುವ ತುತ್ತೂರಿ ಮಾಧ್ಯಮಗಳು ಮತ್ತು ಗುಲಾಮೀ ಮನಸ್ಥಿತಿಯ ಭಕ್ತರಿಂದ ಅಂತಹ ನಿರೀಕ್ಷೆಯಿಲ್ಲವೇ ಇಲ್ಲ. ಆದರೆ ಚಳವಳಿಯ ಕುರಿತಂತೆ ಕಾಳಜಿ ಮತ್ತು ಸದಾಶಯವುಳ್ಳವರೂ ಈ ಪರಿ ಜಡ್ಜ್‌ಮೆಂಟಲ್ ಆಗಿರುವುದು ಒಳ್ಳೆಯ ಲಕ್ಷಣವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ವೇಳೆ ಚಳವಳಿನಿರತ ರೈತರೇ ಅರಾಜಕವಾಗಿ ಬೀದಿಗಿಳಿದಿದ್ದರೂ, ಈ ಸಂದರ್ಭದ ಹಿನ್ನೆಲೆಯನ್ನರಿತುಕೊಂಡು ಅದಕ್ಕೆ ಕಾರಣವಾದ ಸರ್ಕಾರವನ್ನು ಗುರಿ ಮಾಡಬೇಕಾದ್ದು ಸರಿಯಾದದ್ದು. ಸಿಎಎ ವಿರೋಧಿ ಹೋರಾಟದಲ್ಲಿ ಹೇಗೋ ಹಾಗೆ, ಇಲ್ಲೂ ಸಹಾ ಅಪಾರವಾದ ತಾಳ್ಮೆ, ಸಹನೆ ಹಾಗೂ ಪ್ರಬುದ್ಧತೆಯನ್ನು ರೈತ ಚಳವಳಿಯು ಪ್ರದರ್ಶಿಸಿದೆ. ಮಿಲಿಟೆಂಟ್ ಚಳವಳಿಯ ಹಿನ್ನೆಲೆಯುಳ್ಳ ಪಂಜಾಬಿನ ಜನರು ಈ ವಿಚಾರದಲ್ಲಿ ತೋರಿರುವ ಸಂಯಮವೇ ಅನನ್ಯವಾದದ್ದು. ಅಂತೆಯೇ ಸರ್ಕಾರದ ಮನುಷ್ಯ ವಿರೋಧಿತನವೂ ಎದ್ದು ತೋರುವಂಥಾದ್ದೇ ಆಗಿತ್ತು.

ಒಂದೇ ಮಾತಲ್ಲಿ ಹೇಳುವುದಾದರೆ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದರ ಮುಖಾಂತರವೇ ಹಿಂಸೆ ಮತ್ತು ಅರಾಜಕತೆಯನ್ನು ಹುಟ್ಟಿಹಾಕಿತ್ತು. ರೈತರು ಅದನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸಿದರು. ಹೆಜ್ಜೆ ಹೆಜ್ಜೆಗೂ ಸರ್ಕಾರವು ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿತ್ತು. ರೈತರು ತಮ್ಮ ವಿಶಿಷ್ಟ ಪ್ರಬುದ್ಧತೆಯಿಂದ ಅದನ್ನು ಎದುರುಗೊಂಡರು. ಉಳಿದಂತೆ ಆಗಬಹುದಾದ ಸಣ್ಣ ಪುಟ್ಟ ಅವಘಡಗಳೆಲ್ಲಾ ಕೇವಲ ಕೊಲ್ಯಾಟರೆಲ್ ಡ್ಯಾಮೇಜ್. ಅದನ್ನೇ ಧ್ಯಾನಿಸದೇ, ಒಟ್ಟಾರೆ ಒಳಿತಿನ ಕಡೆಗೆ ನಡೆಯುವುದಾದರೆ, ನಮ್ಮ ಕೈಲಾದಷ್ಟು ಜೊತೆಗೂಡುವ ಕೆಲಸ ಮಾಡುವುದೇ ಇಂದು ಎಲ್ಲಾ ಪ್ರಜಾತಂತ್ರವಾದಿಗಳ ಕರ್ತವ್ಯವಾಗಿದೆ.


ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದ ಗುಂಪನ್ನು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? – ರೈತ ಮುಖಂಡರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...