ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು, “ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದ ಅಜ್ಞಾನಿ. ಅವರಿಗೆ ಕಪಾಳಮೋಕ್ಷ ಮಾಡಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಒಕ್ಕೂಟ ಸಚಿವ ನಾರಾಯಣ್ ರಾಣೆ ಅವರನ್ನು ಮಹಾರಾಷ್ಟ್ರದ ಸಂಗಮೇಶ್ವರದಲ್ಲಿ ಮಂಗಳವಾರ ಬಂಧಿಸಲಾಗಿದೆ. ರಾಣೆ ಅವರು ಕಳೆದ 20 ವರ್ಷಗಳಲ್ಲಿ ಬಂಧನಕ್ಕೊಳಗಾದ ಮೊದಲ ಒಕ್ಕೂಟ ಸಚಿವರಾಗಿದ್ದಾರೆ.
ಬಾಂಬೆ ಹೈಕೋರ್ಟ್ ನಾರಾಯಣ ರಾಣೆ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಬಳಿಕ ಬಂಧನ ಪಕ್ರಿಕೆಗಳು ನಡೆಯುತ್ತಿದೆ. “ಪ್ರಕರಣದಲ್ಲಿ ಸಚಿವರನ್ನು ಬಂಧಿಸಲಾಗುವುದು ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ನ್ಯಾಯಾಲಯದ ಆದೇಶಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ನಾಸಿಕ್ ಪೊಲೀಸ್ ಮುಖ್ಯಸ್ಥ ದೀಪಕ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಡ ಸರ್ಕಾರದಲ್ಲಿ ಬಂಡಾಯ: ಕಾಂಗ್ರೆಸ್‌ಗೆ ಹೊಸ ತಲೆ ನೋವು!
ರಾಣೆ ಅವರು ಒಕ್ಕೂಟ ಸಚಿವ ಹಾಗೂ ರಾಜ್ಯಸಭಾ ಸದಸ್ಯರಾಗಿರುವುದರಿಂದ ಬಂಧನದ ನಂತರ, ಉಪರಾಷ್ಟ್ರಪತಿ (ವೆಂಕಯ್ಯ ನಾಯ್ಡು) ಅವರಿಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
“ರಾಣೆಯನ್ನು ಬಂಧಿಸುವಾಗ, ಒಕ್ಕೂಟ ಸರ್ಕಾರದ ಸಚಿವರಿಗೆ ಸಂಬಂಧಿಸಿದ ಎಲ್ಲಾ ಪ್ರೋಟೋಕಾಲ್‌ಗಳನ್ನು ಪೊಲೀಸರು ಅನುಸರಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ನಾಸಿಕ್, ಪುಣೆ, ಔರಂಗಾಬಾದ್‌ನ ಪೊಲೀಸ್ ಠಾಣೆಗಳಲ್ಲಿ ರಾಣೆ ವಿರುದ್ದ ದೂರು ದಾಖಲಾಗಿದೆ. ನಾಸಿಕ್‌ನಲ್ಲಿ ಎಫ್‌ಐಆರ್ ದಾಖಲಾದ ಬಳಿಕ ರಾಣೆ ಅವರನ್ನು ಬಂಧಿಸುವಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಆದೇಶಿಸಿದ್ದಾರೆ.
ಇದನ್ನೂ ಓದಿ: ನಟಿ ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು FSL ಪರೀಕ್ಷೆಯಲ್ಲಿ ದೃಢ
ಅವರ ಆದೇಶದ ನಂತರ, ನಾಸಿಕ್ ಡಿಸಿಪಿ (ಅಪರಾಧ) ಸಂಜಯ್ ಬಾರ್ಕುಂಡ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ವಾಘ್ ನೇತೃತ್ವದಲ್ಲಿ ಇತರ ಅಧಿಕಾರಿಗಳನ್ನು ಒಳಗೊಂಡ ತಂಡವು ಸಂಗಮೇಶ್ವರಕ್ಕೆ ತೆರಳಿದ್ದು, ಬಂಧನ ಕ್ರಮಗಳು ನಡೆಯುತ್ತಿವೆ.
ರಾಣೆ ವಿರುದ್ದ ನಾಸಿಕ್‌ನಲ್ಲಿ ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನ), 153-ಬಿ (1) (ಸಿ) (ಅಸಾಮರಸ್ಯ ಅಥವಾ ದ್ವೇಷದ ಭಾವನೆಯನ್ನು ಉಂಟುಮಾಡುವ ಸಾಧ್ಯತೆಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮುಖ್ಯಮಂತ್ರಿ ಉದ್ದವ್ ಠಾಕ್ರೆ ತಮ್ಮ ಆಗಸ್ಟ್ 15ರ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷವನ್ನು ಮರೆತಿದ್ದಾರೆ. ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಆ ಸಂದರ್ಭದಲ್ಲಿ ನಾನು ಅಲ್ಲಿದ್ದಿದ್ದರೆ ಸರಿಯಾಗಿ ಕಪಾಳಮೋಕ್ಷ ಮಾಡುತ್ತಿದ್ದೆ” ಎಂದು ಸೋಮವಾರ ರಾಯಗಡ ಜಿಲ್ಲೆಯಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಸಚಿವ ನಾರಾಯಣ್ ರಾಣೆ ಹೇಳಿದ್ದರು.
ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಎಂದ ಝೀ ಮತ್ತು ನ್ಯೂಸ್18


