Homeಮುಖಪುಟಏಕತಾ ಪ್ರತಿಮೆ: ಬುಡಕಟ್ಟು ಜನರ ಭೂಮಿ ಕಿತ್ತುಕೊಳ್ಳುತ್ತಿರುವ ಗುಜರಾತ್ ಸರ್ಕಾರ

ಏಕತಾ ಪ್ರತಿಮೆ: ಬುಡಕಟ್ಟು ಜನರ ಭೂಮಿ ಕಿತ್ತುಕೊಳ್ಳುತ್ತಿರುವ ಗುಜರಾತ್ ಸರ್ಕಾರ

- Advertisement -

ಗುಜರಾತ್‌ನ ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ (SSNNL) ನಡೆಸುತ್ತಿರುವ ಭೂ ಸ್ವಾಧೀನಕ್ಕೆ ವಿರುದ್ಧವಾಗಿ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಭಟನಾಕಾರನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಜರುಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆವಾಡಿಯಾ ಗ್ರಾಮದ 55 ವರ್ಷದ ಗ್ರಾಮಸ್ಥ ನತ್ವಾರ್ ತಡ್ವಿ, ಕೈಯಲ್ಲಿ ಸೀಮೆಎಣ್ಣೆ ಡಬ್ಬಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ನರ್ಮದಾ ಜಿಲ್ಲೆಯ ಕೆವಾಡಿಯಾ ಕಾಲೋನಿಯಲ್ಲಿರುವ ”ಏಕತಾ ಪ್ರತಿಮೆ”ಯ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಅನೇಕ ಬುಡಕಟ್ಟು ಜನರಲ್ಲಿ ತಡ್ವಿ ಒಬ್ಬರು. ಪ್ರತಿಮೆ ಮತ್ತು ಅದರ ಸುತ್ತಮುತ್ತಲಿನ ಇತರ ಯೋಜನೆಗಳಿಗಾಗಿ ಬುಡಕಟ್ಟು ಜನರು ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಗ್ರಾಮಗಳ ಜನರು ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ ತಮ್ಮ ಭೂಮಿಗೆ ಬೇಲಿ ಹಾಕುವುದನ್ನು ವಿರೋಧಿಸುತ್ತಿದ್ದಾರೆ. “ನಾವು ಕೃಷಿ ಮಾಡುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ನಮಗೆ ಯಾವುದೇ ಜೀವನೋಪಾಯವಿಲ್ಲ” ಎಂದು ತಡ್ವಿ ಹೇಳುತ್ತಾರೆ.

ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆದು ಸೀಮೆಎಣ್ಣೆಯ ಡಬ್ಬಿಯನ್ನು ವಶಕ್ಕೆ ಪಡೆದ ನಂತರ ತಡ್ವಿಯನ್ನು ಬಂಧಿಸಲಾಗಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ ಅಪರಾಧ ತಡೆಗಟ್ಟುವ ಕ್ರಮಗಳ ಭಾಗವಾಗಿ ನಾವು ಅವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಹಾಗೂ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ  ಎಂದು ಕೆವಾಡಿಯಾದ ಉಪ ಪೊಲೀಸ್ ವರಿಷ್ಠಾಧಿಕಾರಿ ವಾನಿ ದೂಧತ್ ಹೇಳಿದ್ದಾರೆ.

ಮೇ ತಿಂಗಳ ಆರಂಭದಲ್ಲಿ, SSNNL ಕೆವಾಡಿಯಾ ಕಾಲೋನಿಯ ಸಾಧು ಬೆಟ್‌ನಲ್ಲಿರುವ ”ಏಕತಾ ಪ್ರತಿಮೆ”ಯ ಸುತ್ತಲಿನ ಜಮೀನನ್ನು ಬೇಲಿ ಹಾಕುವ ಕೆಲಸವನ್ನು ಪ್ರಾರಂಭಿಸಿದಾಗ ಈ ಹೊಸ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಮೆಯ ಸುತ್ತಮುತ್ತಲಿನ ನವಗಂ, ಲಿಂಬಿ, ಕೆವಾಡಿಯಾ, ಕೋತಿ, ಗೋರಾ ಮತ್ತು ವಾಗಹಡಿಯಾ ಒಟ್ಟು ಆರು ಗ್ರಾಮಗಳನ್ನು ಒಳಗೊಂಡ ಬುಡಕಟ್ಟು ಜನರು ಪ್ರತಿಭಟನೆಯಲ್ಲಿದ್ದರು. ಕಳೆದ ವಾರ SSNNL ಅಧಿಕಾರಿಗಳು ಭೂಮಿಗೆ ಬೇಲಿ ಹಾಕಲು ಪ್ರಾರಂಭಿಸಿದದಾಗ ಪ್ರತಿಭಟನಾಕಾರರು ಸ್ಥಳೀಯ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಸುಮಾರು 20 ಜನರನ್ನು ಬಂಧಿಸಲಾಗಿದೆ.

ಸುಮಾರು ಒಂದು ತಿಂಗಳ ಪ್ರತಿಭಟನೆಯ ನಂತರ ಜೂನ್ 5 ರಂದು, ಸ್ಥಳೀಯರೊಂದಿಗೆ ಮಾತುಕತೆಗೆ ಅನುಕೂಲವಾಗುವಂತೆ ಬೇಲಿ ಹಾಕುವ ಕೆಲಸವನ್ನು ನಿಲ್ಲಿಸಲಾಗಿದೆ.

ಗುಜರಾತ್ ಸರ್ಕಾರವು “ಏಕತಾ ಪ್ರತಿಮೆ”ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡರೆ, ಸ್ಥಳೀಯರು ಪ್ರತಿಮೆಯ ಸುತ್ತಲಿನ ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳಿಗಾಗಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೇಲಿ ಹಾಕುವುದು ಮತ್ತೊಂದು ತಂತ್ರವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.

“ನಾವು SSNNL ‌ನ ತೆರೆದ ಜಮೀನಿಗೆ ಮಾತ್ರ ಬೇಲಿಗಳನ್ನು ಹಾಕಿದ್ದೇವೆ. ಕೆಲವರು ಈ ಬೇಲಿಯ ಒಳಗೆ ವಾಸಿಸುತ್ತಿದ್ದರೂ ಸಹ ಯಾರನ್ನೂ ಖಾಲಿ ಮಾಡುವಂತೆ ಕೇಳಲಾಗಿಲ್ಲ. ಇದುವರೆಗೂ ಇದೆ ರೀತಿ ಹಲವಾರು ಪ್ಲಾಟ್‌ಗಳಿಗೆ ಮಾಡಿದ್ದೇವೆ. ಆದರೂ ಕೆಲಸವನ್ನು ನಿಲ್ಲಿಸಿ ಸರ್ಕಾರದ ಪ್ಯಾಕೇಜ್‌ಗಳ ಬಗ್ಗೆ ಬುಡಕಟ್ಟು ಜನರಿಗೆ ಅರಿವು ಮೂಡಿಸುವ ಹಾಗೂ ಅವರೊಂದಿಗೆ ಸಂವಾದವನ್ನು ಪ್ರಾರಂಭಿಸಿದ್ದೇವೆ” ಎಂದು ಕೆವಾಡಿಯ ಉಪ ಕಲೆಕ್ಟರ್ ನಿಕುಂಜ್ ಪರಿಖ್ ಹೇಳಿದ್ದಾರೆ.

SSNNL ಸ್ಥಳಾಂತರಗೊಂಡ ಕುಟುಂಬಗಳಿಗೆ ಸ್ಥಳಾಂತರ ಯೋಜನೆಯನ್ನು ಘೋಷಿಸಿದೆ. ಅವರಿಗೆ ವಾಣಿಜ್ಯ ಅಂಗಡಿಗಳನ್ನು ನೀಡಲು ಕೂಡಾ ಒಪ್ಪಿಕೊಂಡಿದೆ.

ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ನಿರ್ಮಾಣದೊಂದಿಗೆ ಪ್ರಾರಂಭವಾದ ಈ ಯೋಜನೆಯು ಪ್ರತಿಮೆಯ ಹತ್ತಿರ ವಾಸಿಸುವ ಕನಿಷ್ಠ 5,000 ಬುಡಕಟ್ಟು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

SSNNL ಬೇಲಿಯ ನಿರ್ಮಾಣ ಮತ್ತು ವಿವಾದಿತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಗುಜರಾತ್ ಹೈಕೋರ್ಟ್ ಅನುಮತಿ ನೀಡಿದ ನಂತರ ಮೇ ತಿಂಗಳಲ್ಲಿ ಪ್ರಾರಂಭಿಸಿತು. ಈ ಹಿಂದೆ, ಭೂಮಿಯ ಮೇಲೆ ಸರ್ಕಾರದ ಹಕ್ಕನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಸಿದ್ದರಿಂದ ಹೈಕೋರ್ಟ್ ಈ ಪ್ರಕ್ರಿಯೆಯನ್ನು ತಡೆಹಿಡಿದಿತ್ತು.

ಏಕತಾ ಪ್ರತಿಮೆಯ ಸುತ್ತಲಿನ ಪ್ರತೀ ಆರು ಹಳ್ಳಿಗಳಲ್ಲಿ ಭೂಸ್ವಾಧೀನಕ್ಕೆ ವಿರುದ್ಧವಾಗಿ ಅಹಮದಾಬಾದ್ ಮೂಲದ ಪರಿಸರವಾದಿ ಮಹೇಶ್ ಪಾಂಡ್ಯ ಅವರು 2019 ರಲ್ಲಿ ಗುಜರಾತ್ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.

ಭೂಸ್ವಾಧೀನ ಕಾಯ್ದೆಯಡಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಗುಜರಾತ್ ಸರ್ಕಾರ ಮತ್ತು SSNNL ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಸೋಗಿನಲ್ಲಿ 5,000 ಕ್ಕೂ ಹೆಚ್ಚು ಬುಡಕಟ್ಟು ಜನರನ್ನು ಹೊರಹಾಕಲು ಸಜ್ಜಾಗಿದೆ. 1960 ರ ದಶಕದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳು ಅಗತ್ಯವಿಲ್ಲದ ಕಾರಣ ಜನರಿಗೆ ಅಲ್ಲಿ ನೆಲೆಸಲು ಅವಕಾಶವಿತ್ತು ಎಂದು ಅವರು ಹೇಳುತ್ತಾರೆ, ”ಎಂದು ಪಾಂಡ್ಯರ ಪಿಐಎಲ್ ಹೇಳಿದೆ.

“ಇಂದು, ಅದೇ ಭೂಮಿಯನ್ನು ಶ್ರೇಷ್ಠ ಭಾರತ್ ಭವನ ಮತ್ತು ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳಿಗೆ ಬಳಸಲಾಗುತ್ತಿದೆ, ನ್ಯಾಯಸಮ್ಮತ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಹಾಗೂ ಪುನರ್ವಸತಿ ಕಾಯ್ದೆಯಲ್ಲಿ ಪಾರದರ್ಶಕತೆಯ ಹಕ್ಕಿನ ಪ್ರಕ್ರಿಯೆಯ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ಬುಡಕಟ್ಟು-ಹಕ್ಕುಗಳ ಕಾರ್ಯಕರ್ತ ಪ್ರಫುಲ್ ವಾಸವ ಹೇಳುತ್ತಾರೆ.


ಓದಿ: ಮುಂಬೈ ವೈರಸ್ ಬಿಕ್ಕಟ್ಟಿಗೆ ಗುಜರಾತ್‌ನ ನಮಸ್ತೆ ಟ್ರಂಪ್‌ ಕಾರ್ಯಕ್ರಮ ಕಾರಣ: ಸಂಜಯ್ ರಾವತ್


 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares