ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರದ ಹಿನ್ನೆಲೆಯಲ್ಲಿ “ಸಂಜೆ 6:30ರ ನಂತರ ಹೆಣ್ಣು ಮಕ್ಕಳು ಏಕಾಂಗಿಯಾಗಿ ತಿರುಗಾಡುವುದನ್ನು, ಕೂರುವುದನ್ನು ನಿಷೇಧಿಸಲಾಗಿದೆ” ಎಂಬ ಮಹಿಳಾ ವಿರೋಧಿ ಸುತ್ತೋಲೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಶನಿವಾರ ವಾಪಾಸು ಪಡೆದಿದೆ. ತನ್ನ ತಪ್ಪನ್ನು ತಿದ್ದಿಕೊಂಡಿರುವ ವಿಶ್ವವಿದ್ಯಾನಿಲಯ, ಸಂಜೆಯ ನಂತರ ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಅತ್ಯಾಚಾರದ ಹಿನ್ನಲೆಯಲ್ಲಿ ಮೈಸೂರು ವಿವಿ ಗುರುವಾರ ಹೊರಡಿಸಿದ್ದ ಸುತ್ತೋಲೆಯು ಮಹಿಳಾ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ರಾಮಕೃಷ್ಣ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ನಾವು ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಬರೆದಿದ್ದೇವೆ. ಆ ರೀತಿಯ ಯಾವ ನಿಬಂಧನೆಗಳು ಹಾಕುವ ಉದ್ದೇಶ ನಮಗಿಲ್ಲ” ಎಂದಿದ್ದರು.
ಇದನ್ನೂ ಓದಿ: ಸಂಜೆ ವೇಳೆ ಹೆಣ್ಣು ಮಕ್ಕಳು ಹೊರಬರಬಾರದು: ಮೈಸೂರು ವಿ.ವಿ ಸುತ್ತೋಲೆಗೆ ತೀವ್ರ ಆಕ್ರೋಶ
ಆದರೆ ಸುತ್ತೋಲೆ ನೇರವಾಗಿ ಹೆಣ್ಣು ಮಕ್ಕಳ ವಿರುದ್ಧವಿದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ಅದನ್ನು ತಿದ್ದುಕೊಳ್ಳುತ್ತೇವೆ. ಅದನ್ನು ವಾಪಸ್ ಪಡೆದು ಮತ್ತೊಂದು ಸುತ್ತೋಲೆ ಹೊರಡಿಸುತ್ತೇವೆ” ಎಂದು ನಾನುಗೌರಿ.ಕಾಂಗೆ ತಿಳಿಸಿದ್ದರು.
ಅದರಂತೆ ಆಗಸ್ಟ್ 26 ಗುರುವಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದು, ಪರಿಷ್ಕೃತ ಸುತ್ತೋಲೆಯನ್ನು ವಿವಿ ಹೊರಡಿಸಿದೆ.
ಪರಿಷ್ಕೃತ ಸುತ್ತೋಲೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಬರೆದಿದ್ದ ವಾಕ್ಯವನ್ನು ಬದಲಿಸಿ, ವಿವಿಯ ಆವರಣದಲ್ಲಿ ಸಂಜೆಯ ನಂತರ ವಿದ್ಯಾರ್ಥಿಗಳು ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕು ಎಂದು ವಿವಿ ಸೂಚಿಸಿದೆ. ಜೊತೆಗೆ ಸುತ್ತೋಲೆಯಲ್ಲಿ, ಆಗಸ್ಟ್ 26 ಗುರುವಾರ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಮೈಸೂರು ಪ್ರಕರಣದ ನಂತರ ಗೃಹಸಚಿವರ ಆದಿಯಾಗಿ ಹಲವಾರು ರಾಜಕಾರಣಿಗಳು ಅಸೂಕ್ಷ್ಮ ಹೇಳಿಕೆಯನ್ನು ನೀಡಿ, ದುರ್ಘಟನೆ ನಡೆಯಲು ಸಂತ್ರಸ್ತೆಯೆ ಕಾರಣ ಎಂದು ಬಿಂಬಿಸುತ್ತಿದ್ದಾರೆ. ಸ್ವತಃ ಗೃಹ ಸಚಿವರು ಕೂಡಾ ಅದನ್ನೇ ಪ್ರತಿಪಾದಿಸಿದ್ದರು.
ಈ ಮಧ್ಯೆ, ಅತ್ಯಾಚಾರ ಎಸಗಿರುವ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್: ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ನಟ ಚೇತನ್


