ಉತ್ತರ ಪ್ರದೇಶದ ಉನ್ನಾವೊದಲ್ಲಿ ಬೆಂಕಿ ದಾಳಿಗೆ ಒಳಗಾಗಿದ್ದ 23 ವರ್ಷದ ಅತ್ಯಾಚಾರ ಸಂತ್ರಸ್ತೆ ನಿನ್ನೆ ತಡರಾತ್ರಿ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುರುವಾರ ಆಕೆ ದೂರು ನೀಡಿದ್ದ ಆರೋಪಿಗಳು ಬೆಂಕಿ ಹಚ್ಚಿದ ನಂತರ ಶೇಕಡಾ 90 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದ ಮಹಿಳೆ ಎರಡು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕಡೆಗೂ ನಿನ್ನೆ ರಾತ್ರಿ 11: 40 ಕ್ಕೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.
“ಅವಳು ರಾತ್ರಿ 11: 10 ಕ್ಕೆ ಹೃದಯ ಸ್ತಂಭನದಿಂದ ಬಳಲುತ್ತಿದ್ದಳು ಮತ್ತು ನಾವು ಅವಳನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದೆವು, ಆದರೆ ಅವಳು ಬದುಕುಳಿಯಲು ಸಾಧ್ಯವಾಗಲಿಲ್ಲ ಮತ್ತು ರಾತ್ರಿ 11:40 ಕ್ಕೆ ಅವಳು ತೀರಿಕೊಂಡಳು” ಎಂದು ಸಫ್ದರ್ಜಂಗ್ ಆಸ್ಪತ್ರೆಯ ಬರ್ನ್ಸ್ ಮತ್ತು ಪ್ಲಾಸ್ಟಿಕ್ ವಿಭಾಗದ ಮುಖ್ಯಸ್ಥ ಡಾ.ಶಾಲಭ್ ಕುಮಾರ್ ಹೇಳಿದ್ದಾರೆ.
ಮಹಿಳೆಯ ಶವವನ್ನು ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅಲ್ಲಿ ಶವಪರೀಕ್ಷೆ ನಡೆಸಲಾಗುವುದು, ನಂತರ ಆಕೆಯ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಶವಪರೀಕ್ಷೆಯ ವರದಿಗಳನ್ನು ಪೊಲೀಸರಿಗೆ ನೀಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸಂತ್ರಸ್ತೆ ಬೆಂಕಿಗೆ ಆಹುತಿಯಾಗಿ ತನ್ನ ಸುಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಇನ್ನು ಪ್ರಜ್ಞಾ ಸ್ಥಿತಿಯಲ್ಲಿದ್ದ ಕಾರಣ ಎಲ್ಲಾ ಐದು ದಾಳಿಕೋರರನ್ನು ಗುರುತಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
“ಬೆಳಿಗ್ಗೆ 4 ಗಂಟೆಗೆ ನಾನು ರಾಯ್ ಬರೇಲಿಗೆ ರೈಲು ಹಿಡಿಯಲು ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದೆ. ಐದು ಜನರು ನನಗಾಗಿ ಕಾಯುತ್ತಿದ್ದರು. ಅವರು ನನ್ನನ್ನು ಸುತ್ತುವರೆದು ಮೊದಲು ಕಾಲಿಗೆ ಕೋಲಿನಿಂದ ಹೊಡೆದರು ಮತ್ತು ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದರು. ನಂತರ ಅವರು ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು” ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬನಾಗಿದ್ದ ಆಕೆಯ ಅತ್ಯಾಚಾರಿ ಆರೋಪಿ ಶಿವಂ ತ್ರಿವೇದಿ ಐದು ದಿನಗಳ ಹಿಂದೆ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಾಪತ್ತೆಯಾಗಿದ್ದ ಅವನ ಸಹ ಆರೋಪಿ ಶುಭಮ್ ತ್ರಿವೇದಿ ಕೂಡ ದಾಳಿಯಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮಹಿಳೆಯ ಸಾವಿನಿಂದ ಬಹಳ ದುಃಖಿತನಾಗಿದ್ದೇನೆ. ಕೂಡಲೇ ಫಾಸ್ಟ್ ಟ್ರಾಕ್ ಕೋರ್ಟ್‌ನಲ್ಲಿ ತ್ವರಿತ ವಿಚಾರಣೆಗೆ ಆದೇಶಿಸುತ್ತೇನೆ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.


