ಉನ್ನಾವ್ ಅತ್ಯಾಚಾರದ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಮಧ್ಯಾಹ್ನ 12 ಗಂಟೆಯೊಳಗೆ ತಿಳಿಸಬೇಕೆಂದು ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೆ ಭಾನುವಾರ ನಡೆದಿರುವ ಸಂತ್ರಸ್ತೆಯು ಇದ್ದ ಕಾರು ಅಪಘಾತದ ಕುರಿತು ಪೂರ್ಣ ಮಾಹಿತಿ ನೀಡಿವಂತೆ ಸೂಚನೆ ನೀಡಿದೆ. ಉನ್ನಾವ್ ಸಂತ್ರಸ್ತೆ ಪರ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದೆ.
20 ದಿನಗಳ ಹಿಂದೆಯೇ ಸಂತ್ರಸ್ತೆಯು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿಯವರಿಗೆ ಬರೆದ ಪತ್ರ ಯಾಕೆ ತಲುಪಿಲ್ಲ ಎಂದು ಅವರು ನಿನ್ನೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಲಕ್ನೋದಿಂದ ದೆಹಲಿಗೆ ವರ್ಗಾಯಿಸಬೇಕೆಂದು ಸಹ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಘಟನೆಯ ಪ್ರಮುಖ ಆರೋಪಿಯಾದ ಕುಲದೀಪ್ ಸೆಂಗಾರ್ ಬಿಜೆಪಿಯ ಶಾಸಕನಾಗಿದ್ದು ಪ್ರಕರಣವನ್ನು ಮುಚ್ಚಿಹಾಕಲು ಪದೇ ಪದೇ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇರುವ ಕಾರಣದಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ದೆಹಲಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೂರು ದಿನದ ಹಿಂದೆಯಷ್ಟೇ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು ಒಟ್ಟು 11 ಜನರ ಮೇಲೆ ಸಿಬಿಐ ಎಫ್ ಐ ಆರ್ ಹಾಕಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ತನ್ನ ತಂದೆ ಮತ್ತು ತನ್ನ ಇಬ್ಬರು ಚಿಕ್ಕಮ್ಮಂದಿರನ್ನು ಕಳೆದುಕೊಂಡಿದ್ದಾಳೆ ಮಾತ್ರವಲ್ಲದೇ ಆಕೆಯು ಅನುಮಾನಸ್ಪದ ಕಾರು ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ.


