Homeಮುಖಪುಟತಂಡದ ನಾಯಕರು ಹೀಗೆ ನಡೆದುಕೊಂಡಲ್ಲಿ ಆರೋಗ್ಯಕರ ವಾತಾವರಣ ಮತ್ತು ಗೆಲುವು ಸಾಧ್ಯ..

ತಂಡದ ನಾಯಕರು ಹೀಗೆ ನಡೆದುಕೊಂಡಲ್ಲಿ ಆರೋಗ್ಯಕರ ವಾತಾವರಣ ಮತ್ತು ಗೆಲುವು ಸಾಧ್ಯ..

- Advertisement -
- Advertisement -

ಜೀವನ ಕಲೆಗಳು: ಅಂಕಣ-28

ತಂಡದಂತೆ ಕೆಲಸ ಮಾಡುವ ಕಲೆ

ತಂಡ (ಟೀಂ –TEAM) ರಚಿಸುವುದು ಒಂದು ಕಲೆಯಾದರೆ, ಈ ತಂಡವನ್ನು ಒಂದು ತಂಡದಂತೆ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಸುವುದು ಇನ್ನೊಂದು ಕಲೆ. ತಂಡ ಏಕೆ ಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ, ಎಲ್ಲರೂ ಒಟ್ಟಾಗಿ ಅಸಾಧ್ಯವಾದುದನ್ನು ಮಾಡಬಹುದು ಎಂಬುದನ್ನು ನೆನಪಿಡಿ.

ನಮ್ಮಲ್ಲಿ ಬಹಳ ಪ್ರತಿಭಾವಂತ ವ್ಯಕ್ತಿಗಳು ಇರುತ್ತಾರೆ, ಆದರೆ ಅವರ ಪ್ರದರ್ಶನ ವೈಯುಕ್ತಿಕ ಪ್ರತಿಭೆಯ ದರ್ಶನವಾಗಿರುತ್ತದೆ. ಅದು ಸಂಗೀತದಲ್ಲಿರಬಹುದು, ಕ್ರೀಡೆಯಲ್ಲಿರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿರಬಹುದು. ಸಾಮೂಹಿಕ ಪ್ರದರ್ಶನದಲ್ಲಿಯೂ ವೈಯುಕ್ತಿಕ ಪ್ರತಿಭೆ ತೋರಿಸುವ ಅವಕಾಶವಿರುತ್ತದೆ ಆದರೆ ಇಡೀ ತಂಡ ಸೋತು ಒಬ್ಬರು ಉತ್ತಮ ಆಟಗಾರ ಎಂಬ ಪ್ರಶಸ್ತಿ ಪಡೆಯುವುದರಲ್ಲಿ ಅರ್ಥವಿರುವುದಿಲ್ಲ. ವೈಯುಕ್ತಿಕ ಪ್ರತಿಭೆ ತಮ್ಮ ತಂಡವನ್ನು ಗೆಲ್ಲಿಸುವ ಪ್ರದರ್ಶನವಾಗಬೇಕು.

ಇದರಲ್ಲಿ ನಾಯಕರ ಪಾತ್ರ ಬಹಳ ಮುಖ್ಯವಾದುದು. ನಾಯಕರಿಗೆ ಎಲ್ಲಾ ಕಲೆಗಳು ಬರುತ್ತಿರಬೇಕು ಅಥವಾ ಅವನೇ ಸದಾ ಮಿಂಚಬೇಕು ಎಂದೇನೂ ಇಲ್ಲ, ಆದರೆ ತನ್ನ ತಂಡದಲ್ಲಿರುವ ಪ್ರತಿಭೆಯನ್ನು ಆತ ಸರಿಯಾಗಿ ಬಳಸಿಕೊಂಡು ತಂಡವನ್ನು ಗೆಲ್ಲಿಸಬೇಕು ಮತ್ತು ವೈಯುಕ್ತಿಕ ಪ್ರತಿಭೆಯ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಬೇಕು. ನಾಯಕನ ಪಾತ್ರದಷ್ಟೇ ತಂಡ ರಚನಾಕಾರರ ಭೂಮಿಕೆಯೂ ಮಹತ್ವದ್ದಾಗಿರುತ್ತದೆ. ಅವರು ತಂಡ ರಚನೆಯ ಸಮಯದಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿಲ್ಲದಿದ್ದರೆ ನಾಯಕ ಆಟದ ಮೈದಾನ/ರಣಭೂಮಿಯಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನಾವು ಆಗಿಂದಾಗ್ಯೆ ನಮ್ಮ ದೇಶದ ಕ್ರಿಕೆಟ್ ತಂಡದ ಪ್ರದರ್ಶನದಲ್ಲಿ, ಸೆಲೆಕ್ಟರ್ಗಳು ಹೇಗೆ ಸರಿಯಾದ ಆಟಗಾರರನ್ನು ಆರಿಸದೆ ನಾಯಕನ ಕೈ ಕಟ್ಟಿ ಹಾಕಿದರು, ಎಂಬುದನ್ನು ನೋಡಬಹುದು. ಅದೇ ರೀತಿ ನಮ್ಮ ಪೋಲಿಸರಿಗೆ ಸರಿಯಾದ ಗುಂಡು-ರಕ್ಷಕ ಕವಚವಿಲ್ಲದೆ, ಉಗ್ರವಾದಿಗಳ ದಾಳಿಗೆ ಅವರು ಅನ್ಯಾಯವಾಗಿ ಬಲಿಯಾದರೆಂಬುದನ್ನೂ ಸಹ ನಾವು 26/11ರ ಘಟನೆಯಲ್ಲಿ ನೋಡಿದ್ದೇವೆ.

ಇವರಿಬ್ಬರ ನಂತರ ತಂಡದ ಮಿಕ್ಕ ಸದಸ್ಯರ ಪಾತ್ರವೂ ಕಡಿಮೆ ಏನಿಲ್ಲ. ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ತಂಡದ ಗೆಲುವಿಗೆ (ಅಥವಾ ಸೋಲಿಗೆ) ಕಾರಣರಾಗಿರುತ್ತಾರೆ. ತಂಡದ ಎಲ್ಲಾ ಸದಸ್ಯರು ಸೇರಿ ತಂಡವನ್ನು ಒಂದೇ ದಿಕ್ಕಿನಲ್ಲಿ ನಡೆಸಿಕೊಂಡು ಹೋದಲ್ಲಿ ಮಾತ್ರ ತಂಡ ತನ್ನ ಗುರಿ ತಲಪುತ್ತದೆ, ಎಲ್ಲರೂ ಒಂದೊಂದು ದಿಕ್ಕಿನಲ್ಲಿ ಎಳೆದಲ್ಲಿ, ತಂಡ ಎಲ್ಲಿಗೂ ಸೇರುವುದಿಲ್ಲ, ಏನೂ ಸಾಧಿಸುವುದಿಲ್ಲ.

ನಾಯಕರ ಪಾತ್ರ:

·         ನಿಮ್ಮ ಸ್ವಂತ ಉದಾಹರಣೆಯಿಂದ ಮಿಕ್ಕವರಿಗೆ ಮಾರ್ಗದರ್ಶನ ಮಾಡಿ.

·         ಸದಾ ಸಕಾರಾತ್ಮಕವಾಗಿರಿ. ನಿಮ್ಮ ಉತ್ಸಾಹದಿಂದ ಮಿಕ್ಕವರಿಗೆ ಸ್ಫೂರ್ತಿ ಬರುವಂತಿರಲಿ.

·         ತಂಡದ ಸದಸ್ಯರಲ್ಲಿ ಪರಸ್ಪರ ವಿಶ್ವಾಸ ಮತ್ತು ಗೌರವ ಬರುವಂತೆ ಅವರ ಪರಿಚಯ ಮಾಡಿಸಿ.

·         ತಂಡದ ಸದಸ್ಯರಲ್ಲಿ ನಿಮಗೂ ವಿಶ್ವಾಸವಿರಲಿ. ಯಾವುದೇ ಅಪನಂಬಿಕೆಗೆ ಆಸ್ಪದ ಕೊಡಬೇಡಿ.

·         ಸದಸ್ಯರಲ್ಲಿ ಸ್ನೇಹ, ಬಾಂಧವ್ಯ, ಸೌಹಾರ್ದತೆ ಬೆಳೆಯುವಂತೆ ಮಾಡಿ.

·         ಮುಕ್ತ ಸಂವಹನೆಗೆ ಅವಕಾಶ ಮಾಡಿಕೊಡಿ.

·         ಎಲ್ಲರ ಕೆಲಸ ಮತ್ತು ಜವಾಬ್ದಾರಿ ಸ್ಪಷ್ಟವಾಗಿ ತಿಳಿಸಿ.

·         ತಂಡದ ಪ್ರಕ್ರಿಯೆಯನ್ನು ಸುಲಲಿತಗೊಳಿಸಿ.

·         ತಂಡದ ಗುರಿ ಎಲ್ಲರಿಗೂ, ಸದಾ ಕಾಲ, ತಿಳಿದಿರುವಂತೆ ನೋಡಿಕೊಳ್ಳಿ.

·         ಅವಶ್ಯಕತೆ ಬಿದ್ದಲ್ಲಿ ಸನ್ನಿವೇಶ ಕೈ ತಪ್ಪದಂತೆ ಮಧ್ಯಸ್ತಿಕೆ ವಹಿಸಿ.

·         ಸದಸ್ಯರಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿ.

·         ಸದಸ್ಯರ ಕೆಲಸ ಮತ್ತು ಆಟದ ನಡುವೆ ಸಮತೋಲನವಿರಲಿ. ತಂಡದ ಸದಸ್ಯರಿಗೆ ವಿಶ್ರಾಂತಿ ಮತ್ತು ಮನೋರಂಜನೆಯ ಅವಶ್ಯಕತೆಯೂ ಇರುತ್ತದೆ ಎಂಬುದನ್ನು ಮರೆಯಬೇಡಿ. ಒಟ್ಟಾಗಿ ತಂಡ ಕಟ್ಟುವ ಯಾವುದೇ ಆಟದಲ್ಲಿ ಸದಸ್ಯರು ತೊಡಗಿದ್ದಾಗಲೂ ಸಹ ತಂಡದ ನದುವೆ ಸೌಹಾರ್ದ, ಸಹಕಾರ ಉತ್ತಮಗೊಳ್ಳುತ್ತಿರುತ್ತದೆ ಎಂಬುದನ್ನು ನೆನಪಿಡಿ. ಇಂತಹ ಸಾಮೂಹಿಕ ಆಟಕ್ಕೆ ಅವಕಾಶ ಕಲ್ಪಿಸಿ.

·         ವಿಷಯ ಚರ್ಚೆಯ ಸಭೆಗಳು ಕೆಲಸಕ್ಕೆ ಅಡ್ಡಿಯಾಗದಂತೆ ಕರೆಯಿರಿ. ಕೆಲಸ ಹಂಚುವಾಗ ಸದಸ್ಯರಿಗೆ ವೈವಿಧ್ಯತೆ ಇರುವಂತೆ ತೋರಲಿ. ಒಂದೇ ರೀತಿಯ ಕೆಲಸ ಏಕತಾನತೆ ತರುತ್ತದೆ ಮತ್ತು ಉತ್ಪಾದನೆ ಕಡಿಮೆಯಾಗುತ್ತದೆ.

·         ಸನ್ನಿವೇಶಗಳನ್ನು, ಅವಶ್ಯಕತೆ ಇದ್ದಲ್ಲಿ, ಸೂಕ್ಷ್ಮವಾಗಿ ನಿರ್ವಹಣೆ ಮಾಡಿ (ಮೈಕ್ರೋ ಮ್ಯಾನೇಜ್) ಆದರೆ ಸದಸ್ಯರನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಲು ಯತ್ನಿಸಬೇಡಿ.

·         ಸದಸ್ಯರಿಗೆ ಅವರವರ ಅವಶ್ಯಕತೆಗೆ ತಕ್ಕಂತೆ ಸ್ಥಳಾವಕಾಶ ನೀಡಿ.

·         ತಂಡದ ವೈವಿಧ್ಯತೆಯನ್ನು ಅದರ ಶಕ್ತಿ ಎನ್ನುವಂತೆ ಪ್ರದರ್ಶಿಸಿ. ವಿವಿಧ ಹಿನ್ನೆಲೆಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಅನುಭವದ ಸದಸ್ಯರು ಒಂದೆಡೆ ಸೇರಿದಾಗ ಮತ್ತು ತಮ್ಮ ಅನಿಸಿಕೆ/ಸಲಹೆಗಳನ್ನು ಹಂಚಿಕೊಂಡಾಗ, ಪ್ರತಿ ವಿಷಯದಲ್ಲೂ ಇನ್ನೊಂದು ಹೊಸ ಪಾರ್ಶ್ವ ನೋಡಲು ಸಿಗುತ್ತದೆ. ಇದರಿಂದ ಹೊಸ ಯೋಚನೆಗಳು ಉತ್ಪನ್ನವಾಗಲು ಸಹಾಯಕವಾಗುತ್ತವೆ. ಸಮಸ್ಯೆ ಮತ್ತು ವ್ಯಾಜ್ಯ ಪರಿಹಾರಕ್ಕೂ ಇದರಿಂದ ಮಾರ್ಗಗಳು ಕಂಡುಬರುತ್ತವೆ.

·         ತಂಡದ ಸದಸ್ಯರನ್ನು ಪ್ರೇರೇಪಿಸುವಾಗ ಅವರಿಗೆ ಸತತವಾಗಿ ಪ್ರತ್ಯಾದಾನ (ಫೀಡ್-ಬ್ಯಾಕ್) ನೀಡುತ್ತಿರಿ.

·         ಯಾರನ್ನಾದರೂ ಹೊಗಳಬೇಕಾದಾಗ ಮುಕ್ತವಾಗಿ ಎಲ್ಲರೆದುರಿಗೆ ಹೊಗಳಿ ಆದರೆ ಅದರಿಂದ ಬೇರೆಯವರಿಗೆ ಅಸೂಯೆ ಹುಟ್ಟುವಂತೆ ಆಗದಿರಲಿ.

·         ಸದಸ್ಯರ ನಡತೆ ಅಥವಾ ಕೆಲಸವನ್ನು ತಿದ್ದಬೇಕಾದ ಅವಶ್ಯಕತೆ ಇದ್ದಾಗ, ಅದನ್ನು ಎಲ್ಲರ ಮುಂದೆ ಮಾಡದೇ, ಪ್ರತ್ಯೇಕವಾಗಿ ಏಕಾಂತದಲ್ಲಿ ತಿಳಿಸಿ.

·         ತಂಡದಲ್ಲಿ ಏನಾದರೂ ಬಹುಮಾನ ಪಡೆಯುವ ಅವಕಾಶವಿದ್ದಾಗ ಪಡೆಯುವ ಪ್ರಕ್ರಿಯೆ ಸರಳವಾಗಿಡಿ. ಎಲ್ಲರೂ ಭಾಗವಹಿಸಲು ಆಗುವಂತೆ ಮತ್ತು ಎಲ್ಲರೂ ಸ್ವಲ್ಪ ಅಧಿಕ ಪರಿಶ್ರಮದಿಂದ,  ಗುರಿಯನ್ನು ತಲುಪಲು ಸಾಧ್ಯವಾಗುವಂತೆ ನಿಯಮಾವಳಿ ರೂಪಿಸಿ. ತೀರಾ ಸುಲಭವಾದಲ್ಲಿ ಅದರಲ್ಲಿ ಏನೂ ಸ್ವಾರಸ್ಯ/ಪ್ರತಿಸ್ಪರ್ಧೆ ಇರುವುದಿಲ್ಲ ಮತ್ತು ತೀರಾ ಕಠಿಣವಾದಲ್ಲಿ ಯಾರೂ ಸ್ಪರ್ಧಿಸುವುದಿಲ್ಲ.

·         ಪ್ರತಿಯೊಬ್ಬರಿಗೂ ಮಿಂಚಲು ಅವಕಾಶ ಕೊಡಿ.

·         ಸದಸ್ಯರನ್ನು ಭೇಟಿಯಾಗಬೇಕಾದಾಗ ಅವರ ಕಾರ್ಯಸ್ಥಾನಕ್ಕೆ ಹೋಗಿ ಭೇಟಿ ಮಾಡಿ.

·         ಸದಸ್ಯರ ಹಿತ ರಕ್ಷಕರ ಕೆಲಸ ನೀವು ಮಾಡಿ. ನೀವು ಮಾಡಿದ ಸಣ್ಣ ಸಹಾಯವೂ ಅವರು ನಿಮ್ಮನ್ನು ಸದಾ ಗೌರವಿಸುವಂತೆ ಮಾಡುತ್ತದೆ.

·         ಸದಸ್ಯರಿಗೆ ಎಲ್ಲವೂ ಗೊತ್ತಿರಬೇಕು ಎಂದೇನಿಲ್ಲ, ಅದಕ್ಕೆ ಬೇಕಾದ ತರಬೇತಿ ನೀಡಿ ಅಥವಾ ಮಾರ್ಗದರ್ಶನ ನೀವು ಮಾಡಿ.

·         ಗಲಿಬಿಲಿ ನಿವಾರಿಸಿ. ನಾಯಕರಾಗಿ ನೀವು ಎತ್ತರದ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವದರಿಂದ ಸರಿಯಾದ ಮಾಹಿತಿ ತಂಡಕ್ಕೆ ಸಿಗುವಂತೆ ಮಾಡಿ, ಅವರಲ್ಲಿರುವ ಸಂದೇಹ/ಗಲಿಬಿಲಿ ಹೋಗಲಾಡಿಸಿ.

·         ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿ.

ಮೇಲಿನ ಅಂಶಗಳನ್ನು ನಾನು ತಂಡದ ನಾಯಕನ ಕೆಲಸ ಎಂದು ಬರೆದಿದ್ದೇನೆ ಆದರೆ ತಂಡದ ಸದಸ್ಯರೂ ಸಹ ಇದನ್ನು ಮನದಟ್ಟು ಮಾಡಿಕೊಂಡಲ್ಲಿ, ತಂಡದ ಸಮನ್ವಯತೆ ಹೆಚ್ಚಾಗಿ, ಪರಸ್ಪರ ಸಹಕಾರ, ಸೌಹಾರ್ದತೆ ಬೆಳೆಯುತ್ತದೆ.

ವಿಜಯಶಾಲೀ ತಂಡ ನಿಮ್ಮದಾಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...