ದೆಹಲಿಯ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ನಡುವೆ ಮತ್ತೆ ಘರ್ಷಣೆ ನಡೆದಿದ್ದು ಕೈ-ಕೈ ಮಿಲಾಯಿಸಿದ್ದಾರೆ. ಆರು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಮತ ಎಣಿಕೆ ವೇಳೆ ಈ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಸ್ಥಾಯಿ ಸಮಿತಿಯು ದೆಹಲಿ ಮಹಾನಗರ ಪಾಲಿಕೆಯಲ್ಲಿ ಪ್ರಬಲ ಪಾತ್ರವನ್ನು ವಹಿಸುವುದರಿಂದ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ಯೋಜನೆಗಳಿಗೆ ಆರ್ಥಿಕ ಅನುಮೋದನೆ ನೀಡಲು, ಉಪ ಸಮಿತಿಗಳನ್ನು ನೇಮಿಸಲು ಮತ್ತು ಚರ್ಚೆಗಳನ್ನು ನಡೆಸಲು ಮತ್ತು ನೀತಿಗಳನ್ನು ಅಂತಿಮಗೊಳಿಸಲು ಸಮಿತಿಗೆ ಅಧಿಕಾರವಿದೆ ಹಾಗಾಗಿ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಮತದಾನವು ಎರಡೂ ಪಕ್ಷಗಳಿಗೆ ಮುಖ್ಯವಾಗಿದೆ.
ಶುಕ್ರವಾರ ನಡೆದ ಮತದಾನದಲ್ಲಿ 250 ಕೌನ್ಸಿಲರ್‌ಗಳ ಪೈಕಿ 242 ಜನ ಮತ ಚಲಾಯಿಸಿದ್ದಾರೆ. ಎಂಟು ಕೌನ್ಸಿಲರ್‌ಗಳು – ಮನ್‌ದೀಪ್ ಸಿಂಗ್, ಅರಿಬಾ ಖಾನ್, ನಾಜಿಯಾ ಡ್ಯಾನಿಶ್, ಸಮೀರ್ ಅಹ್ಮದ್, ಶಗುಫ್ತಾ ಚೌಧರಿ ಜುಬೇರ್, ಸಬಿಲಾ ಬೇಗಂ, ನಾಜಿಯಾ ಖಾತೂನ್ ಮತ್ತು ಜರೀಫ್ ತಮ್ಮ ಮತ ಚಲಾಯಿಸಲಿಲ್ಲ ಎಂದು ಎಂದು ನೂತನ ಮೇಯರ್ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮೇಯರ್ ಚುನಾವಣೆ: ಎಎಪಿಗೆ ಗೆಲುವು, ಬಿಜೆಪಿಗೆ ಮುಖಭಂಗ
ಈ ನಡುವೆ ಒಬೆರಾಯ್ ಅವರು ಒಂದು ಮತವನ್ನು ಅಸಿಂಧು ಎಂದು ಘೋಷಿಸಿದ್ದಾರೆ. ಇದೇ ಕಾರಣಕ್ಕೆ ಗದ್ದಲ ಗಲಾಟೆ ಪ್ರಾರಂಭವಾಯಿತು, ಇದರಿಂದಾಗಿ ಬಿಜೆಪಿ ಕೌನ್ಸಿಲರ್‌ಗಳು ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸಿದರು. ಅಷ್ಟಾದರೂ, ಅಸಿಂಧು ಮತವಿಲ್ಲದೆ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಮೇಯರ್ ಹೇಳಿದರು.
#WATCH | Ruckus breaks out at Delhi Civic Centre once again as AAP and BJP Councillors jostle, manhandle and rain blows on each other. This is the third day of commotions in the House. pic.twitter.com/Sfjz0osOSk
— ANI (@ANI) February 24, 2023
ಈ ವೇಳೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರು ಪರಸ್ಪರ ಗುದ್ದುವುದು, ಒದೆಯುವುದು ಮತ್ತು ತಳ್ಳುವುದನ್ನು ವೀಡಿಯೊಗಳಲ್ಲಿ ನೋಡಬಹುದು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಒಬ್ಬರು ನೆಲದ ಮೇಲೆ ಬಿದ್ದಿದ್ದಾರೆ. ಬಿಜೆಪಿ ಕೌನ್ಸಿಲರ್ ಮೀನಾಕ್ಷಿ ಶರ್ಮಾ ಅವರು ಆಪ್‌ನ ಯಾರೋ ಹರಿತವಾದ ವಸ್ತುವಿನಿಂದ ಹೊಡೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆಂದು ಎಎನ್‌ಐ ವರದಿ ಮಾಡಿದೆ.
”ಪುರುಷ ಕೌನ್ಸಿಲರೊಬ್ಬರು ನನ್ನ ಕುತ್ತಿಗೆಯನ್ನು ಮುಟ್ಟಿದರು” ಎಂದು ಶರ್ಮಾ ಹೇಳಿದರು. ಆಕೆ (ಒಬೆರಾಯ್) ದೆಹಲಿಯ ಮೇಯರ್ ಆಗಿದ್ದಾರೋ ಅಥವಾ ಎಎಪಿ ಪಕ್ಷದವಳಾಗಿದ್ದಾಳೋ ಗೊತ್ತಿಲ್ಲ. ಅವಳು ಕೇಜ್ರಿವಾಲ್ ಮತ್ತು ಇತರ ನಾಯಕರ ಆದೇಶದಂತೆ ಕಾರ್ಯನಿರ್ವಹಿಸುತ್ತಾಳೆ ಎಂದು ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಒಂದು ಮತ ಸಿಂಧುವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. “ಇದು ಅಮಾನ್ಯವಾಗಿದ್ದರೆ, ನಮ್ಮ ಲೆಕ್ಕಾಚಾರದ ಪ್ರಕಾರ, ಎಎಪಿ ಅಭ್ಯರ್ಥಿ ಗೆಲ್ಲುತ್ತಾರೆ” ಎಂದು ಅಸಿಂಧು ಮತ ಎಂದು ಗುರುತಿಸಿಕೊಂಡಿರುವ ಬಿಜೆಪಿ ಕೌನ್ಸಿಲರ್ ಎನ್‌ಡಿಟಿವಿಗೆ ತಿಳಿಸಿದರು.
”ಬಿಜೆಪಿ ತನ್ನ ಸೋಲನ್ನು ಒಪ್ಪಿಕೊಂಡು ತನ್ನ ಗೂಂಡಾಗಿರಿಯನ್ನು ನಿಲ್ಲಿಸುವ ಸಮಯ ಬಂದಿದೆ” ಎಂದು ಎಎಪಿ ಶಾಸಕ ಅತಿಶಿ ಹೇಳಿದ್ದಾರೆ.
”ಇಂದು ಬಿಜೆಪಿಯು ಮಹಾನಗರ ಪಾಲಿಕೆಯಲ್ಲಿ ಗೂಂಡಾಗಿರಿ ಪ್ರದರ್ಶಸಿದೆ. ಸ್ಥಾಯಿ ಸಮಿತಿ ಚುನಾವಣೆ ನಡೆಯುತ್ತಿತ್ತು. ಮತ ಎಣಿಕೆ ಆರಂಭವಾದಾಗ ಬಿಜೆಪಿ ಸೋಲುವುದು ಗೊತ್ತಾಗುತ್ತಿದ್ದಂತೆ ಗದ್ದಲ ಸೃಷ್ಟಿಸಿತು. ಮೇಯರ್ ಮೇಲೆ ಬಿಜೆಪಿ ಪುರುಷ ಸದಸ್ಯರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಅತಿಶಿ ಹೇಳಿದರು.
ಗುರುವಾರ ಕೂಡ ಇದೇ ರೀತಿ ಘಟನೆ ನಡೆದಿತ್ತು. ಎರಡು ಪಕ್ಷಗಳ ಕೌನ್ಸಿಲರ್‌ಗಳು ಪರಸ್ಪರ ನೀರಿನ ಬಾಟಲಿಗಳು ಮತ್ತು ಹಣ್ಣುಗಳನ್ನು ಎಸೆದಿದ್ದಾರೆ. ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡದೆ ಸದನವನ್ನು ಮುಂದೂಡಲಾಗಿತ್ತು.
ಒಬೆರಾಯ್ ಅವರು ಕೌನ್ಸಿಲ್‌ನ ಮೇಯರ್ ಆಗಿ ಆಯ್ಕೆಯಾದ ನಂತರ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರದ ಗೊಂದಲ ಉಂಟಾಗುತ್ತದೆ. ಗಮನಾರ್ಹವೆಂದರೆ, ಎಎಪಿ ಮತ್ತು ಬಿಜೆಪಿ ನಡುವಿನ ಸುದೀರ್ಘ ಜಗಳದಿಂದಾಗಿ ಡಿಸೆಂಬರ್‌ನಲ್ಲಿ ನಡೆದ ಪಾಲಿಕೆ ಚುನಾವಣೆಯ ನಂತರ ಮೇಯರ್ ಚುನಾವಣೆಗಳು ಮೂರು ಬಾರಿ ಮುಂದೂಡಲ್ಪಟ್ಟಿತು. ಎಎಪಿಯ ಕೌನ್ಸಿಲರ್‌ಗಳು ಆಲ್ಡರ್‌ಮನ್‌ಗಳಿಗೆ ಮತ ಚಲಾಯಿಸಲು ಅವಕಾಶ ನೀಡುವ ಬಿಜೆಪಿಯ ವಾದವನ್ನು ವಿರೋಧಿಸಿದ್ದರು.
ಸುಪ್ರೀಂ ಕೋರ್ಟ ಫೆಬ್ರವರಿ 18ರಂದು ಎಎಪಿಗೆ ಪ್ರಮುಖ ಪರಿಹಾರ ನೀಡಿತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ನಾಮನಿರ್ದೇಶಿತ ಸದಸ್ಯರು ಮೇಯರ್ ಹುದ್ದೆಗೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಅದಾದನಂತರ ಮೇಯ೬ರ್ ಚುನಾವಣೆ ನಡೆಯಿತು, ಎಎಪಿ ಅಭ್ಯರ್ಥಿ ಗೆಲವು ಸಾಧಿಸಿದರು. ಇದರಿಂದ ಬಿಜೆಪಿ ಭಾರೀ ಮುಖಭಂಗವಾಯಿತು.


