ಅಕ್ಟೋಬರ್ 10 ರಂದು ಬೆಂಗಳೂರು ವಿ.ವಿಯ ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಬಸ್ ಹರಿದು ತೀವ್ರ ಗಾಯಾಳುವಾಗಿದ್ದ ವಿದ್ಯಾರ್ಥಿನಿ ಶಿಲ್ಪಶ್ರೀ 13 ದಿನಗಳ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಅಪಘಾತವಾದ ಕೂಡಲೇ ವಿದ್ಯಾರ್ಥಿನಿಯನ್ನು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದುವರೆಗೂ 7 ಸರ್ಜರಿ ನಡೆಸಿದರೂ ಸಹ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದಾಸರಹಳ್ಳಿಯ ಶಿಲ್ಪಶ್ರೀ (22) ಬೆಂಗಳೂರಿ ವಿವಿಯಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಅಧ್ಯಯನ ಮಾಡುತ್ತಿದ್ದರು. ಅಕ್ಟೋಬರ್ 10 ರಂದು ಬಸ್ ಹತ್ತುವಾಗ ಬಸ್ ಚಲಿಸಿದ್ದರಿಂದ ಅವಗಢ ಸಂಭವಿಸಿತ್ತು. ಬಾಗಿಲಿನಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಾಗ ಹಿಂಭಾಗದ ಚಕ್ರ ಹರಿದಿದೆ, ಬಸ್ ಚಾಲಕ ಅಜಾಗರೂಕತೆಯಿಂತ ಚಾಲನೆ ಮಾಡಿದರಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿರುವ ಬೆಂಗಳೂರು ವಿ.ವಿ ವಿದ್ಯಾರ್ಥಿಗಳು ಮೂರು ದಿನಗಳ ಪ್ರತಿಭಟನೆ ನಡೆಸಿದ್ದರು.
ಬೆಂಗಳೂರು ವಿವಿಯ ಒಳಗೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕು. ವಿ.ವಿ ವತಿಯಿಂದಲೇ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಈ ಕುರಿತು ಹಲವು ಸುತ್ತಿನ ಮಾತುಕತೆಗಳು ಸಹ ನಡೆದಿದ್ದವರು. ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಲಾಗಿತ್ತು.
ಸದ್ಯ ವಿದ್ಯಾರ್ಥಿನಿಯ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಬೆಂಗಳೂರು ವಿವಿಯಲ್ಲಿ ಮತ್ತೆ ಬಿಗುವಿನ ವಾತವಾರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ: ಗುಂಡ್ಲುಪೇಟೆ: ದಲಿತ ಮಹಿಳೆಯ ಕೆನ್ನೆಗೆ ಥಳಿಸಿದ ಸಚಿವ ಸೋಮಣ್ಣ


