ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯಲ್ಲಿ 22 ವರ್ಷದ ಯುವಕನನ್ನು ನೆರೆಹೊರೆಯವರು ಸೇರಿಕೊಂಡು ಮರಕ್ಕೆ ಕಟ್ಟಿ ಸೋಮವಾರ ರಾತ್ರಿ ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ನೆರೆಯ ಮನೆಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡ ಜನರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ವರದಿಗಳು ಹೇಳುವಂತೆ ಯುವಕನಿಗೆ ಬೆಂಕಿ ಹಚ್ಚುವ ಮೊದಲು, ಯುವಕನ ಮನೆಗೆ ನುಗ್ಗಿದ ಹಲವಾರು ಜನರು, ಅವನನ್ನು ಹೊರಗೆ ಎಳೆದು ಥಳಿಸಿ, ಮರಕ್ಕೆ ಕಟ್ಟಿದ್ದರು ಎಂದಿದೆ.
ಗ್ರಾಮಸ್ಥರ ಗುಂಪೊಂದು ಘಟನೆಯ ನಂತರ ಹಳ್ಳಿಗೆ ಬಂದ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿ ಎರಡು ವಾಹನಗಳು ಮತ್ತು ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಹತ್ಯೆಗೀಡಾದ ಯುವಕನನ್ನು ಅಂಬಿಕಾ ಪ್ರಸಾದ್ ಪಟೇಲ್ (22) ಎಂದು ಗುರುತಿಸಲಾಗಿದ್ದು, ಕಳೆದ ಒಂದು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಯುವತಿಯ ಕುಟುಂಬ ಇದಕ್ಕೆ ವಿರುದ್ಧವಾಗಿತ್ತು. ಕೆಲವು ತಿಂಗಳ ಹಿಂದೆ ಯುವತಿಯೂ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿ ಕಾನ್ಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಆದರೆ ಕೆಲವು ವಾರಗಳ ಹಿಂದೆ, ಅವರಿಬ್ಬರ ಆತ್ಮೀಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
“ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವತಿ ಹಾಗೂ ಆಕೆಯ ಪೋಷಕರು ಅಂಬಿಕಾ ಪಟೇಲ್ ಅವರನ್ನು ನಿಂದಿಸಿದ್ದರು. ಯುವತಿಯ ಮುಗ್ದತೆಯನ್ನು ಬಲತ್ಕಾರ ಮಾಡಲು ಬಳಸಿದ್ದಕ್ಕಾಗಿ ಪಟೇಲ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡಾ ದಾಖಲಿಸಲಾಗಿತ್ತು. ಈಗ ನೆರೆಯ ಕೆಲವು ಜನರು ಅವರನ್ನು ಜೀವಂತ ಸುಟ್ಟುಹಾಕಲಾಗಿದೆ” ಎಂದು ಪ್ರತಾಪಗಡದ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ತನ್ನ ಮೇಲೆ ಪ್ರಕರಣ ದಾಖಲಾದ ನಂತರ ಅಂಬಿಕಾ ಪ್ರಸಾದ್ ಪಟೇಲ್ ಜೈಲಿಗೆ ಹೋಗಿದ್ದರು, ಆದರೆ ಮೇ 1 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಕೊರೊನಾ ಹಿನ್ನಲೆಯಲ್ಲಿ 71 ಜೈಲುಗಳಲ್ಲಿ ದಾಖಲಾದ 11,000 ಕೈದಿಗಳನ್ನು ಮುಕ್ತಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿತ್ತು.
ಯುವತಿಯ ತಂದೆ ಸೇರಿದಂತೆ ಅಪರಾಧದಲ್ಲಿ ಭಾಗವಹಿಸಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪಟೇಲ್ ಅವರ ಅರ್ಧ ಸುಟ್ಟ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.
ಓದಿ: ಜಾತಿ ವ್ಯವಸ್ಥೆಯ ಹೊಲಸು ಎತ್ತಿತೋರಿಸುವ ಪಲಾಸ 1978


