ಹಿಂದೂ ವರ್ತಕರ ವ್ಯಾಪಾರ ಮಳಿಗೆಗಳ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಸಂಘರ್ಷವನ್ನು ಮೂಡಿಸಲೆತ್ನಿಸಿದ ದುಷ್ಕರ್ಮಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉಪ್ಪಿನಂಗಡಿ ಪಾರಿಜಾತ ಕಾಂಪ್ಲೆಕ್ಸ್‌ನಲ್ಲಿರುವ ನ್ಯೂ ಅಶ್ವಿನಿ ಟ್ರೇಡರ್ಸ್‌ನ ವರ್ತಕ ಗಣೇಶ್ ಬಿ (52) ಅವರು ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಜರುಗಿಸಿದ್ದಾರೆ. ಐಪಿಸಿ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ ಸೃಷ್ಟಿಸಲು ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಸುಳ್ಳು ಸುದ್ದಿ ಹರಡಿದವರು ಯಾರೆಂಬುದು ಪತ್ತೆಯಾಗಿಲ್ಲ. ತನಿಖೆ ನಡೆಸಲಾಗುತ್ತಿದೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆ ‘ನಾನುಗೌರಿ.ಕಾಂ’ಗೆ ಖಚಿತಪಡಿಸಿದೆ. “ಬೇರ್‍ಯಾವುದೇ ಸೆಕ್ಷನ್ ದಾಖಲಿಸಲಾಗಿಲ್ಲ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗಣೇಶ್ ಬಿ ಅವರು ತಮ್ಮ ದೂರಿನಲ್ಲಿ, “ಉಪ್ಪಿನಂಗಡಿಯಲ್ಲಿ ನ್ಯೂ ಅಶ್ವಿನಿ ಟ್ರೇಡರ್ಸ್ ಎಂಬ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದೇನೆ. ಸಮಾಜದ ಎಲ್ಲಾ ಸಮುದಾಯದ ಮಂದಿಯೂ ನಮ್ಮಲ್ಲಿ ಗ್ರಾಹಕರಾಗಿದ್ದು, ವ್ಯಾಪಾರಿ ಧರ್ಮ ಪಾಲನೆಯೊಂದಿಗೆ ವ್ಯವಹಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕಿಡಿಗೇಡಿಗಳು ನನ್ನ ಮಳಿಗೆಯ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ದಿನಾಂಕ 24/03/2022ರ ಗುರುವಾರದಂದು ವಾಟ್ಸಪ್ ಮೂಲಕ ಶಾಂತಿ ಭಂಗ ಹಾಗೂ ಮತೀಯ ದ್ವೇಷ ಮೂಡಿಸುವ ರೀತಿಯಲ್ಲಿ ದುಷ್ಕರ್ಮಿಗಳು ಸಂದೇಶವೊಂದನ್ನು ಸೃಷ್ಟಿಸಿ ಸಮಾಜದಲ್ಲಿ ಕ್ಲೇಷ ಮೂಡಿಸಲು ಯತ್ನಿಸಿದ್ದಾರೆ. ಆ ಮೂಲಕ ವ್ಯವಹಾರಕ್ಕೆ ತೊಂದರೆಯೊಡ್ಡುವ ಕೃತ್ಯವನ್ನು ಎಸಗಿದ್ದಾರೆ” ಎಂದು ಗಣೇಶ್ ಆರೋಪಿಸಿದ್ದಾರೆ.
“ಸದರಿ ಸಂದೇಶದಲ್ಲಿ ಹಿಂದೂ ವರ್ತಕರ ಒಕ್ಕೂಟ ಉಪ್ಪಿನಂಗಡಿ ಎಂದೂ ಉಲ್ಲೇಖಿಸಿ ನನ್ನ ಅಂಗಡಿಯ ಹೆಸರನ್ನೂ ಸೇರಿದಂತೆ 32 ಹಿಂದೂ ಸಮುದಾಯದ ಅಂಗಡಿಗಳ ಹೆಸರನ್ನು ಬಳಸಿ, -ನಮ್ಮ ಅಂಗಡಿಗಳಿಂದ ಯಾವುದೇ ಸಾಮಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ- ಎಂಬಿತ್ಯಾದಿಯಾಗಿ ಮತೀಯ ದ್ವೇಷದ ವಾಕ್ಯಗಳನ್ನು ರಚಿಸಿ ಸಾಮಾಜಿಕ ತಾಲತಾಣಗಳಲ್ಲಿ ಹರಿಯಬಿಡಲಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಇದು ಪ್ರಸ್ತುತ ಸನ್ನಿವೇಶದಲ್ಲಿ ಮತೀಯ ಸಂಘರ್ಷವನ್ನು ಉಂಟು ಮಾಡುವ ಹುನ್ನಾರದಿಂದ ನಡೆಸಿದ ಷಡ್ಯಂತ್ರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ, ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸಿದ ದುಷ್ಕರ್ಮಿಗಳ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ” ಎಂದು ಕೋರಿದ್ದು, ಸುಳ್ಳು ಸುದ್ದಿಯ ಸ್ಕ್ರೀನ್ ಶಾಟ್‌ಗಳನ್ನು ದೂರಿನಲ್ಲಿ ಲಗತ್ತಿಸಿದ್ದಾರೆ.

ಉಪ್ಪಿನಂಗಡಿ ವರ್ತಕರ ಖಂಡನೆ
ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಕ್ರಮ ಜರುಗಿಸಬೇಕೆಂದು ಉಪ್ಪಿನಂಗಡಿ ಹಿಂದೂ ವರ್ತಕರು ಆಗ್ರಹಿಸಿರುವುದಾಗಿ ‘ವಾರ್ತಾ ಭಾರತಿ’ ವರದಿ ಮಾಡಿದೆ.
“ಉಪ್ಪಿನಂಗಡಿಯ ಹಿಂದೂ ವರ್ತಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಯನ್ನು ಉಪ್ಪಿನಂಗಡಿಯ ಎಲ್ಲಾ ವರ್ತಕರು ಖಂಡಿಸಿದ್ದು, ಇದರ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವರ್ತಕರ ನಿಯೋಗ ಪುತ್ತೂರು ಡಿವೈಎಸ್‌ಪಿ ಗಾನಕುಮಾರಿ ಮತ್ತು ಉಪ್ಪಿನಂಗಡಿ ಸಬ್ ಇನ್‌ಸ್ಪೆಕ್ಟರ್ ಕಾಂಬಳೆ ಅವರನ್ನು ಭೇಟಿಯಾಗಿ ದೂರು ನೀಡಿದೆ” ಎಂದು ವರದಿಯಾಗಿದೆ.
ನಿಯೋಗದಲ್ಲಿ ಯತೀಶ್ ಶೆಟ್ಟಿ ಸುವ್ಯ ಕ್ರೀಮ್ ಪಾರ್ಲರ್, ಸದಾನಂದ ಕಾರ್ ಕ್ಲಬ್, ಶಿವಪ್ರಸಾದ್ ರಾಮ್ ಮೆಡಿಕಲ್ಸ್, ಸಂದೀಶ್ ಶೆಟ್ಟಿ ಟಿಫಿನ್ ಹಾಲ್, ಪ್ರಕಾಶ್ ಮತ್ತು ಸಹೋದರರು ಅಶ್ವಿನಿ ಟ್ರೇಡರ್ಸ್, ಜಗದೀಶ್ ನಾಯಕ್ ಕರಾಯ, ಚೇತನ್ ನಾಯಕ್ ಕರಾಯ, ನಿತ್ಯಾನಂದ ಕಿಣಿ ಕರಾಯ, ಜಯರಾಮ್ ಅನ್ನಪೂರ್ಣ, ವೆಂಕಟರಮಣ ನಾಯಕ್, ಬಿಜ್ರೇಶ್ ಬಿ ಡಾಟ್ ಹಾಜರಿದ್ದರು.
ಇವರೊಂದಿಗೆ ವರ್ತಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಡಿಕೋಸ್ತಾ, ಉಪಾಧ್ಯಕ್ಷರಾದ ಶಬೀರ್ ಕೆಂಪಿ, ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಯೂನಿಕ್, ಸದಸ್ಯರಾದ ಇರ್ಷಾದ್ ಯು.ಟಿ., ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ತೌಫೀನ್ ಯು.ಟಿ., ಇಬ್ರಾಹಿಂ ಆಚಿ, ಜಲೀಲ್ ಮುಕ್ರಿ, ಉಕ್ಬಾಲ್ ಪಾಂಡೇಲ್ ಉಪಸ್ಥಿತರಿದ್ದರು.
ಇದನ್ನೂ ಓದಿರಿ: ಹರ್ಷ ಹತ್ಯೆ ಬಳಿಕ ಹಿಂಸಾಚಾರ: ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯದಲ್ಲಿ ಖಾಸಗಿ ಅರ್ಜಿ


