ಬೆಂಗಳೂರಿನ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಪ್ರಿಲ್ 5ರ ಸೋಮವಾರ ಮಧ್ಯರಾತ್ರಿ ನಡೆದ ದಲಿತ ಯುವಕ ಚಂದ್ರು ಕೊಲೆಯು, ಉರ್ದು ಭಾಷೆಯ ಕಾರಣಕ್ಕೆ ಸಂಭವಿಸಿಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ‘ವಾರ್ತಾಭಾರತಿ’ ವರದಿ ಮಾಡಿದೆ.
ಮೃತ ಚಂದ್ರು ತನ್ನ ಸ್ನೇಹಿತ ಸೈಮನ್ ರಾಜ್ ಜೊತೆಗೆ ಊಟಕ್ಕೆ ತೆರಳಿ ಬೈಕ್‌ನಲ್ಲಿ ಹಿಂದಿರುಗುತ್ತಿರುವಾಗ, ಮತ್ತೊಂದು ಕಡೆಯಿಂದ ಬಂದ ಆರೋಪಿ ಶಾಹಿದ್ ಚಾಲನೆ ಮಾಡುತ್ತಿದ್ದ ಬೈಕ್ ಪರಸ್ಪರ ತಗುಲಿತ್ತು. ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ನಂತರ ಗಲಾಟೆ ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಗಲಾಟೆಗೆ ಇತರರು ಸೇರಿಕೊಂಡಿದ್ದರು. ಇದರ ನಂತರ ಆರೋಪಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ಗಾಯಾಳು ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದರೂ ತೀವ್ರ ರಕ್ತ ಸ್ರಾವದಿಂದ ಅವರು ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಪ್ರಿಲ್ 6 ರಂದು 3 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಚಂದ್ರು ಹತ್ಯೆ ಕುರಿತು ಸುಳ್ಳು ಹೇಳಿದ ಗೃಹ ಸಚಿವ; ಪ್ರಚಾರ ಮಾಡಿದ ಬಲಪಂಥೀಯ ಟ್ರೋಲ್ ಪೇಜ್!
ಕೊಲೆಗೆ ಬೈಕ್ ವಿಚಾರವಾಗಿ ನಡೆದ ಜಗಳವೇ ಪ್ರಮುಖ ಕಾರಣವಾಗಿದೆ ಹೊರತು ಉರ್ದು ಭಾಷೆಯಲ್ಲ ಎಂದು ಕೇಂದ್ರ ಗುಪ್ತಚರ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ವಾರ್ತಾಭಾರತಿ ಉಲ್ಲೇಖಿಸಿದ್ದು, “ಪ್ರಕರಣ ಸಂಬಂಧ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಚಂದ್ರು ಸ್ನೇಹಿತ ಸೈಮನ್ ರಾಜು ಹಾಗೂ ಸ್ಥಳೀಯರ ಹೇಳಿಕೆಗಳನ್ನು ಸಂಗ್ರಹಿಸಿದ ಗುಪ್ತದಳ ವರದಿ ತಯಾರಿಸಿದೆ. ಬೈಕ್ ತಾಕಿದ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳ ನಡೆದು ಕೊನೆಗೆ ಚಂದ್ರು ಕೊಲೆಯಲ್ಲಿ ಅಂತ್ಯವಾಗಿದೆ” ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಚಂದ್ರು ಕೊಲೆ ನಡೆದ ನಂತರ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ಶಾಸಕರು, ಬಿಜೆಪಿ ಬೆಂಬಲಿತ ಸಂಘಪರಿವಾರದ ಕಾರ್ಯಕರ್ತರು ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದ್ದರು. ಘಟನೆ ಕುರಿತು ಆರಂಭದಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, “ಚಂದ್ರು ಎಂಬ ದಲಿತ ಯುವಕನಿಗೆ ಉರ್ದು ಮಾತನಾಡಲು ಬಾರದ ಕಾರಣಕ್ಕೆ ಕೆಲ ಮುಸ್ಲಿಂ ಯುವಕರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ” ಎಂದಿದ್ದರು.
ಗೃಹ ಸಚಿವರ ಹೇಳಿಕೆ ಬೆನ್ನಿಗೆ ಬಹುತೇಕ ಮಾಧ್ಯಮಗಳು ಅದನ್ನೆ ವರದಿ ಮಾಡಿದ್ದವು. ಇನ್ನು ಮಾಜಿ ಸಚಿವ ಸಿಟಿ ರವಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ಉರ್ದು ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಒಬ್ಬ ಹಿಂದೂ ಯುವಕನ ಕೊಲೆ ಆಗುತ್ತೆ ಎಂದರೆ ನಾವು ಯಾವ ದೇಶದಲ್ಲಿದ್ದೇವೆ? ಮುಸ್ಲಿಮರು ಕೊಲೆಯಾದರೆ ಮಾತನಾಡುವ ಸಿದ್ದರಾಮನ್ಯನವರು ಹಿಂದೂಗಳ ಕೊಲೆ ಆದಾಗ ಏಕೆ ಮಾತನಾಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಚಂದ್ರು ಕೊಲೆ ಪ್ರಕರಣ: ಕೋಮು ದ್ವೇಷದ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಬಿಜೆಪಿ ಮುಖಂಡರು ಮನಬಂದಂತೆ ಹೇಳಿಕೆ ನೀಡುವ ಮೂಲಕ ಕೋಮು ಪ್ರಚೋದನೆ ಕೊಡುತ್ತಿರುವುದನ್ನು ಗಮನಿಸಿ ಮಧ್ಯ ಪ್ರವೇಶಿಸಿದ್ದ ನಗರ ಪೋಲಿಸ್ ಆಯುಕ್ತರಾದ ಕಮಲ್ ಪಂತ್ “ಕೊಲೆ ನಡೆದಿರುವುದು ಬೈಕ್ ಅಪಘಾತದ ಕಾರಣಕ್ಕೆ ಹೊರತು ಉರ್ದು ಬಾರದಕ್ಕೆ ಕಾರಣಕ್ಕೆ ಅಥವಾ ಯಾವುದೇ ಕೋಮು ಆಯಾಮದಿಂದಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದರು.
ಇದರ ನಂತರ ಎಚ್ಚೆತ್ತುಕೊಂಡು ಗೃಹ ಸಚಿವ ಆರಗ ಜ್ಞಾನೇಂದ್ರ, “ಬೆಂಗಳೂರಿನ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತಕ್ಷಣಕ್ಕೆ ಸಿಕ್ಕ ಮಾಹಿತಿಗಳನ್ನು ಮಾಧ್ಯಮಗಳ ಎದುರು ಹೇಳಿಬಿಟ್ಟಿದ್ದೆ. ಆದರೆ ಇದು ಉರ್ದು ಭಾಷೆ ಬಾರದ ಕಾರಣಕ್ಕೆ ನಡೆದ ಕೊಲೆಯಲ್ಲ. ಬೈಕ್ ಡಿಕ್ಕಿ ಕಾರಣದಿಂದಾದ ಕೊಲೆಯಾಗಿದೆ” ಎಂದು ತನ್ನ ಹಳೆಯ ಹೇಳಿಕೆಗೆ ಕ್ಷಮೆಯಾಚಿಸಿದ್ದರು. ಗೃಹ ಸಚಿವರ ಈ ಬೇಜವಾಬ್ದಾರಿ ಹೇಳಿಕೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.



ಕಾರಣ ಏನೇ ಇರಲಿ ಸಾಯಿಸುವುದು ಸರಿಯೇ