Homeಮುಖಪುಟಚಂದ್ರು ಕೊಲೆ ಪ್ರಕರಣ: ಕೋಮು ದ್ವೇಷದ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ ಗೃಹ ಸಚಿವ...

ಚಂದ್ರು ಕೊಲೆ ಪ್ರಕರಣ: ಕೋಮು ದ್ವೇಷದ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಕೊಲೆ ನಡೆದಿರುವುದು ಬೈಕ್ ಅಪಘಾತದ ಕಾರಣಕ್ಕೆ ಹೊರತು ಉರ್ದು ಬಾರದಕ್ಕೆ ಕಾರಣಕ್ಕೆ ಅಥವಾ ಯಾವುದೇ ಕೋಮು ಆಯಾಮದಿಂದಲ್ಲ - ಕಮಲ್ ಪಂತ್

- Advertisement -
- Advertisement -

ಬೆಂಗಳೂರಿನ ಚಂದ್ರು ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಕೋಮು ದ್ವೇಷಕ್ಕೆ ಕಾರಣರಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಆದರೆ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷದ ಪೋಸ್ಟ್‌ಗಳು ಹರಿದಾಡುತ್ತಲೇ ಇವೆ!

ಪ್ರಕರಣದ ಹಿನ್ನೆಲೆ

ಸೋಮವಾರ ತಡರಾತ್ರಿ ಹಳೇ ಗುಟ್ಟಳ್ಳಿಯಲ್ಲಿ ಬೈಕ್ ಡಿಕ್ಕಿ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ ನಡೆದಿತ್ತು. ಈ ಗಲಾಟೆಯಲ್ಲಿ ಚಂದ್ರು ಎಂಬ ವ್ಯಕ್ತಿ ಮೃತಪಟ್ಟಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, “ಚಂದ್ರು ಎಂಬ ದಲಿತ ಯುವಕನಿಗೆ ಉರ್ದು ಮಾತನಾಡಲು ಬಾರದ ಕಾರಣಕ್ಕೆ ಕೆಲ ಮುಸ್ಲಿಂ ಯುವಕರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ” ಎಂದಿದ್ದರು.

ಗೃಹ ಸಚಿವರ ಹೇಳಿಕೆ ಬೆನ್ನಿಗೆ ಬಹುತೇಕ ಮಾಧ್ಯಮಗಳು ಅದನ್ನೆ ವರದಿ ಮಾಡಿದ್ದವು. ಇನ್ನು ಮಾಜಿ ಸಚಿವ ಸಿಟಿ ರವಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ಉರ್ದು ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಒಬ್ಬ ಹಿಂದೂ ಯುವಕನ ಕೊಲೆ ಆಗುತ್ತೆ ಎಂದರೆ ನಾವು ಯಾವ ದೇಶದಲ್ಲಿದ್ದೇವೆ? ಮುಸ್ಲಿಮರು ಕೊಲೆಯಾದರೆ ಮಾತನಾಡುವ ಸಿದ್ದರಾಮನ್ಯನವರು ಹಿಂದೂಗಳ ಕೊಲೆ ಆದಾಗ ಏಕೆ ಮಾತನಾಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರು.

ಬಿಜೆಪಿ ಮುಖಂಡರು ಮನಬಂದಂತೆ ಹೇಳಿಕೆ ನೀಡುವ ಮೂಲಕ ಕೋಮು ಪ್ರಚೋದನೆ ಕೊಡುತ್ತಿರುವುದನ್ನು ಗಮನಿಸಿ ಮಧ್ಯಪ್ರವೇಶಿಸಿದ ನಗರ ಪೋಲಿಸ್ ಆಯುಕ್ತರಾದ ಕಮಲ್ ಪಂತ್ “ಕೊಲೆ ನಡೆದಿರುವುದು ಬೈಕ್ ಅಪಘಾತದ ಕಾರಣಕ್ಕೆ ಹೊರತು ಉರ್ದು ಬಾರದಕ್ಕೆ ಕಾರಣಕ್ಕೆ ಅಥವಾ ಯಾವುದೇ ಕೋಮು ಆಯಾಮದಿಂದಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದರು.

“ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ (05.04.2022) ನಡೆದ ಕೊಲೆ ಪ್ರಕರಣದಲ್ಲಿ ಸೈಮನ್ ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಮತ್ತು ಶಾಹಿದ್ ಚಾಲನೆ ಮಾಡುತ್ತಿದ್ದ ಮತ್ತೊಂದು ಬೈಕುಗಳ ಪರಸ್ಪರ ತಗುಲಿವೆ. ಈ ವಿಷಯವು ಗಲಾಟೆಗೆ ಕಾರಣವಾಗಿದ್ದು, ಈ ಗಲಾಟೆಗೆ ಇತರರು ಸೇರಿಕೊಂಡಿರುತ್ತಾರೆ. ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ & ತನಿಖೆ ಮುಂದುವರೆದಿದೆ” ಎಂದು ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.

ನಂತರ ಹಲವಾರು ಮಾಧ್ಯಮಗಳು ಅಂದು ನಡೆದ ಸತ್ಯ ಸುದ್ದಿಯನ್ನು ವರದಿ ಮಾಡಿದವು. ಆಗ ಎಚ್ಚೆತ್ತುಕೊಂಡು ಗೃಹ ಸಚಿವರು, “ಬೆಂಗಳೂರಿನ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತಕ್ಷಣಕ್ಕೆ ಸಿಕ್ಕ ಮಾಹಿತಿಗಳನ್ನು ಮಾಧ್ಯಮಗಳ ಎದುರು ಹೇಳಿಬಿಟ್ಟಿದ್ದೆ. ಆದರೆ ಇದು ಉರ್ದು ಭಾಷೆ ಬಾರದ ಕಾರಣಕ್ಕೆ ನಡೆದ ಕೊಲೆಯಲ್ಲ. ಬೈಕ್ ಡಿಕ್ಕಿ ಕಾರಣದಿಂದಾದ ಕೊಲೆಯಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ. ರಾಜ್ಯದ ಗೃಹಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಲು ಸಾಧ್ಯವೇ? ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ತಾವೇ ಕೋಮು ಪ್ರಚೋದನೆ ಮಾಡಿದರೆ ಹೇಗೆ ಎಂದು ಹಲವರು ಟೀಕಿಸಿದ್ದಾರೆ.

ಗೃಹ ಸಚಿವರ ವಿರುದ್ಧ ಸಿದ್ದರಾಮಯ್ಯ ಕಿಡಿ

ಈ ಕುರಿತು ವಿರೋಧ ಪಕ್ಷದ ಮುಖಂಡರಾದ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು, “ಯಾವುದೇ ಪ್ರಕರಣದ ಕುರಿತು ಹೇಳಿಕೆ ನೀಡುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂಬ ಕನಿಷ್ಟ ಪ್ರಜ್ಞೆ ಇಲ್ಲದವರಿಗೆ ಉನ್ನತ ಹುದ್ದೆ ನೀಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಹಿಂದೆ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ, ಶಿವಮೊಗ್ಗ ಹರ್ಷ ಕೊಲೆ ಪ್ರಕರಣ ನಡೆದಾಗ ಗೃಹ ಸಚಿವರ ಹೇಳಿಕೆ ಹೇಗಿತ್ತು ಎಂಬುದನ್ನು ನೋಡಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದ ಸಾಮರಸ್ಯ ಹಾಳು ಮಾಡುವಂತಹ ಹೇಳಿಕೆ ನೀಡಬಾರದು. ಆದರೆ ಅದನ್ನೆ ಮಾಡುತ್ತಿರುವವರನ್ನು ನಮ್ಮ ರಾಜ್ಯದ ಗೃಹ ಸಚಿವರಾಗಿ ಪಡೆದಿದ್ದು ಈ ನಾಡಿನ ದೌರ್ಭಾಗ್ಯ” ಎಂದು ಹೇಳಿದ್ದಾರೆ.

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು, “ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಚೋದಾನಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರೇ ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಅರೆಬರೆ ಮಾಹಿತಿ ಇಟ್ಟುಕೊಂಡು ಅತ್ಯಂತ ಬೇಜವಾಬ್ದಾರಿಯಿಂದ ಅವರು ಹೇಳಿಕೆ ನೀಡಿದ್ದಾರೆ” ಎಂದು ಟೀಕಿಸಿದ್ದಾರೆ.

ಕೊಲೆಯಾದ ಯುವಕನ್ನು ʼದಲಿತ ಯುವಕʼ ಎಂದು ಕರೆದ ಗೃಹ ಸಚಿವರು, ಎಲ್ಲಿಯೂ ಆತನನ್ನು ʼಹಿಂದೂ ಯುವಕʼ ಎಂದು ಕರೆಯಲಿಲ್ಲ. ಇದು ಏನನ್ನು ಸೂಚಿಸುತ್ತದೆ? ದಲಿತ ಯುವಕ ಹಿಂದೂ ಅಲ್ಲವೇ? ಯಾಕೆ ಈ ತಾರತಮ್ಯ? ಪ್ರತಿಯೊಂದು ವಿಚಾರವನ್ನು ಬಿಜೆಪಿಯವರು ರಾಜಕೀಕರಣಗೊಳಿಸುತ್ತಿದ್ದಾರೆ. ದಲಿತ ಯುವಕ ಕೊಲೆ ಆಗಿದ್ದಾನೆ ಎಂದು ಹೇಳುತ್ತಾ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಎಲ್ಲ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಅದನ್ನು ಬಿಟ್ಟು ಹೊಣೆಗೇಡಿತನದಿಂದ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಸುದರ್ಶನ್ ಟಿವಿ ಪತ್ರಕರ್ತೆಯನ್ನು ತರಾಟೆಗೆ ತೆಗೆದುಕೊಂಡ ಹಲ್ದಿರಾಮ್ಸ್ ಉದ್ಯೋಗಿ: ನೆಟ್ಟಿಗರ ಶ್ಲಾಘನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತಲೆ ಮೇಲೆ BJP ಟೋಪಿ ಹೆಗಲ ಮೇಲೆ BJP ದುಪಟ್ಟ ಇದ್ದರೆ ಸಹಜವಾಗಿ ಇಂಥ ಹೇಳಿಕೆಗಳು ಓತ ಪ್ರೋತವಾಗಿ ಹೊರಬರುವುದೋ ಏನೋ. ಮಾನ್ಯ ಸಚಿವರ ತಪ್ಪಲ್ಲ. ಎಲ್ಲಾ ಟೋಪಿ ದುಪಟ್ಟಗಳ ಮಹಿಮೆ.

LEAVE A REPLY

Please enter your comment!
Please enter your name here

- Advertisment -

Must Read