ಸ್ಪೈವೇರ್ ಪೆಗಾಸಸ್ ಬಳಸಿಕೊಂಡು 2019ರಲ್ಲಿ 1,400 ವಾಟ್ಸಾಪ್ ಬಳಕೆದಾರರ ಮೇಲೆ ಅನಧಿಕೃತವಾಗಿ ಕಣ್ಗಾವಲು ಇಟ್ಟಿರುವುದಕ್ಕೆ ಯುಎಸ್‌ನ ಜಿಲ್ಲಾ ನ್ಯಾಯಾಲಯವೊಂದು ಇಸ್ರೇಲಿ ಸೈಬರ್ ಗುಪ್ತಚರ ಕಂಪನಿ ಎನ್‌ಎಸ್‌ಒ ಗ್ರೂಪ್ ಅನ್ನು ಹೊಣೆ ಮಾಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಯುಎಸ್ ಮೂಲದ ತಂತ್ರಜ್ಞಾನ ಕಂಪನಿ ಮೆಟಾ ಒಡೆತನದ ವಾಟ್ಸಾಪ್ 2019ರಿಂದ ಇಸ್ರೇಲಿ ಸಂಸ್ಥೆಯೊಂದಿಗೆ ಕಾನೂನು ಹೋರಾಟದಲ್ಲಿ ತೊಡಗಿದೆ. ಏಪ್ರಿಲ್ ಮತ್ತು ಮೇ 2019ರಲ್ಲಿ ಎರಡು ವಾರಗಳ ಅವಧಿಯಲ್ಲಿ ತನ್ನ 1,400 ಬಳಕೆದಾರರ ವಿರುದ್ಧ ಎನ್‌ಎಸ್‌ಒ ಗ್ರೂಪ್‌ನ ಸ್ಪೈವೇರ್ ಅನ್ನು ಬಳಸಲಾಗಿದೆ ಎಂದು ವಾಟ್ಸಾಪ್ ಆರೋಪಿಸಿದೆ.
ಶುಕ್ರವಾರ (ಡಿ.20) ರಂದು ನೀಡಿದ ತೀರ್ಪಿನಲ್ಲಿ, ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಫಿಲ್ಲಿಸ್ ಹ್ಯಾಮಿಲ್ಟನ್ ಅವರು, ಎನ್‌ಎಸ್‌ಒ ಗ್ರೂಪ್ ವಂಚನೆ ಹಾಗೂ ದುರ್ಬಳಕೆ ತಡೆ ಕಾಯ್ದೆ ಮತ್ತು ಕ್ಯಾಲಿಫೋರ್ನಿಯಾ ಕಂಪ್ಯೂಟರ್ ಡೇಟಾ ಪ್ರವೇಶ ಮತ್ತು ವಂಚನೆ ತಡೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಎನ್‌ಎಸ್‌ಒ ವಾಟ್ಸಾಪ್‌ನ ಸೇವಾ ನಿಯಮಗಳನ್ನೂ ಉಲ್ಲಂಘಿಸಿದೆ ಎಂದು ನ್ಯಾಯಾಧೀಶ ಹ್ಯಾಮಿಲ್ಟನ್ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ನ್ಯಾಯಾಧೀಶ ಹ್ಯಾಮಿಲ್ಟನ್ ಅವರು ಇಸ್ರೇಲಿ ಸಂಸ್ಥೆಗೆ ಪೆಗಾಸಸ್ ಮತ್ತು ಅದರ ಇತರ ಸ್ಪೈವೇರ್ ಉತ್ಪನ್ನಗಳ ಕೋಡ್ ಅನ್ನು ಕಾನೂನು ಪ್ರಕ್ರಿಯೆಯ ಭಾಗವಾಗಿ ವಾಟ್ಸಾಪ್‌ಗೆ ಹಸ್ತಾಂತರಿಸುವಂತೆ ಆದೇಶಿಸಿದ್ದರು.
ಇಸ್ರೇಲಿ ಸಂಸ್ಥೆಯು ಅನಧಿಕೃತ ಕಣ್ಗಾವಲಿಗೆ ಅವಕಾಶ ನೀಡುವ ಗೂಢಚಾರ ಸಾಫ್ಟ್ವೇರ್ ಅನ್ನು ಸ್ಥಾಪಿಸಲು ವಾಟ್ಸಾಪ್‌ನ ದೋಷವನ್ನು ಬಳಸಿಕೊಂಡಿದೆ ಎಂದು ಆರೋಪಿಸಿ ಮೆಟಾ ಮೊಕದ್ದಮೆ ಹೂಡಿತ್ತು.
ತನ್ನ ಮೇಲಿನ ಆರೋಪಗಳ ಕುರಿತು ಎನ್‌ಎಸ್‌ಒ ಗ್ರೂಪ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ಸಂಸ್ಥೆ ವರದಿ ಮಾಡಿದೆ. ನ್ಯಾಯಾಲಯದ ತೀರ್ಪಿನ ಕುರಿತು ವಾಟ್ಸಾಪ್ ಮುಖ್ಯಸ್ಥ ಕ್ಯಾಥ್ಕಾರ್ಟ್ ಮಾತನಾಡಿದ್ದು, “ಈ ತೀರ್ಪು ಗೌಪ್ಯತೆಯ ಗೆಲುವು” ಎಂದು ಹೇಳಿದ್ದಾರೆ.
“ಸ್ಪೈವೇರ್ ಕಂಪನಿಗಳು ವಿನಾಯಿತಿ ಪಡೆಯಲು ಅಥವಾ ಅವರ ಕಾನೂನುಬಾಹಿರ ಕ್ರಮಗಳಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕ್ರಮ ಬೇಹುಗಾರಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಕಣ್ಗಾವಲು ಕಂಪನಿಗಳು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಕ್ಯಾಥ್ಕಾರ್ಟ್ ತಿಳಿಸಿದ್ದಾರೆ.
ಪೆಗಾಸಸ್ ಎಂಬ ಸ್ಪೈವೇರ್ ಅನ್ನು ಅಭಿವೃದ್ಧಿ ಪಡಿಸಿರುವ ಎನ್ಎಸ್ಒ ಅದನ್ನು ಭಾರತ ಸರ್ಕಾರ ಸೇರಿದಂತೆ ವಿಶ್ವದ ವಿವಿಧ ಸರ್ಕಾರಗಳಿಗೆ ಮಾರಾಟ ಮಾಡಿದೆ ಎಂಬ ಆರೋಪ ಸಂಸ್ಥೆಯ ಮೇಲಿದೆ.
ಪೆಗಾಸಸ್ ವೈರಸ್ ಅನ್ನು ಭಾರತದ ರಾಜಕಾರಣಿಗಳು ಮತ್ತು ಸಾಮಾಜಿಕ ಹೋರಾಟಗಾರರು ಸೇರಿದಂತೆ ಸರ್ಕಾರದ ವಿರುದ್ದ ಇರುವವರ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ ಎಂಬ ಆರೋಪ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕೇಳಿ ಬಂದಿತ್ತು.
ಇದನ್ನೂ ಓದಿ : ಟ್ರೋಲ್ ಮಾಡಿದ ಯೂಟ್ಯೂಬರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂದಾದ ‘ಸ್ವಯಂ ಘೋಷಿತ ಬಾಲ ಸಂತ’


