ತಿಂಗಳುಗಳ ಕಾಲ ನಡೆದ ವಾಗ್ವಾದ, ಆರೋಪ-ಪ್ರತ್ಯಾರೋಪ, ಆಮಿಷ, ಓಲೈಕೆ ಡೊನಾಲ್ಡ್ ಟ್ರಂಪ್ ಅವರ ಎರಡು ಹತ್ಯೆ ಪ್ರಯತ್ನಗಳ ಬಳಿಕ ಅಂತಿಮವಾಗಿ ಇಂದು (ನ.5) ಯುಎಸ್ ಅಧ್ಯಕ್ಷ ಸ್ಥಾನದ ಚುನಾವಣೆಯ ಮತದಾನ ನಡೆಯಲಿದೆ.
ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ವರದಿಗಳ ಪ್ರಕಾರ, ಈಗಾಗಲೇ 7.8 ಕೋಟಿಗೂ ಅಧಿಕ ಮತದಾರರು ಮೇಲ್-ಇನ್ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಯೂನಿವರ್ಸಿಟಿ ಆಫ್ ಫ್ಲೋರಿಡಾ ಎಲೆಕ್ಷನ್ ಲ್ಯಾಬ್ ತಿಳಿಸಿದೆ.
ಇಂದು ಮತದಾನವಾದರೂ, ಸಂಪೂರ್ಣ ಯುಎಸ್‌ನವರಿಗೆ ಒಂದೇ ಸಮಯಕ್ಕೆ ಬೆಳಗಾಗುವುದಿಲ್ಲ. ಆದ್ದರಿಂದ ಎಲ್ಲರಿಗೂ ಒಂದೇ ಸಮಯಕ್ಕೆ ಮತದಾನ ಕೇಂದ್ರಗಳಿಗೆ ಹೋಗಲು ಆಗುವುದಿಲ್ಲ. ಯುಎಸ್‌ನ ಭೂಭಾಗವು ಆರು ಸಮಯ ವಲಯಗಳನ್ನು ಹೊಂದಿದೆ. ಆದ್ದರಿಂದ, ಭಾರತೀಯ ಕಾಲಮಾನ (ಐಎಸ್‌ಟಿ) ಪರಿಗಣಿಸಿದಾಗ ವಿವಿಧ ಸಮಯಗಳಲ್ಲಿ ಮತಗಟ್ಟೆಗಳು ತೆರೆಯಲ್ಪಡುತ್ತವೆ.
ಯುಎಸ್‌ನಾದ್ಯಂತ ಮತಗಟ್ಟೆಗಳು ಬೆಳಿಗ್ಗೆ 7 ರಿಂದ 11 ರವರೆಗೆ (ಸ್ಥಳೀಯ ಕಾಲಮಾನ) ತೆರೆಯುವ ನಿರೀಕ್ಷೆಯಿದೆ. ಇದನ್ನು ಭಾರತೀಯ ಕಾಲಮಾನಕ್ಕೆ ಹೋಲಿಸಿದರೆ, ಇಂದು ಸಂಜೆ 3.30ರಿಂದ ರಾತ್ರಿ 8.30ರ ನಡುವೆ ಮತಗಟ್ಟೆಗಳು ತೆರೆಯಬಹುದು. ಯುಎಸ್ ಸ್ಥಳೀಯ ಕಾಲಮಾನದ ಪ್ರಕಾರ, ಇಂದು ಸಂಜೆ 5.30ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅಲ್ಲಿ ಮತದಾನ ಕೊನೆಗೊಳ್ಳುವ ಹೊತ್ತಿಗೆ, ಭಾರತದಲ್ಲಿ ನಾಳೆ (ನ.6, ಬುಧವಾರ) ಬೆಳಿಗ್ಗೆ 5.30 ಆಗಬಹುದು.
ಯುಎಸ್‌ನಲ್ಲಿ ಮತದಾನ ಪ್ರಕ್ರಿಯೆ ಕೊನೆಗೊಂಡ ನಂತರ ಎಣಿಕೆ ಆರಂಭವಾಗುವ ನಿರೀಕ್ಷೆ ಇದೆ. ಭಾರತೀಯ ಕಾಲಮಾನ ಪ್ರಕಾರ, ನಾಳೆ (ಬುಧವಾರ) ಮತ ಎಣಿಕೆ ಪ್ರಾರಂಭಗೊಳ್ಳಲಿದೆ. ಯುಎಸ್‌ನ ಪಶ್ಚಿಮ ಭಾಗಗಳಲ್ಲಿ ಮತದಾನ ನಡೆಯುತ್ತಿರುವಾಗಲೂ, ಪೂರ್ವ ಕರಾವಳಿ ಪ್ರದೇಶಗಳಲ್ಲಿ ಮತ ಎಣಿಕೆ ಶುರುವಾಗುವ ಸಾಧ್ಯತೆಯಿದೆ.
ಮತದಾನ ಕೊನೆಗೊಂಡ ಬಳಿಕ ಎಣಿಕೆ ಪ್ರಾರಂಭವಾದರೆ ಆರಂಭಿಕ ಟ್ರೆಂಡ್ ಮಾಹಿತಿ ನಮಗೆ ಲಭ್ಯವಾಗಬಹುದು. ಆದರೆ, ಅಂತಿಮ ಫಲಿತಾಂಶಕ್ಕೆ ಕೆಲ ದಿನಗಳು ಕಾಯಬೇಕಿದೆ. ಏಕೆಂದರೆ ವಿವಿಧ ಯುಎಸ್ ರಾಜ್ಯಗಳು ಮತಗಳ ಎಣಿಕೆಯ ವಿಭಿನ್ನ ವಿಧಾನಗಳನ್ನು ಹೊಂದಿವೆ. ನಂತರ ಮೇಲ್-ಇನ್ ಮತಪತ್ರಗಳ ಸಮಸ್ಯೆಯೂ ಇದೆ. ಅತಿ ಕಡಿಮೆ ಗೆಲುವಿನ ಅಂತರಗಳಿದ್ದಲ್ಲಿ, ಮತಗಟ್ಟೆ ಅಧಿಕಾರಿಗಳು ಮರು ಎಣಿಕೆ ಮಾಡಲು ನಿರ್ಧರಿಸಬಹುದು. ಮುಖ್ಯವಾಗಿ, ಫಲಿತಾಂಶಗಳಿಗೆ ಕಾನೂನು ಸವಾಲುಗಳು ಇರಬಹುದು. ಇದು ಚುನಾವಣಾ ಫಲಿತಾಂಶದ ಅಂತಿಮ ಘೋಷಣೆಯನ್ನು ಇನ್ನಷ್ಟು ವಿಳಂಬಗೊಳಿಸಬಹುದು.
ಫಲಿತಾಂಶಗಳು ತನಗೆ ವಿರುದ್ಧವಾಗಿ ಬಂದರೆ ಏನು ಮಾಡುತ್ತೇನೆ ಎಂದು ಹೇಳಲು ಮಾಜಿ ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ. ಆದರೆ, 2020 ರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ದ ಸೋತ ಬಳಿಕ ಟ್ರಂಪ್ ಸೃಷ್ಟಿಸಿದ ಪರಿಸ್ಥಿತಿ ಜಗತ್ತಿಗೆ ಗೊತ್ತಿದೆ.
ಯುಎಸ್‌ನಲ್ಲಿ ಮತದಾರರು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಜನರು ರಾಜ್ಯಗಳಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಅವರು ಅಧ್ಯಕ್ಷೀಯ ಅಭ್ಯರ್ಥಿಗೆ ಮತ ಹಾಕುತ್ತಾರೆ.
ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆದರೆ, ಹೊಸ ಯುಎಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಜನವರಿ 20, 2025 ರಂದು ದೇಶದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಕೆನಡಾ ಹಿಂದೂ ದೇವಾಲಯದ ಭಕ್ತರ ಮೇಲೆ ದಾಳಿ ಆರೋಪ : ಪ್ರಧಾನಿ ಟ್ರುಡೊ ಖಂಡನೆ


