ಹಲವು ದಿನಗಳ ಊಹಾಪೋಹಗಳ ನಂತರ, ಅಮೆರಿಕದ ಶ್ವೇತಭವನವು ಸೋಮವಾರ (ಸೆ.29) ಸುಮಾರು ಎರಡು ವರ್ಷಗಳ ಗಾಝಾ ಯುದ್ಧವನ್ನು ಕೊನೆಗೊಳಿಸುವ, ಹಮಾಸ್ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಯನ್ನು ಸುರಕ್ಷಿತಗೊಳಿಸುವ ಮತ್ತು ಪ್ಯಾಲೆಸ್ತೀನ್ ಪ್ರದೇಶದ ಭವಿಷ್ಯದ ಆಡಳಿತವನ್ನು ನಿಗದಿಪಡಿಸುವ ಗುರಿಯನ್ನು ಹೊಂದಿರುವ 20 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಈ ಜಂಟಿ ಶಾಂತಿ ಯೋಜನೆಯು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಕೊನೆಗೊಳಿಸುವ ಮತ್ತು ಗಾಝಾದ ಭವಿಷ್ಯದ ಆಡಳಿತದಿಂದ ಹಮಾಸ್ ಅನ್ನು ಹೊರಗಿಡುವ ಉದ್ದೇಶ ಹೊಂದಿದೆ ಎಂದು ವರದಿಗಳು ಹೇಳಿವೆ.
ಈ ಪ್ರಸ್ತಾವನೆಯನ್ನು ಹಮಾಸ್ ಒಪ್ಪಿಕೊಳ್ಳುತ್ತದೆಯೇ? ಎಂಬುವುದು ಈಗ ಪ್ರಶ್ನೆಯಾಗಿದೆ. ಅಲ್-ಜಝೀರಾ ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಪ್ರಸ್ತಾವನೆಯನ್ನು ಹಮಾಸ್ ಅಧ್ಯಯನ ಮಾಡುತ್ತಿದೆ. ಅದಕ್ಕಾಗಿ ಒಂದು ತಂಡವನ್ನು ನೇಮಿಸಿದೆ.
ಅಮೆರಿಕ ಮುಂದಿಟ್ಟ ಶಾಂತಿ ಯೋಜನೆಯ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ಯೋಜನೆಯ ಷರತ್ತುಗಳನ್ನು ಒಪ್ಪಿಕೊಂಡರೆ ಯುದ್ಧ ಅಂತ್ಯಗೊಳ್ಳಲಿದೆ. ಇಸ್ರೇಲ್ ಯೋಜನೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡ 72 ಗಂಟೆಗಳ ಒಳಗೆ ಹಮಾಸ್ ತನ್ನ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳನ್ನು (ಮೃತರು ಮತ್ತು ಜೀವಂತ ಇರುವವರು) ಬಿಡುಗಡೆ ಮಾಡಬೇಕು.
ಒತ್ತೆಯಾಳುಗಳಿಗೆ ಬದಲಾಗಿ, ಇಸ್ರೇಲ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 250 ಪ್ಯಾಲೆಸ್ತೀನಿಯರನ್ನು ಮತ್ತು 2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಗಾಝಾದಲ್ಲಿ ಬಂಧಿಸಲ್ಪಟ್ಟ 1,700 ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಿದೆ. ಒಬ್ಬರು ಇಸ್ರೇಲಿ ಒತ್ತೆಯಾಳುವಿನ ಮೃತದೇಹವನ್ನು ನೀಡಿದರೆ, ಅದಕ್ಕೆ ಬದಲಾಗಿ ಇಸ್ರೇಲ್ 15 ಪ್ಯಾಲೆಸ್ತೀನಿಯರ ಮೃತದೇಹಗಳನ್ನು ಹಸ್ತಾಂತರಿಸಲಿದೆ.
ಸೋಮವಾರ ಶ್ವೇತಭವನದಲ್ಲಿ ನಡೆದ ಮಾತುಕತೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಯೋಜನೆಯ ಮೂಲಕ ಇಂದಿನ ದಿನ ‘ಶಾಂತಿಗಾಗಿ ಒಂದು ಐತಿಹಾಸಿಕ ದಿನ’ವಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಹಮಾಸ್ ಗುಂಪು ಈ ಯೋಜನೆಯನ್ನು ತಿರಸ್ಕರಿಸಿದರೆ, ಅದರ ಬೆದರಿಕೆಯನ್ನು ನಾಶಮಾಡುವ ಕೆಲಸವನ್ನು ಪೂರ್ಣಗೊಳಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಹಮಾಸ್ ಈ ಪ್ರಸ್ತಾಪವನ್ನು ನಿರಾಕರಿಸಿದರೆ ಅಥವಾ ಅನುಸರಿಸದಿದ್ದರೆ ಇಸ್ರೇಲ್ ತನ್ನ ಕೆಲಸವನ್ನು ಪೂರ್ಣಗೊಳಿಸುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಯೋಜನೆಯು ಹಮಾಸ್‌ಗೆ ಎರಡು ಆಯ್ಕೆಗಳನ್ನು ಮುಂದಿಟ್ಟಿದೆ. ಒಂದು ಮಾನವೀಯ ನೆರವು ಮತ್ತು ಗಾಝಾ ಪುನರ್ನಿರ್ಮಾಣದ ಭರವಸೆಗೆ ಪ್ರತಿಯಾಗಿ ಹೋರಾಟವನ್ನು ಅಂತ್ಯಗೊಳಿಸಿ ಶರಣಾಗುವುದು ಅಥವಾ ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದು. ಇನ್ನೊಂದು ಒಪ್ಪಂದವನ್ನು ತಿರಸ್ಕರಿಸಿ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಡೆಸುವ ಆಕ್ರಮಣವನ್ನು ಎದುರಿಸುವುದು.
ಯುದ್ಧವನ್ನು ಕೊನೆಗೊಳಿಸಿ, ಮಾನವೀಯ ನೆರವು ನೀಡಲು ಮತ್ತು ಗಾಝಾವನ್ನು ಪುನರ್ನಿರ್ಮಾಣ ಮಾಡಲು ಅವಕಾಶ ನೀಡಬೇಕಾದರೆ ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬ ಷರತ್ತನ್ನು ಅಮೆರಿಕ ಮತ್ತು ಇಸ್ರೇಲ್ ಹಮಾಸ್‌ಗೆ ಮುಂದಿಟ್ಟಿದೆ.
ಅಲ್ಲದೆ ಯೋಜನೆಯ ಪ್ರಕಾರ, ಪ್ಯಾಲೆಸ್ತೀನ್‌ಗೆ ರಾಷ್ಟ್ರದ ಮಾನ್ಯತೆ ಕೊಡುವ ಪ್ರಸ್ತಾಪವನ್ನು ಮಾಡಲಾಗಿದೆ. ಆದರೆ, ಅದು ದೀರ್ಘಕಾಲೀನ ಗುರಿಯಾಗಿದೆ. ಪ್ರಸ್ತುತ, 20 ಲಕ್ಷಕ್ಕೂ ಹೆಚ್ಚು ಜನರಿರುವ ಗಾಝಾ ಅಂತಾರಾಷ್ಟ್ರೀಯ ನಿಯಂತ್ರಣಕ್ಕೆ ಒಳಪಡಲಿದೆ. ಗಾಝಾದ ಭದ್ರತೆಯ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಭದ್ರತಾ ಪಡೆಯು ತೆಗೆದುಕೊಳ್ಳಲಿದೆ. ಟ್ರಂಪ್ ಮತ್ತು ಬ್ರಿಟನ್‌ನ ಮಾಜಿ ಪ್ರಧಾನಮಂತ್ರಿ ಟೋನಿ ಬ್ಲೇರ್ ನೇತೃತ್ವದ ‘ಶಾಂತಿ ಮಂಡಳಿ’ ಎಂಬ ಸಂಸ್ಥೆಯು ಗಾಝಾದ ಆಡಳಿತ ಮತ್ತು ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲಿದೆ. ಇಸ್ರೇಲಿ ಸೈನ್ಯವು ಗಾಝಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಳಿಯಲಿದೆ.
ಶ್ವೇತಭವನದಲ್ಲಿ ನಡೆದ ಸಭೆಯ ನಂತರ ಟ್ರಂಪ್ ಮತ್ತು ನೆತನ್ಯಾಹು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ.
ಈ ಯೋಜನೆಯ ಒಂದು ಭಾಗವು ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಅವರ ಘೋಷಿತ ನಿಲುವಿನೊಂದಿಗೆ ನೇರವಾಗಿ ವಿರೋಧಾಭಾಸವನ್ನು ಹೊಂದಿದೆ ಎಂದು ವರದಿಗಳು ಹೇಳಿವೆ. ಏಕೆಂದರೆ, ಯೋಜನೆಯ ಪ್ರಕಾರ, ಗಾಝಾವನ್ನು ಕಾಲಾಂತರದಲ್ಲಿ ಪ್ಯಾಲೆಸ್ಟೈನ್ ಅಥಾರಿಟಿ (ಪ್ಯಾಲೆಸ್ಟೈನ್ ಪ್ರಾಧಿಕಾರ) ಆಡಳಿತ ಮಾಡಲಿದೆ.
ಆದರೆ, ನೆತನ್ಯಾಹು ಮತ್ತು ಅವರ ಸರ್ಕಾರವು ಪ್ಯಾಲೆಸ್ಟೈನ್ ರಾಷ್ಟ್ರೀಯತೆಗೆ ವಿರೋಧವಾಗಿದ್ದು, ಇಂತಹ ಒಪ್ಪಂದವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಆದಾಗ್ಯೂ, ಈ ನಿಬಂಧನೆಯು ಯೋಜನೆಯ ದಾಖಲೆಯಲ್ಲಿ ಉಳಿದಿದೆ.
ನೆರವು ಹೊತ್ತು ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’ ತಂಡ: ಇಸ್ರೇಲ್ ದಿಗ್ಬಂಧನ ಮುರಿಯುವ ಶಪಥ


