ವಿಧಾನ ಸಭಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ತಲೆಗಳು ನಿರಾಕರಿಸಿದ ಕಾರಣ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ರನ್ನು ಕಾಂಗ್ರೆಸ್ ಹೆಸರಿಸಿದ್ದು, ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸುವ ಸಾಧ್ಯತೆ ಇಲ್ಲದಿರುವುದರಿಂದ, ನಾಳೆ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ. ಅವರು ಆಯ್ಕೆಯಾದಲ್ಲಿ ಕರ್ನಾಟಕದ ಸ್ಪೀಕರ್ ಹುದ್ದೆ ಏರಿದ ಮೊದಲ ಮುಸ್ಲಿಂ ಮುಖಂಡರಾಗಲಿದ್ದಾರೆ.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ವಿಧಾನಸಭೆ ಬುಲೆಟಿನ್ ಹೊರಡಿಸಿದೆ.
ಸೋಮವಾರ ಆರಂಭವಾದ ನೂತನ ಸರ್ಕಾರದ ಮೊದಲ ಅಧಿವೇಶನದಲ್ಲಿ ಹಂಗಾಮಿ ಸ್ವೀಕರ್ ಆಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರ್ಯ ನಿರ್ವಹಿಸಿದ್ದರು. 224 ಶಾಸಕರ ಪೈಕಿ 182 ಶಾಸಕರಿಗೆ ಪ್ರಮಾಣ ವಚನ ಸಹ ಬೋಧಿಸಿದರು. ಆದರೆ ಅವರು ತಮ್ಮ ಆರೋಗ್ಯ ಸಮಸ್ಯೆಯ ನೆಪ ಹೇಳಿ ಪೂರ್ಣಾವಧಿ ಸ್ಪೀಕರ್ ಆಗಲು ನಿರಾಕರಿಸಿದ್ದಾರೆ.
ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್.ಕೆ ಪಾಟೀಲ್ ಅವರನ್ನು ಕೂಡ ಸ್ಪೀಕರ್ ಹುದ್ದೆಗೆ ಪಕ್ಷ ಪರಿಗಣಿಸಿತ್ತು ಕೇಳಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಆಳಂದ ಶಾಸಕ ಬಿ ಆರ್ ಪಾಟೀಲ್ ಅವರನ್ನೂ ಸಂಪರ್ಕಿಸಲಾಗಿತ್ತು. ಮಾಜಿ ಸಚಿವ ಟಿ ಬಿ ಜಯಚಂದ್ರ, ಬಸವರಾಜ ರಾಯರೆಡ್ಡಿ, ಮಧುಗಿರಿಯ ಶಾಸಕ ಕೆ ಎನ್ ರಾಜಣ್ಣ, ಮೊಳಕಾಲ್ಮೂರಿನ ಶಾಸಕ ಎನ್ ವೈ ಗೋಪಾಲಕೃಷ್ಣರವರು ಸಹ ಸ್ಪೀಕರ್ ಆಗಲು ನಿರಾಕರಿಸಿದ ಕಾರಣ ಕೊನೆಗೆ ಆ ಜವಾಬ್ದಾರಿ ಯು.ಟಿ ಖಾದರ್ ಹೆಗಲೇರಿದೆ.
ಸ್ಪೀಕರ್ ಸ್ಥಾನ ನಿರಾಕರಿಸುವುದಕ್ಕೆ ಕಾರಣ ಅವರೆಲ್ಲರೂ ಸಚಿವರಾಗಲು ಹಾತೊರೆಯುತ್ತಿರುವುದೇ ಆಗಿದೆ. ಗುರುವಾರದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 50ರಷ್ಟು ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಸ್ಪೀಕರ್ ಆಯ್ಕೆಯಲ್ಲಿ ಯು.ಟಿ ಖಾದರ್ ಮನವೊಲಿಸಲು ಸಫಲರಾಗಿದ್ದಾರೆ ಎನ್ನಲಾಗಿದೆ.
ಯು ಟಿ ಖಾದರ್ ವ್ಯಕ್ತಿ ಪರಿಚಯ
1969ರ ಅಕ್ಟೋಬರ್ 12ರಂದು ಜನಿಸಿದ ಯು ಟಿ ಅಬ್ದುಲ್ ಖಾದರ್ ಫರೀದ್ ಅವರ ತಂದೆ ಹೆಸರು ಯು ಟಿ ಫರೀದ್ ಮತ್ತು ತಾಯಿ ಯು ಟಿ ನಸೀಮಾ ಫರೀದ್ ಇವರು ಬಿ.ಎ ಎಲ್‌ಎಲ್‌ಬಿ ವಿದ್ಯಾರ್ಹತೆ ಹೊಂದಿದ್ದಾರೆ. ಯು ಟಿ ಖಾದರ್ ಅವರು ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಎ ಎಲ್ಎಲ್‌ಬಿ ಪದವಿ ಶಿಕ್ಷಣ ಮುಗಿಸಿದರು.
1990ರಲ್ಲಿ ಎನ್‌ಎಸ್‌ಯುಐ ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 1994 ರಿಂದ 1999ರ ವರೆಗೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿ, 1999 ರಿಂದ 2001ರ ವರೆಗೆ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2003 ರಲ್ಲಿ ಘಟಪ್ರಭದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ, 2004 ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು. ನಂತರ ಕೆಪಿಸಿಸಿ ಸದಸ್ಯರಾಗಿ 2008 ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.
2008 ರಲ್ಲಿ ತಮ್ಮ ತಂದೆಯ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ನಂತರ 2008, 2013, 2018 ಹಾಗೂ 2023ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾದರು. ಅಲ್ಲದೆ ತಾವು ಶಾಸಕರಾಗಿದ್ದ 2008 ರಿಂದ 2013 ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಗಳಿಸಿದರು.
2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ, ಬೈಕ್ ಅಂಬ್ಯುಲೆನ್ಸ್, 108, ಆರೋಗ್ಯಶ್ರೀ, ದಂತ ಭಾಗ್ಯ, ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರ್ಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿ ಕೊಂಡಿದ್ದರು.
2016 ರಿಂದ 2018ರ ವರೆಗೆ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10 ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಯೋಜನೆಗೆ ಚಾಲನೆ ನೀಡಿದರು. ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.
2018 ರ ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ದಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ, ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023ರ ವರೆಗೆ ಕಾರ್ಯ ನಿರ್ವಹಿಸಿದರು.
ಇದನ್ನೂ ಓದಿ: ನಿರಾಳತೆ ನೀಡಿದ ನಿಟ್ಟುಸಿರಿನ ನಂತರ ಜೊತೆಗೂಡಿ ಮಾಡಬೇಕಾದ್ದು ಬಹಳ ಇದೆ


