Homeಕರ್ನಾಟಕನಿರಾಳತೆ ನೀಡಿದ ನಿಟ್ಟುಸಿರಿನ ನಂತರ ಜೊತೆಗೂಡಿ ಮಾಡಬೇಕಾದ್ದು ಬಹಳ ಇದೆ

ನಿರಾಳತೆ ನೀಡಿದ ನಿಟ್ಟುಸಿರಿನ ನಂತರ ಜೊತೆಗೂಡಿ ಮಾಡಬೇಕಾದ್ದು ಬಹಳ ಇದೆ

- Advertisement -
- Advertisement -

ಬಹಳ ಸವಾಲಿನ ಮತ್ತು ಬಹು ಕಠಿಣವಾದ ಅಗಾಧ ಕೆಲಸದ ಬಳಿಕ ಸದ್ಯಕ್ಕೆ ಒಂದು ನಿರಾಳ ನಿಟ್ಟುಸಿರಂತೂ ಬಿಡುವಂತಾಗಿದೆ. ಈ ಯಶಸ್ಸಿನಲ್ಲಿ ’ಎದ್ದೇಳು ಕರ್ನಾಟಕ’ ಎಂಬ ನಾಗರಿಕ ಸಮಾಜದ ಅಭಿಯಾನದ ಕೊಡುಗೆಯೂ ಗುರುತರವಾದುದು; ಅದರ ವಿಶೇಷತೆಗಳು ಹಲವು.

ಒಂದು: ವಿಭಿನ್ನವಾದ ದೃಷ್ಟಿಕೋನ ಮತ್ತು ಧೋರಣೆಗಳನ್ನು ಹೊಂದಿದ್ದ, ಆದರೆ ಬಹಳ ಪ್ರಾಮಾಣಿಕವೂ ಗಂಭೀರವೂ ಆದ ನಾನಾ ತರಹದ ಜನರನ್ನೂ ಮತ್ತು ಸಂಘಟನೆಗಳ ಒಗ್ಗೂಡುವಿಕೆಯ ಪ್ರಯತ್ನವಾಗಿ ಇದು ಚಾಲನೆ ಪಡೆದದ್ದು.

ಎರಡು: ಸ್ಪಷ್ಟವಾದ ಪ್ರಜಾಸತ್ತಾತ್ಮಕ ದೃಷ್ಟಿಕೋನ ಮತ್ತು ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿದ್ದು. ಈ ದೃಷ್ಟಿಕೋನವು ಕಾಂಗ್ರೆಸ್ ಅಥವಾ ಯಾವುದೇ ವಿರೋಧ ಪಕ್ಷದ ಪರವಾಗಿ ಇಲ್ಲದೇ, ಯಾವುದೇ ಸಂಕುಚಿತ ಅಜೆಂಡಾ ಇಲ್ಲದೆ, ಈ ದುರಾಡಳಿತವನ್ನು ಅಂತ್ಯಗೊಳಿಸಬೇಕು ಎಂಬ ಖಚಿತ ಗುರಿಯೊಂದಿಗೆ ಕೆಲಸ ಮಾಡಿದ್ದು.

ಮೂರು: ನೀತಿಬದ್ಧವೂ ಅದೇ ಸಮಯದಲ್ಲಿ ಕಾರ್ಯಸಾಧ್ಯವೂ ಆದ ತಳಮಟ್ಟದ ರಾಜಕೀಯ ಅಭಿಯಾನವಾಗಿ ಅದನ್ನು ರೂಪಿಸಲಾಗಿದ್ದು.

ನಾಲ್ಕು: ತಳಮಟ್ಟದ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು, ಮತದಾನದ ಮೇಲೆ ನೇರವಾಗಿ ಪರಿಣಾಮ ಉಂಟುಮಾಡುವಂತೆ ಇಡೀ ಕ್ಯಾಂಪೇನಿನ ವಿಧಾನವನ್ನು ಬಹು ಎಚ್ಚರದಿಂದ ಮತ್ತು ಸೃಜನಶೀಲವಾಗಿ ರೂಪಿಸಲಾದದ್ದು. ಈ ಹಿಂದಿನ ಚುನಾವಣಾ ಸಂದರ್ಭದ ಅನುಭವಗಳನ್ನು ಹಾಗೂ ನಾಗರಿಕ ಸಮಾಜದ ಶಕ್ತಿ ಮತ್ತು ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರಚನಾತ್ಮಕವಾಗಿ ಕಾರ್ಯಗತ ಮಾಡಿದ್ದು.

ಇದೊಂದು ಹೊಚ್ಚಹೊಸದೇ ಆದ ಪ್ರಯತ್ನವಾಗಿತ್ತು. ಒಂದಷ್ಟು ಪೂರ್ವಭಾವಿ ಸಿದ್ಧತೆಗಳ ಜೊತೆಗೆ, 10 ವಾರಗಳ ಕಾಲ ಎಡಬಿಡದೆ ನಡೆದ ಉತ್ಕಟ ಅಭಿಯಾನವಾಗಿತ್ತು. ಮೂಲಭೂತ ಗ್ರಹಿಕೆಯನ್ನು ಅಂತಿಮಗೊಳಿಸುವುದು, ವಿವಿಧ ತಂಡಗಳನ್ನು ರಚಿಸುವುದು, ಕೆಲಸವನ್ನು ಕ್ರಮಬದ್ಧಗೊಳಿಸುವುದು, ಸಾಮಾಜಿಕ ಮಾಧ್ಯಮ ಮತ್ತು ವಿಶಾಲ ಪ್ರಜಾಮಾಧ್ಯಮಗಳ ಮೂಲಕ ಚೈತನ್ಯಪೂರ್ಣವಾದ ಪ್ರಚಾರಾಂದೋಲನಕ್ಕೆ ಭೂಮಿಕೆ ಸಿದ್ಧಪಡಿಸುವುದು, ವಾಲಂಟಿಯರ್ ಜಾಲವನ್ನು ರೂಪಿಸುವುದು, ನಾನಾ ಅಸೆಂಬ್ಲಿ ಕ್ಷೇತ್ರಗಳು ಮತ್ತು ಬೂತ್‌ಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ, ಅಗತ್ಯವಾದ ರಾಜಕೀಯ ಕೈಪಿಡಿ ಮತ್ತಿತರ ಸಾಮಗ್ರಿಯನ್ನು ಸಿದ್ಧಪಡಿಸುವುದು, ಇವೇ ಮುಂತಾಗಿ ರಾಶಿರಾಶಿ ಕೆಲಸಗಳೆಲ್ಲವನ್ನೂ ವಿನೂತನವಾಗಿ ಮಾಡಬೇಕಾಯಿತು. ನಾನಾ ರೀತಿಯ ಶಕ್ತಿಕೇಂದ್ರಗಳ ಚರ್ಚೆಗಳು, ಮಾತುಕತೆ ಮತ್ತು ವಿಚಾರವಿನಿಮಯಗಳು ಅನೇಕ ವೇಳೆ ಬಹಳ ಕ್ಲಿಷ್ಟವಾಗಿದ್ದವು. ಬಿಜೆಪಿಯೇತರ ವಿರೋಧ ಪಕ್ಷಗಳನ್ನು ಜನತೆಯ ಹಕ್ಕೊತ್ತಾಯಗಳಿಗೆ ಕಮಿಟ್ ಮಾಡಿಸುವುದು, ದಮನಿತ ಸಮುದಾಯಗಳು ಮತ್ತು ಸ್ಥಳೀಯ ಮುಂದಾಳುಗಳು ಈ ಅಭಿಯಾನವನ್ನು ಆದಷ್ಟೂ ಸಮಗ್ರವಾಗಿ ಗ್ರಹಿಸಿ ಬೆಂಬಲಿಸುವಂತೆ ಮಾಡಲು ಎಲ್ಲಾ ದಿಕ್ಕುಗಳಿಂದಲೂ ಸತತವಾಗಿ ಪ್ರಯತ್ನಿಸಲಾಯಿತು. ಜನತೆಯ ಸಮೂಹ ಮಾಧ್ಯಮ ಪ್ರಯತ್ನವಾದ ಈ ದಿನ.ಕಾಂ ಕೂಡ ಎದ್ದೇಳು ಕರ್ನಾಟಕ ಅಭಿಯಾನದ ಸಕ್ರಿಯ ಪಾಲುದಾರನಾಗಿತ್ತು; ವೃತ್ತಿಪರತೆಯಿಂದ ಕೂಡಿದ ಅದು ನಡೆಸಿದ ವೈಜ್ಞಾನಿಕವಾದ ಚುನಾವಣಾಪೂರ್ವ ಸಮೀಕ್ಷೆಯು ಅತ್ಯಂತ ನಿಖರವಾಗಿ ಹೊರಹೊಮ್ಮಿ, ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಿತು. ಇದಲ್ಲದೆ ವಾರ್ತಾ ಭಾರತಿ, ಗೌರಿ ಮೀಡಿಯಾ, ಪೀಪಲ್ ಟಿವಿ ಮುಂತಾದ ಜನಸ್ನೇಹಿ ಮಾಧ್ಯಮಗಳ ಕೊಡುಗೆಯೂ ಗುರುತರವಾದುದು. ಸಾಮಾಜಿಕ ಮಾಧ್ಯಮ ತಂಡದ ಯುವ ಮಿತ್ರರ ಉತ್ಸಾಹ ಮತ್ತು ಚೈತನ್ಯಕ್ಕೆ ಪಾರವೇ ಇರಲಿಲ್ಲ; ವಿಶಾಲ ಜನತೆಯನ್ನು ತಲುಪುವಂತಹ ಅನೇಕ ಪ್ರಚಾರ ಸಾಮಗ್ರಿಗಳನ್ನು ಅವರು ಎಡೆಬಿಡದೆ ಸಿದ್ಧಪಡಿಸಿಕೊಟ್ಟರು. ಬಹುತ್ವ ತಂಡದವರು ಹೊರತಂದ ವರದಿಗಳು ಸರ್ಕಾರದ ಅತಿ ಕೆಟ್ಟ ಆಳ್ವಿಕೆಯನ್ನು ಜನತೆಯ ಮುಂದೆ ನಿಚ್ಚಳವಾಗಿ ತೆರೆದಿಟ್ಟವು. ಹಲವು ರಂಗಗಳಲ್ಲಿನ ಜನರು, ನಾನಾ ರೀತಿಯ ಇನ್‌ಪುಟ್‌ಗಳು, ಅನುಭವಗಳು ಮತ್ತು ಕ್ಷೇತ್ರ ಮಟ್ಟದ ಕೆಲಸಗಳ ಮೂಲಕ ತಮ್ಮದೇ ರೀತಿಯಲ್ಲಿ ಹಲವು ಕೊಡುಗೆಗಳನ್ನು ಧಾರೆಯೆರೆದರು. ಇದೆಲ್ಲದರ ಒಟ್ಟುಗೂಡಿದ ಫಲಿತವಾಗಿ “ಬಿಜೆಪಿಯನ್ನು ಸೋಲಿಸಿ” ಅಥವಾ “ಬಿಜೆಪಿಗೆ ಓಟು ನೀಡಬೇಡಿ” ಎಂಬ ಕರೆ ಅನೇಕ ದಿಕ್ಕುಗಳಿಂದ ಮಾರ್ದನಿಸಿತು.

ಇದೇನೂ ಸಣ್ಣ ಸಾಧನೆಯಲ್ಲ

ಲೋಪದೋಷಗಳಾಗದಂತೆ ಕಾಲಕಾಲಕ್ಕೆ ಸಾಧ್ಯವಿದ್ದ ಎಲ್ಲಾ ಎಚ್ಚರವನ್ನೂ ವಹಿಸಲಾಯಿತು. ಜನರ ನಡುವೆ ಸುಪರಿಚಿತರೂ ವಿಶ್ವಾಸಾರ್ಹರೂ ಆದ, ಸದಾಶಯವುಳ್ಳ ಕರ್ನಾಟಕದ ಅನೇಕ ವಿಚಾರವಂತರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಅಮೂಲ್ಯವಾದ ಕೊಡುಗೆಗಳನ್ನು ನೀಡಿದರು; ಇದರಲ್ಲಿ ಕೆಲವರು ಕಾಂಗ್ರೆಸ್ ಜೊತೆ ನಿಕಟ ಸಂಪರ್ಕ ಉಳ್ಳವರಾಗಿದ್ದರೂ ಎದ್ದೇಳು ಕರ್ನಾಟಕದ ನಿಲುವು ಮತ್ತು ನಿರ್ಧಾರಗಳಿಗೆ ಬದ್ಧರಾಗಿಯೇ ನಡೆದುಕೊಂಡರು. ಇದೇ ಮಾತನ್ನು ನಾವು ಇತರ ರಾಜ್ಯಗಳಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮತ್ತು ಪರಿಣಾಮಕಾರಿ ಕೊಡುಗೆಯನ್ನೂ ನೀಡಿದ ವಿವಿಧ ಪ್ರಗತಿಪರ ಸೌಹಾರ್ದ ತಂಡಗಳ ಕುರಿತಂತೆಯೂ ಹೇಳಬಹುದು.

ಇದನ್ನೂ ಓದಿ: ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಬಿಜೆಪಿ ಆಡಳಿತ ಮತ್ತು ಬಲಪಂಥೀಯ ಶಕ್ತಿಗಳು ಏನಾದರೊಂದು ನೆಪ ಒಡ್ಡಿ ನಮ್ಮ ಈ ಪ್ರಯತ್ನಗಳನ್ನು ತಡೆಗಟ್ಟಲು ಶತಾಯಗತಾಯ ಪ್ರಯತ್ನಿಸುತ್ತಿದ್ದುದರಿಂದ ತಳಮಟ್ಟದಲ್ಲಿ ಪರಿಸ್ಥಿತಿ ಬಹಳ ಉದ್ವಿಗ್ನವಾಗಿಯೇ ಇತ್ತು. ಇದಕ್ಕೆ (ಕಾಂಗ್ರೆಸ್-ಪ್ರೇರಿತ, ಮುಸ್ಲಿಂ ಪರ ಮುಂತಾಗಿ) ಏನಾದರೊಂದು ಹಣೆಪಟ್ಟಿ ಹಚ್ಚಿ ಮೂಲೆಗುಂಪು ಮಾಡಿ ಸಮಾಜದಲ್ಲಿ ಅಪನಂಬಿಕೆ ಹುಟ್ಟಿಸಲು ಅವು ಅವಕಾಶವನ್ನು ಹುಡುಕುತ್ತಲೇ ಇದ್ದವು. ಆದರೆ ಅವಕ್ಕೆ ಅಂಥ ಯಾವ ಅವಕಾಶವೂ ದೊರೆಯದಂತೆ ನೋಡಿಕೊಳ್ಳಲಾಯಿತು.

ಸಾಮಾನ್ಯವಾಗಿ ಆಗುವಂತೆ ನಮ್ಮ ನಿಕಟ ವಲಯಗಳಿಂದಲೇ ಈ ಪ್ರಯತ್ನದ ಕುರಿತು- ಕಾಂಗ್ರೆಸ್ಸಿನ ಬಾಲಂಗೋಚಿ, ಕಾಂಗ್ರೆಸ್‌ನಿಂದ ಹಣ ಪಡೆದು ನಡೆಸಿದ್ದು, ಕಾಂಗ್ರೆಸ್‌ಅನ್ನು ಖುಷಿಪಡಿಸಿ ಅದಕ್ಕೆ ಹತ್ತಿರವಾಗುವ ಯತ್ನ ಮುಂತಾಗಿ- ಕೆಸರೆರಚುವ ಪ್ರಯತ್ನಗಳು ನಡೆಯದಿರಲಿ ಎಂದು ಆಶಿಸೋಣ. ಬಿಜೆಪಿಗೆ ವಿರೋಧ ಎನ್ನುವುದನ್ನು ಯಾವುದೇ ರೀತಿಯಲ್ಲೂ ಕಾಂಗ್ರೆಸ್ಸಿಗೆ ಪರ ಆಗುವುದು ಎಂದು ಅರ್ಥೈಸುವುದಾಗಲಿ, ಆ ರೀತಿ ಮಾರ್ಪಡುವುದಾಗಲಿ ಯಾರೂ ಮಾಡಲಾರರು ಎಂಬ ದೃಢ ನಂಬಿಕೆ ನಮ್ಮಲ್ಲಿದೆ. ಇಂದು ನಾವಿರುವ ಸಂಕೀರ್ಣ ಸನ್ನಿವೇಶದಲ್ಲಿ ಹಾಗೂ ವಿಶಾಲ ಸಮಾನ ಧ್ಯೇಯದ ಹಿತದೃಷ್ಟಿಯಲ್ಲಿ, ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮದೇ ಸಾಮರ್ಥ್ಯಗಳಲ್ಲಿ ನಡೆಸಿದ ಕಠಿಣವಾದ ಪ್ರಾಮಾಣಿಕವಾದ ಈ ಶ್ರಮಕ್ಕೆ ಸೂಕ್ತವಾದ ಗೌರವ ಇರಲೇಬೇಕಿದೆ ಎನ್ನುವುದು ನಮ್ಮ ಆಶಯವಷ್ಟೇ.

ನಾವು ಸಾಗಬೇಕಾದ ಹಾದಿ ಇನ್ನೂ ದೂರವಿದೆ

ಬಿಜೆಪಿಯ ಸೋಲಿನ ಅರ್ಥ ಸಹಜವಾಗಿ ಕಾಂಗ್ರೆಸ್‌ಅನ್ನು ಮರಳಿ ಅಧಿಕಾರಕ್ಕೆ ತರುವುದೇ ಆಗಿತ್ತಾ? ರಾಜಕೀಯ ಬದುಕಿನಲ್ಲಿ ಗಂಭೀರವಾಗಿರುವ ಯಾರು ತಾನೇ ಕಾಂಗ್ರೆಸ್‌ನ ಭಯಂಕರ ಅವಿವೇಕತನಗಳಿಗೆ ಕುರುಡಾಗಿರಲು ಸಾಧ್ಯ? ಇಂದಿನ ಈ ದುರ್ಭರ ಪರಿಸ್ಥಿತಿ ಉಂಟಾಗುವಲ್ಲಿ ಕಾಂಗ್ರೆಸ್ಸಿನ ಪಾತ್ರವನ್ನು ಯಾರು ತಾನೇ ಮರೆಯಲು ಇಲ್ಲವೇ ಕ್ಷಮಿಸಲು ಸಾಧ್ಯ? ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗರು ಮಾಡಬಹುದಾದ ವಂಚನೆಯ ಸಾಧ್ಯತೆಗಳನ್ನು ತಳ್ಳಿಹಾಕಿ ಅವರ ಭರವಸೆಗಳ ಮೇಲೆಯೇ ನಂಬಿಕೆಯಿಡಲು ಸಾಧ್ಯ? ಆದರೆ ನಮ್ಮ ಮುಂದಿದ್ದ ಆಯ್ಕೆ “ಅತ್ತ ದರಿ, ಇತ್ತ ಪುಲಿ” ಎಂಬಂತಿತ್ತು. ಕಾಂಗ್ರೆಸ್ ನಮ್ಮ ಕಾಲುಗಳನ್ನು ಗಟ್ಟಿಯಾಗಿ ಕಟ್ಟಿಹಾಕುತ್ತದೆ, ಆದರೂ ಹೇಗೋ ಮಾಡಿ ಕಾಲೆಳೆದುಕೊಂಡು ನಡೆಯಲಾದರೂ ಸಾಧ್ಯ; ಆದರೆ ಬಿಜೆಪಿ ಮತ್ತು ಸಂಘಿಗಳು ನಮ್ಮ ಕಾಲುಗಳನ್ನೇ ಕತ್ತರಿಸುವ ಗುರಿ ಹೊಂದಿದ್ದಾರೆ! ಕಾಂಗ್ರೆಸ್ ಒಂದು ಗೊತ್ತಿರುವ ದೆವ್ವದಂತೆ; ಅದರೊಂದಿಗೆ ಹಲ್ಲುಕಚ್ಚಿ ಸೆಣೆಸಿ ಹೇಗೋ ಮಾಡಿ ಮುಂದೆ ಹೋಗಲು ಅವಕಾಶ ಇರುತ್ತದೆ. ಆದರೆ ಅತ್ಯುನ್ನತ ಅಧಿಕಾರದ ಕೃಪಾಛತ್ರದಡಿ ಆಶ್ರಯ ಪಡೆದು ಪ್ರತಿಯೊಂದು ಮೂಲೆಯಲ್ಲೂ ಅಡಗಿರುವ ಕ್ರೂರ ಫ್ಯಾಸಿಸ್ಟ್ ಶಕ್ತಿಗಳಿಂದ ಬಚಾವಾಗುವುದಕ್ಕೆ ಶಕ್ಯವೇ ಇಲ್ಲ.

ಫ್ಯಾಸಿಸ್ಟ್ ಶಕ್ತಿಗಳು ಕೇವಲ ರಾಜಕೀಯ ಅಧಿಕಾರವಾಗಿ ಮಾತ್ರವೇ ದೇಶವನ್ನು ಆಕ್ರಮಿಸಿರುವುದಲ್ಲ; ಅವು ಅರ್ಥ ವ್ಯವಸ್ಥೆಯಲ್ಲೂ ಆಳವಾಗಿ ಬೇರೂರಿವೆ, ಸಾಮಾಜಿಕ ಚಳವಳಿಯಾಗಿ ಮತ್ತು ಒಂದು ವಿಷಪೂರಿತ ಸಿದ್ಧಾಂತವಾಗಿ ಕೂಡ ಅಸ್ತಿತ್ವದಲ್ಲಿವೆ ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಿದೆ. ಅವುಗಳನ್ನು ಅಸೆಂಬ್ಲಿ ಅಥವಾ ಸಂಸತ್ ಚುನಾವಣೆಗಳಲ್ಲಿ ಸೋಲಿಸುವುದು ಮುಖ್ಯವಾದುದು ಹೌದಾದರೂ ಅದು ಅವುಗಳನ್ನು ದುರ್ಬಲಗೊಳಿಸುವುದರಲ್ಲಿನ ಒಂದು ಭಾಗ ಮಾತ್ರ. ಅವುಗಳನ್ನು ಪರಿಪೂರ್ಣವಾಗಿ ಸೋಲಿಸುವುದು ಅತ್ಯಂತ ದೀರ್ಘವಾದ, ಪ್ರಯಾಸಕರವಾದ, ಅನೇಕ ಏಳುಬೀಳುಗಳಿಂದ ಕೂಡಿದ ಪಯಣ; ಅದಕ್ಕಾಗಿ ನಮ್ಮ ತಿಳಿವಳಿಕೆ ಮತ್ತು ಆಚರಣೆಯನ್ನೂ ಆಳಗೊಳಿಸಿ, ಮಾರ್ಪಾಟು ತಂದುಕೊಂಡು ಪುನರ್‌ರೂಪಿಸಬೇಕಿರುತ್ತದೆ. ಹಲವು ಆಯಾಮಗಳುಳ್ಳ ಈ ಕದನವನ್ನು ಬೀದಿಗಳಲ್ಲೂ, ದೇಶದ ಬಹುಸಂಖ್ಯಾತ ಜನತೆಯ ಮನೋಭೂಮಿಕೆಯಲ್ಲೂ ನಡೆಸಬೇಕಿರುತ್ತದೆ. ಅದಕ್ಕಾಗಿ ನಮ್ಮನ್ನು ನಾವು ಇನ್ನೂ ಸ್ಪಷ್ಟವಾಗಿ ಸಜ್ಜುಗೊಳಿಸಿಕೊಳ್ಳಬೇಕಿರುತ್ತದೆ.

ಜನರೇ ಬದಲಾವಣೆಯನ್ನು ಬಯಸಿದ್ದುದರ ಜೊತೆಗೆ, ’ಭಾರತ್ ಜೋಡೋ’ ಯಾತ್ರೆ ಕೂಡ ಕೆಲವು ಅಸೆಂಬ್ಲಿ ಕ್ಷೇತ್ರಗಳ ಫಲಿತಾಂಶಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿರುವುದನ್ನೂ ನಾವು ಗುರುತಿಸಬೇಕು, ಇದು ಒಳ್ಳೆಯದೇ. ಅದೇ ರೀತಿ ಕಾಂಗ್ರೆಸ್‌ನೊಳಗೆ ಅದರ ರಣನೀತಿ ರೂಪಿಸುತ್ತಿದ್ದ ನಮ್ಮ ಮಿತ್ರರು ಕೂಡ ಬಿಜೆಪಿಯ ಈ ಸೋಲಿನಲ್ಲಿ ಒಳ್ಳೆಯ ಪಾತ್ರ ನಿರ್ವಹಿಸಿದ್ದಾರೆ. ಇದೂ ಕೂಡ ಮೆಚ್ಚುವಂಥದ್ದು. ಹಾಗಿದ್ದಾಗ್ಯೂ, ಅವರುಗಳಿಗಿದ್ದ ಎಲ್ಲಾ ಅಧಿಕಾರ ಸಂರಚನೆಗಳು ಮತ್ತು ಮೂಲ ಸೌಕರ್ಯಗಳ್ಯಾವುವೂ ಇಲ್ಲದೆಯೇ, ಕೇವಲ ಕರ್ನಾಟಕದ ಜನತೆಯ ಹೃದಯಗಳನ್ನು ಜಾಗೃತಗೊಳಿಸಲು ನಡೆದ, ಸಂಪೂರ್ಣವಾಗಿ ಜನತೆಯನ್ನೇ ಅವಲಂಬಿಸಿದ್ದ ಈ ಅಭಿಯಾನವು ಚುನಾವಣಾ ಕಣದಲ್ಲಿನ ಹೋರಾಟದಲ್ಲೊಂದು ಹೊಸ ಪ್ರವೃತ್ತಿಯನ್ನು ಮತ್ತು ಭರವಸೆಯನ್ನು ಹುಟ್ಟುಹಾಕಿರುವುದನ್ನು ಕಡೆಗಣಿಸುವಂತಿಲ್ಲ. ಮತದಾನದ ಪ್ರಮಾಣ ಏರಿಕೆಯಾಗಿದ್ದರಲ್ಲೂ ಇದರ ಪಾತ್ರವಿದೆ. ಇದು ನೆಲಮಟ್ಟದಲ್ಲಿ ಒಂದು ಪರ್ಯಾಯ ಪ್ರಜಾ ಶಕ್ತಿಯನ್ನು ಕಟ್ಟಿನಿಲ್ಲಿಸುವುದರಲ್ಲಿನ ಆರಂಭಿಕ ಚಿಮ್ಮುಹಲಗೆ ಎನ್ನಲೂಬಹುದು. ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ; ಆದರೂ, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಹೆಚ್ಚುಹೆಚ್ಚು ವಿಶಾಲ ಜನಸಮೂಹದ ನಡುವೆ ಗಟ್ಟಿಯಾಗಿ ನೆಲೆಯೂರಿಸಿದಾಗ ಇದೊಂದು ಖಂಡಿತಾ ಉತ್ತಮ ಭವಿಷ್ಯವಿರುವ ಪ್ರಯೋಗ ಎನ್ನಿಸಿಕೊಳ್ಳಲಿದೆ.

ಈ ಜಾಗೃತಿ ಪ್ರಯತ್ನ, ಹಾಗೂ ಅದರ ಭಾಗವಾಗಿ ಕರ್ನಾಟಕದಲ್ಲಿ ಬಿಜೆಪಿ ಪುನಃ ಅಧಿಕಾರ ವಶಪಡಿಸಿಕೊಳ್ಳದಂತೆ ಹಿಮ್ಮೆಟ್ಟಿಸಿರುವುದು ನಮ್ಮೆಲ್ಲರ ಒಂದು ಮಟ್ಟಿನ ಸಮಾನ ಯಶಸ್ಸಾಗಿದೆ. ಇದರಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದಗಳು ಸಲ್ಲುತ್ತವೆ. ಇದರಲ್ಲಿ ಎಲ್ಲರೂ ತೋರಿಸಿದ ಉತ್ಸಾಹವು ಪ್ರೋತ್ಸಾಹದಾಯಕವಾಗಿದೆ. ಇದು ಜನತೆಯ ಹಕ್ಕೊತ್ತಾಯಗಳನ್ನೂ ಹೋರಾಟಗಳನ್ನೂ ಮುನ್ನಲೆಗೆ ತರಲು ಸಾಕಷ್ಟು ಅವಕಾಶವನ್ನು ಒದಗಿಸುವುದರಿಂದ, ಒಟ್ಟಾರೆಯಲ್ಲಿ ಈ ಪ್ರಯತ್ನವು ಸಂಭ್ರಮಪಡಲು ಖಂಡಿತವಾಗಿಯೂ ಅರ್ಹವಾಗಿದೆ. ಅಲ್ಲದೆ ಇದು, ಸಂಘಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಲುಗಟ್ಟಿ ನಿಂತಿರುವ ಇನ್ನಿತರ ರಾಜ್ಯಗಳವರಿಗೂ ಬಹಳಷ್ಟು ಪ್ರೋತ್ಸಾಹವನ್ನು ನೀಡುವಂತಿದೆ. ಇದರ ಉದ್ದಕ್ಕೂ ಇದ್ದ ಚಿಂತನೆ ಮತ್ತು ಆಶಯವೆಂದರೆ, ಎಲ್ಲರೂ ಒಗ್ಗೂಡಿ ದಕ್ಷಿಣ ಭಾರತ ಮತ್ತು ಇತರ ರಾಜ್ಯಗಳಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಬೆಳವಣಿಗೆಯನ್ನು ತಡೆಗಟ್ಟಿ, ಅದನ್ನು 2024ರ ಚುನಾವಣೆಯಲ್ಲಿ ಕೇಂದ್ರದಿಂದಲೂ ಹೊರದಬ್ಬಬೇಕು ಎನ್ನುವುದಾಗಿತ್ತು. ನಮ್ಮನ್ನು ಪುನರ್ ಸಂಘಟಿಸಿಕೊಳ್ಳಲು ಅದು ನಮಗೆ ಒಂದಷ್ಟು ಸಮಯಾವಕಾಶವನ್ನು ಒದಗಿಸುತ್ತದೆ.

ಕರ್ನಾಟಕದ ಗೆಲುವು ಇಡೀ ಭಾರತದ ಪ್ರಜ್ಞಾವಂತ ಜನರಲ್ಲಿ ಉತ್ಸಾಹದ ಬುಗ್ಗೆಯನ್ನು ಚಿಮ್ಮಿಸಿದೆ. ಎದ್ದೇಳು ಕರ್ನಾಟಕ ಒಂದು ಪ್ರೇರಕ ಮಾದರಿಯಾಗಿ ಹಲವರಿಗೆ ಗೋಚರಿಸುತ್ತಿದೆ. ಅಲ್ಲಿನ ಮಾಧ್ಯಮಗಳು ಈ ಸುದ್ದಿಗಳನ್ನು ವಿಸ್ತೃತವಾಗಿ ಬಿತ್ತಿರಿಸಿವೆ. ಈ ಮಾದರಿಯ ಕುರಿತು ತಿಳಿದುಕೊಳ್ಳುವ ಉತ್ಸುಕತೆಯನ್ನು ಹಲವರು ತೋರಿದ್ದಾರೆ.

ಈ ಪ್ರಯೋಗವೇ ಒಂದು ಮಹತ್ತರವಾದ ಅನುಭವ ಗಳಿಕೆಯ ಸಾಧನವಾಗಿದೆ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಇದರಲ್ಲಿ ಕೊರತೆಗಳೂ ಇರುವುದು ನಿಶ್ಚಿತ. ಈ ಚುನಾವಣಾ ಫಲಿತಾಂಶದ ಇತರೆಲ್ಲಾ ಆಸ್ಪೆಕ್ಟ್‌ಗಳು ಇನ್ನೂ ಏನನ್ನು ಸೂಚಿಸುತ್ತವೆ ಎಂಬುದನ್ನು ಸಮರ್ಪಕವಾಗಿ ವಿಶ್ಲೇಷಿಸಿ, ’ಎದ್ದೇಳು ಕರ್ನಾಟಕ’ ಮುಂದಿಟ್ಟ ಹೆಜ್ಜೆಗಳು, ಅದರ ಪಾತ್ರ ಮತ್ತು ಫಲಿತಾಂಶದ ಮೇಲೆ ಅದರ ಪರಿಣಾಮಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ, ಇದೆಲ್ಲದರ ಪಾಠಗಳನ್ನು ಸಮಾನಮನಸ್ಕ ಶಕ್ತಿಗಳೊಂದಿಗೆ ಹಂಚಿಕೊಳ್ಳಬೇಕಿದೆ. ಈ ಪ್ರಕ್ರಿಯೆಯಲ್ಲಿ ಈಗ ’ಕರ್ನಾಟಕ ಮಾದರಿ’ ಎಂದು ಅನೇಕರು ಯಾವುದನ್ನು ಹೊಗಳುತ್ತಿದ್ದಾರೋ, ಅದು ಇನ್ನಷ್ಟು ವಿಕಸನ ಹೊಂದಿ, ಅರಳಿ, ಪ್ರತಿಯೊಂದು ರಾಜ್ಯದಲ್ಲೂ ಅವುಗಳದ್ದೇ ಆದ ನಿರ್ದಿಷ್ಟತೆಗಳೊಂದಿಗೆ ಹರಡಬೇಕಿದೆ.

ಈ ಪ್ರಯತ್ನಗಳಲ್ಲಿ ಕೈಗೂಡಿಸಿದ ಎಲ್ಲರ ಕಠಿಣ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿರುವಂತೆಯೇ ನಾವು ನಮ್ರವಾಗಿಯೂ ಇರಬೇಕಿದೆ. ಕಟ್ಟೆಚ್ಚರದೊಂದಿಗೆ, ದುಪ್ಪಟ್ಟು ಉತ್ಸಾಹ ಮತ್ತು ಬದ್ಧತೆಯೊಂದಿಗೆ, ಇತರೆಲ್ಲಾ ಪ್ರಾಮಾಣಿಕ ಶಕ್ತಿಗಳ ಜೊತೆಯೂ ಕೈಜೋಡಿಸಿ ಜನತೆಯ ಹೋರಾಟಗಳನ್ನು ಮುಂದುವರಿಸಲು ನಾವು ಮತ್ತೊಮ್ಮೆ ಸಂಕಲ್ಪ ತೊಡುತ್ತೇವೆ.

ಮಾಡಬೇಕಾದುದು ಬಹಳ ಇದೆ, ನಾವು ಒಗ್ಗೂಡಿ ಶ್ರಮಿಸಿದರೆ ಮಾತ್ರವೇ ಅದನ್ನು ಮಾಡಲು ಸಾಧ್ಯವೆಂಬ ಅರಿವಿನೊಂದಿಗೆ ಒಗ್ಗೂಡಿ ಕೆಲಸ ಮಾಡೋಣ.

ಲಲಿತ

ಲಲಿತ
ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...