ಭಾರತದ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರಾದ, ಸತ್ಯಶೋಧಕ ಸಮಾಜದ ನಿರ್ಮಾತೃ ಜ್ಯೋತಿಬಾ ಫುಲೆ (1827 – 1890) ಅವರ ’ಗುಲಾಮಗಿರಿ’ ಪಠ್ಯದಿಂದ ಆಯ್ದ ಭಾಗ

ಧೋಂಡಿಬಾ: ಬಲಿಯ ಸಾಮ್ರಾಜ್ಯ ಎಷ್ಟು ದೊಡ್ಡದಿತ್ತು?

ಜ್ಯೋತಿರಾವ್: ಅದು ದೇಶದ ಉದ್ದಗಲಕ್ಕೂ ವಿಸ್ತರಿಸಿತ್ತು; ದೇಶದ ಇತರ ಹಲವಾರು ಭಾಗಗಳಲ್ಲಿಯ ಪ್ರದೇಶಗಳೂ ಬಲಿಯ ನಿಯಂತ್ರಣದಲ್ಲಿದ್ದವು ಎಂದುಕೊಳ್ಳಬಹುದು. ಅದರೊಂದಿಗೆ ಸಿಂಹಳದ್ವೀಪದ ಸಮೀಪದ ಅನೇಕ ದ್ವೀಪಗಳನ್ನೂ ಅವನು ನಿಯಂತ್ರಿಸುತ್ತಿದ್ದ; ಇಂದಿಗೂ ಬಲಿ ಎಂಬ ಹೆಸರಿನ ದ್ವೀಪ ಅಸ್ತಿತ್ವದಲ್ಲಿದೆ. ಅವನ ಸಾಮ್ರಾಜ್ಯವು ಕೊಲ್ಹಾಪುರದ ದಕ್ಷಿಣಕ್ಕೆ ಕೊಂಕಣ ಪ್ರದೇಶವನ್ನು ಒಳಗೊಂಡಿತ್ತಲ್ಲದೇ, ಮಾವಾಲ ಪ್ರದೇಶದ ಕೆಲವು ಭಾಗಗಳನ್ನೂ ಹೊಂದಿತ್ತು. ಜ್ಯೋತಿಬಾ ಅಲ್ಲಿಯ ಮುಖ್ಯಸ್ಥನಾಗಿದ್ದ. ಮಹಾರಾಷ್ಟ್ರದ ಉತ್ತರದಲ್ಲಿರುವ ರತ್ನಾಗಿರಿ ಎಂದು ಕರೆಯಲಾದ ಪರ್ವತದ ಮೇಲೆ ಅವನು ವಾಸಿಸುತ್ತಿದ್ದ. ತನ್ನ ಸಾಮ್ರಾಜ್ಯದ ದಕ್ಷಿಣದಲ್ಲಿ ಇದ್ದ ಇನ್ನೊಂದು ಪ್ರದೇಶವನ್ನು ಮಹಾರಾಷ್ಟ್ರ ಎಂದು ಕರೆಯಲಾಗಿತ್ತು.

ಆ ಮೂಲ ಪದದ ಅಪಭ್ರಂಶವೇ ಮಾರಾಠ ಆಗಿರಬಹುದಾಗಿದೆ. ಮಹಾರಾಷ್ಟ್ರವು ತುಂಬಾ ದೊಡ್ಡ ಪ್ರದೇಶವಾಗಿದ್ದರಿಂದ, ಅದನ್ನು ಬಲಿಯು ಒಂಬತ್ತು ಖಂಡಗಳಲ್ಲಿ ವಿಭಜಿಸಿದ. ಪ್ರತಿಯೊಂದು ಭಾಗವನ್ನು ಒಬ್ಬ ಅಧಿಕಾರಿಗೆ ವಹಿಸಲಾಗಿತ್ತು, ಆ ಅಧಿಕಾರಿಯನ್ನು ಖಂಡೋಬ ಎಂದು ಕರೆಯಲಾಗಿತ್ತು. ಖಂಡೋಬನ ಸ್ಥಾನಮಾನಕ್ಕೆ ತಕ್ಕಂತೆ ಅವನಿಗೆ ಇಬ್ಬರು ಸಹಾಯಕರು ಇರುತ್ತಿದ್ದರು. ಅವರನ್ನು ಮಲ್ಲುಖನ್ ಎಂದು ಕರೆಯಲಾಗುತ್ತಿತ್ತು. ಜೆಜುರಿಯ ಖಂಡೋಬಾ ಇಂತಹ ಒಬ್ಬ ಅಧಿಕಾರಿಯಾಗಿದ್ದ. ನೆರೆಹೊರೆಯ ನಾಯಕರ ಆಸ್ಥಾನದಲ್ಲಿ ಹಲವಾರು ಪೈಲ್ವಾನರ ದಂಗೆಗಳನ್ನು ಹತ್ತಿಕ್ಕುವುದು ಅವನ ಕೆಲಸವಾಗಿತ್ತು.

ಅದೇ ಕಾರಣಕ್ಕಾಗಿ ಅವನನ್ನು ಮಲ್ಲ ಆರಿ ಎಂದು ಕರೆಯಲಾಗುತ್ತಿತ್ತು. (ಮಲ್ಲರ ಶತ್ರು). ಈಗ ಪೂಜಿಸಲಾಗುವ ಮಲ್ಹಾರಿ ಎಂಬುದು ಅದರ ಅಪಭ್ರಂಶವಾಗಿರಬಹುದು. ಅವನು ತನ್ನ ನ್ಯಾಯಯುತವಾದ ಯುದ್ಧನೀತಿಗಳಿಗೆ ಹೆಸರುವಾಸಿಯಾಗಿದ್ದ. ರಣಭೂಮಿಯಿಂದ ಓಡಿಹೋಗುವ ಯಾವ ಸೈನಿಕನನ್ನೂ ಹಿಂದಿನಿಂದ ದಾಳಿ ಮಾಡುತ್ತಿರಲಿಲ್ಲ. ಅದಕ್ಕಾಗಿಯೇ ಅವನನ್ನು ಮಾರತೊಂಡ ಎಂತಲೂ ಕರೆಯಲಾಗುತ್ತಿತ್ತು (ತೊಂಡ=ಮುಖ). ಈ ಪದದ ಅಪಭ್ರಂಶ ಮಾರ್ತಾಂಡ ಎಂಬುದು. ಅವನು ಸಮಾಜದಲ್ಲಿ ತುಳಿಯಲ್ಪಟ್ಟ ಜನರಿಗಾಗಿ ಹೋರಾಡುವ ವ್ಯಕ್ತಿಯಾಗಿದ್ದ. ಹಾಗೂ ಸಂಗೀತದಲ್ಲೂ ಪರಿಣಿತನಾಗಿದ್ದು, ಇಂದಿಗೂ ಪ್ರಸಿದ್ಧವಾಗಿರುವ ಮಲ್ಹಾರ ರಾಗವನ್ನು ರಚಿಸಿದ. ಒಬ್ಬ ಪ್ರಸಿದ್ಧ ಮುಸ್ಲಿಂ ಹಾಡುಗಾರ ಮಿಯಾ, ಮೂಲ ಮಲ್ಹಾರ ರಾಗದ ಮಾದರಿಯಲ್ಲಿ ಇನ್ನೊಂದು ರಾಗವನ್ನು ರಚಿಸಿದ, ಅದನ್ನು ಮಿಯಾ ಮಲ್ಹಾರ ಎಂದು ಕರೆಯಲಾಗಿತ್ತು.

ಬಲಿಯು ತೆರಿಗೆ ಸಂಗ್ರಹಿಸಲು ಮತ್ತು ನ್ಯಾಯ ವಿತರಣೆ ಮಾಡಲು ಇಬ್ಬರು ಅಧಿಕಾರಿಗಳನ್ನು ನೇಮಿಸಿದ್ದ; ಅವರನ್ನು ಮಹಾಸುಭ ಹಾಗೂ ನೌ ಖಂಡಾಂಚಾ ನ್ಯಾಯಿ (ಒಂಬತ್ತು ಖಂಡಗಳ ನ್ಯಾಯಿ) ಎಂದು ಕರೆಯಲಾಗಿತ್ತು. ಅವರಿಗೆ ಸಹಾಯಕರಾಗಿ ಹಲವಾರು ಕಿರಿಯ ಅಧಿಕಾರಿಗಳು ಇದ್ದರು. ಮಹಾಸುಭ ಎಂಬದು ಕ್ರಮೇಣ ಬದಲಾಗುತ್ತ ಈಗ ಮ್ಹಾಸೊಬಾ ಎಂದಾಗಿದ್ದು, ಈ ಪದ ಇಂದಿಗೂ ಚಾಲ್ತಿಯಲ್ಲಿದೆ. ರೈತರ ಕೃಷಿ ಉತ್ಪನ್ನಗಳನ್ನು ಅಳೆಯುವುದು ಹಾಗೂ ಅದರ ಅನುಗುಣವಾಗಿ ತೆರಿಗೆ ವಿಧಿಸುವುದು ಅಥವಾ ವಿನಾಯ್ತಿ ನೀಡುವುದು ಅವನ ಕೆಲಸವಾಗಿತ್ತು.

ಇಂದಿಗೂ ಮರಾಠಾ ಕುಟುಂಬಗಳು ತಮ್ಮ ಹೊಲಗಳ ಒಂದು ಮೂಲೆಯಲ್ಲಿ ಮಹಾಸುಭಾನ ಹೆಸರಿನಲ್ಲಿ ಒಂದು ಕಲ್ಲನ್ನು ನೆಟ್ಟು, ಅದಕ್ಕೆ ಅರಿಶಿಣ ಬಳಿದು, ಅದಕ್ಕೆ ಊದಿನಕಡ್ಡಿಯಿಂದ ಪೂಜಿಸಿದ ಮೇಲೆಯೇ ಬಿತ್ತನೆ, ಕೆಳೆ ತೆಗೆಯುವುದು ಮತ್ತು ಪೈರು ಕೊಯ್ಯುವ ಕೆಲಸ ಶುರು ಮಾಡುತ್ತಾರೆ. ಮುಸ್ಲಿಮರೂ ತೆರಿಗೆ ಸಂಗ್ರಹಿಸುವ ಇದೇ ಮಾದರಿಯನ್ನು ಪಾಲಿಸಿದ್ದಾರೆ ಎಂದು ತೋರುತ್ತದೆ ಹಾಗೂ ಬಲಿಯ ನಿದರ್ಶನದಿಂದಲೇ ಕಲಿತುಕೊಂಡಿರಬಹುದಾಗಿದೆ ಏಕೆಂದರೆ, ಆ ದಿನಗಳಲ್ಲಿ ಈ ಸಾಮ್ರಾಜ್ಯದಲ್ಲಿ ಅಧ್ಯಯನ ಮಾಡಲು ಮುಸ್ಲಿಮರಷ್ಟೇ ಅಲ್ಲದೇ ಈಜಿಪ್ಟಿನಿಂದಲೂ ವಿದ್ವಾಂಸರು ಬರುತ್ತಿದ್ದರು. ಮೂರನೆಯದಾಗಿ, ಕಾಶಿ ಪ್ರದೇಶದಲ್ಲಿರುವ ಅಯೋಧ್ಯೆಯ ಸಮೀಪದ ಕೆಲವು ಪ್ರದೇಶಗಳು ಬಲಿಯ ನಿಯಂತ್ರಣದಲ್ಲಿದ್ದವು ಹಾಗೂ ಅದನ್ನು ಹತ್ತನೇ ವಿಭಾಗವೆಂದು ಕರೆಯಲಾಗಿತ್ತು.

ಅಲ್ಲಿಯ ಮುಖ್ಯ ಅಧಿಕಾರಿಯನ್ನು ಕಲಭಾರಿ ಎಂದು ಕರೆಯಲಾಗುತ್ತಿತ್ತು ಹಾಗೂ ಅವನೇ ಕೆಲ ಸಮಯದ ಮಟ್ಟಿಗೆ ಕಾಶಿಯ ಕೋತ್ವಾಲ ಆಗಿದ್ದಿರಬಹುದಾಗಿದೆ. ಅವನು ಸಂಗೀತದಲ್ಲಿ ಎಷ್ಟು ನೈಪುಣ್ಯತೆ ಸಾಧಿಸಿದ್ದನೆಂದರೆ, ಭೈರವ ಎಂಬ ಹೊಸ ರಾಗವನ್ನು ರಚಿಸಿದ. ಅದನ್ನು ಹಾಡುವುದು ಎಷ್ಟು ಕಷ್ಟಕರವಾಗಿತ್ತೆಂದರೆ ತಾನಸೇನ್‌ನಂತಹ ಗಾಯಕರೂ ಆ ರಾಗವನ್ನು ಹಾಡಲು ಹಿಂದೆಮುಂದೆ ನೋಡು ತ್ತಿದ್ದರಂತೆ. ಕಲಭಾರಿಯು ದೌರ ಎಂಬ ಹೊಸ ವಾದ್ಯವನ್ನೂ ರಚಿಸಿದ. ಅದರ ವಿನ್ಯಾಸ ಎಷ್ಟು ಕ್ಲಿಷ್ಟವಾಗಿತ್ತೆಂದರೆ, ಸುಮಧುರ ಸ್ವರ ಹೊಮ್ಮಿಸುವುದರಲ್ಲಿ ತಬಲಾ ಮತ್ತು ಮೃದಂಗಗಳು ಅದರ ಮುಂದೆ ಸಪ್ಪೆಯಾಗಿದ್ದವು. ಆದರೆ ಆ ವಾದ್ಯವನ್ನು ನಿರ್ಲಕ್ಷಿಸಿದ್ದರಿಂದ ಅದಕ್ಕೆ ಸಿಗಬೇಕಿದ್ದ ಪ್ರಸಿದ್ಧಿ ಸಿಗಲಿಲ್ಲ. ಅವನ ಸೇವಕನನ್ನು ಭೈರೇವಾಡಿ ಎಂದು ಕರೆಯಲಾಗುತ್ತಿತ್ತು, ಇಂದು ಅದು ಬದಲಾವಣೆಯಾಗಿ ಭರಾಡಿ ಎಂದು ಉಳಿದುಕೊಂಡಿದೆ. ಇದರಿಂದ ನಮಗೆ ತಿಳಿಯುವುದೇನೆಂದರೆ, ಬಲಿಯ ಸಾಮ್ರಾಜ್ಯವು ಅಜಪಾಲ ಅಥವಾ ದಶರಥನ ಸಾಮ್ರಾಜ್ಯಕ್ಕಿಂತಲೂ ವಿಸ್ತಾರವಾಗಿದ್ದು, ದೇಶದ ಉದ್ದಗಲಕ್ಕೂ ಹರಡಿಕೊಂಡಿತ್ತು.

ಹಾಗಾಗಿಯೇ ಎಲ್ಲಾ ನಾಯಕರು ಬಲಿಯ ನೀತಿಗಳನ್ನು ಅನುಸರಿಸುತ್ತಿದ್ದರು. ಅವರಲ್ಲಿ ಏಳು ಜನರು ಬಲಿಗೆ ತೆರಿಗೆ ಕಟ್ಟುತ್ತಿದ್ದರು ಹಾಗೂ ತಾವುಗಳು ಅವನ ಶಿಷ್ಯಂದಿರು ಎಂದು ಒಪ್ಪಿಕೊಂಡಿದ್ದರು. ಅದೇ ಕಾರಣಕ್ಕಾಗಿ ಬಲಿಯನ್ನು ಏಳರ ರಕ್ಷಕ ಎಂತಲೂ ಕರೆಯಲಾಗಿತ್ತು. ಸಂಕ್ಷಿಪ್ತವಾಗಿ ಆಗ ಬಲಿಯ ಸಾಮ್ರಾಜ್ಯ ಎಲ್ಲೆಡೆ ವಿಸ್ತರಿಸಿತ್ತು. ಒಂದು ಹಳೆಯ ಗಾದೆಯೊಂದಿದೆ; ’ಬಲಿ ನಿಮ್ಮ ಕಿವಿಗಳನ್ನು ಒಡೆದು ಹಾಕುತ್ತಾನೆ’ ಎಂದು. ತನ್ನ ಕುಲೀನರಿಗೆ ಯಾವುದಾದರೂ ಒಂದು ಮಹತ್ವದ ಕೆಲಸವನ್ನು ನಿಯೋಜಿಸುವ ಪರಿಸ್ಥಿತಿ ಬಂದಾಗ, ತನ್ನ ಆಸ್ಥಾನದಲ್ಲಿ ಕೆಲವು ಅಡಿಕೆ ಎಲೆಗಳನ್ನು, ತೆಂಗು ಮತ್ತು ಅರಿಶಿಣದೊಂದಿಗೆ ಒಂದು ತಟ್ಟೆಯಲ್ಲಿ ಇರಿಸಿ, ಯಾರಿಗೆ ಆ ಕೆಲಸವನ್ನು ಯಶಸ್ವಿಗೊಳಿಸುವ ಧೈರ್ಯ ಇದೆಯೋ ಅವರು ಆ ಅಡಿಕೆಎಲೆಯನ್ನು ಎತ್ತಿಕೊಳ್ಳಬಹುದು ಎಂದು ಘೋಷಿಸುತ್ತಿದ್ದ. ಆಗ ಯಾರಿಗೆ ಆತ್ಮವಿಶ್ವಾಸ ಇದೆಯೋ, ಆ ವ್ಯಕ್ತಿ ಮುಂದೆ ಬಂದು, ’ಹರಹರ ಮಹಾವೀರ’ ಎಂದು ಕೂಗುತ್ತ ಆ ಅಡಿಕೆ ಎಲೆಯನ್ನು ಕೈಗೆತ್ತಿಕೊಂಡು, ತಲೆ ಬಾಗಿಸಿ, ತನ್ನ ಹಣೆಯ ಮೇಲೆ ಅರಿಶಿಣ ಬಳಿದು ನಂತರ ಆ ತಟ್ಟೆಯನ್ನು ಗೌರವದಿಂದ ತನ್ನ ತಲೆ ಮಟ್ಟಕ್ಕೆ ಎತ್ತುತ್ತಿದ್ದ ಹಾಗೂ ತನ್ನ ಸೆರಗಿನಲ್ಲಿ ಆ ತಟ್ಟೆಯಲ್ಲಿದ್ದ ಎಲ್ಲವನ್ನೂ ಕಟ್ಟಿಕೊಳ್ಳುತ್ತಿದ್ದ.

ಆಗ ಬಲಿಯು ಆ ನಿರ್ದಿಷ್ಟ ವ್ಯಕ್ತಿಗೆ ತನ್ನ ಸೈನ್ಯವನ್ನು ತೆಗೆದುಕೊಂಡು, ವೈರಿಯನ್ನು ಸದೆಬಡಿಯಲು ಮುನ್ನುಗ್ಗುವ ಕೆಲಸವನ್ನು ವಹಿಸುತ್ತಿದ್ದ. ಅದೇ ಕಾರಣಕ್ಕೆ ಈ ಆಚರಣೆಯನ್ನು ’ತಟ್ಟೆ(ತಾಲಿ) ಎತ್ತಿಕೊಳ್ಳುವುದು’ ಎಂದು ಕರೆಯುತ್ತಾರೆ. ಬಲಿಯ ಎಲ್ಲಾ ಮಹಾನ್ ಯೋಧರಲ್ಲಿ, ಇತರ ಒಂಬತ್ತು ಖಂಡೋಬಾಗಳೊಂದಿಗೆ ಭೈರೋಬಾ, ಜ್ಯೋತಿಬಾ ಅವರು ತಮ್ಮ ಪ್ರಜೆಗಳನ್ನು ಸಂತೋಷವಾಗಿಡಲು ತಮಗೆ ಸಾಧ್ಯವಾದದ್ದನ್ನೆಲ್ಲಾ ಮಾಡುತ್ತಿದ್ದರು. ಹಾಗಾಗಿಯೇ ಯಾವುದೇ ಶುಭ ಕೆಲಸದ ಮುಂಚೆ ಮರಾಠಾ ಜನರು ’ಥಾಲಿ (ತಟ್ಟೆ) ಎತ್ತಿಹಿಡಿಯುವ’ ಆಚರಣೆಯನ್ನು ಯಾವಾಗಲೂ ಆಚರಿಸುತ್ತ ಬಂದಿದ್ದಾರೆ. ಅವರು ಭೈರೊಬಾ, ಜ್ಯೋತಿಬಾ ಮತ್ತು ಖಂಡೋಬಾರನ್ನು ದೇವರುಗಳೆಂದು ಪರಿಗಣಿಸಲು ಪ್ರಾರಂಭಿಸಿದರು ಹಾಗೂ ತಟ್ಟೆಯನ್ನು ಎತ್ತಿಹಿಡಿಯುವ ಪುರಾತನ ಆಚರಣೆಯಲ್ಲಿ ಅವರನ್ನು ಒಳಗೊಳ್ಳುತ್ತಿದ್ದರು.

ಅವರು ’ಹರಹರ ಮಹಾದೇವ’, ’ಜ್ಯೋತಿಬಾಚ ಚಾಂಗ ಭಲಾ’, ‘ಸದಾನಂದನಿಗೆ ಜಯವಾಗಲಿ’ ಮತ್ತು ’ಮಲ್ಲುಖನಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಭಾನುವಾರವನ್ನು ಬಲಿರಾಜನು ಶಿವನ ದಿನವೆಂದು ಪರಿಗಣಿಸಿದ್ದರಿಂದ, ಇಂದಿನ ಮರಾಠರು, ಅಂದರೆ ಮಾಂಗರು, ಮಹಾರರು, ಕುನಬಿ, ಮಾಲಿ ಮತ್ತು ಇತರರು ಪ್ರತಿ ಭಾನುವಾರ ತಮ್ಮ ಮನೆ ದೇವರನ್ನು ಪೂಜಿಸುವ ಮುನ್ನ ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸುವುದಿಲ್ಲ. ಭಾನುವಾರದಂದು ಮೊದಲು ಅವರು ದೇವರ ವಿಗ್ರಹಕ್ಕೆ ಸ್ನಾನ ಮಾಡಿಸುತ್ತಾರೆ ಆಗ ಮನೆಯಲ್ಲಿದ್ದ ಎಲ್ಲಾ ಆಹಾರವೂ ಪವಿತ್ರವಾಗುತ್ತದೆ.

ಧೋಂಡಿಬಾ: ಬಲಿಯ ಸಾಮ್ರಾಜ್ಯದ ಗಡಿಗೆ ಬಂದಾಗ ವಾಮನ ಮಾಡಿದ್ದೇನು?

ಜ್ಯೋತಿರಾವ್: ವಾಮನ ತನ್ನ ಎಲ್ಲಾ ಬಲದೊಂದಿಗೆ ಬಲಿಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ ಹಾಗೂ ದಾರಿಯುದ್ದಕ್ಕೂ ಪ್ರಜೆಗಳನ್ನು ಹಿಂಸಿಸಿದ. ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿದ್ದ ಸೈನ್ಯವು ಸ್ಥಳಕ್ಕೆ ಬರದೇ ಇದ್ದರೂ, ಈ ದಾಳಿಕೋರನ ಜೊತೆಗೆ ಯುದ್ಧ ಮಾಡುವುದನ್ನು ಬಿಟ್ಟು ಬೇರೆ ಯಾವ ಆಯ್ಕೆಯೂ ಬಲಿಯ ಬಳಿ ಇರಲಿಲ್ಲ. ಅವನು ಈ ರೀತಿಯಲ್ಲಿ ಯುದ್ಧ ಮಾಡಿದ; ಬಲಿಯು ಭಾದ್ರಪದ ತಿಂಗಳಲ್ಲಿನ ಕತ್ತಲ ಎರಡು ವಾರಗಳ ಮೊದಲ ದಿನದಂದು ಯುದ್ಧ ಪ್ರಾರಂಭಿಸಿದ ಹಾಗೂ ಆ ಎರಡು ವಾರಗಳ ಹದಿನೈದನೇ ದಿನದವರೆಗೂ ಹೋರಾಡಿದ. ಅವನು ಬೆಳಕು ಹರಿಯುತ್ತಲೇ ಯುದ್ಧ ಪ್ರಾರಂಭಿಸಿ ಸೂರ್ಯಾಸ್ತದ ನಂತರ ವಿಶ್ರಾಂತಿಗಾಗಿ ತನ್ನ ಅರಮನೆಗೆ ಮರಳುತ್ತಿದ್ದ. ಹಾಗಾಗಿ ಆ ಎರಡು ವಾರಗಳ ಅವಧಿಯಲ್ಲಿ ಹಲವಾರು ಜನರು ಎರಡೂ ಕಡೆಯವರು ಮಡಿದ ದಿನಗಳನ್ನು ನೆನಪಿಡುವುದು ಸುಲಭವಾಗಿತ್ತು. ಬಹುಶಃ ಅದೇ ಕಾರಣಕ್ಕಾಗಿಯೇ, ಭಾದ್ರಪದದ ಮೊದಲ ಎರಡು ವಾರಗಳ ಅವಧಿಯಲ್ಲಿ ಪಕ್ಷ ಅಥವಾ ಪಿತೃಪಕ್ಷ ಎಂಬ ಆಚರಣೆ ಮಾಡುವುದು ರೂಢಿಯಲ್ಲಿದೆ.

ಆ ನಂತರದ ಹದಿನೈದು ದಿನ ಬಲಿಯು ಯುದ್ಧದಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದನೆಂದರೆ, ಆಶ್ವಿನಿ ತಿಂಗಳಲ್ಲಿ ಬರುವ ಎರಡು ವಾರ ಅವಧಿಯ ಮೊದಲ ದಿನದಿಂದ ಎಂಟನೆಯ ದಿನದವರೆಗೆ ಕಾಳಗ ಬಿಟ್ಟು ಎಲ್ಲವನ್ನು ಮರೆತು, ವಿಶ್ರಾಂತಿ ಪಡೆಯಲು ಮನೆಗೂ ಮರಳಲಿಲ್ಲ. ಆಗ ಬಲಿಯ ರಾಣಿ ವಿಂದ್ಯಾವತಿಯು ತನ್ನ ಎಲ್ಲಾ ಸೇವಕರು, ಖೋಜಾ ಮತ್ತು ಅರಧಿಯರನ್ನು ಕರೆದು, ಒಂದು ಆಳವಾದ ಗುಂಡಿಯನ್ನು ಅಗಿಯಲು
ಆದೇಶಿಸಿದಳು, ಆ ಆಳವಾದ ಗುಂಡಿಯಲ್ಲಿ ಉರುವಲು ಕಟ್ಟಿಗೆಯನ್ನು ಇರಿಸಿದಳು. ಆಗ ಅಲ್ಲಿಯೇ ಹತ್ತಿರದಲ್ಲಿ ನೀರು ತುಂಬಿದ ಗಡಿಗೆಯನ್ನು ಇರಿಸಿದಳು ಹಾಗೂ ಎಂಟು ದಿನ ಹಗಲೂರಾತ್ರಿ, ಅನ್ನ ನೀರು ಸೇವಿಸದೇ ವಾಮನನ ರೂಪದಲ್ಲಿ ಬಂದಿರುವ ಆಪತ್ತನ್ನು ತಪ್ಪಿಸಲು ಹರಹರ ಮಹಾವೀರನಲ್ಲಿ ಪ್ರಾರ್ಥನೆ ಮಾಡಿದಳು, ಆದರೆ ಆ ತಿಂಗಳ ಎಂಟನೆಯ ದಿನದ ಸಾಯಂಕಾಲ ಕಾಳಗದಲ್ಲಿ ಬಲಿಯು ಮಡಿದ ಸುದ್ದಿ ತಲುಪಿದಾಗ, ರಾಣಿಯು ಚಿತೆಗೆ ಕೊಳ್ಳಿ ಇಟ್ಟು, ಅದರಲ್ಲಿ ಜಿಗಿದು ಸಾವನ್ನಪ್ಪಿದಳು.

PC: Twitter

ಅವಳ ಸೇವಕರಾದ ಖೋಜಾ ಮತ್ತು ಅರಧಿಯರು ತಮ್ಮ ಕೈಗಳಿಂದ ಎದೆಎದೆ ಬಡಿದುಕೊಂಡು ಅತ್ತರು. ಅವರು ತಮ್ಮ ಬಟ್ಟೆಗಳನ್ನು ಹರಿದುಹಾಕಿ ಚಿತೆಗೆ ಎಸೆದರು. ಅವರು ಅವಳ ಸದ್ಗುಣಗಳನ್ನು ನೆನಪಿಸಿಕೊಂಡು ಅಳುತ್ತ ಆ ಚಿತೆಯ ಸುತ್ತಲೂ ಓಡಿದರು. ’ಓ ದಯಾಳು ರಾಣಿಯೇ, ನಿನ್ನ ಸದ್ಗುಣಗಳ ಪ್ರಸಿದ್ಧಿಯು ವಿಶ್ವದ ಎಲ್ಲೆಡೆ ಹರಡಲಿ’ ಎನ್ನುತ್ತ ಕಣ್ಣೀರು ಸುರಿಸಿದರು. ಆದರೆ ಈ ಭಯಂಕರ ಘಟನೆಯನ್ನು ಮರೆಸಿಹಾಕಲು ನಿರ್ದಯಿಯಾದ ವಿಪ್ರ ಲೇಖಕರು ಆ ಗುಂಡಿಯನ್ನು ಒಂದು ಪವಿತ್ರ ಅಗ್ನಿ ಎಂದು ಬದಲಿಸಲು ಪ್ರಯತ್ನಿಸಿದರು ಹಾಗೂ ಇಂತಹ ಹಲವಾರು ಬದಲಾವಣೆಗಳನ್ನು ಮಾಡಿದರು. ಬಲಿ ಮಡಿದ ನಂತರ ಬನಾಸುರನು ವಾಮನನ ವಿರುದ್ಧ ವಿರೋಚಿತ ಕದನ ಮಾಡಿದ ಆದರೆ ಮಾರನೆಯ ದಿನ ಅಲ್ಲಿಂದ ಓಡಬೇಕಾಯಿತು, ಅದು ಆಶ್ವಿನಿ ತಿಂಗಳ ಪ್ರಕಾಶಮಾನ ಹದಿನೈದು ದಿನದ ಅವಧಿಯ ಎಂಟನೆಯ ದಿನ. ಅವನೊಂದಿಗೆ ಅವನ ಸೈನ್ಯವೂ ಅಲ್ಲಿಂದ ಮರಳಬೇಕಾಯಿತು. ಈ ಗೆಲುವು ವಾಮನನ್ನು ಎಷ್ಟು ಭಂಡನಾಗಿಸಿತೆಂದರೆ, ಅವನು ನೇರವಾಗಿ ಬಲಿ ರಾಜಧಾನಿಗೆ ನುಗ್ಗಿದ.

ಅಲ್ಲಿ ರಾಜಧಾನಿಯ ರಕ್ಷಣೆ ಮಾಡಲು ಯಾರೂ ಇದ್ದಿಲ್ಲದನ್ನು ಕಂಡು, ಅಶ್ವಿನಿ ತಿಂಗಳ ಹತ್ತನೇ ದಿನದ ಮುಂಜಾನೆ ಆ ನಗರದ ಎಲ್ಲಾ ಅಂಗಣಗಳನ್ನು ಲೂಟಿ ಮಾಡಿದ. ನಂತರ ಅವನು ತಕ್ಷಣವೇ ತನ್ನ ಮನೆಗೆ ತೆರಳಿದ. ಅವನು ಮನೆಗೆ ತಲುಪಿದಾಗ, ಅವನ ಹೆಂಡತಿಯು ಹಿಟ್ಟಿನಲ್ಲಿ ಬಲಿಯ ಒಂದು ವಿಗ್ರಹ ಮಾಡಿ ಹೊಸ್ತಿಲಲ್ಲಿ ಇಟ್ಟು, ತಮಾಷೆಯಾಗಿ ವಾಮನನಿಗೆ ’ನಿಲ್ಲು, ಬಲಿ ನಿನ್ನೊಡನೆ ಹೋರಾಟ ಮಾಡಲು ಮತ್ತೇ ಬಂದಿದ್ದಾನೆ’ ಎನ್ನುತ್ತಾಳೆ. ಆಗ ವಾಮನನು ಹಿಟ್ಟಿನ ಬಲಿಯನ್ನು ಕಾಲಿನಿಂದ ಒದ್ದು ಮನೆಯನ್ನು ಪ್ರವೇಶಿಸುತ್ತಾನೆ. ಆ ದಿನದಿಂದ, ದಸರಾ ಹಬ್ಬದಂದು ಬ್ರಾಹ್ಮಣರ ಮನೆಗಳಲ್ಲಿ ಒಂದು ಆಚರಣೆ ನಡೆದುಬಂದಿದೆ; ಮಹಿಳೆಯರು ಹಿಟ್ಟಿನಿಂದ ಅಥವಾ ಅಕ್ಕಿಕಾಳುಗಳಿಂದ ಬಲಿಯ ಒಂದು ವಿಗ್ರಹ ಮಾಡುತ್ತಾರೆ, ಅದನ್ನು ಹೊಸ್ತಿಲ ಹೊರಗೆ ಇಡುತ್ತಾರೆ. ಆಗ ಬ್ರಾಹ್ಮಣ ಪುರುಷನು ತನ್ನ ಎಡಗಾಲನ್ನು ವಿಗ್ರಹದ ಎಡಬದಿಗೆ ಇರಿಸಿ, ಅಪ್ತಾ ಮರದ ಒಂದು ಕೊಂಬೆಯಿಂದ ಹೊಟ್ಟೆಯನ್ನು ಚುಚ್ಚುತ್ತಾನೆ ನಂತರ ಆ ವಿಗ್ರಹದ ಮೇಲೆ ಕಾಲಿಟ್ಟು ಮನೆಯನ್ನು ಪ್ರವೇಶಿಸುತ್ತಾನೆ. ಬಾನಾಸುರನ ಜನರು ಆಶ್ವಿನಿ ತಿಂಗಳ ಹತ್ತನೆಯ ದಿನದಂದು ತಮ್ಮ ಮನೆಗೆ ಮುಟ್ಟಿದಾಗ, ಮನೆಯ ಹೆಂಗಸರೂ ಬಲಿಯ ವಿಗ್ರಹವೊಂದನ್ನು ಮಾಡಿ, ಬಲಿ ಮತ್ತೇ ಬಂದು ಭೂಮಿಯ ಮೇಲೆ ದೇವರ ಸಾಮ್ರಾಜ್ಯವನ್ನು ಕಟ್ಟುವನು ಎಂದು ಭವಿಷ್ಯ ನುಡಿಯುತ್ತಾರೆ.

ಅವರು ಹೊಸ್ತಿಲಲ್ಲಿ ನಿಂತು, ತಟ್ಟೆಗಳಲ್ಲಿ ದೀಪ ಬೆಳಗಿಸಿ, ಮುಖದ ಸುತ್ತ ತಿರುಗಿಸುತ್ತಾರೆ, ಅದುವೆ ಅವರನ್ನು ಮನೆಗೆ ಸ್ವಾಗತಿಸುವ ಆಚರಣೆಯೂ ಆಗಿತ್ತು ಹಾಗೂ ’ವಿಪತ್ತುಗಳು, ಅಂದರೆ ದ್ವಿಜರ ಹಕ್ಕುಗಳು ಕಣ್ಮರೆಯಾಗಲಿ ಹಾಗೂ ಬಲಿಯ ಸಾಮ್ರಾಜ್ಯ ಶೀಘ್ರವೇ ಮರಳಲಿ’ ಎಂದು ಹೇಳುತ್ತಾರೆ. ಆ ದಿನದ ನಂತರದಿಂದ ಆಶ್ವಿನದ ಹತ್ತನೇ ದಿನ, ಅದುವೆ ದಸರೆಯ ದಿನದಂದು ಕ್ಷತ್ರಿಯ ಕುಟುಂಬಗಳಲ್ಲಿ ಇದೊಂದು ಆಚರಣೆಯನ್ನು ಮಾಡುತ್ತಾರೆ; ಆಗ ಮನೆಯ ಮಹಿಳೆಯರು ಗಂಡಂದಿರ ಮುಖದ ಸುತ್ತ ಬೆಳಗಿದ ದೀಪಗಳನ್ನು ಸುತ್ತಿ, ಬಲಿಯ ಸಾಮ್ರಾಜ್ಯ ಮರಳಲಿ ಎಂದು ಪ್ರಾರ್ಥಿಸುತ್ತಾರೆ. ಬಲಿರಾಜ ಮರಳುವುದು ಎಷ್ಟು ಅದ್ಭುತವಾಗಿರುತ್ತದೆನ್ನುವುದನ್ನು ಒಮ್ಮೆ ಊಹಿಸಿಕೊಳ್ಳಿ. ಎಂತಹ ರಾಜ, ಅವರೇನು ಮಾಡಿದರು, ಅವರ ಬದ್ಧತೆ ಎಂತಹದ್ದು! ಅದನ್ನೇ ಇಂದಿನ ಹಿಂದೂಗಳಿಗೆ ಹೋಲಿಸಿ ನೋಡಿ, ಒಂದು ದಿನ ಬ್ರಿಟಿಷರಿಂದ ಲಾಭ ಪಡೆಯಲು ಸಾರ್ವಜನಿಕ ಸಭೆಯಲ್ಲಿ ಇಂಗ್ಲೆಂಡಿನ ರಾಣಿಯ ಹುಟ್ಟಿದ ದಿನದಂದು ಅವಳನ್ನು ಹಾಡಿ ಹೊಗಳಿ ಕೊಂಡಾಡುತ್ತಾರೆ ಹಾಗೂ ಮಾರನೆಯ ದಿನವೇ, ಪತ್ರಿಕೆಗಳಲ್ಲಿ ಅಥವಾ ತಮ್ಮ ವೈಯಕ್ತಿಕ ಚರ್ಚೆಗಳಲ್ಲಿ ಅದಕ್ಕೆ ತದ್ವಿರುದ್ಧವಾದ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಬ್ರಾಹ್ಮಣ್ಯ ಶೋಷಣೆಯ ರೂಪದ ಹಿಂದೂ ಧರ್ಮ; ಜ್ಯೋತಿಬಾ ಫುಲೆ ಅವರ ಚಿಂತನೆ

ಇದನ್ನೂ ಓದಿ: ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?

ಇದನ್ನೂ ಓದಿ: ವಿಶೇಷ ವರದಿ; #sackrohithchakrateerta ವಿವಾದದ ಸುತ್ತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

2 COMMENTS

  1. ಕಮ್ಯೂನಿಸ್ಟ್ ರು ಭಾರತದ ಇತಿಹಾಸ ಬಗ್ಗೆ ಬರೆದಿರುವ ಸುಳ್ಳುಗಳನ್ನು ನಾವುಗಳು ಓದಿದ್ದು ಸಾಕು, ನಮ್ಮ ಮಕ್ಕಳು ಮಾತ್ರ ಓದೋದು ಬೇಡವೇ ಬೇಡ ,ಈ ಗಾಂಧಿ ಕುಟುಂಬದ ವೈಭವೀಕರಣದ ಸುಳ್ಳು ದಾಖಲೆಗಳ ಇತಿಹಾಸದಿಂದ ದೇಶ ಹಾಳಾಗಿದ್ದು ಸಾಕು , ತಿರುಚಿದ ಸೋಕಾಲ್ಡ್ ನಗರ ನಕ್ಸಲ್ ರ ನಿಮ್ಮಂಥ ಬುದ್ದಿವಂತ ಅವಿವೇಕಿಗಳ ಮೈಸೂರು ಇತಿಹಾಸದ ತಿರುಚುವಿಕೆ ಈಗಲಾದರೂ ನಿಲ್ಲಬೇಕಾಗಿದೆ ,ಇಲ್ಲದೆ ಹೋದರೆ ಜನ ಹಾದಿ ಬೀದಿಯಲ್ಲಿ ನಾಯಿ ಬಡಿದ ಹಾಗೆ ಬಡಿದಾರು ನಗರ ನಕ್ಸಲರನ್ನಾ

  2. ಕಮ್ಯೂನಿಸ್ಟ್ ರು ಭಾರತದ ಇತಿಹಾಸ ಬಗ್ಗೆ ಬರೆದಿರುವ ಸುಳ್ಳುಗಳನ್ನು ನಾವುಗಳು ಓದಿದ್ದು ಸಾಕು, ನಮ್ಮ ಮಕ್ಕಳು ಮಾತ್ರ ಓದೋದು ಬೇಡವೇ ಬೇಡ ,ಈ ಗಾಂಧಿ ಕುಟುಂಬದ ವೈಭವೀಕರಣದ ಸುಳ್ಳು ದಾಖಲೆಗಳ ಇತಿಹಾಸದಿಂದ ದೇಶ ಹಾಳಾಗಿದ್ದು ಸಾಕು , ತಿರುಚಿದ ಸೋಕಾಲ್ಡ್ ನಗರ ನಕ್ಸಲ್ ರ ನಿಮ್ಮಂಥ ಬುದ್ದಿವಂತ ಅವಿವೇಕಿಗಳ ಮೈಸೂರು ಇತಿಹಾಸದ ತಿರುಚುವಿಕೆ ಈಗಲಾದರೂ ನಿಲ್ಲಬೇಕಾಗಿದೆ ,ಇಲ್ಲದೆ ಹೋದರೆ ಜನ ಹಾದಿ ಬೀದಿಯಲ್ಲಿ ನಾಯಿ ಬಡಿದ ಹಾಗೆ ಬಡಿದಾರು ನಗರ ನಕ್ಸಲರನ್ನ

LEAVE A REPLY

Please enter your comment!
Please enter your name here