ರಾಜಸ್ತಾನದಲ್ಲಿ ಕೊಡವನ್ನು ಮುಟ್ಟಿ ನೀರು ಕುಡಿದ ಕಾರಣಕ್ಕೆ ಸವರ್ಣೀಯ ಶಿಕ್ಷಕನೊಬ್ಬ ದಲಿತ ಬಾಲಕನನ್ನು ಥಳಿಸಿ ಕೊಂದಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ ಜಾತಿ ದೌರ್ಜನ್ಯವೊಂದು ಉತ್ತರ ಪ್ರದೇಶದಲ್ಲಿ ತಡವಾಗಿ ವರದಿಯಾಗಿದೆ. ರಾಜ್ಯದ ಔರೈಯಾದ ಬಿದುನಾ ತಾಲೂಕಿನ ಪಿಪ್ರೌಲಿ ಶಿವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.
ಆಗಸ್ಟ್ 5 ರಂದು ದಲಿತ ವಿದ್ಯಾರ್ಥಿಯೊಬ್ಬರನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿ ಅಮಾನವಿಯವಾಗಿ ನಡೆಸಿಕೊಳ್ಳಲಾಗಿದೆ. ಮರುದಿನ ಶಾಲೆಗೆ ಬಂದ ಶಿಕ್ಷಕರು ಶೌಚಾಲಯದ ಬೀಗ ತೆಗೆದಾಗ ಬಾಲಕ ಹೊರಗೆ ಬಂದಿದ್ದಾರೆ. ಇದರ ನಂತರ ಮನೆಗೆ ತೆರಳಿರುವ ವಿದ್ಯಾರ್ಥಿಯು ಕುಟುಂಬಸ್ಥರ ಬಳಿ ಘಟನೆಯನ್ನು ವಿವರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪೂರ್ವ ದೂಜೆ ಗ್ರಾಮದ 11 ವರ್ಷದ ವಿದ್ಯಾರ್ಥಿಯು ಆಗಸ್ಟ್ 5ರಂದು ಶಾಲೆಗೆ ಹೋಗಿದ್ದರು. ಆದರೆ ಅಂದು ಅವರು ಶಾಲೆ ಬಿಟ್ಟರೂ ಮನೆಗೆ ಹಿಂದಿರುಗಲಿಲ್ಲ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ರಾತ್ರಿಯಿಡಿ ಊರಿನಲ್ಲಿ ಮತ್ತು ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿರೂ ಮಗನ ಬಗ್ಗೆ ಯಾವುದೇ ವಿಷಯ ತಿಳಿಯಲಿಲ್ಲ.
ಇದನ್ನೂ ಓದಿ: ರಾಜಸ್ಥಾನ: ಪಾತ್ರೆ ಮುಟ್ಟಿದ ದಲಿತ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕ; ಎಫ್‌ಐಆರ್ ದಾಖಲು
ಆಗಸ್ಟ್ 6 ರಂದು ಬೆಳಗ್ಗೆ 8 ಗಂಟೆಗೆ ಶಾಲೆಯ ಬಾಗಿಲು ತೆರೆಯಲು ಶಿಕ್ಷಕರು ಬಂದಾಗ ಕೊಠಡಿಗಳ ಜತೆಗೆ ಶೌಚಾಲಯದ ಬೀಗವನ್ನೂ ತೆರೆಯಲಾಗಿತ್ತು. ಈ ವೇಳೆ, ತಮ್ಮ ಮಗ ಶೌಚಾಲಯದಿಂದ ಹೊರಗೆ ಬಂದಿದ್ದಾರೆ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿದ್ದಾರೆ.
“ಶಾಲೆಗೆ ರಜೆ ಇದ್ದ ಕಾರಣ ನಾನು ಮನೆಗೆ ಬರುತ್ತಿದ್ದೆ. ಆಗ ಶಿಕ್ಷಕ ವಿಜಯ್ ಕುಶ್ವಾಹ ಅವರು ನನ್ನನ್ನು ತಡೆದು ಮಧ್ಯಾಹ್ನ 2 ಗಂಟೆಗೆ ಶೌಚಾಲಯಕ್ಕೆ ತಳ್ಳಿದರು ಮತ್ತು ಹೊರಗಿನಿಂದ ಬಾಗಿಲು ಮುಚ್ಚಿದರು. ಆ ಬಳಿಕ ಶೌಚಾಲಯಕ್ಕೂ ಬೀಗ ಹಾಕಲಾಗಿತ್ತು. ಎಲ್ಲರೂ ಹೊರಟು ಹೋಗಿದ್ದರು. ನಾನು ರಾತ್ರಿ ಸಹಾಯಕ್ಕಾಗಿ ಕಿರುಚುತ್ತಿದ್ದೆ” ಎಂದು ತಮ್ಮ ಮಗ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಶಾಲೆಯ ಬಳಿ ಯಾವುದೇ ಮನೆ ಇಲ್ಲ. ಹೀಗಾಗಿ ಮಗನ ಧ್ವನಿ ಯಾರಿಗೂ ಕೇಳಿಸದೇ 18 ಗಂಟೆಗಳ ಕಾಲ ಶೌಚಗೃಹದಲ್ಲೇ ಉಳಿದಿಕೊಂಡಿದ್ದ” ಎಂದು ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ದಲಿತ ಮಕ್ಕಳೊಂದಿಗೆ ಶಿಕ್ಷಕರ ವರ್ತನೆ ಸರಿಯಿಲ್ಲ. ಶಾಲೆಯ ಎಲ್ಲಾ ದಲಿತ ಮಕ್ಕಳೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಾರೆ. ಊಟದಲ್ಲಿ ಪಲ್ಯ ಬಡಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ” ಎಂದು ಸಂತ್ರಸ್ತ ಬಾಲಕ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಬಾಲಕನ ಸಾವಿನ ಹೊಣೆಹೊತ್ತು ಕಾಂಗ್ರೆಸ್ ಶಾಸಕನ ರಾಜೀನಾಮೆ
ಈ ಘಟನೆ ಬೆಳಕಿಗೆ ಬಂದ ನಂತರ ಗ್ರಾಮದ ಜನರೊಂದಿಗೆ ಆಗಮಿಸಿದ ಸಂಬಂಧಿಕರು ಶಾಲೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಶಿಕ್ಷಕನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


