ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಷ್ಟೇ (CISF) ಅಧಿಕಾರ ಹೊಂದಿರುವ ವಿಶೇಷ ಭದ್ರತಾ ಪಡೆಯೊಂದನ್ನು ಸ್ಥಾಪಿಸಲಾಗುವುದು, ಇದು ವಾರೆಂಟ್ ಇಲ್ಲದೆಯೇ ಶೋಧಿಸುವ ಮತ್ತು ಬಂಧಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಉತ್ತರ ಪ್ರದೇಶದ ರಾಜ್ಯಸರ್ಕಾರ ತಿಳಿಸಿದೆ.
ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡಗಳು, ಮಹಾನಗರಗಳು, ಬ್ಯಾಂಕುಗಳು ಮತ್ತು ಇತರ ಸರ್ಕಾರಿ ಕಚೇರಿಗಳನ್ನು ರಕ್ಷಿಸಲು ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆ(UPSSF)ಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ.
“ಆರಂಭದಲ್ಲಿ UPSSF ನ ಎಂಟು ಬೆಟಾಲಿಯನ್‌ಗಳನ್ನು ₹ 1,747.06 ಕೋಟಿ ವೆಚ್ಚದಲ್ಲಿ ರಚಿಸಲಾಗುವುದು”, ಎನ್ನಲಾಗಿದ್ದು, ಈ ಪಡೆಗೆ ಆರಂಭಿಕ ಮೂಲಸೌಕರ್ಯ ಯುಪಿ ಪೊಲೀಸರ ವಿಶೇಷ ಘಟಕವಾದ ಪಿಎಸಿ (ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ) ಯಿಂದ ಬರುತ್ತದೆ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾಗಲಿದೆ ಎಂದು ಭಾನುವಾರ ತಡರಾತ್ರಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಸರಣಿ ಟ್ವೀಟ್ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಮ್ಯಾಜಿಸ್ಟ್ರೇಟ್‌ನ ಪೂರ್ವಾನುಮತಿ ಇಲ್ಲದೆ ಮತ್ತು ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದು. ಈ ವಿಭಾಗಕ್ಕೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುವುದು” ಎಂದು ಟ್ವೀಟ್ ಮಾಡಿದ್ದಾರೆ.
ಈ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಟೀಕೆಗೆ ಸರ್ಕಾರದಿಂದ ಯಾವುದೇ ಔಪಚಾರಿಕ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ಮದಲೂರು ಕೆರೆಗೆ ಹೇಮಾವತಿ ನೀರು; ಬಿಜೆಪಿಗೆ ತಿರುಗುಬಾಣವಾದ ಹಿಂದಿನ ಪತ್ರ!


