ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹೆಚ್ಚುತ್ತಿರುವ ಮಾಲಿನ್ಯದಲ್ಲಿ ಉತ್ತರ ಪ್ರದೇಶದ ಕೈಗಾರಿಕೆಗಳ ಪಾತ್ರವಿಲ್ಲ ಮತ್ತು ಪಾಕಿಸ್ತಾನದ ಕಲುಷಿತ ಗಾಳಿಯು ರಾಜಧಾನಿಯ ಗಾಳಿಯ ಗುಣಮಟ್ಟವನ್ನು ಹದಗೆಡಿಸುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ‘ಹಾಗಾದರೆ ನೀವು ಪಾಕಿಸ್ತಾನದಲ್ಲಿ ಕೈಗಾರಿಕೆಗಳನ್ನು ನಿಷೇಧಿಸಲು ಬಯಸುತ್ತೀರಾ?’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ಪಾಕಿಸ್ತಾನದಿಂದ ಬರುವ ಮಾಲಿನ್ಯಕಾರಕ ಗಾಳಿಯಿಂದ ದೆಹಲಿಯ ಗಾಳಿಯ ಗುಣಮಟ್ಟವು ಹದಗೆಟ್ಟಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಎಂಟು ಗಂಟೆಗಳ ಕಾರ್ಯಾಚರಣೆಯು ಉತ್ತರ ಪ್ರದೇಶದ ಕಬ್ಬು ಮತ್ತು ಹಾಲಿನ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು. ಸಿಜೆಐ ನೇತೃತ್ವದ ಪೀಠವು ವಕೀಲರನ್ನು ತರಾಟೆಗೆ ತೆಗೆದುಕೊಂಡು ಆಯೋಗದ ಮೊರೆ ಹೋಗುವಂತೆ ಮತ್ತು ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸೂಚಿಸಿತು.
ವಾಯು ಮಾಲಿನ್ಯವು ತೀವ್ರವಾಗಿ ದೆಹಲಿಯನ್ನು ಆವರಿಸಿದೆ. ಉಸಿರಾಟದ ತೊಂದರೆ ಹೆಚ್ಚಳವಾಗಿದೆ ಎಂದು ದೆಹಲಿಯಲ್ಲಿನ ಆಸ್ಪತ್ರೆಗಳು ವರದಿ ಮಾಡಿವೆ. ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಎದುರಿಸಲು ಕೆಲವು ಕ್ರಮಗಳಿಗೆ ಸುಪ್ರೀಂ ಕೋರ್ಟ್ ಪೀಠವು 24 ಗಂಟೆಗಳ ಗಡುವನ್ನು ನೀಡಿದ ಒಂದು ದಿನದ ನಂತರ, ಎನ್‌ಸಿಆರ್‌ನಲ್ಲಿನ ಮಾಲಿನ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು ಕಾರ್ಯಪಡೆಯನ್ನು ರಚಿಸಿದೆ.
ಇದನ್ನೂ ಓದಿರಿ: ಎನ್‌ಇಪಿ: ಅವೈಜ್ಞಾನಿವಾಗಿ ಪಠ್ಯಕ್ರಮ ದಿಢೀರ್ ಬದಲು, ಮಹಾರಾಜ ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ
ಕಳೆದ 24 ಗಂಟೆಗಳಲ್ಲಿ ತೆಗೆದುಕೊಂಡ ಕ್ರಮಗಳನ್ನು ಆಲಿಸಿದ ನ್ಯಾಯಾಲಯವು ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ದೆಹಲಿ ಸರ್ಕಾರಕ್ಕೆ ಅನುಮತಿ ನೀಡಿದೆ. ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಐದು ಸದಸ್ಯರ ಜಾರಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಂತಹ ಸುಮಾರು 40 ಸ್ಕ್ವಾಡ್‌ಗಳು ಮಾಲಿನ್ಯವನ್ನು ಎದುರಿಸಲು ಸೂಚಿಸಿದ ಕ್ರಮಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತವೆ ಎಂದು ಸಮಿತಿ ಹೇಳಿದೆ.
ನ್ಯಾಯಾಲಯ ಮತ್ತು ಸಮಿತಿಯು ಕಡ್ಡಾಯಗೊಳಿಸಿದ ವಿವಿಧ ಕ್ರಮಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹದಿನೇಳು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. 24 ಗಂಟೆಗಳಲ್ಲಿ ಈ ಸಂಖ್ಯೆಯನ್ನು 40ಕ್ಕೆ ಏರಿಸಲಾಗುವುದು ಎಂದು ಅಫಿಡವಿಟ್ ಹೇಳಿದೆ.
ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್ ಬಂಕಾ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಹುಲ್ಲು ತೆಗೆಯುವ ಯಂತ್ರಗಳನ್ನು ಒದಗಿಸಲು ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ನಲ್ಲಿ ಕೋರಿಕೆ ಸಲ್ಲಿಸಲಾಗಿದೆ.


