ಉತ್ತರಪ್ರದೇಶ ರಾಜ್ಯವು ಏಪ್ರಿಲ್ ಅಂತ್ಯದ ವೇಳೆಗೆ ಕೆಟ್ಟ ಹಿಟ್ ಸ್ಟೇಟ್ (ತೀವ್ರ ಕೋವಿಡ್ ಬಾಧಿತ) ಆಗಬಹುದು ಎಂದು ನೀತಿ ಆಯೋಗ ಪ್ರಧಾನಿಯವರಿಗೆ ಹೇಳುತ್ತಿದ್ದರೆ, ಇತ್ತ ಯುಪಿ ಸರ್ಕಾರ ನಮ್ಮಲ್ಲಿ ಆಮ್ಲಜನಕ ಕೊರತೆಯೇ ಇಲ್ಲ, ಇಲ್ಲಿ ಕೋವಿಡ್ ಸಂಖೆಗಳು ಕಡಿಮೆ ಎಂದು ಸಮರ್ಥಿಸಿಕೊಳ್ಳುತ್ತಿದೆ ಎಂದು ದಿ ವೈರ್ ವರದಿ ಮಾಡಿದೆ.
ನೀತಿ ಆಯೋಗದ ಅಂದಾಜಿನ ಪ್ರಕಾರ, ಏಪ್ರಿಲ್ ಅಂತ್ಯದ ವೇಳೆಗೆ ಉತ್ತರಪ್ರದೇಶದಲ್ಲಿ ದೈನಿಕ 1 ಲಕ್ಷ 20 ಸಾವಿರ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಆದರೆ ಸನ್ನಿಹಿತವಾಗುತ್ತಿರುವ ಅನಾಹುತವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರದ ವಿಧಾನ ಮತ್ತು ವರ್ತನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಎಕನಾಮಿಕ್ ಟೈಮ್ಸ್ ವರದಿ ಮಾಡಿದಂತೆ ನೀತಿ ಆಯೋಗದ ಸದಸ್ಯ ವಿನೋದ್ ಕೆ. ಪೌಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ವರದಿಯ ಪ್ರಕಾರ, ಉತ್ತರಪ್ರದೇಶವು ಏಪ್ರಿಲ್ ಅಂತ್ಯದ ವೇಳೆಗೆ ಕೋವಿಡ್‌ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಲಿದೆ ಎಂದು ಊಹಿಸಲಾಗಿದೆ. ಏಪ್ರಿಲ್ 30 ರಂದು ಉತ್ತರಪ್ರದೇಶವು 1.20 ಲಕ್ಷದ ಸಮೀಪ ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಬಹುದೆಂದು ಪೌಲ್ ಅವರ ಪ್ರಕ್ಷೇಪಗಳು ಸೂಚಿಸಿವೆ. ನಂತರ ಮಹಾರಾಷ್ಟ್ರ (99,665), ದೆಹಲಿ (67,134) ಮತ್ತು ಛತ್ತೀಸಘಡ್ (61,474) ರಾಜ್ಯಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಬಹುದು.
ದೇಶದ ಇತರೆಡೆಗಳಂತೆ, ಯುಪಿ ರಾಜಧಾನಿ ಲಕ್ನೋ ಸೇರಿದಂತೆ ಯುಪಿಯ ಪ್ರಮುಖ ನಗರಗಳಲ್ಲಿ ಆಮ್ಲಜನಕದ ತೀವ್ರ ಕೊರತೆಯು ಅನೇಕರ ಜೀವವನ್ನು ತೆಗೆದುಕೊಳ್ಳುತ್ತಿದೆ. ಇಲ್ಲಿ, ಮೃತ ದೇಹಗಳ ಸಾಮೂಹಿಕ ಶವಸಂಸ್ಕಾರದ ‘ಕೆಟ್ಟ’ ದೃಶ್ಯಗಳು ಭಯಾನಕವಾಗಿದ್ದು, ಕಠೋರ ವಾಸ್ತವತೆಗೆ ಸಾಕ್ಷಿಯಾಗಿವೆ. ಯುಪಿ ಸರ್ಕಾರ ಮಾತ್ರ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಡುತ್ತ ಜನರನ್ನು ದಾರಿ ತಪ್ಪಿಸುವ ಮೂಲಕ ಎರಡನೇ ಅಲೆ ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ವೈರ್ ಆರೋಪಿಸಿದೆ.
ಆದರೂ ಈ ವಾರ, ಉತ್ತರ ಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರು ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.
ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ ಎಂದು ಈ ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಲಕ್ನೋದಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಸ್ಥಳೀಯ ಮಾಧ್ಯಮ ವರದಿಗಳು ಬೇರೆ ದುರಂತ ಕತೆಗಳನ್ನು ಹೇಳುತ್ತಿವೆ. ಕಳೆದ ಹಲವಾರು ದಿನಗಳಿಂದ ಲಕ್ನೋ ಸೇರಿದಂತೆ ಹಲವು ನಗರಗಳು ಆಮ್ಲಜನಕ ಕೊರತೆಯನ್ನು ಎದುರಿಸುತ್ತಿವೆ ಎಂದು ನಿತ್ಯವೂ ಅವು ವರದಿ ಮಾಡುತ್ತಿವೆ.
ಆಮ್ಲಜನಕ ಅಗತ್ಯ ಇರುವ ರೋಗಿಗಳನ್ನು ಆಸ್ಪತ್ರೆಯಿಂದ ಹೊರಹಾಕಲಾಗಿದೆ. ಲಕ್ನೋ, ಕಾನ್ಪುರ್, ಆಗ್ರಾ ಮತ್ತು ಸುಲ್ತಾನಪುರದ ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2017 ರಲ್ಲಿ ತಮ್ಮ ಮೊದಲ ವರ್ಷದ ಅವಧಿಯಲ್ಲಿ ಮಾಡಿದ ಅದೇ ನಿರಾಕರಣೆ ಕ್ರಮಕ್ಕೆ ಸಚಿವ ಖನ್ನಾ ಹೋಗಿದ್ದಾರೆಂದು ತೋರುತ್ತದೆ. ಆಮ್ಲಜನಕದ ಅಲಭ್ಯತೆಯಲ್ಲಿ 160ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದರು. ನಂತರದಲ್ಲಿ ಸಿಎಂ ಕ್ಷೇತ್ರ, ಹುಟ್ಟೂರು ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲೂ ಆಮ್ಲಜನಕ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದವು.
ಕೋವಿಡ್ ನಿಗ್ರಹಕ್ಕೆ ಹಲವಾರು ಬಿಜೆಪಿ ನಾಯಕರು ಮೂರ್ಖ ಮತ್ತು ಅವೈಜ್ಞಾನಿಕ ಸಲಹೆಗಳನ್ನು ನೀಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ, ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಕೋವಿಡ್ ಪ್ರಕರಣಗಳು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಿದಾಗಲೂ ಕುಂಭಮೇಳವನ್ನು ನಡೆಸುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿ ಟೀಕೆಗೆ ಗುರಿಯಾದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಅವರು, “ಮುಖ್ಯವಾಗಿ, ಕುಂಭ ಗಂಗಾ ನದಿಯ ದಡದಲ್ಲಿ ನಡೆದಿದೆ. ಮಾ ಗಂಗಾ ಆಶೀರ್ವಾದವು ನೀರಿನ ಹರಿವಿನಲ್ಲಿದೆ. ಆದ್ದರಿಂದ, ಯಾವುದೇ ಕೊರೋನಾ ಉಳಿಯುವುದಿಲ್ಲ’ ಎನ್ನುವ ಮೂಲಕ ಅವರು ತೀವ್ರ ನಿರ್ಲಕ್ಷ್ಯದ ವ್ಯಕ್ತಿ ಎಂಬುದನ್ನು ಸಾಬೀತು ಮಾಡಿದ್ದರು.
ಇದನ್ನೂ ಓದಿ: 1 ವರ್ಷ, 10 ಪತ್ರ, 7 ಪ್ರೆಸ್‌ಮೀಟ್, ಒಂದು ಮುಖಾಮುಖಿ: ಕೋವಿಡ್ ಕುರಿತ ಎಚ್.ಕೆ…


