ಉಮ್ರಾ ಯಾತ್ರೆ ಕೈಗೊಳ್ಳಲು ಪಾಸ್‌ಪೋರ್ಟ್ ಪರಿಶೀಲನೆಗಾಗಿ ಪೊಲೀಸ್ ಔಟ್‌ಪೋಸ್ಟ್‌ಗೆ ತೆರಳಿದ್ದ ಮಹಿಳೆಯೊಬ್ಬರ ತಲೆಗೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಆಲಿಗಢ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ (ಡಿ.8) ನಡೆದಿರುವ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೇಜಿನ ಹಿಂದೆ ನಿಂತು ಇನ್ನೊಬ್ಬ ಪೊಲೀಸರಿಂದ ಪಿಸ್ತೂಲ್ ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಗನ್‌ನಿಂದ ಗುಂಡು ಹಾರಿಸುವ ಕೆಲವೇ ಕ್ಷಣಗಳ ಮೊದಲು ಎಸ್‌ಐ ಅದನ್ನು ಕಾಕ್ ಮಾಡಿದ್ದಾರೆ. ಟೇಬಲ್ ಮುಂದೆ ನಿಂತಿದ್ದ ಮಹಿಳೆ ತಲೆಗೆ ಇನ್ಸ್‌ಪೆಕ್ಟರ್ ಹಾರಿಸಿದ ಗುಂಡು ತಗುಲಿದ್ದು, ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.
‘ತನ್ನ ತಾಯಿಯ ಕೆಲಸವನ್ನು ಆದಷ್ಟು ಬೇಗ ಮಾಡಿಕೊಂಡುವಂತೆ ಕೇಳಿದ್ದಕ್ಕೆ ಕೋಪಗೊಂಡಿದ್ದ ಎಸ್‌ಐ ಉದ್ದೇಶಪೂರ್ವಕವಾಗಿ ತನ್ನ ತಾಯಿಯ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಘಟನೆ ಸಂದರ್ಭದಲ್ಲಿ ಆಕೆಯ ಜೊತೆಗಿದ್ದ ಪುತ್ರ ದೂರು ನೀಡಿದ್ದಾರೆ.
ಘಟನೆಯ ನಂತರ ಸ್ಥಳಕ್ಕಾಗಮಿಸಿದ ಅಲಿಗಢದ ಹಿರಿಯ ಪೊಲೀಸ್ ಅಧೀಕ್ಷಕ ಕಲಾನಿಧಿ ನೈತಾನಿ, ‘ಭೋಜ್‌ಪುರ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಇಶ್ರತ್ ನಿಗರ್ ತನ್ನ ಮಗನೊಂದಿಗೆ ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ್ದರು. ಎಸ್‌ಐ ಮನೋಜ್ ಶರ್ಮಾ ಅವರ ಪಿಸ್ತೂಲ್‌ನಿಂದ ಹಾರಿದ ಬುಲೆಟ್ ಮಹಿಳೆಯ ತಲೆಗೆ ತಗುಲಿದೆ. ನಾವು ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ’ ಎಂದು ಹೇಳಿದ್ದಾರೆ.
‘ಮಹಿಳೆ ತಲೆಗೆ ಹೊಕ್ಕಿರುವ ಗುಂಡು ಇನ್ನೂ ಹಾಗೇ ಇದೆ. ಆಕೆಗೆ ಆಪರೇಷನ್ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಇನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಮಹಿಳೆ ದಾಖಲಾಗಿರುವ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜೂರ್ ಹ್ಯಾರಿಸ್ ಖಾನ್ ಮಾಧ್ಯಮಗಳಿಗೆ ಹೇಳಿದ್ದಾರೆ.
#Aligarh: Ishrat (55) was visiting the police station for Passport verification and awaiting her turn when she was hit by a bullet in her head missfired by a cop who was cocking a gun in Aligarh, UP, the accident took place around 2:50 pm today.
The cop Manoj Sharma has been… pic.twitter.com/GtG1goyYNJ
— Saba Khan (@ItsKhan_Saba) December 8, 2023
ಹಣಕ್ಕೆ ಬೇಡಿಕೆ ಇಟ್ಟಿದ್ದರೇ ಸಬ್ ಇನ್ ಸ್ಪೆಕ್ಟರ್?
ಮೇಲ್ನೋಟಕ್ಕೆ ಇದು ‘ಮಿಸ್ ಫೈರ್’ ಎಂದು ಹೇಳಲಾಗುತ್ತಿದ್ದರೂ, ಅವರ ಪುತ್ರ ಉದ್ದೇಶಪೂರ್ವಕ ಎಂದು ಆರೋಪಿಸಿದ್ದಾರೆ. ಪಾಸ್‌ಪೋರ್ಟ್ ವೆರಿಫಿಕೇಶನ್ ಮಾಡಲು ಸಬ್ ಇನ್ಸ್‌ಪೆಕ್ಟರ್ ಶರ್ಮಾ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಈಗಾಗಲೇ ಮನೋಜ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಸಂದರ್ಭದಲ್ಲಿ ನಿರ್ಲಕ್ಷ್ಯದ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಘಟನೆ ನಂತರ ಮನೋಜ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ‘ದ್ವೇಷಪೂರಿತ’ ವೀಡಿಯೋ ಹಂಚಿಕೆ: 9 ಜನರ ಮೇಲೆ ಕೇಸ್ ದಾಖಲಿಸಿದ ಜಮ್ಮು-ಕಾಶ್ಮೀರ ಪೊಲೀಸ್!


