ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ವಿರುದ್ಧದ ಪ್ರಕರಣಗಳನ್ನು ಪರಿಶೀಲಿಸಲು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜುಬೇರ್ ಅವರನ್ನು ಪ್ರಸ್ತುತ ಸೀತಾಪುರ ಜೈಲಿನಲ್ಲಿ ಇರಿಸಲಾಗಿದೆ.
ಮೂಲಗಳ ಪ್ರಕಾರ, ಇಬ್ಬರು ಸದಸ್ಯರ ಎಸ್‌ಐಟಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಪ್ರೀತೀಂದರ್ ಸಿಂಗ್ ನೇತೃತ್ವ ವಹಿಸಲಿದ್ದು, ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮಿತ್ ಕುಮಾರ್ ವರ್ಮಾ ತಂಡದ ಸದಸ್ಯರಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜುಬೇರ್ ವಿರುದ್ಧ ಉತ್ತರ ಪ್ರದೇಶದ ಸೀತಾಪುರ, ಲಖಿಂಪುರ ಖೇರಿ, ಹತ್ರಾಸ್ ಮತ್ತು ಮುಜಾಫರ್‌ನಗರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದ್ದರೂ, ಕಳೆದ ವರ್ಷ ಇದೇ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖಿಂಪುರ ಖೇರಿ ಜಿಲ್ಲಾ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಜುಬೇರ್ ಜೈಲಿನಲ್ಲಿಯೇ ಇರುವಂತಾಗಿದೆ.
ಜುಬೇರ್ ಅವರ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ಬುಧವಾರ ವಿಚಾರಣೆ ನಡೆಸಲಿದೆ. ಜುಬೈರ್ ವಿರುದ್ಧ ಹಲವು ಸ್ಥಳಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಎಸ್‌ಐಟಿ ರಚನೆಗೆ ನಿರ್ಧರಿಸಲಾಗಿದೆ ಮತ್ತು ಈ ವಿಷಯದಲ್ಲಿ “ಸಂಪೂರ್ಣ ತನಿಖೆ” ಅತ್ಯಗತ್ಯ ಎಂದು ಮೂಲಗಳು ತಿಳಿಸಿವೆ.
ಟ್ವೀಟ್ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಜೂನ್ 27 ರಂದು ದೆಹಲಿ ಪೊಲೀಸರು ಜುಬೈರ್ ಅವರನ್ನು ಬಂಧಿಸಿದ್ದರು. ಮುಸ್ಲಿಮ್ ಮಹಿಳೆಯರನ್ನು ರೇಪ್ ಮಾಡುವುದಾಗಿ ಹೇಳಿಕೆ ನೀಡಿರುವ ಹಿಂದುತ್ವ ಧರ್ಮಗುರು ಬಜರಂಗ ಮುನಿಯನ್ನು ‘ಹೇಟ್ ಮಾಂಗರ್’ (ಅಲ್ಪಸಂಖ್ಯಾತರ ಮೇಲೆ ದ್ವೇಷ ಹರಡುವವನು) ಎಂದು ಕರೆದಿದ್ದಕ್ಕೆ ಸೀತಾಪುರದಲ್ಲಿ ಜುಬೇರ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜುಬೇರ್ ವಿರುದ್ಧ ಲಖಿಂಪುರ ಖೇರಿಯಲ್ಲಿ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು. ಖಾಸಗಿ ಟಿವಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಆಶಿಶ್ ಕುಮಾರ್ ಕಟಿಯಾರ್ ಎಂಬ ಸ್ಥಳೀಯ ವರದಿಗಾರ ಜುಬೈರ್ ವಿರುದ್ಧ ಜಿಲ್ಲೆಯ ಮೊಹಮ್ಮದಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.
ಕಟಿಯಾರ್ ತಮ್ಮ ದೂರಿನಲ್ಲಿ, “ಜುಬೈರ್ ಅವರು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ವೀಡಿಯೊವನ್ನು “ಎಡಿಟ್” ಮಾಡಿದ್ದಾರೆ. ಅಲ್ಲದೆ ತಮ್ಮ ಆಲ್ಟ್ ನ್ಯೂಸ್ ವೆಬ್‌ಸೈಟ್‌ನಲ್ಲಿ ಅದನ್ನು ಪೋಸ್ಟ್ ಮಾಡಿದ್ದಾರೆ” ಎಂದಿದ್ದರು. ಜಿಲ್ಲಾ ಪೊಲೀಸರು ಕೆಲ ದಿನಗಳ ಹಿಂದೆ ಜುಬೈರ್ ವಿರುದ್ಧ ಬಂಧನ ವಾರಂಟ್ ಪಡೆದು ಜುಬೇರ್ ಅವರನ್ನು ಬಂಧಿಸಿ ಸೀತಾಪುರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಜುಬೇರ್ ಅವರ ಟ್ವೀಟನ್ನು ಉಲ್ಲೇಖಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದ, ‘ಹನುಮಾನ್ ಭಕ್ತ್ @balajikijaiin’ ಎಂಬ ಹೆಸರಿನ ಟ್ವಿಟರ್ ಅಕೌಂಟ್ ಇದೀಗ ಡಿಲೀಟ್ ಮಾಡಲಾಗಿದೆ. ಈ ವಿಚಾರವನ್ನು ಸಾಮಾಜಿಕ ಹೋರಾಟಗಾರ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಅವರು ಬಹಿರಂಗಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಕೇವಲ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದ ಮತ್ತು ಕೇವಲ ಮೂರು ಅನುಯಾಯಿಗಳನ್ನು ಹೊಂದಿದ್ದ ಅನಾಮಧೇಯ ಟ್ವಿಟರ್ ಹ್ಯಾಂಡಲ್‌ನ ದೂರಿನ ಆಧಾರದ ಮೇಲೆ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಮೊದಲಿಗೆ ದೆಹಲಿ ಪೊಲೀಸರು ಬಂಧಿಸಿದರು.
ಇದನ್ನೂ ಓದಿರಿ: ಜುಬೇರ್ ಬಂಧನದ ಐದು ದಿನದ ನಂತರ ದೂರುದಾರನನ್ನು ಹುಡುಕುತ್ತಿರುವ ದೆಹಲಿ ಪೊಲೀಸರು!
ಆದರೆ ಜುಬೇರ್ ಅವರನ್ನು ಬಂಧಿಸಲು ಕಾರಣವಾಗಿರುವ ಚಿತ್ರವೂ ಎಡಿಟ್ ಮಾಡಿರುವ ಚಿತ್ರವಲ್ಲ, ಬದಲಾಗಿ ಈ ಚಿತ್ರವು 1983ರ ಹಿಂದಿ ಚಲನಚಿತ್ರವಾದ ‘ಕಿಸ್ಸಿ ಸೆ ನಾ ಕೆಹನಾ’ ದೃಶ್ಯವಾಗಿದೆ. ‘ಕಿಸ್ಸಿ ಸೆ ನಾ ಕೆಹನಾ’ ಎಂದರೆ ಕನ್ನಡದಲ್ಲಿ ‘ಯಾರಿಗೂ ಹೇಳಬೇಡಿ’ ಎಂದರ್ಥವಿದೆ. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದು, ಚಲನಚಿತ್ರ ಮಂಡಳಿಯೂ ಅದಕ್ಕೆ ‘ಯು’ (ಎಲ್ಲರೂ ನೋಡಬಹುದಾದ) ಪ್ರಮಾಣಪತ್ರ ನೀಡಿದೆ. ಅಲ್ಲದೆ ಈ ಚಿತ್ರ ಮತ್ತು ದೃಶ್ಯ ಇನ್ನೂ ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಸಿನಿಮಾ ದೃಶ್ಯವೊಂದರ ಕಾರಣಕ್ಕೆ ಜುಬೇರ್ ಬಂಧನವಾದ ಬಳಿಕ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ಮೇಲೆ ತನಿಖೆ ನಡೆಸಲಾಗುತ್ತಿದೆ. ಫ್ಯಾಕ್ಟ್ ಚೆಕ್ ಮೂಲಕ ಖ್ಯಾತರಾಗಿದ್ದ ಜುಬೇರ್ ಅವರು, ದ್ವೇಷ ಭಾಷಣಕಾರರನ್ನು ಅನೇಕ ಸಲ ಬಯಲಿಗೆಳೆದಿದ್ದಾರೆ. ದ್ವೇಷ ಭಾಷಣಗಳನ್ನು ಹೊರಗೆಳೆದು ಪೊಲೀಸರ ಗಮನಕ್ಕೆ ತರುವಲ್ಲಿ ಮುಂಚೂಣಿಯಲ್ಲಿದ್ದ ಜುಬೇರ್ ಅವರನ್ನು ಪೊಲೀಸರು ತೀವ್ರತರನಾಗಿ ತನಿಖೆಗೆ ಒಳಪಡಿಸಿದ್ದಾರೆ.


