HomeUncategorizedಪ್ರಾಣವಾಯು ಕೊರತೆಯಲ್ಲಿ ಪರದಾಟ ಆಡಳಿತಗಾರರ ಚೆಲ್ಲಾಟ!

ಪ್ರಾಣವಾಯು ಕೊರತೆಯಲ್ಲಿ ಪರದಾಟ ಆಡಳಿತಗಾರರ ಚೆಲ್ಲಾಟ!

- Advertisement -
- Advertisement -

ಯೋಗ ದಿನದಂದು ದೇಶದ ಪ್ರಧಾನಿ ಮೈಸೂರಿಗೆ ಭೇಟಿ ಕೊಟ್ಟಿದ್ದರು. 2019 ಮತ್ತು ನಂತರದ ಎರಡು ವರ್ಷ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂದಿದ್ದಾಗ ಬಾರದ ಪ್ರಧಾನಿಯವರಿಗೆ ಈಗ ರಾಜ್ಯದ ನೆನಪಾಗಿದೆ ಎಂದು ಮೈಸೂರಿಗರೇ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದರು. ಕೊರೊನಾ ಬಂದಾಗ ಪ್ರಾಣವಾಯು ಸಿಗದೆ ಹಲವು ಮಂದಿ ಜೀವಬಿಟ್ಟರೆಂಬುದನ್ನು ಸೇರಿ ಹಲವು ವಿಚಾರಗಳ ಬಗ್ಗೆ ಅವರು ಪ್ರಸ್ತಾಪಿಸಿ ಟೀಕಿಸಿದ್ದರು.

ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಸಾವಿರಾರು ಜನ ‘ಮೆಡಿಕಲ್ ಆಕ್ಸಿಜನ್’ ಸಿಗದೆ ಜೀವಬಿಟ್ಟಿದ್ದನ್ನು ಕಂಡಿದ್ದೇವೆ. ದಿನವೊಂದಕ್ಕೆ 3 ಲಕ್ಷ ಜನ ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗುತ್ತಿದ್ದರು. ಜಗತ್ತಿನಲ್ಲಿಯೇ ಅತಿಹೆಚ್ಚು ಜನ ನಮ್ಮಲ್ಲಿ ಸೋಂಕಿಗೆ ಗುರಿಯಾಗುತ್ತಿದ್ದರು. ಸರಾಸರಿ 2 ಸಾವಿರ ಜನ ಜೀವ ಬಿಡುತ್ತಿದ್ದರು. ನಮ್ಮ ಸರ್ಕಾರ ಪ್ರಾಣವಾಯು ಕೊರತೆ ನಿವಾರಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ರಾಜ್ಯಕ್ಕೆ 262 ಆಕ್ಸಿಜನ್ ತಯಾರಿಕಾ ಘಟಕಗಳು ಹಂಚಿಕೆಯಾಗಿದ್ದವು. ಅವುಗಳಲ್ಲಿ 224 ಘಟಕಗಳ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿತ್ತು. 190 ಘಟಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ. ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 1,08,077 ಎಲ್‌ಎಂಪಿ (ಪ್ರತಿ ನಿಮಿಷಕ್ಕೆ ತಯಾರಾಗುವ ಲೀಟರ್‌ಗಳು) ದಿನವೊಂದಕ್ಕೆ 187 ಟನ್‌ಗಳಷ್ಟು ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ. ಕೆಲವು ಸಂಸ್ಥೆಗಳು ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಹಣ ನೀಡುವುದಾಗಿಯೂ ಭರವಸೆ ನೀಡಿದ್ದವು. ಆಕ್ಸಿಜನ್ ಘಟಕಗಳ ನಿರ್ವಹಣೆಗಾಗಿ 245 ಜನರಿಗೆ ತರಬೇತಿಯನ್ನು ನೀಡಲಾಗಿತ್ತು. ಇನ್ನೂ ಐದು ತಂಡಗಳಿಗೆ ತರಬೇತಿ ನೀಡಲು ಕೌಶಲ ಅಭಿವೃದ್ಧಿ ಇಲಾಖೆಯ ಜೊತೆ ಸಮಾಲೋಚನೆಯನ್ನು ನಡೆಸಲಾಗಿತ್ತು. ನಿರ್ವಹಣೆಗಾಗಿ ತಂತ್ರಜ್ಞರಿಗೆ, ಅರೆವೈದ್ಯಕೀಯ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಆನ್‌ಲೈನ್ ಮೂಲಕವೂ ತರಬೇತಿ ನೀಡಲಾಗಿತ್ತು.

ಆದರೂ ರಸ್ತೆ ಬದಿಗಳಲ್ಲಿ ಜನ ಬಟ್ಟೆ-ಗಂಟು ಹೊತ್ತು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಂದೆಡೆ ‘ಪ್ರಾಣವಾಯು’ಗಾಗಿ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಆಸ್ಪತ್ರೆಗಳ ಬಳಿ ಸಾಲುಗಟ್ಟಿ ನಿಂತಿರುತ್ತಿದ್ದವು.
ಭಾಜಪ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು, 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ‘ಆಕ್ಸಿಜನ್ ಕೊರತೆ’ ಉಂಟಾಗಲು ಕಾರಣ ಎಂದು ಟೀಕಿಸಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎದುರಾದ ಕೊರೊನಾ ತಡೆಗಟ್ಟಲು ಸಾಕಷ್ಟು ‘ಆಕ್ಸಿಜನ್ ಘಟಕ’ಗಳನ್ನು ಆರಂಭಿಸಲಾಗಿದೆ ಎಂದಿದ್ದರು. ಆದರೆ, ಸೋಂಕು ತೀವ್ರವಾಗಿ ಕಾಡುತ್ತಿದ್ದಾಗ, ಜನಸಮೂಹವನ್ನು ಒಟ್ಟುಗೂಡಿಸಲು ಪಶ್ಚಿಮ ಬಂಗಾಳದ ಚುನಾವಣಾ ರ್‍ಯಾಲಿಯಲ್ಲಿ ಅಧಿಕಾರಸ್ಥರು ಹರಸಾಹಸ ಪಡುತ್ತಿದ್ದರು. ಪ್ರಾಣವಾಯುವಿನ ಕೊರತೆ ತೀವ್ರವಾಗಿ ಕಾಣಿಸಿಕೊಂಡಾಗ ‘ರ್‍ಯಾಲಿ’ಗಳ ಬಗ್ಗೆ ಟೀಕೆ ಹೆಚ್ಚಾಯಿತು. ಕೇಂದ್ರ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು, ರೋಗಿಗಳಿಗೆ ಅಗತ್ಯ ಇರುವಷ್ಟು ಮಾತ್ರ ‘ಆಕ್ಸಿಜನ್’ ನೀಡಬೇಕು. ಹಲವೆಡೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇಲ್ಲದಿದ್ದಾಗಲೂ ನೀಡುತ್ತಿರುವ ವರದಿಗಳಿವೆ ಎಂದು ಟ್ವೀಟ್ ಮಾಡಿದ್ದರು.
ಆದರೆ ‘ಆಕ್ಸಿಜನ್ ಕೊರತೆ’ಯಿಂದ ಯಾವುದೇ ಸಾವುಗಳು ಸಂಭವಿಸಿಲ್ಲವೆಂದು 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವರಾಗಿದ್ದ ಮನ್‌ಸುಖ್ ಮಾಂಡವೀಯ ಲೋಕಸಭೆಗೆ ಕೊಟ್ಟಿದ್ದರು. ಇದಾದಬಳಿಕ ಪಂಜಾಬ್‌ನಲ್ಲಿ ಮಾತ್ರ 4 ಅನುಮಾನಾಸ್ಪದ ಸಾವುಗಳು ಉಂಟಾಗಿವೆ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆಂಬ ಹೇಳಿಕೆಯನ್ನು ಕೊಟ್ಟಿದ್ದರು. ಇವರೊಂದಿಗೆ ಕೇಂದ್ರ ಸಚಿವೆ ಅರ್ಜುನ್ ತುಳಸಿರಾಮ್ ಪವಾರ್ ಅವರು ಕೂಡ ‘ಆಕ್ಸಿಜನ್ ಕೊರತೆ’ಯಿಂದ ಯಾವುದೇ ಸಾವು-ನೋವುಗಳಾಗಿಲ್ಲವೆಂಬ ಹೇಳಿಕೆಯನ್ನು ಸಂಸತ್ತಿಗೆ ಕೊಟ್ಟಿದ್ದರು.

ಮರೆಯದಿರಿ, ಕೊರೊನಾ ಪೀಕ್‌ನಲ್ಲಿದ್ದಾಗ ಜನ ತಮ್ಮ ಕುಟುಂಬಸ್ಥರ ಜೀವ ಉಳಿಸಿಕೊಳ್ಳಲು ‘ಆಕ್ಸಿಜನ್’ಗಾಗಿ ಮೊರೆ ಇಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ‘ಅಗತ್ಯ’ ಇರುವ ಸೋಂಕಿತರಿಗೆ ಆಕ್ಸಿಜನ್ ಒದಗಿಸಿಕೊಡಲು ಜನ ಶ್ರಮಿಸಿದ್ದರು. ವಿಡಂಬನೆ ಎಂದರೆ, ಅಧಿಕಾರಿಗಳು ‘ಆಕ್ಸಿಜನ್ ಕೊರತೆ’ ಇಲ್ಲವೆಂದು ನಂಬಿಸುವುದರಲ್ಲಿ ತಲ್ಲೀನರಾಗಿದ್ದುದು.

ನವದೆಹಲಿಯ ಬಾತ್ರಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಸಿ.ಎಲ್. ಗುಪ್ತ ಅವರು, ಆಸ್ಪತ್ರೆಯಲ್ಲಿ ಸಂಪೂರ್ಣ ಭೀತಿ ಇದೆ. ಹಾಗೆಯೇ ಆಕ್ಸಿಜನ್ ಕೊರೆತಯೂ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಿದೆ. ಆಕ್ಸಿಜನ್ ದೊರಕುವ ಕಡೆಗೆ ರೋಗಿಗಳನ್ನು ಕರೆದೊಯ್ಯಬಹುದೆಂದು ಎಎನ್‌ಐ ವಾಹಿನಿಯ ಮೂಲಕ ಮನವಿಯನ್ನು ಮಾಡಿದ್ದರು. ಸಂದರ್ಶನದ ಮಧ್ಯೆ ಭಾವೋದ್ವೇಗಕ್ಕೆ ಒಳಗಾಗಿ ಕುಸಿದುಬಿದ್ದಿದ್ದರು. ಇನ್ನೂ ಪರ್‌ಪರ್‌ಗಂಜ್‌ನ ಮ್ಯಾಕ್ಸ್ ಆಸ್ಪತ್ರೆ ಆಕ್ಸಿಜನ್ ಬೇಡಿಕೆಗಾಗಿ ನ್ಯಾಯಾಲಯದ ಮುಂದೆ ಹೋಗಿತ್ತು. ಸುಪ್ರೀಂ ಕೋರ್ಟ್ ಕೂಡ ಕೊರೊನಾ ನಿರ್ವಹಣೆ ಕುರಿತಂತೆ ಪರಿಶೀಲಿಸಲು, ತಾನಾಗಿಯೇ ಪ್ರಕರಣ ದಾಖಲಿಸಿಕೊಂಡಿತು. ಪ್ರಕರಣದಲ್ಲಿ ಅಮಿಸ್‌ಕ್ಯೂರಿಯಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರಕರಣದಿಂದ ಹಿಂದೆ ಸರಿದಿದ್ದರು. ಅಲ್ಲದೆ, ಆಮ್ಲಜನಕ, ರೆಮ್‌ಡೆಸಿವರ್ ಸೇರಿ ವಿವಿಧ ಔಷಧಗಳ ಕೊರತೆಯ ವಿಷಯದ ಮೇಲ್ವಿಚಾರಣೆ ಮತ್ತು ಹಂಚಿಕೆ ಸಂಬಂಧ ರಾಷ್ಟ್ರೀಯ ಮಟ್ಟದ 12 ಸದಸ್ಯರ ಕಾರ್ಯಪಡೆ ರಚಿಸಿತ್ತು.
ಸಂಸತ್ತಿನ ಚರ್ಚೆಯಲ್ಲಿ ಇಂತಹ ಅನಿರ್ದಿಷ್ಟ ಉತ್ತರಗಳು ಇದೇ ಮೊದಲು ಎನ್ನಲಾರೆ. ಹಿಂದೆಯೂ ಇದೇ ಮಾದರಿಯ ಉತ್ತರಗಳನ್ನು ಕೊಟ್ಟಿರಬಹುದು. ಹೀಗೆ ಉತ್ತರಗಳನ್ನು ಸಿದ್ಧಪಡಿಸಲೆಂದೇ ಕೇಂದ್ರದ ಪ್ರತಿಯೊಂದು ಸಚಿವಾಲಯವೂ ಓರ್ವ ತಜ್ಞ ‘ಉತ್ತರ ಬರಹಗಾರ’ನನ್ನು ಹೊಂದಿರುತ್ತದೆ. ಇವರು ಎಂತಹದ್ದೇ ಕಠಿಣ, ಕಿರಿಕಿರಿ ಅನಿಸುವ ಪ್ರಶ್ನೆ ಬಂದರೂ ಅದಕ್ಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಸಿದ್ಧಪಡಿಸಿಕೊಟ್ಟುಬಿಡುತ್ತಾರೆ.

ಪಿಯೂಷ್ ಗೋಯಲ್

ಇಷ್ಟಕ್ಕೂ ‘ಆಕ್ಸಿಜನ್’ ಪದಕ್ಕಾಗಿ ಗೂಗಲ್ ಟ್ರೆಂಡ್‌ಗಳನ್ನು ನೋಡಿದಾಗ, ನಮ್ಮಲ್ಲಿ ಕೊರೊನಾ ಅಲೆಯ ಏರಿಕೆ ಮತ್ತು ಕುಸಿತ ಅದರ ಜೊತೆಗೆ ನಿಕಟವಾಗಿ ಥಳಕು ಹಾಕಿಕೊಂಡಿರುವುದನ್ನು ತೋರಿಸುತ್ತದೆ. ಆರಂಭದಲ್ಲಿ ಪ್ರಕರಣಗಳು ಹೆಚ್ಚಾದಂತೆಲ್ಲ, ವೆಂಟಿಲೇಟರ್‌ಗಳ ಕೊರತೆಯುಂಟಾಗುತ್ತದೆ ಎಂಬ ಭೀತಿ ಕಾಡಿತ್ತು. ಆದರೆ, ವೆಂಟಿಲೇಟರ್‌ಗಿಂತ ಆಕ್ಸಿಜನ್ ಜೀವಗಳನ್ನು ಉಳಿಸುತ್ತದೆ ಎಂಬುದನ್ನು ವೈದ್ಯರು ಶೀಘ್ರದಲ್ಲಿಯೇ ಅರಿತುಕೊಂಡರು. ಆದರೂ, ಆಕ್ಸಿಜನ್ ಪೂರೈಕೆ ಸರಪಳಿಗಳನ್ನು ಸಿದ್ಧಪಡಿಸುವುದು ‘ಯೋಜನೆ’ಯ ಭಾಗವಾಗಿರಲಿಲ್ಲ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ 2021 ಮೇ 2ರಂದು 36 ಜನ ರೋಗಿಗಳು ಜೀವ ತ್ಯಜಿಸಿದ್ದರು. ಇವರಲ್ಲಿ 24 ಜನರ ಕುಟುಂಬಕ್ಕೆ ಪರಿಹಾರ ಕೊಟ್ಟು 12 ಜನರ ಕುಟುಂಬಕ್ಕೆ ನಯಾಪೈಸೆಯನ್ನು ಕೊಟ್ಟಿರುವುದಿಲ್ಲ. ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣವೆಂದು ನ್ಯಾಯಮೂರ್ತಿ ವೇಣುಗೋಪಾಲ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತ್ತು. ಇದುವರೆಗೂ ಯಾರ ಮೇಲೂ ಕ್ರಮವಾಗಿಲ್ಲ. ನ್ಯಾಯಾಂಗ ವರದಿಯೂ ಬಹಿರಂಗಗೊಂಡಿಲ್ಲ. ಇನ್ನೂ ದುರಂತವೆಂದರೆ, ಇದೇ ದಿನ ಕೊಳ್ಳೆಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ 36 ವರ್ಷದ ಜಯಶಂಕರ್ ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ. ಒತ್ತಡ ಹೇರಿದ ಪರಿಣಾಮ ನಡುರಾತ್ರಿಯೇ ಶವ ಹೊತ್ತೊಯ್ಯಲಾಗಿದೆಯೆಂದು ಸಿದ್ದರಾಜಮ್ಮ ಅಳಲು ತೋಡಿಕೊಂಡಿದ್ದರು. ಇಬ್ಬರು ಹೆಣ್ಣುಮಕ್ಕಳು ಮತ್ತು ಅತ್ತೆ-ಮಾವನನ್ನು ಸಾಕಲು ನಮಗೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.

ಇಷ್ಟಕ್ಕೂ ಕೊರೊನಾ ತಡೆಗಟ್ಟಲು ರಚಿಸಲಾಗಿದ್ದ ತಜ್ಞರ ಸಮಿತಿ ಹಿಂದೆಯೇ ‘ಆಕ್ಸಿಜನ್ ಕೊರತೆ’ಯ ಬಗ್ಗೆ ಮುನ್ಸೂಚನೆ ನೀಡಿತ್ತೆಂದು ಕೆಲವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಮೊದಲ ಅಲೆಯು ತಗ್ಗುತ್ತಾ ಸಾಗಿತ್ತು. ಆದರೆ, 2021ರ ಫೆಬ್ರವರಿ ನಂತರವಷ್ಟೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಾ ಸಾಗಿತು. ಇದರ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿ ಸತತವಾಗಿ ನಡೆಸಲಾಗಿತ್ತು. ಉತ್ತರಾಖಂಡ್‌ನಲ್ಲಿ ಕುಂಭಮೇಳ ನಡೆಸಲು ಅವಕಾಶ ಮಾಡಿಕೊಡಲಾಗಿತ್ತೆಂಬುದನ್ನು ಮರೆಯಲಾಗದು.

ಒಂದೊಮ್ಮೆ ಆಮ್ಲಜನಕ ಕೊರತೆಯಿಂದ ಯಾರೂ ಜೀವಬಿಟ್ಟಿಲ್ಲ ಎನ್ನುವುದಾದರೆ, ಕೈಗಾರಿಕಾ ಆಮ್ಲಜನಕ ಉತ್ಪಾದನೆಯನ್ನು ರೈಲ್ವೆಯಲ್ಲಿ ವೈದ್ಯಕೀಯ ಬಳಕೆಗೆ ತಿರುಗಿಸುವ ಅವಶ್ಯಕತೆ ಏನಿತ್ತು? ಆಕ್ಸಿಜನ್ ಸರಬರಾಜಿಗೆ ತುರ್ತು ರೈಲುಗಳನ್ನು ಓಡಿಸಲಾಯಿತು. ಇದರೊಂದಿಗೆ ಆಕ್ಸಿಜನ್ ಸಾಗಾಣಿಕೆಗೆ ರಕ್ಷಣಾ ಪಡೆಯ ಯುದ್ಧ ವಿಮಾನವನ್ನು ಬಳಸಲಾಗಿದೆ. ಯಾರೂ ಜೀವ ಬಿಟ್ಟಿಲ್ಲವೆಂದರೆ, ಉಚ್ಚ ನ್ಯಾಯಾಲಯಗಳೇಕೆ ಪ್ರಕರಣಗಳನ್ನು ತುರ್ತಾಗಿ ಆಲಿಸಿದವು? ಸುಪ್ರೀಂ ಕೋರ್ಟ್ ಅದ್ಹೇಗೆ ಪ್ರಕರಣವನ್ನು ವಿಶೇಷ ವಿಚಾರಣಾ ಘಟಕದ ಮೂಲಕ ಆಲಿಸಿತು. ಡಾ. ಅರ್ಜುನ್ ತುಳಸಿರಾಮ್ ಪವಾರ್ ಅವರ ಹೇಳಿಕೆ ದುಃಖದಲ್ಲಿರುವ ಜನರನ್ನು ಸಂತೈಸುವುದಿಲ್ಲ.

ಇಲ್ಲಿ ಕೊರೊನಾದ ಲಕ್ಷಣವೇ ಪ್ರಾಣವಾಯು ಮಟ್ಟವನ್ನು ಕೆಳಗಿಳಿಸಿ, ಉಸಿರಾಟದ ಸಮಸ್ಯೆಯನ್ನು ಉಂಟುಮಾಡುವುದು. ಇದು ಶ್ವಾಸಕೋಶದಿಂದ ರಕ್ತಕ್ಕೆ ಆಮ್ಲಜನಕ ಸಾಗಿಸುವ ಕೋಶಗಳನ್ನು ಉರಿಯೂತಕ್ಕೆ ತಳ್ಳುತ್ತವೆ. ಆಗ ಸಣ್ಣ ಗಾಳಿಯ ಚೀಲಗಳು ಸಹ ದ್ರವದಿಂದ ತುಂಬಿರುತ್ತವೆ. ಅಂದರೆ ಆರೋಗ್ಯಕರ ಪ್ರಾಣವಾಯು ವಿನಿಮಯ ದುರ್ಬಲಗೊಳ್ಳುತ್ತದೆ. ಒಟ್ಟಾರೆ ಇವೆಲ್ಲವೂ ಕೊರೊನಾ ಸಾವುಗಳನ್ನು ನಿರಾಕರಿಸುವ ಭಾಗವೆಂದೇ ಹೇಳಬಹುದಾಗಿದೆ. ಕೊರೊನಾ ಸಾವು-ನೋವು-ಪರಿಹಾರಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ಪ್ರಕರಣಗಳಲ್ಲಿ ಮುಗುಮ್ಮಾಗಿ ಉಳಿದಿವೆ. ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ ಎಂಬ ಭೀತಿಯೂ ಬಹುಶಃ ಇವರಲ್ಲಿರಬೇಕು. ಹೀಗೆ ಮೌನವಾಗಿದ್ದ ಮಾತ್ರಕ್ಕೆ ‘ಸತ್ಯ’ ಮರೆಮಾಚಲು ಸಾಧ್ಯವಿಲ್ಲ. ಅಥವಾ ಸಾಂಕ್ರಾಮಿಕ ಉಂಟುಮಾಡಿರುವ ವಿನಾಶವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಜೀವ ಬಿಟ್ಟವರ ನೋವಿನ ಕೂಗನ್ನು ಅಡಗಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳುವುದಿಲ್ಲ.

ನಮ್ಮ ದೇಶದಲ್ಲಿ ಕೊರೊನಾದಿಂದ 35 ರಿಂದ 50 ಲಕ್ಷದವರೆಗೆ ಜನ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಇದರ ಬಗ್ಗೆ ವರದಿಗಳು ಮೂಡಿ ವಿಶ್ಲೇಷಣೆಗಳು ಬಂದಾಗ, ಆಕ್ಷೇಪಣೆ, ಟೀಕೆಯೂ ವ್ಯಕ್ತವಾಗಿತ್ತು. ಒಂದು ದೇಶದ ನಾಗರಿಕರಾಗಿ ನಾವು ಎದುರಿಸಿದ ಸಮಸ್ಯೆ-ಸವಾಲುಗಳ ಬಗ್ಗೆ ‘ಸಾಮೂಹಿಕ ಪ್ರಜ್ಞೆ’ ಮೂಡಿಸುವ ಅಗತ್ಯವಿದೆ. ಹಾಗೆಯೇ ಸಾಂಕ್ರಾಮಿಕ ವ್ಯವಸ್ಥೆಯ ವಿರುದ್ಧ ಹೋರಾಡುವ ಸಂಕಲ್ಪವನ್ನು ಬೆಳೆಸಬೇಕಿದೆ.
ಜಗತ್ತಿನಲ್ಲಿ ಅತಿಹೆಚ್ಚು ‘ಕೈಗಾರಿಕಾ ಆಕ್ಸಿಜನ್’ ಉತ್ಪಾದಕ ನಾವೆಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದೇವೆ. ಆದರೆ, ಕೊರೊನಾ ಕಾಡುವಾಗ ಅಮೆರಿಕದಿಂದ 7 ಲಕ್ಷ ಟೆಸ್ಟಿಂಗ್ ಕಿಟ್ ಮತ್ತು ‘ಆಕ್ಸಿಜನ್ ಸಿಲಿಂಡರ್’ಗಳನ್ನು
ತರಿಸಿಕೊಳ್ಳಲಾಗಿದೆ.

ಇವೆಲ್ಲವನ್ನೂ ವಿಷದವಾಗಿ ಕಂಡಾಗ ಸಂಸತ್ತಿನಲ್ಲಿ ಸಚಿವರ ಹೇಳಿಕೆಯಲ್ಲಿ ಬ್ರಿಟಿಷ್ ಧೋರಣೆ ಪ್ರತಿಫಲಿಸುತ್ತದೆ. ಸತ್ಯವನ್ನು ಮರೆಮಾಚುವ ಪ್ರಯತ್ನ ಎದ್ದುಕಾಣುತ್ತದೆ. ಇದರಿಂದ ಪ್ರಜಾಪ್ರಭುತ್ವದ ಮೂಲತತ್ವದ ಉಲ್ಲಂಘನೆಯಾಗಿದೆ. ಚುನಾವಣೆಗಳಲ್ಲಿ ಗೆಲ್ಲುವುದರೊಂದಿಗೆ ಹೊಣೆಗಾರಿಕೆ ಮುಗಿಯುವುದಿಲ್ಲ. ಗೆಲುವಿನ ನಂತರದ ಆಡಳಿತ ಜನಪರವಾದ ಯೋಜನೆಗಳು ಮತ್ತು ಪರಿಹಾರಗಳನ್ನು ನಿರೀಕ್ಷಿಸುತ್ತದೆ. ಚುನಾಯಿತ ಸರ್ಕಾರಕ್ಕೆ ಅಧಿಕಾರಶಾಹಿಯನ್ನು ಬದ್ಧತೆಯಿಂದಿರುವಂತೆ ನೋಡಿಕೊಳ್ಳುವ ಕರ್ತವ್ಯವೂ ಅದರ ಮುಂದಿದೆ.

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ ಪುಸ್ತಕಗಳು ಪ್ರಕಟವಾಗಿದೆ. ಮನುಭಾರತ ಬಿಡುಗಡೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ‘ಕೋವಿಡ್‌ ಆಕ್ಸಿಜನ್ ದುರಂತ: ಚಾ.ನಗರ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...