ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021ನೇ ಮೇ 2ರ ಮಧ್ಯರಾತ್ರಿ ಆಕ್ಸಿಜನ್ ಪೂರೈಕೆಯಾಗದೆ 37 ಮಂದಿ ಮೃತರಾಗಿ ಈಗಾಗಲೇ 9 ತಿಂಗಳು ಕಳೆದಿದ್ದು, ಸಂತ್ರಸ್ತರಿಗೆ ಇನ್ನೂ ಪೂರ್ಣ ಪರಿಹಾರ ದೊರೆತಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆ ಸಂಬಂಧ ಮೈಸೂರಿನಲ್ಲಿ ‘ಸಂತ್ರಸ್ತರೊಂದಿಗೆ ಸಮಾಲೋಚನೆ ಸಭೆ’ ನಡೆಸಿದ ಬಳಿಕ ಮಾತನಾಡಿದ ಅವರು, “ಘಟನೆಗೆ ಸಂಬಂಧಿಸಿದಂತೆ ನೇಮಕಗೊಂಡ ನ್ಯಾಯಮೂರ್ತಿ ವೇಣುಗೋಪಾಲಗೌಡ ಸಮಿತಿ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಅಂದಿನ ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ವಿಫಲತೆಯಿಂದ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವ ಒಬ್ಬ ವೈದ್ಯಾಧಿಕಾರಿಯ ವಿರುದ್ಧವೂ ಸರ್ಕಾರ ಇದುವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ದೂರಿದರು.
ಇನ್ನೊಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷ ಬಿ.ಎಪಾಟೀಲ್ ಅವರ ವರದಿ ಸಹ ಬಹಿರಂಗಗೊಂಡಿಲ್ಲ. ಒಟ್ಟು 37 ಮೃತರ ಕುಟುಂಬಸ್ಥರ ಪೈಕಿ ಕೇವಲ 24 ಮಂದಿಯ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿದೆ. ಇನ್ನು 13 ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರದ ಒಂದು ನಯಾಪೈಸೆಯೂ ನೀಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಜನರು ಎಸ್.ಸಿ., ಎಸ್.ಟಿ. ಸಮುದಾಯದವರಾಗಿದ್ದು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಆಧಾರ ಸ್ಥಂಭವಾಗಿದ್ದ ಮನೆಯ ಮುಖ್ಯಸ್ಥ ಇಲ್ಲದೆ ಈ ಬಡಪಾಯಿ ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಸಂತ್ರಸ್ತರ ಕುಟುಂಬಸ್ಥರಲ್ಲಿ ಮಕ್ಕಳು ಸಹ ಇದ್ದು, ಆ ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೈಕೆಗೆ ಬಹಳ ತೊಂದರೆ ಆಗುತ್ತಿದೆ ಎಂದು ವಿವರಿಸಿದರು.
ಸಂತ್ರಸ್ತರ ಈ ದುಸ್ಥಿತಿಯನ್ನು ನೋಡಿಕೊಂಡು ರಾಜ್ಯ ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ. ಸಂತ್ರಸ್ತರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ನೀಡಲಾಗುವುದು. ಅಂತಿಮವಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವರೆಗೂ ಎಸ್.ಡಿ.ಪಿ.ಐ. ತನ್ನ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್, ಚಾಮರಾಜನಗರ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಅಫ್ಸರ್ ಕೂಡ್ಲಿಪೇಟೆ, ಹೈಕೋರ್ಟ್ ವಕೀಲರಾದ ಮಜೀದ್ ಖಾನ್, ರಾಜ್ಯ ಮಾಧ್ಯಮ ಸಂಯೋಜಕರಾದ ರಿಯಾಜ್ ಕಡಂಬು, ಚಾಮರಾಜನಗರ ನಗರಸಭಾ ಸದಸ್ಯ ಮಹೇಶ್ ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿರಿ: ಅರಕಲಗೂಡು: ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಸವರ್ಣಿಯರಿಂದ ಹಲ್ಲೆ